ಶ್ರೀಜೇಶ್, ಸವಿತಾ ಪೂನಿಯಾಗೆ ವರ್ಷದ ಎಫ್‌ಐಎಚ್ ವರ್ಷದ ಗೋಲ್‌ಕೀಪರ್ ಪ್ರಶಸ್ತಿ
ಭಾರತದ ಗೋಲ್ ಕೀಪರ್‌ಗಳಾದ ಶ್ರೀಜೇಶ್, ಸವಿತಾ ಪೂನಿಯಾ ಸಾಧನೆ ಮತ್ತೊಂದು ಗರಿ
ಸತತ ಎರಡನೇ ಬಾರಿಗೆ ಎಫ್‌ಐಎಚ್ ವರ್ಷದ ಗೋಲ್ ಕೀಪರ್ ಪ್ರಶಸ್ತಿ ಗೆದ್ದ ಭಾರತೀಯರು
ಪುರುಷರ ವಿಭಾಗದಲ್ಲಿ ಐವರು ಗೋಲ್ ಕೀಪರ್ ಸ್ಪರ್ಧೆಯಲ್ಲಿದ್ದರು
ನವದೆಹಲಿ(ಅ.06): ಭಾರತ ಪುರುಷರ ಹಾಕಿ ತಂಡದ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಹಾಗೂ ಮಹಿಳಾ ತಂಡದ ಗೋಲ್‌ಕೀಪರ್ ಸವಿತಾ ಪೂನಿಯಾಗೆ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌ನ ವಾರ್ಷಿಕ ಶ್ರೇಷ್ಠ ಗೋಲ್‌ಕೀಪರ್ ಪ್ರಶಸ್ತಿ ದೊರೆತಿದೆ. 2021-22ರ ಸಾಲಿನಲ್ಲಿ ಈ ಇಬ್ಬರು ತೋರಿದ ಅತ್ಯುತ್ತಮ ಪ್ರದರ್ಶನಕ್ಕೆ ಈ ಗೌರವ ಒಲಿದಿದೆ. ಈ ಇಬ್ಬರೂ ಸತತ 2ನೇ ವರ್ಷ ಈ ಗೌರವಕ್ಕೆ ಪಾತ್ರರಾಗಿರುವುದು ವಿಶೇಷ. ತಜ್ಞರು, ಅಭಿಮಾನಿಗಳು, ಪತ್ರಕರ್ತರು, ತಂಡಗಳು ಮತ ಚಲಾಯಿಸಿದ್ದವು.
ಪುರುಷರ ವಿಭಾಗದಲ್ಲಿ ಐವರು ಗೋಲ್ ಕೀಪರ್ ಸ್ಪರ್ಧೆಯಲ್ಲಿದ್ದರು. ಶ್ರೀಜೇಶ್ 39.9 ಅಂಕಗಳನ್ನು ಗಳಿಸುವ ಮೂಲಕ ವರ್ಷದ ಗೋಲ್ ಕೀಪರ್ ಪ್ರಶಸ್ತಿಗೆ ಭಾಜನರಾದರು. ಇನ್ನು ಮಹಿಳೆಯರ ವಿಭಾಗದಲ್ಲಿ ಸವಿತಾ ಪೂನಿಯಾ 37.6 ಅಂಕಗಳನ್ನು ಗಳಿಸುವ ಮೂಲಕ ಸತತ ಎರಡನೇ ವರ್ಷವೂ ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. 2014ರಲ್ಲಿ ಆರಂಭವಾದ ಈ ರೀತಿಯ ವರ್ಷದ ಪ್ರಶಸ್ತಿ ಸ್ಪರ್ಧೆಯಲ್ಲಿ ಸತತ ಎರಡು ಬಾರಿ ವರ್ಷದ ಗೋಲ್ ಕೀಪರ್ ಪ್ರಶಸ್ತಿ ಗಳಿಸಿದ ಮೂರನೇ ಗೋಲ್ ಕೀಪರ್ ಎನ್ನುವ ಶ್ರೇಯವು ಸವಿತಾ ಪೂನಿಯಾ ಪಾಲಾಗಿದೆ.
ಟಿಟಿ ವಿಶ್ವ ಕೂಟ: ಭಾರತ ಮಹಿಳಾ ತಂಡ ಔಟ್
ಚೆಂಗ್ಡು(ಚೀನಾ): ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮಹಿಳಾ ತಂಡದ ಅಭಿಯಾನ ಕೊನೆಗೊಂಡಿದೆ. ಬುಧವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ತಂಡ ಚೈನೀಸ್ ತೈಪೆ ವಿರುದ್ಧ 0-3 ಅಂತರದಲ್ಲಿ ಸೋಲುಂಡಿತು. ಮನಿಕಾ ಬಾತ್ರಾ, ಶ್ರೀಜಾ ಅಕುಲಾ ಹಾಗೂ ದಿಯಾ ಚಿತಾಲೆ ತಮ್ಮ ಸಿಂಗಲ್ಸ್ ಪಂದ್ಯಗಳಲ್ಲಿ ಸೋಲುಂಡರು. ಗುರುವಾರ ಭಾರತ ಪುರುಷರ ತಂಡ ಪ್ರಿ ಕ್ವಾರ್ಟರಲ್ಲಿ ಬಲಿಷ್ಠ ಚೀನಾ ವಿರುದ್ಧ ಆಡಲಿದೆ.
2026ರ ಕಾಮನ್‌ವೆಲ್ತ್ ಗೇಮ್ಸ್: ಶೂಟಿಂಗ್‌ಗೆ ಸ್ಥಾನ
ಮೆಲ್ಬರ್ನ್: 2026ರಲ್ಲಿ ಆಸ್ಪ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಶೂಟಿಂಗ್ ಕ್ರೀಡೆಯನ್ನು ಸೇರ್ಪಡೆಗೊಳಿಸಲಾಗಿದೆ. ಆದರೆ ಕುಸ್ತಿ ಹಾಗೂ ಆರ್ಚರಿ ಕ್ರೀಡೆಗಳನ್ನು ಕೈಬಿಡಲಾಗಿದೆ. ಬುಧವಾರ ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್(ಸಿಜಿಎಫ್) ಹಾಗೂ ಆತಿಥೇಯ ಆಸ್ಪ್ರೇಲಿಯಾ ಕ್ರೀಡಾಕೂಟದಲ್ಲಿ ನಡೆಯಲಿರುವ 20 ಕ್ರೀಡೆಗಳ 26 ಸ್ಪರ್ಧೆಗಳ ವಿವರಗಳನ್ನು ಪ್ರಕಟಿಸಿತು.
National Games 2022: ಮತ್ತೆ ಎಂಟು ಪದಕ ಬಾಚಿಕೊಂಡ ಕರ್ನಾಟಕ..!
ಶೂಟಿಂಗ್ ಸೇರ್ಪಡೆಯಿಂದ ಭಾರತಕ್ಕೆ ಲಾಭವಾಗಲಿದೆ. 2022ರ ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಶೂಟಿಂಗ್ ಕ್ರೀಡೆಯನ್ನು ಕೈಬಿಡಲಾಗಿತ್ತು. ಕ್ರೀಡಾಕೂಟದ ಇತಿಹಾಸದಲ್ಲಿ ಶೂಟಿಂಗ್‌ನಲ್ಲಿ ಭಾರತ ಒಟ್ಟು 135 ಪದಕಗಳನ್ನು ಗೆದ್ದಿದೆ.
ಯುಎಇ ವಿರುದ್ಧ 104 ರನ್‌ಗಳಿಂದ ಗೆದ್ದ ಭಾರತ
ಸೈಲೆಟ್(ಬಾಂಗ್ಲಾದೇಶ): ಜೆಮಿಮಾ ರೋಡ್ರಿಗಸ್‌ರ ಆಕ್ರಮಣಕಾರಿ ಆಟ(45 ಎಸೆತಗಳಲ್ಲಿ 75 ರನ್)ದ ನೆರವಿನಿಂದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ವಿರುದ್ಧ ಭಾರತ 104 ರನ್ ಗೆಲುವು ಸಾಧಿಸಿ, ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರಲ್ಲಿ 5 ವಿಕೆಟ್‌ಗೆ 178 ರನ್ ಕಲೆಹಾಕಿತು. ಯುಎಇ 20 ಓವರಲ್ಲಿ 4 ವಿಕೆಟ್‌ಗೆ ಕೇವಲ 74 ರನ್ ಗಳಿಸಿತು. 11 ಭಾರತೀಯ ಮೂಲದ ಆಟಗಾರ್ತಿಯರನ್ನು ಹೊಂದಿರುವ ಯುಎಇ ಗುರಿ ಬೆನ್ನತ್ತಲು ಸೂಕ್ತ ಪ್ರಯತ್ನವನ್ನೂ ನಡೆಸಲಿಲ್ಲ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 4.2 ಓವರಲ್ಲಿ 20 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ 4ನೇ ವಿಕೆಟ್‌ಗೆ ಜೆಮಿಮಾ ಹಾಗೂ ದೀಪ್ತಿ ಶರ್ಮಾ 13.3 ಓವರಲ್ಲಿ 128 ರನ್ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಜೆಮಿಮಾ ಅವರ ಇನ್ನಿಂಗ್ಸಲ್ಲಿ 11 ಬೌಂಡರಿಗಳಿದ್ದವು. ದೀಪ್ತಿ 49 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‌ನೊಂದಿಗೆ 64 ರನ್ ಗಳಿಸಿದರು. ನಾಯಕಿ ಹರ್ಮನ್‌ಪ್ರೀತ್ ವಿಶ್ರಾಂತಿ ಪಡೆದಿದ್ದರು. ಸ್ಮೃತಿ ಮಂಧನಾ ತಂಡವನ್ನು ಮುನ್ನಡೆಸಿದರೂ ಬ್ಯಾಟ್ ಮಾಡಲಿಲ್ಲ.
ಸ್ಕೋರ್:
ಭಾರತ 20 ಓವರಲ್ಲಿ 178/5(ಜೆಮಿಮಾ 75*, ದೀಪ್ತಿ 64, ಮಹಿಕಾ 1-27)
ಯುಎಇ 20 ಓವರಲ್ಲಿ 74/4(ಕವಿಶಾ 30, ಖುಷಿ 29, ರಾಜೇಶ್ವರಿ 2-20)