Khelo India Youth Games: ಮತ್ತೆ ಎರಡು ರಾಷ್ಟ್ರೀಯ ದಾಖಲೆ ನಿರ್ಮಾಣ
ಖೇಲೋ ಇಂಡಿಯಾ 7ನೇ ದಿನ ಪದಕ ಗೆಲ್ಲಲು ಕರ್ನಾಟಕ ವಿಫಲ
ಕೂಟದಲ್ಲಿ ಭಾನುವಾರ 2 ರಾಷ್ಟ್ರೀಯ ದಾಖಲೆ ನಿರ್ಮಾಣ
ಮಹಾರಾಷ್ಟ್ರ 26 ಚಿನ್ನ ಸೇರಿ 79 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ
ಭೋಪಾಲ್: 5ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಕರ್ನಾಟಕ ಭಾನುವಾರ ಯಾವುದೇ ಪದಕ ಗೆಲ್ಲಲು ವಿಫಲವಾಯಿತು. ಆರಂಭಿಕ 6 ದಿನಗಳಲ್ಲಿ 2 ಚಿನ್ನ, 7 ಬೆಳ್ಳಿ ಹಾಗೂ 9 ಕಂಚು ಸೇರಿ 18 ಪದಕಗಳನ್ನು ಬಾಚಿಕೊಂಡಿದ್ದ ಕರ್ನಾಟಕ 7ನೇ ದಿನ ನೀರಸ ಪ್ರದರ್ಶನ ತೋರಿತು. ಕಳೆದ ಬಾರಿ 3ನೇ ಸ್ಥಾನ ಪಡೆದುಕೊಂಡಿದ್ದ ರಾಜ್ಯ ಈ ಬಾರಿ 14ನೇ ಸ್ಥಾನದಲ್ಲೇ ಉಳಿದುಕೊಂಡಿದೆ.
ಇದೇ ವೇಳೆ ಕೂಟದಲ್ಲಿ ಭಾನುವಾರ 2 ರಾಷ್ಟ್ರೀಯ ದಾಖಲೆ ನಿರ್ಮಾಣವಾಯಿತು. ಬಾಲಕರ ಶಾಟ್‌ಪುಟ್‌ನಲ್ಲಿ ಹರಾರಯಣದ ಸಿದ್ಧಾಥ್‌ರ್ ಚೌಧರಿ 21.04 ಮೀ. ದೂರಕ್ಕೆ ಎಸೆದು ದಾಖಲೆ ಬರೆದರು. ಈ ಮೊದಲು ದೀಪೇಂದ್ರ ದಬಾಸ್ 20.99ಮೀ. ದೂರಕ್ಕೆ ಎಸೆದಿದ್ದು ದಾಖಲೆ ಎನಿಸಿತ್ತು. ಇನ್ನು, ಬಾಲಕಿಯರ 2000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಡೆಲ್ಲಿಯ ಸೋನಂ 6 ನಿಮಿಷ 45.71 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದು ದಾಖಲೆ ಎನಿಸಿತು. ಲಖನೌನ ಪಾರುಲ್ ಅವರ 7 ನಿಮಿಷ 06.49 ಸೆಕೆಂಡ್‌ಗಳ ದಾಖಲೆ ಪತನಗೊಂಡಿತು. ಸದ್ಯ ಮಹಾರಾಷ್ಟ್ರ 26 ಚಿನ್ನ ಸೇರಿ 79 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಹರ್ಯಾಣ(53), ಮಧ್ಯಪ್ರದೇಶ(53) ನಂತರದ ಸ್ಥಾನಗಳಲ್ಲಿವೆ.
ಹೈಜಂಪ್: ಚಿನ್ನದ ಪದಕ ಗೆದ್ದ ಭಾರತದ ತೇಜಸ್ವಿನ್
ಬೊಸ್ಟೊನ್: ಭಾರತದ ತಾರಾ ಹೈ ಜಂಪ್ ಪಟು ತೇಜಸ್ವಿನ್ ಶಂಕರ್ ನ್ಯೂ ಬ್ಯಾಲನ್ಸ್ ಇಂಡೋರ್ ಗ್ರ್ಯಾನ್‌ಪ್ರಿ ಕೂಟದಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. 24 ವರ್ಷದ ತೇಜಸ್ವಿನ್ 2007ರ ವಿಶ್ವ ಚಾಂಪಿಯನ್‌ಶಿಪ್ ಹಾಗೂ 2010ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತ ಬಹಾಮಾಸ್‌ನ ಡೊನಾಲ್ಡ್ ಥೋಮಸ್‌ರನ್ನು ಹಿಂದಿಕ್ಕಿ ಬಂಗಾರ ಪಡೆದರು. ಅವರು 2.256 ಮೀ. ಎತ್ತರಕ್ಕೆ ನೆಗೆದರೆ, ಡೊನಾಲ್ಡ್ 2.23 ಮೀ. ಎತ್ತರಕ್ಕಷ್ಟೇ ಜಿಗಿಯಲು ಯಶಸ್ವಿಯಾದರು. ತೇಜಸ್ವಿನ್ ತಮ್ಮ 4 ಪ್ರಯತ್ನಗಳಲ್ಲಿ 2.14ಮೀ., 2.19, 2.23 ಹಾಗೂ 2.26 ಮೀ. ಎತ್ತರಕ್ಕೆ ನೆಗೆದು ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಜಾಗ್ರೆಬ್ ಕುಸ್ತಿ: ಭಾರತದ ಅಶುಗೆ ಕಂಚಿನ ಪದಕ
ಜಾಗ್ರೆಬ್: ಏಷ್ಯನ್ ಚಾಂಪಿಯನ್‌ಶಿಪ್ ಕಂಚು ವಿಜೇತ ತಾರಾ ಕುಸ್ತಿಪಟು ಅಶು ಜಾಗ್ರೆಬ್ ಓಪನ್ ರಾರಯಂಕಿಂಗ್ ಸೀರಿಸ್‌ನಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ಭಾರತ 2 ಪದಕಗಳೊಂದಿಗೆ ಕೂಟದ ಅಭಿಯಾನ ಕೊನೆಗೊಳಿಸಿತು.
ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಪಿ.ಟಿ.ಉಷಾ! ಯಾಕೆ? ಏನಾಯ್ತು?
ಕೊನೆ ದಿನವಾದ ಭಾನುವಾರ 23 ವರ್ಷದ ಅಶು ಗ್ರೀಕೊ ರೋಮನ್ ವಿಭಾಗದಲ್ಲಿ ಲಿಥುವಾನಿಯಾದ ಅಡೋಮಸ್ ಗ್ರಿಗಲ್ಯೂನಸ್ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿದರು. ಅಶು ಅರ್ಹತಾ ಸುತ್ತಿನಲ್ಲೇ ಸೋತಿದ್ದರೂ ರಿಪಿಶಾಜ್ ಸುತ್ತಿನ ಮೂಲಕ ಕಂಚಿನ ಪದಕ ಪಂದ್ಯಕ್ಕೆ ಅರ್ಹತೆ ಪಡೆದಿದ್ದರು. ಇದೇ ವೇಳೆ ಸಾಗರ್(63 ಕೆ.ಜಿ.), ಸುಶ್ಮಾ ಶೊಕೀನ್(53 ಕೆ.ಜಿ.) ಸೋಲುಂಡರು. ಕೂಟದ ಮೊದಲ ದಿನ ಅಮಾನ್ ಸೆಹ್ರಾವತ್(57 ಕೆ.ಜಿ.) ಫ್ರೀಸ್ಟೈಲ್ ವಿಭಾಗದಲ್ಲಿ ಕಂಚು ಪಡೆದಿದ್ದರು.
ರಾಷ್ಟ್ರೀಯ ಆರ್ಚರಿ ಕೂಟ: ಫೆಬ್ರವರಿ 12ಕ್ಕೆ ಆಯ್ಕೆ ಪ್ರಕ್ರಿಯೆ
ಬೆಂಗಳೂರು: ಮಾರ್ಚ್ 9ರಿಂದ 18ರ ವರೆಗೆ ಗುಜರಾತ್‌ನ ಏಕ್ತಾನಗರದಲ್ಲಿ ನಡೆಯಲಿರುವ 42ನೇ ಎನ್‌ಟಿಪಿಸಿ ಹಿರಿಯರ ರೀಕರ್ವ್ ಸುತ್ತು, 18ನೇ ಹಿರಿಯರ ಕಾಂಪೌಂಡ್ ಸುತ್ತು ಹಾಗೂ 29ನೇ ಇಂಡಿಯನ್ ಸುತ್ತಿನ ರಾಷ್ಟ್ರೀಯ ಆರ್ಚರಿ ಚಾಂಪಿಯನ್‌ಶಿಪ್‌ಗೆ ಕರ್ನಾಟಕದ ಅಥ್ಲೀಟ್‌ಗಳ ಆಯ್ಕೆ ಪ್ರಕ್ರಿಯೆ ಫೆಬ್ರವರಿ 12ರಂದು ನಡೆಯಲಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬೆಳಗ್ಗೆ 8.30ಕ್ಕೆ ಟ್ರಯಲ್ಸ್ ಆರಂಭವಾಗಲಿದೆ. ಆಸಕ್ತರು ಕರ್ನಾಟಕ ಆರ್ಚರಿ ಸಂಸ್ಥೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.