ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ಅದ್ಧೂರಿ ತೆರೆ; ಮಹಾರಾಷ್ಟ್ರ ಸಮಗ್ರ ಚಾಂಪಿಯನ್
5ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ವಿದ್ಯುಕ್ತ ತೆರೆ
ಒಟ್ಟು 54 ಪದಕ ಗೆದ್ದು ಅಭಿಯಾನ ಕೊನೆಗೊಳಿಸಿದ ಕರ್ನಾಟಕ
12ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಕರ್ನಾಟಕ
ಭೋಪಾಲ್(ಫೆ.12): ಜನವರಿ 30ಕ್ಕೆ ಆರಂಭಗೊಂಡಿದ್ದ 5ನೇ ಆವೃತ್ತಿ ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ಶನಿವಾರ ಮಧ್ಯಪ್ರದೇಶದ ಭೋಪಾಲ್ನಲ್ಲಿ ತೆರೆಬಿದ್ದಿದೆ. ಕೆರೆಯ ನಡುವೆ ನಿರ್ಮಿಸಲಾದ ವೇದಿಕೆಯಲ್ಲಿ ಸಮಾರೋಪ ಸಮಾರಂಭ ನಡೆದಿದ್ದು ಎಲ್ಲರ ಗಮನ ಸೆಳೆಯಿತು. ಸಮಾರೋಪದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಪ್ರಮುಖರು ಹಾಜರಿದ್ದರು.
ಕೂಟದಲ್ಲಿ ಕರ್ನಾಟಕ 9 ಚಿನ್ನ, 24 ಬೆಳ್ಳಿ, 21 ಕಂಚು ಸೇರಿ ಒಟ್ಟು 54 ಪದಕ ಗೆದ್ದು ಅಭಿಯಾನ ಕೊನೆಗೊಳಿಸಿದೆ. ಆದರೆ ಕಳೆದ 4 ಆವೃತ್ತಿಗಳಿಗೆ ಹೋಲಿಸಿದರೆ ರಾಜ್ಯ ಈ ಬಾರಿ ಕಳಪೆ ಪ್ರದರ್ಶನ ತೋರಿದೆ. ಮೊದಲ 4 ಅವೃತ್ತಿಗಳಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ್ದ ರಾಜ್ಯ ಅಗ್ರ-4ರಲ್ಲೇ ಸ್ಥಾನ ಗಿಟ್ಟಿಸಿಕೊಂಡಿತ್ತು. ಈ ಬಾರಿ 12ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
2018ರ ಚೊಚ್ಚಲ ಆವೃತ್ತಿಯಲ್ಲಿ 16 ಚಿನ್ನ ಸೇರಿ 44 ಪದಕ ಗೆದ್ದು 4ನೇ ಸ್ಥಾನದಲ್ಲಿದ್ದ ಕರ್ನಾಟಕ 2019ರಲ್ಲಿ 30 ಚಿನ್ನ ಸೇರಿ 75 ಪದಕ(4ನೇ ಸ್ಥಾನ), 2020ರಲ್ಲಿ 32 ಚಿನ್ನ ಸೇರಿ 40 ಪದಕ(4ನೇ ಸ್ಥಾನ) ತನ್ನದಾಗಿಸಿಕೊಂಡಿತ್ತು. ಬಳಿಕ 2021ರಲ್ಲಿ ಹರ್ಯಾಣದಲ್ಲಿ ನಡೆದ ಕೂಟದಲ್ಲಿ ಕರ್ನಾಟಕ 22 ಚಿನ್ನದ ಜೊತೆಗೆ 67 ಪದಕಗಳನ್ನು ಕೊಳ್ಳೆ ಹೊಡೆದು ಪದಕ ಪಟ್ಟಿಯಲ್ಲಿ ತೃತೀಯ ಸ್ಥಾನಿಯಾಗಿತ್ತು. ಆದರೆ ಈ ಬಾರಿ ಪದಕ ಗಳಿಕೆಯಲ್ಲಿ ಹಿಂದೆ ಬಿದ್ದಿದ್ದು, ಅಗ್ರ-10ರಲ್ಲೂ ಸ್ಥಾನ ಪಡೆದಿಲ್ಲ. ರಾಜ್ಯ ಗೆದ್ದ 54 ಪದಕಗಳ ಪೈಕಿ 31 ಪದಕಗಳು ಈಜಿನಲ್ಲೇ ಒಲಿದಿದೆ. ಇದರಲ್ಲಿ 6 ಚಿನ್ನ ಲಭಿಸಿದ್ದು, ಕಳೆದ ಬಾರಿಗಿಂತ ಸಾಧಾರಣ ಪ್ರದರ್ಶನ ತೋರಿದ್ದಾರೆ.
ಅತ್ಯುತ್ತಮ ಸಂದೇಶದೊಂದಿಗೆ ನಡೆದಾಡುವ ಫೋಟೋ ಹಂಚಿಕೊಂಡ ರಿಷಭ್ ಪಂತ್
ಈಜಿನಲ್ಲಿ ರಾಜ್ಯಕ್ಕೆ ಪ್ರಶಸ್ತಿ
ಕರ್ನಾಟಕ ಕೊನೆ ದಿನ 7 ಪದಕ ತನ್ನದಾಗಿಸಿಕೊಂಡಿತು. ಎಲ್ಲಾ ಪದಕಗಳೂ ಈಜಿನಲ್ಲಿ ಲಭಿಸಿತು. ಒಟ್ಟಾರೆ ಈಜಿನಲ್ಲಿ 6 ಚಿನ್ನ, 15 ಬೆಳ್ಳಿ, 10 ಕಂಚಿನೊಂದಿಗೆ 31 ಪದಕ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ಈಜುಪಟುಗಳು ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದರು.
ಮಹಾರಾಷ್ಟ್ರಕ್ಕೆ ಪ್ರಶಸ್ತಿ:
ಕೂಟದಲ್ಲಿ ಮಹಾರಾಷ್ಟ್ರ ಹಾಗೂ ಹರ್ಯಾಣದ ಪ್ರಾಬಲ್ಯ ಈ ಬಾರಿಯೂ ಮುಂದುವರಿದಿದ್ದು, ಮಹಾರಾಷ್ಟ್ರ 56 ಚಿನ್ನ ಸೇರಿ 161 ಪದಕದೊಂದಿಗೆ 3ನೇ ಬಾರಿ ಸಮಗ್ರ ಚಾಂಪಿಯನ್ ಎನಿಸಿಕೊಂಡಿದೆ. ಹರ್ಯಾಣ 41 ಚಿನ್ನ ಸೇರಿ 128 ಪದಕದೊಂದಿಗೆ ದ್ವಿತೀಯ ಸ್ಥಾನ ಪಡೆದರೆ, ಆತಿಥೇಯ ಮಧ್ಯಪ್ರದೇಶ(39 ಚಿನ್ನ ಸೇರಿ 96 ಪದಕ) ತೃತೀಯ ಸ್ಥಾನಿಯಾಯಿತು.
ಟಾಪ್-5 ಪದಕ ಪಟ್ಟಿ
ರಾಜ್ಯ ಚಿನ್ನ ಬೆಳ್ಳಿ ಕಂಚು ಒಟ್ಟು
ಮಹಾರಾಷ್ಟ್ರ 56 55 50 161
ಹರ್ಯಾಣ 41 32 55 128
ಮಧ್ಯಪ್ರದೇಶ 39 30 27 96
ರಾಜಸ್ಥಾನ 19 10 19 48
ಡೆಲ್ಲಿ 16 22 26 64