Asianet Suvarna News Asianet Suvarna News

ಸ್ಪೇನ್‌ ಮಾಸ್ಟ​ರ್ಸ್‌: ಪ್ರಿ ಕ್ವಾರ್ಟರ್‌ಗೆ ಶ್ರೀಕಾಂತ್‌, ಸಾಯಿ ಪ್ರಣೀತ್

ಸ್ಪೇನ್ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಅದ್ಭುತ ಪ್ರದರ್ಶನ
ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕಿದಂಬಿ ಶ್ರೀಕಾಂತ್, ಬಿ ಸಾಯಿ ಪ್ರಣೀತ್
ಶ್ರೀಕಾಂತ್‌, ಥಾಯ್ಲೆಂಡ್‌ನ ಥಾಮಸ್ಸಿನ್‌ ವಿರುದ್ಧ ಜಯಭೇರಿ

Kidambi Srikanth Sai Praneeth Advance to pre Quarter final in Madrid Masters kvn
Author
First Published Mar 30, 2023, 9:06 AM IST

ಮ್ಯಾಡ್ರಿಡ್‌(ಮಾ.30): ಸ್ಪೇನ್‌ ಮಾಸ್ಟ​ರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ ಫೈನಲ್‌ಗೆ ಭಾರತದ ಕಿದಂಬಿ ಶ್ರೀಕಾಂತ್‌, ಬಿ.ಸಾಯಿ ಪ್ರಣೀತ್‌, ಕಿರಣ್‌ ಜಾಜ್‌ರ್‍, ಪ್ರಿಯಾನ್ಶು ರಾಜವತ್‌, ಆಕರ್ಷಿ ಕಶ್ಯಪ್‌ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಶ್ರೀಕಾಂತ್‌, ಥಾಯ್ಲೆಂಡ್‌ನ ಥಾಮಸ್ಸಿನ್‌ ವಿರುದ್ಧ 21-11, 25-27, 23-21 ಗೇಮ್‌ಗಳಲ್ಲಿ ಗೆದ್ದರು. 

ಕರ್ನಾಟಕದ ಮಿಥುನ್‌ ಮಂಜುನಾಥ್‌ರನ್ನು ಕಿರಣ್‌ 21-16, 21-14ರಲ್ಲಿ ಮಣಿಸಿದರು. ಇನ್ನು ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಆಕರ್ಷಿ ಕೆನಡಾದ ಮಿಷೆಲ್‌ ಲೀ ವಿರುದ್ಧ 12-21, 21-15, 21-18 ಗೇಮ್‌ಗಳಲ್ಲಿ ಜಯಿಸಿ ಮುನ್ನಡೆದರು.

ಮೈಸೂರು ಓಪನ್‌ ಟೆನಿಸ್‌: ಪ್ರಿ ಕ್ವಾರ್ಟರ್‌ಗೆ ಪ್ರಜ್ವಲ್‌

ಮೈಸೂರು: ಭಾರತದ ಪ್ರಜ್ವಲ್‌ ದೇವ್‌ ಇಲ್ಲಿ ನಡೆಯುತ್ತಿರುವ ಮೈಸೂರು ಓಪನ್‌ ಐಟಿಎಫ್‌ ಟೆನಿಸ್‌ ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಬುಧವಾರ ನಡೆದ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಭಾರತದವರೇ ಆದ ಅಭಿನವ್‌ ಸಂಜೀವ್‌ ವಿರುದ್ಧ 6-4, 7-5 ಸೆಟ್‌ಗಳಲ್ಲಿ ಜಯ ಗಳಿಸಿದರು.

ಪ್ರಿ ಕ್ವಾರ್ಟರ್‌ನಲ್ಲಿ ಮೈಸೂರಿನ ಪ್ರಜ್ವಲ್‌ಗೆ ಮಾಜಿ ಚಾಂಪಿಯನ್‌ ರಾಮಕುಮಾರ್‌ ರಾಮನಾಥನ್‌ ಎದುರಾಗಬೇಕಿತ್ತು. ಆದರೆ ಗಾಯದ ಸಮಸ್ಯೆಯಿಂದಾಗಿ ರಾಮ್‌ ಟೂರ್ನಿಯಿಂದ ಹೊರನಡೆದ ಕಾರಣ, ಅಂತಿಮ 16ರ ಸುತ್ತಿನಲ್ಲಿ ಮತ್ತೊಬ್ಬ ಅನುಭವಿ ಆಟಗಾರ ವಿಷ್ಣು ವರ್ಧನ್‌ರನ್ನು ಎದುರಿಸಲಿದ್ದಾರೆ.

ಗಣಪತಿ ಹ್ಯಾಟ್ರಿಕ್‌ ಗೋಲು: ಅಪ್ಪುಮಣಿರಯಂಡಕ್ಕೆ ಜಯ

ಅಗ್ರ ಶ್ರೇಯಾಂಕಿತನಿಗೆ ಶಾಕ್‌!: ಬುಧವಾರ ಅಗ್ರ ಶ್ರೇಯಾಂಕಿತ ಆಟಗಾರ ವಿಯೆಟ್ನಾಂನ ನಾಮ್‌ ಹವೊಂಗ್‌ ವಿರುದ್ಧ 6-3, 6-4 ಸೆಟ್‌ಗಳಲ್ಲಿ ಬ್ರಿಟನ್‌ನ ಶ್ರೇಯಾಂಕ ರಹಿತ ಆಟಗಾರ ಜಾಜ್‌ರ್‍ ಲೊಫಾಜೆನ್‌ ಜಯಗಳಿಸಿ ಅಚ್ಚರಿ ಮೂಡಿಸಿದರು. ಇದೇ ವೇಳೆ ರಾಜ್ಯದ ನಿಕಿ ಪೂಣಚ್ಚ, ಮನೀಶ್‌ ಗಣೇಶ್‌ ಸಹ ಸೋತು ಹೊರಬಿದ್ದರು.

ತ್ರಿಕೋನ ಫುಟ್ಬಾಲ್‌ ಸರಣಿ ಗೆದ್ದ ಭಾರತ

ಇಂಫಾಲ್‌: ಫಿಫಾ ರಾರ‍ಯಂಕಿಂಗ್‌ನಲ್ಲಿ ತನಗಿಂತ ಮೇಲಿರುವ ಕಿರ್ಗಿಸ್ತಾನವನ್ನು 2-0 ಅಂತರದಲ್ಲಿ ಸೋಲಿಸಿದ ಭಾರತ, ತ್ರಿಕೋನ ಫುಟ್ಬಾಲ್‌ ಸರಣಿಯಲ್ಲಿ ಪ್ರಶಸ್ತಿ ಜಯಿಸಿದೆ. ಟೂರ್ನಿಯಲ್ಲಿ ಆಡಿದ ಮತ್ತೊಂದು ತಂಡವಾದ ಮ್ಯಾನ್ಮಾರ್‌ ವಿರುದ್ಧ ಭಾರತ ಮಾ.22ರಂದು ನಡೆದಿದ್ದ ಪಂದ್ಯದಲ್ಲಿ 1-0 ಗೆಲುವು ಸಾಧಿಸಿತ್ತು. ಮಂಗಳವಾರ ನಡೆದ ಕಿರ್ಗಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಪರ 34ನೇ ನಿಮಿಷದಲ್ಲಿ ಸಂದೇಶ್‌ ಝಿಂಗನ್‌, 84ನೇ ನಿಮಿಷದಲ್ಲಿ ಸುನಿಲ್‌ ಚೆಟ್ರಿ ಗೋಲು ಬಾರಿಸಿದರು.

ಮೈತ್ರೇಯಿ 6 ಗೋಲು: ರಾಜ್ಯಕ್ಕೆ 9-1 ಗೆಲುವು!

ಬೆಂಗಳೂರು: 27ನೇ ರಾಷ್ಟ್ರೀಯ ಮಹಿಳಾ ಫುಟ್ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಶುಭಾರಂಭ ಮಾಡಿದೆ. ಗುಂಪು 6ರಲ್ಲಿರುವ ಕರ್ನಾಟಕ, ಬುಧವಾರ ತನ್ನ ಮೊದಲ ಪಂದ್ಯದಲ್ಲಿ ಗುಜರಾತ್‌ ವಿರುದ್ಧ 9-1 ಗೋಲುಗಳ ಭರ್ಜರಿ ಗೆಲುವು ಸಾಧಿಸಿತು. ಮೈತ್ರೇಯಿ ಪಲಸಮುದ್ರಂ 6 ಗೋಲುಗಳನ್ನು ಬಾರಿಸಿ ಗಮನ ಸೆಳೆದರು. 7ನೇ ನಿಮಿಷದಲ್ಲೇ ಖಾತೆ ತೆರೆದ ಮೈತ್ರೇಯಿ 9, 25, 39, 45+2, 90+1ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. ಉಳಿದ 3 ಗೋಲುಗಳು 21ನೇ ನಿಮಿಷದಲ್ಲಿ ಮೋನಾಲಿಸಾ, 22 ಹಾಗೂ 45+1ನೇ ನಿಮಿಷದಲ್ಲಿ ಕಾವ್ಯ ಅವರಿಂದ ದಾಖಲಾಯಿತು. ರಾಜ್ಯ ತಂಡ ತನ್ನ 2ನೇ ಪಂದ್ಯವನ್ನು ಮಾ.31ರಂದು ಅಸ್ಸಾಂ ವಿರುದ್ಧ ಆಡಲಿದೆ.

ವೇಟ್‌ಲಿಫ್ಟಿಂಗ್‌: ರಾಜ್ಯಕ್ಕೆ ರನ್ನರ್‌-ಅಪ್‌ ಸ್ಥಾನ

ಬೆಂಗಳೂರು: 4ನೇ ಆವೃತ್ತಿಯ ಖೇಲೋ ಇಂಡಿಯಾ ರಾಷ್ಟ್ರೀಯ ರಾರ‍ಯಂಕಿಂಗ್‌ ಮಹಿಳಾ ಚಾಂಪಿಯನ್‌ಶಿಪ್‌ ಮುಕ್ತಾಯಗೊಂಡಿದ್ದು, ಕಿರಿಯರ ವಿಭಾಗದಲ್ಲಿ ಕರ್ನಾಟಕಕ್ಕೆ ರನ್ನರ್‌-ಅಪ್‌(181 ಅಂಕ) ಸ್ಥಾನ ದೊರೆತಿದೆ. ಈ ವಿಭಾಗದಲ್ಲಿ ಮಹಾರಾಷ್ಟ್ರ 218 ಅಂಕಗಳೊಂದಿಗೆ ಚಾಂಪಿಯನ್‌ ಎನಿಸಿಕೊಂಡಿತು. ಹಿರಿಯರ ವಿಭಾಗದಲ್ಲಿ ರೈಲ್ವೇಸ್‌ ಚಾಂಪಿಯನ್‌ ಆದರೆ, ಮಹಾರಾಷ್ಟ್ರ ರನ್ನರ್‌-ಅಪ್‌ ಆಯಿತು. ಕೊನೆ ದಿನ +87 ಕೆ.ಜಿ. ಹಿರಿಯರ ವಿಭಾಗದಲ್ಲಿ ಕೇರಳದ ಆ್ಯನ್‌ ಮರಿಯಾ ಚಿನ್ನ ಜಯಿಸಿದರೆ, ಕಿರಿಯರ +87 ಕೆ.ಜಿ. ವಿಭಾಗದಲ್ಲಿ ಮಹಾರಾಷ್ಟ್ರದ ಪ್ರೀತಿ ಮೊದಲ ಸ್ಥಾನ ಪಡೆದರು.

Follow Us:
Download App:
  • android
  • ios