ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಪಿ.ಟಿ.ಉಷಾ! ಯಾಕೆ? ಏನಾಯ್ತು?
ತಮ್ಮ ಅಕಾಡೆಮಿಯ ಕ್ಯಾಂಪಸ್‌ನಲ್ಲಿ ಆಗುತ್ತಿರುವ ದೌರ್ಜನ್ಯದ ಬಗ್ಗೆ ತುಟಿಬಿಚ್ಚಿದ ಪಿ ಟಿ ಉಷಾ
ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷೆ
ಸೂಕ್ತ ರಕ್ಷಣೆ, ನ್ಯಾಯ ಒದಗಿಸುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಪತ್ರ
ನವದೆಹಲಿ(ಫೆ.05): ಕೇರಳದಲ್ಲಿರುವ ತಮ್ಮ ಅಕಾಡೆಮಿಯ ಕ್ಯಾಂಪಸ್‌ನಲ್ಲಿ ದುಷ್ಕರ್ಮಿಗಳು ಡ್ರಗ್‌್ಸ ದಂಧೆ, ಗೂಂಡಾಗಿರಿ ನಡೆಸುತ್ತಿದ್ದು, ಅಕಾಡೆಮಿಯ ವಿದ್ಯಾರ್ಥಿಗಳಿಗೆ ಭದ್ರತೆಯ ಸಮಸ್ಯೆ ಎದುರಾಗಿದೆ ಎಂದು ದಿಗ್ಗಜೆ ಅಥ್ಲೀಟ್, ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಅಧ್ಯಕ್ಷೆ ಪಿ.ಟಿ.ಉಷಾ ಶನಿವಾರ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದರು.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಷಾ, ‘ಕಲ್ಲಿಕೋಟೆಯಲ್ಲಿರುವ ತಮ್ಮ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್‌ನ ಕ್ಯಾಂಪಸ್‌ನಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿದೆ. ಡ್ರಗ್‌್ಸ ಸೇವಿಸಲು ಕ್ಯಾಂಪಸ್ ಬಳಸುತ್ತಿದ್ದಾರೆ. ಅತಿಕ್ರಮಣ ಪ್ರಶ್ನಿಸಿದಾಗ ಕೆಟ್ಟದಾಗಿ ಮಾತನಾಡಿದ್ದಾರೆ. ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳ ಇದರಿಂದ ಭಯಭೀತಗೊಂಡಿದ್ದು, ಭದ್ರತೆಯ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು. ಜೊತೆಗೆ ಸೂಕ್ತ ರಕ್ಷಣೆ, ನ್ಯಾಯ ಒದಗಿಸುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಪತ್ರ ಕೂಡಾ ಬರೆದಿದ್ದಾರೆ.
58 ವರ್ಷದ ಉಷಾ, ಏಷ್ಯನ್ ಗೇಮ್ಸ್‌ನಲ್ಲಿ ಹಲವು ಪದಕಗಳನ್ನು ಗೆದ್ದಿದ್ದು 1984ರ ಒಲಿಂಪಿಕ್ಸ್‌ನ 400 ಮೀ. ಹರ್ಡಲ್ಸ್‌ನಲ್ಲಿ ಐತಿಹಾಸಿಕ 4ನೇ ಸ್ಥಾನ ಪಡೆದಿದ್ದರು ಎನ್ನುವುದನ್ನು ಸ್ಮರಿಸಬಹುದಾಗಿದೆ.
ಪಾಕ್ ಬದಲು ಯುಎಇಯಲ್ಲಿ ಏಷ್ಯಾಕಪ್?
ನವದೆಹಲಿ: 2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಪಾಕಿಸ್ತಾನ ಬದಲು ಯುಎಇಯಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದ್ದು, ಮುಂದಿನ ತಿಂಗಳು ಈ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.
ಪ್ರೈಮ್ ವಾಲಿಬಾಲ್ ಲೀಗ್: ಹಾಲಿ ಚಾಂಪಿಯನ್ ಕೋಲ್ಕತಾ ಶುಭಾರಂಭ
ಶನಿವಾರ ಎಸಿಸಿ ಮುಖ್ಯಸ್ಥ, ಬಿಸಿಸಿಐ ಕಾರ‍್ಯದರ್ಶಿ ಜಯ್ ಶಾ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧ್ಯಕ್ಷ ನಜಂ ಸೇಠಿ ಬಹರೇನ್‌ನಲ್ಲಿ ತುರ್ತು ಸಭೆಯಲ್ಲಿ ಪಾಲ್ಗೊಂಡರು. ಸಭೆಯಲ್ಲಿ ಜಯ್ ಶಾ ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಯುಎಇಯಲ್ಲಿ ಟೂರ್ನಿ ನಡೆಯುವ ಸಾಧ್ಯತೆ ಇದ್ದು, ದುಬೈ, ಅಬುಧಾಬಿ, ಶಾರ್ಜಾ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ ಎಂದು ವರದಿಯಾಗಿದೆ. ಟೂರ್ನಿಯ ಆತಿಥ್ಯ ಹಕ್ಕು ಪಾಕ್ ಬಳಿ ಇದ್ದರೂ ಬಿಸಿಸಿಐ ಈಗಾಗಲೇ ಅಲ್ಲಿಗೆ ತೆರಳಿ ಕ್ರಿಕೆಟ್ ಆಡಲ್ಲ ಎಂದು ಹೇಳಿತ್ತು.
ರಾಜ್ಯದ ಬೆಳ್ಳಿಯಪ್ಪಗೆ ಡೆಲ್ಲಿ ಮ್ಯಾರಥಾನ್‌ನಲ್ಲಿ ಏಷ್ಯಾಡ್ ಅರ್ಹತೆ ಗುರಿ
ನವದೆಹಲಿ: ಮುಂಬರುವ ಹ್ಯಾಂಗ್ಝೂ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಕನ್ನಡಿಗ ಎ.ಬೆಳ್ಳಿಯಪ್ಪ, ದೇಶದ ಅಗ್ರ ಓಟಗಾರರಾದ ಶ್ರೀನು ಬುಗತ, ಜ್ಯೋತಿ ಸಿಂಗ್ ಗಾವಟೆ ಸೇರಿದಂತೆ ಪ್ರಮುಖ ಅಥ್ಲೀಟ್‌ಗಳು ಫೆ.26ರಂದು ಡೆಲ್ಲಿ ಮ್ಯಾರಥಾನ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್(ಎಎಫ್‌ಐ), ಫಿಟ್ ಇಂಡಿಯಾ ಮಾನ್ಯತೆಯೊಂದಿಗೆ ಆಯೋಜನೆಗೊಳ್ಳಲಿರುವ ರೇಸ್‌ನಲ್ಲಿ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯಲು ಪುರುಷರಿಗೆ 2 ಗಂಟೆ 15 ನಿಮಿಷ, ಮಹಿಳೆಯರಿಗೆ 2 ಗಂಟೆ 37 ನಿಮಿಷದ ಅರ್ಹತಾ ಸಮಯ ನಿಗದಿಪಡಿಸಲಾಗಿದೆ. ಏಷ್ಯನ್ ಗೇಮ್ಸ್ ಸೆ.23ರಿಂದ ಅ.8ರ ವರೆಗೆ ಚೀನಾದಲ್ಲಿ ನಡೆಯಲಿದೆ.
ವಿಶ್ವ ಬಾಕ್ಸಿಂಗ್ ರ‍್ಯಾಂಕಿಂಗ್: 3ನೇ ಸ್ಥಾನಕ್ಕೇರಿದ ಭಾರತ
ನವದೆಹಲಿ: ಅಮೆರಿಕ ಸೇರಿದಂತೆ ಪ್ರಮುಖ ದೇಶಗಳನ್ನು ಹಿಂದಿಕ್ಕಿ ಭಾರತ ವಿಶ್ವ ಬಾಕ್ಸಿಂಗ್ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೇರಿದೆ. ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ(ಐಬಿಎ) ಪ್ರಕಟಿಸಿದ ನೂತನ ರ‍್ಯಾಂಕಿಂಗ್‌ನಲ್ಲಿ ಭಾರತ 36300 ರೇಟಿಂಗ್ ಅಂಕಗಳನ್ನು ಕಲೆಹಾಕಿದೆ. 48100 ಅಂಕಗಳೊಂದಿಗೆ ಕಜಕಸ್ತಾನ ನಂ.1 ಸ್ಥಾನ ಕಾಯ್ದುಕೊಂಡಿದ್ದು, ಉಜ್ಬೇಕಿಸ್ತಾನ 37600 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಭಾರತ ವಿಶ್ವ ಮಟ್ಟದಲ್ಲಿ ಅಭೂತಪೂರ್ವ ಪ್ರದರ್ಶನ ತೋರುತ್ತಿದ್ದು, 2008ರಿಂದ ಅಗ್ರ ಅಂತಾರಾಷ್ಟ್ರೀಯ ಕೂಟಗಳಲ್ಲಿ ಒಟ್ಟು 140 ಪದಕಗಳನ್ನು ಜಯಿಸಿದೆ.