- 14 ವರ್ಷದೊಳಗಿನವರ ಕ್ರೀಡಾಕೂಟ- 20 ಕ್ರೀಡೆ, 5000 ಸ್ಪರ್ಧಾಳುಗಳು ಭಾಗಿ ನಿರೀಕ್ಷೆ-2.5 ಕೋಟಿ ರೂಪಾಯಿ ವೆಚ್ಚದಲ್ಲಿ ಗೇಮ್ಸ್ ಆಯೋಜನೆ 

ಬೆಂಗಳೂರು (ಮೇ.5): ಕೋವಿಡ್‌ (Covid-19) ಕಾರಣದಿಂದ ಮುಂದೂಡಲ್ಪಟ್ಟಿದ್ದ ಕರ್ನಾಟಕ ಮಿನಿ ಒಲಿಂಪಿಕ್ಸ್‌ (Karnataka Mini Olympics) ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, 14 ವರ್ಷದ ಕೆಳಗಿನವರ ಬಹುನಿರೀಕ್ಷಿತ ಕ್ರೀಡಾಕೂಟಕ್ಕೆ ಮೇ 16ರಂದು ಚಾಲನೆ ಸಿಗಲಿದೆ. ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್‌ ಸಂಸ್ಥೆ(ಕೆಒಎ) ಜಂಟಿಯಾಗಿ ಆಯೋಜಿಸುವ ಈ ಕ್ರೀಡಾಕೂಟವೂ ಮೇ 23ಕ್ಕೆ ಮುಕ್ತಾಯಗೊಳ್ಳಲಿದೆ.

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾಹಿತಿ ಹಂಚಿಕೊಂಡ ಕ್ರೀಡಾಕೂಟದ ರೂವಾರಿ, ರಾಜ್ಯ ಒಲಿಂಪಿಕ್ಸ್‌ ಸಂಸ್ಥೆ (Karnataka Olympic association) ಅಧ್ಯಕ್ಷ ಡಾ.ಕೆ.ಗೋವಿಂದರಾಜು (K. govindaraj), ‘ಕೋವಿಡ್‌ ಕಾರಣದಿಂದ ಕಳೆದ ವರ್ಷ ಕ್ರೀಡಾಕೂಟ ನಡೆದಿರಲಿಲ್ಲ. ಈ ಬಾರಿ ಹಲವು ಸವಾಲುಗಳ ನಡುವೆ ಗೇಮ್ಸ್‌ ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಅಂದಾಜು 2.5 ಕೋಟಿ ರು. ಬಜೆಟ್‌ನಲ್ಲಿ ಗೇಮ್ಸ್‌ ಆಯೋಜಿಸಲಾಗುತ್ತಿದೆ’ ಎಂದರು.

20 ಸ್ಪರ್ಧೆ, 5 ಸಾವಿರ ಸ್ಪರ್ಧಿಗಳು: ಕ್ರೀಡಾಕೂಟದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಸುಮಾರು 5ರಿಂದ 6 ಸಾವಿರ ಮಕ್ಕಳು ಪಾಲ್ಗೊಳ್ಳಲಿದ್ದು, 20 ಸ್ಪರ್ಧೆಗಳು ನಡೆಯಲಿವೆ. ಕಂಠೀರವ ಕ್ರೀಡಾಂಗಣದ ಜೊತೆಗೆ ಬಸವನಗುಡಿಯ ಈಜು ಕೇಂದ್ರ, ಶಾಂತಿನಗರದ ಹಾಕಿ ಕ್ರೀಡಾಂಗಣ ಸೇರಿದಂತೆ ಇನ್ನೂ ಕೆಲ ಕಡೆಗಳಲ್ಲಿ ಸ್ಪರ್ಧೆಗಳು ನಡೆಯಲಿದೆ. ‘ವಿಜೇತರಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸುತ್ತೇವೆ. ಭವಿಷ್ಯದಲ್ಲಿ ಒಲಿಂಪಿಕ್ಸ್‌ನಲ್ಲಿ ಭಾರತ ಮತ್ತಷ್ಟುಪದಕ ಗೆಲ್ಲಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಲಿವೆ’ ಎಂದು ಗೋವಿಂದರಾಜು ಅಭಿಪ್ರಾಯಿಸಿದರು.

ಭಾರತದ ಭವಿಷ್ಯದ ಕ್ರೀಡಾಪಟುಗಳನ್ನು ಬೆಳೆಸುವ ನಿಟ್ಟಿನಲ್ಲಿ ಮಿನಿ ಒಲಿಂಪಿಕ್ಸ್‌ ಅನ್ನು ದೇಶದಲ್ಲೇ ಮೊದಲ ಬಾರಿ ರಾಜ್ಯದಲ್ಲಿ 2020ರಲ್ಲಿ ಆರಂಭಿಸಿದ್ದೆವು. ಇದು ರಾಜ್ಯದ ಕ್ರೀಡಾ ಭವಿಷ್ಯದ ಅಡಿಪಾಯ. ಸಣ್ಣ ವಯಸ್ಸಿನಲ್ಲೇ ಮಕ್ಕಳಲ್ಲಿ ಕ್ರೀಡೆ ಬಗ್ಗೆ ಉತ್ತೇಜನ ನೀಡಿ ದೇಶದ ಭವಿಷ್ಯದ ತಾರೆಗಳಾಗಿ ಅವರನ್ನು ರೂಪುಗೊಳಿಸುತ್ತೇವೆ.

-ಡಾ.ಕೆ.ಗೋವಿಂದರಾಜು

ಸನ್ ರೈಸರ್ಸ್ ತಂಡಕ್ಕೆ ರಾಂಚಿ ವೇಗಿ ಸುಶಾಂತ್‌ ಸೇರ್ಪಡೆ
ಮುಂಬೈ: ಸನ್‌ರೈಸ​ರ್‍ಸ್ ಹೈದರಾಬಾದ್‌ ತಂಡಕ್ಕೆ ರಾಂಚಿ ಮೂಲದ ಎಡಗೈ ವೇಗಿ ಸುಶಾಂತ್‌ ಮಿಶ್ರಾ ಸೇರ್ಪಡೆಗೊಂಡಿದ್ದಾರೆ. ಬೆನ್ನು ನೋವಿನ ಕಾರಣ ಮಧ್ಯಮ ವೇಗಿ ಸೌರಭ್‌ ದುಬೆ ಟೂರ್ನಿಯಿಂದ ಹೊರಬಿದ್ದಿದ್ದು ಅವರ ಜಾಗಕ್ಕೆ ಸುಶಾಂತ್‌ರನ್ನು ಸೇರಿಸಿಕೊಳ್ಳಲಾಗಿದೆ.

IPL 2022 ಆರ್ ಸಿಬಿ-ಚೆನ್ನೈ ಮ್ಯಾಚ್ ನಡುವೆ ಹುಡುಗಿಯಿಂದಲೇ ಹುಡುಗನಿಗೆ ಪ್ರಪೋಸ್!

ಸುಶಾಂತ್‌ 4 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು 13 ವಿಕೆಟ್‌ ಕಿತ್ತಿದ್ದಾರೆ. ಸನ್‌ರೈಸ​ರ್‍ಸ್ ತಂಡ ಅವರಿಗೆ 20 ಲಕ್ಷ ರು. ಸಂಭಾವನೆ ನೀಡಲಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಇಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಎದುರಿಸಲಿದೆ. ಅಂಕಪಟ್ಟಿಯಲ್ಲಿ ಹೈದರಾಬಾದ್ ತಂಡ 5ನೇ ಸ್ಥಾನಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ 7ನೇ ಸ್ಥಾನದಲ್ಲಿದೆ.

IPL 2022 ಚೆನ್ನೈ ವಿರುದ್ಧ ಆರ್ ಸಿಬಿ ತಂಡಕ್ಕೆ ಭರ್ಜರಿ ಗೆಲುವು

ರಾಷ್ಟ್ರೀಯ ಮಹಿಳಾ ಟಿ20: ರೈಲ್ವೇಸ್‌ಗೆ 10ನೇ ಪ್ರಶಸ್ತಿ
ಸೂರತ್‌:
ರಾಷ್ಟ್ರೀಯ ಮಹಿಳಾ ಟಿ20 ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಮಹಾರಾಷ್ಟ್ರ ವಿರುದ್ಧ 7 ವಿಕೆಟ್‌ ಜಯ ಸಾಧಿಸಿದ ರೈಲ್ವೇಸ್‌ 10ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮಹಾರಾಷ್ಟ್ರ, ನಾಯಕಿ ಸ್ಮೃತಿ ಮಂಧನಾ ಅವರ 84 ರನ್‌(56 ಎಸೆತ, 11 ಬೌಂಡರಿ, 3 ಸಿಕ್ಸರ್‌)ಗಳ ನೆರವಿನಿಂದ 20 ಓವರಲ್ಲಿ 4 ವಿಕೆಟ್‌ಗೆ 160 ರನ್‌ ಗಳಿಸಿತು. ಸವಾಲಿನ ಗುರಿ ಬೆನ್ನತ್ತಿದ ರೈಲ್ವೇಸ್‌, 3 ವಿಕೆಟ್‌ಗೆ 165 ರನ್‌ ಗಳಿಸಿತು. ಹೇಮಲತಾ(65) ಹಾಗೂ ಎಸ್‌.ಮೇಘನಾ(52) ಅವರ ಅರ್ಧಶತಕಗಳ ನೆರವಿನಿಂದ ಇನ್ನೂ 11 ಎಸೆತ ಬಾಕಿ ಇರುವಂತೆ ಜಯಿಸಿತು.