Swiss Open: ಫೈನಲ್‌ಗೆ ಪಿವಿ ಸಿಂಧು, ಪ್ರಣಯ್‌ ಲಗ್ಗೆ

* ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟ ಸಿಂಧು, ಪ್ರಣಯ್

* ಥಾಯ್ಲೆಂಡ್‌ನ ಸುಪನಿದಾ ಕಟೆಥೊಂಗ್‌ ವಿರುದ್ದ ಸಿಂಧುಗೆ ರೋಚಕ ಜಯ

* ಇದು ಸಿಂಧುಗೆ ಸ್ವಿಸ್‌ ಓಪನ್‌ನಲ್ಲಿ ಸತತ 2ನೇ ಫೈನಲ್

Indian Ace Badminton Star PV Sindhu HS Prannoy Enter Swiss Open Final kvn

ಬಾಸೆಲ್(ಮಾ.27)‌: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು (PV Sindhu) ಹಾಗೂ ಎಚ್‌.ಎಸ್‌.ಪ್ರಣಯ್‌ (HS Prannoy) ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ (Swiss Open Badminton Tournament) ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್‌ ರೋಚಕ ಸೆಮಿಫೈನಲ್‌ನಲ್ಲಿ ಸಿಂಧು, ಥಾಯ್ಲೆಂಡ್‌ನ ಸುಪನಿದಾ ಕಟೆಥೊಂಗ್‌ ವಿರುದ್ಧ 21-18, 15-21, 21-19 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಇದು ಸಿಂಧುಗೆ ಸ್ವಿಸ್‌ ಓಪನ್‌ನಲ್ಲಿ ಸತತ 2ನೇ ಫೈನಲ್‌. 

ಕಳೆದ ಬಾರಿ ಅವರು ಫೈನಲ್‌ನಲ್ಲಿ ಸ್ಪೇನ್‌ನ ಕ್ಯಾರೊಲಿನಾ ಮರೀನ್‌ ವಿರುದ್ಧ ಸೋತಿದ್ದರು. ಇನ್ನು, ಪುರುಷರ ಸಿಂಗಲ್ಸ್‌ ಸೆಮೀಸ್‌ನಲ್ಲಿ ಪ್ರಣಯ್‌, 2021ರ ಒಲಿಂಪಿಕ್ಸ್‌ ಕಂಚು ವಿಜೇತ ಇಂಡೋನೇಷ್ಯಾದ ಆ್ಯಂಥೋನಿ ಜಿಂಟಿಂಗ್‌ ವಿರುದ್ಧ 21-19, 19-21, 21-19 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. 2017ರಲ್ಲಿ ಯುಸ್‌ ಓಪನ್‌ ಗೆದ್ದ ಬಳಿಕ ಪ್ರಣಯ್‌ ಮೊದಲ ಬಾರಿ ಫೈನಲ್‌ ಪ್ರವೇಶಿಸಿದರು.

ಪೋಲೆಂಡ್‌ನ ಸ್ವಿಯಾಟೆಕ್‌ ವಿಶ್ವ ನಂ.1 ಟೆನಿಸ್‌ ಆಟಗಾರ್ತಿ

ಮಯಾಮಿ ಗಾರ್ಡನ್ಸ್‌(ಅಮೆರಿಕ): ಪೋಲೆಂಡ್‌ನ 20 ವರ್ಷದ ಇಗಾ ಸ್ವಿಯಾಟೆಕ್‌ (Iga Swiatek) ಟೆನಿಸ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ ನಂ.1 ಪಟ್ಟಅಲಂಕರಿಸಿದ್ದಾರೆ. ಶುಕ್ರವಾರ ಅವರು ಮಯಾಮಿ ಓಪನ್‌ನಲ್ಲಿ ಸ್ವಿಜರ್‌ಲೆಂಡ್‌ನ ವಿಕ್ಟೋರಿಜಾ ವಿರುದ್ಧ 2ನೇ ಸುತ್ತಿನ ಪಂದ್ಯ ಗೆದ್ದ ಬಳಿಕ ಅಗ್ರಸ್ಥಾನಕ್ಕೆ ಏರಿದ್ದಾರೆ. ಈ ಮೂಲಕ ಟೆನಿಸ್‌ನಲ್ಲಿ ನಂ.1 ಸ್ಥಾನ ಪಡೆದ ಪೋಲೆಂಡ್‌ನ ಪ್ರಥಮ ಹಾಗೂ ಒಟ್ಟಾರೆ 28ನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ. 

ವಿಶ್ವ ನಂ.1 ಆ್ಯಶ್ಲೆ ಬಾರ್ಟಿ ಕೇವಲ 25ನೇ ವಯಸ್ಸಿಗೆ ಟೆನಿಸ್‌ಗೆ ದಿಢೀರ್ ಗುಡ್‌ ಬೈ..!

ಇದುವರೆಗೆ ಆಸ್ಪ್ರೇಲಿಯಾದ ಆ್ಯಶ್ಲೆ ಬಾರ್ಟಿ (Ashleigh Barty) ನಂ.1 ಸ್ಥಾನದಲ್ಲಿದ್ದರು. ಆದರೆ ದಿಢೀರ್‌ ನಿವೃತ್ತಿ ಪಡೆದ ಬಳಿಕ ಅಗ್ರಸ್ಥಾನ ತೆರವುಗೊಂಡಿತ್ತು. ಇತ್ತೀಚೆಗಷ್ಟೇ ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಂ (Australian Open Grand Slam) ಪ್ರಶಸ್ತಿ ಗೆದ್ದಿದ್ದ ಬಾರ್ಟಿ, ಸತತ 113 ವಾರಗಳ ಕಾಲ ನಂ.1 ಸ್ಥಾನದಲ್ಲಿದ್ದರು.

ಟೋಕಿಯೋ ಒಲಿಂಪಿಕ್ಸ್‌ ವೀರರಿಗೆ ಬಿಸಿಸಿಐ ಸನ್ಮಾನ, ನಗದು ಬಹುಮಾನ

ಮುಂಬೈ: ಚೆನ್ನೈ ಹಾಗೂ ಕೋಲ್ಕತಾ ನಡುವಿನ ಐಪಿಎಲ್‌ ಉದ್ಘಾಟನಾ ಪಂದ್ಯಕ್ಕೂ ಮುನ್ನ ಬಿಸಿಸಿಐ (BCCI) ವತಿಯಿಂದ ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಸಾಧಕರಿಗೆ ಸನ್ಮಾನ ಹಾಗೂ ನಗದು ಬಹುಮಾನ ವಿತರಿಸಲಾಯಿತು. ಟಾಸ್‌ ಬಳಿಕ ನಡೆದ ಕಾರ‍್ಯಕ್ರಮದಲ್ಲಿ ಚಿನ್ನ ವಿಜೇತ ಜಾವೆಲಿನ್‌ ಥ್ರೋ ಪಟು ನೀರಜ್‌ ಚೋಪ್ರಾರನ್ನು (Neeraj Chopra) ಸನ್ಮಾನಿಸಿ, 1 ಕೋಟಿ ರು. ನಗದು ಬಹುಮಾನ ಹಸ್ತಾಂತರಿಸಲಾಯಿತು. ಕಂಚು ಗೆದ್ದ ಬಾಕ್ಸರ್‌ ಲೊವ್ಲಿನಾ ಬೊರ್ಗೋಹೈನ್‌ಗೆ 25 ಲಕ್ಷ ರು. ಹಾಗೂ ಕಂಚು ವಿಜೇತ ಪುರುಷರ ಹಾಕಿ ತಂಡಕ್ಕೆ 1 ಕೋಟಿ ರು. ನಗದು ನೀಡಲಾಯಿತು. ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ (Manpreet Singh) ಬಹುಮಾನ ಸ್ವೀಕರಿಸಿದರು.

ಮೇ 15ಕ್ಕೆ ಬೆಂಗಳೂರು 10ಕೆ ಮ್ಯಾರಥಾನ್‌

ಬೆಂಗಳೂರು: ಕೋವಿಡ್‌ನಿಂದಾಗಿ ಎರಡು ವರ್ಷ ಸ್ಥಗಿತಗೊಂಡಿದ್ದ ಪ್ರತಿಷ್ಠಿತ ಟಿಸಿಎಸ್‌ ವಿಶ್ವ 10ಕೆ ಮ್ಯಾರಥಾನ್‌ ಮೇ 15ರಂದು ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬಾರಿ ಸ್ಪರ್ಧೆಯನ್ನು ಎರಡು ವಿಧದಲ್ಲಿ ಆಯೋಜಿಸಲಾಗುತ್ತಿದೆ. ಒಂದು ಕ್ರೀಡಾಂಗಣದಲ್ಲಿ ನಡೆದರೆ ಮತ್ತೊಂದು ವಿಶ್ವದಾದ್ಯಂತ ಸ್ಪರ್ಧಿಗಳು ಆನ್‌ಲೈನ್‌ ಮೂಲಕ ಪಾಲ್ಗೊಳ್ಳಲಿದ್ದಾರೆ. 

ಸ್ಪರ್ಧಿಗಳು ಆ್ಯಪ್‌ ಮೂಲಕ ನೋಂದಾಯಿಸಿಕೊಂಡು ತಾವಿರುವ ಸ್ಥಳದಿಂದಲೇ ಮ್ಯಾರಥಾನ್‌ನಲ್ಲಿ ಭಾಗವಹಿಸಬಹುದಾಗಿದೆ. ಒಟ್ಟು 1.60 ಕೋಟಿ ರು. ಬಹುಮಾನ ಮೊತ್ತದ ಸ್ಪರ್ಧೆಯಲ್ಲಿ ವಿಶ್ವದ ಹಲವು ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಮಾ.25ರಿಂದ ನೋಂದಣಿ ಆರಂಭವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.


 

Latest Videos
Follow Us:
Download App:
  • android
  • ios