ಪುಣೆ(ಜ.20): ಇಲ್ಲಿ ನಡೆಯುತ್ತಿರುವ 2ನೇ ಆವೃತ್ತಿಯ ಖೇಲೋ ಇಂಡಿಯಾ ಕಿರಿಯರ ಕ್ರೀಡಾಕೂಟದ ಶನಿವಾರದ ಸ್ಪರ್ಧೆಯಲ್ಲಿ ಕರ್ನಾಟಕ 1 ಚಿನ್ನ, 2 ಬೆಳ್ಳಿ ಪದಕ ಗೆದ್ದಿದೆ. ಫುಟ್ಬಾಲ್‌ನಲ್ಲಿ ಕರ್ನಾಟಕ ಅನಿರೀಕ್ಷಿತ ಎಂಬಂತೆ ಚಿನ್ನ ಜಯಿಸಿದರೆ, ಬಾಸ್ಕೆಟ್‌ಬಾಲ್‌ನಲ್ಲಿ ಬೆಳ್ಳಿಗೆ ಖುಷಿ ಪಟ್ಟಿತು. ಕರ್ನಾಟಕ 30 ಚಿನ್ನ, 28 ಬೆಳ್ಳಿ, 19 ಕಂಚಿನೊಂದಿಗೆ ಒಟ್ಟು 77 ಪದಕ ಗೆದ್ದಿದ್ದು ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ. ಭಾನುವಾರ ಕ್ರೀಡಾಕೂಟಕ್ಕೆ ತೆರೆ ಬೀಳಲಿದೆ.

ಇದನ್ನೂ ಓದಿ: ಖೇಲೋ ಇಂಡಿಯಾ: ಈಜಿನಲ್ಲಿ ರಾಜ್ಯಕ್ಕೆ 2ನೇ ಸ್ಥಾನ

ಪೆನಾಲ್ಟಿಯಲ್ಲಿ ಜಯ: ಅಂಡರ್‌-17 ಬಾಲಕರ ಫುಟ್ಬಾಲ್‌ ಫೈನಲ್‌ನಲ್ಲಿ ಕರ್ನಾಟಕ ತಂಡ, ಪಂಜಾಬ್‌ ಎದುರು ಅದ್ಭುತ ಗೆಲುವು ಸಾಧಿಸಿತು. ಪಂದ್ಯದ ಪೂರ್ಣಾವಧಿಯಲ್ಲಿ ಉಭಯ ತಂಡಗಳು 1-1 ಗೋಲುಗಳಲ್ಲಿ ಸಮಬಲ ಸಾಧಿಸಿದವು. ಫಲಿತಾಂಶಕ್ಕಾಗಿ ತಲಾ 5 ಗೋಲುಗಳ ಪೆನಾಲ್ಟಿಶೂಟೌಟ್‌ ನಡೆಸಲಾಯಿತು. ಇದರಲ್ಲಿ ಕರ್ನಾಟಕ 4-3ರಿಂದ ಜಯಭೇರಿ ಬಾರಿಸಿತು.

 

 

ಫೈನಲಲ್ಲಿ ಸೋಲು: ಅಂಡರ್‌-21 ಬಾಲಕಿಯರ ಬಾಸ್ಕೆಟ್‌ಬಾಲ್‌ ಫೈನಲ್‌ನಲ್ಲಿ ಕರ್ನಾಟಕ ತಂಡ, ತಮಿಳುನಾಡು ವಿರುದ್ಧ 68-82 ಅಂಕಗಳಿಂದ ಪರಾಭವಗೊಂಡಿತು. 4 ಕ್ವಾರ್ಟರ್‌ಗಳ ಪಂದ್ಯದಲ್ಲಿ ಕರ್ನಾಟಕ ಮೊದಲ ಕ್ವಾರ್ಟರ್‌ನಲ್ಲಿ ಮಾತ್ರ ಮುನ್ನಡೆ ಸಾಧಿಸಿತು. ಉಳಿದ 3 ಕ್ವಾರ್ಟರ್‌ಗಳಲ್ಲಿ ಹಿಂದೆ ಬಿದ್ದ ರಾಜ್ಯ ತಂಡ ಬೆಳ್ಳಿಗೆ ತೃಪ್ತಿಪಟ್ಟಿತು.

ಇದನ್ನೂ ಓದಿ: ಖೇಲೋ ಇಂಡಿಯಾ: ಚಿನ್ನ ಗೆದ್ದ ರಾಜ್ಯದ ಸಂಜಯ್‌, ಪೂಜಾ

ಇದೇ ವೇಳೆ, ಅಂಡರ್‌-21 ಬಾಲಕರ ಬಾಕ್ಸಿಂಗ್‌ ಫೈನಲ್‌ನಲ್ಲಿ ಕರ್ನಾಟಕದ ಅನ್ವರ್‌, ಮಹಾರಾಷ್ಟ್ರದ ಭವೇಶ್‌ ಕಟ್ಟಿಮನಿ ವಿರುದ್ಧ 1-2 ಬೌಟ್‌ಗಳಲ್ಲಿ ಸೋಲು ಕಂಡು ಬೆಳ್ಳಿಗೆ ಕೊರೊಳೊಡ್ಡಿದರು.