ಚದುರಂಗದಲ್ಲಿ ಹೊಸ ಚರಿತ್ರೆ: ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಡಬಲ್ ಬಂಗಾರ!
ಚೆಸ್ ಒಲಿಂಪಿಯಾಡ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಬುಡಾಪೆಸ್ಟ್(ಹಂಗೇರಿ): ಚೆಸ್ ಲೋಕದಲ್ಲಿ ಭಾರತೀಯರು ಅಧಿಪತ್ಯ ಸಾಧಿಸಲು ಆರಂಭಿಸಿ ವರ್ಷ ಹಲವು ಕಳೆಯಿತು. ಈಗ ಭಾರತ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಜಾಗತಿಕ ಚೆಸ್‌ನ ಪ್ರತಿಷ್ಠಿತ ಟೂರ್ನಿಯಾಗಿರುವ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಪುರುಷ, ಮಹಿಳಾ ತಂಡಗಳು ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿವೆ.
ಬುಡಾಪೆಸ್ಟ್‌ನಲ್ಲಿ ಭಾನುವಾರ ಕೊನೆಗೊಂಡ 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಎರಡೂ ತಂಡಗಳು ಚಿನ್ನದ ಪದಕ ಗೆದ್ದುಕೊಂಡವು. ಕಳೆದ ಬಾರಿ ಅಂದರೆ 2022ರಲ್ಲಿ ಭಾರತದಲ್ಲೇ ನಡೆದಿದ್ದ ಒಲಿಂಪಿಯಾಡ್‌ನಲ್ಲಿ ಎರಡೂ ತಂಡಗಳು ಕಂಚಿನ ಪದಕ ಗೆದ್ದಿದ್ದವು. ಈ ಬಾರಿ ಡಿ.ಗುಕೇಶ್, ಆರ್.ಪ್ರಜ್ಞಾನಂದ, ವಿದಿತ್ ಗುಜರಾತಿ, ಅರ್ಜುನ್ ಎರಿಗೈಸಿ ಹಾಗೂ ಪಿ.ಹರಿಕೃಷ್ಣ ಅವರನ್ನೊಳಗೊಂಡ ಪುರುಷರ ತಂಡ ಮುಕ್ತ ವಿಭಾಗದಲ್ಲಿ 21 ಅಂಕಗಳನ್ನು ಗಳಿಸಿ, 189 ದೇಶಗಳಿದ್ದ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. ಭಾನುವಾರ 11ನೇ ಹಾಗೂ ಕೊನೆ ಸುತ್ತಿನಲ್ಲಿ ಸೊವೇನಿಯಾ ವಿರುದ್ದ ಭಾರತ 3.5-0.5ರಲ್ಲಿ ಜಯಗಳಿಸಿತು. ಟೂರ್ನಿಯಲ್ಲಿ ಭಾರತ 11 ಪಂದ್ಯಗಳ ಪೈಕಿ 10ರಲ್ಲಿ ಗೆದ್ದರೆ, ಉಜೇಕಿಸ್ತಾನ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿತು. ಅಮೆರಿಕ ಬೆಳ್ಳಿ, ಉಜೇಕಿಸ್ತಾನ ಕಂಚಿನ ಪದಕ ತನ್ನದಾಗಿಸಿಕೊಂಡಿತು,
India team spirit! Celebration time! Olympiad Champions!
— Susan Polgar (@SusanPolgar) September 22, 2024
🇮🇳🥇🏆🥇🏆🇮🇳#BudapestOlympiad #FIDE100 @FIDE_chess @aicfchess @WOMChess pic.twitter.com/jzJXBzQOs1
ಮಯಾಂಕ್ ಅಗರ್‌ವಾಲ್ ನೇತೃತ್ವದ ಭಾರತ ಎ ದುಲೀಪ್ ಟ್ರೋಫಿ ಚಾಂಪಿಯನ್
ರೋಚಕ ಗೆಲುವು: ಹರಿಕಾ, ಆರ್.ವೈಶಾಲಿ, ದಿವ್ಯಾ ದೇಶ್‌ಮುಖ್, ವಂತಿಕಾ ಅಗರ್‌ವಾಲ್, ತಾನಿಯಾ ಸಚ್ ದೇವ್ ಅವರನ್ನೊಳಗೊಂಡ ಭಾರತ ತಂಡ ಮಹಿಳಾ ವಿಭಾ ಗದಲ್ಲಿ 19 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದುಕೊಂಡಿತು. ಕೊನೆ ಸುತ್ತಿನಲ್ಲಿ ಅಜರ್‌ಬೈಜಾನ್ ವಿರುದ್ಧ 3.5-0.5ರಲ್ಲಿ ಜಯಗಳಿಸಿತು. ಅತ್ತ ಅಮೆರಿಕ ವಿರುದ್ಧ ಕಜಕಸ್ತಾನ ಡ್ರಾಗೆ ತೃಪ್ತಿಪಟ್ಟ ಕಾರಣ ಭಾರತಕ್ಕೆ ಚಿನ್ನದ ಪದಕ ಒಲಿಯಿತು. ಕಜಕಸ್ತಾನ ಬೆಳ್ಳಿ, ಅಮೆರಿಕ ಕಂಚು ಜಯಿಸಿತು.
ನಾಲ್ವರಿಗೆ ವೈಯಕ್ತಿಕ ಚಿನ್ನ: ಭಾರತದ ನಾಲ್ವರು ವೈಯಕ್ತಿಕ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಮುಕ್ತ ವಿಭಾಗದ ಬೋರ್ಡ್ 1ರಲ್ಲಿ ಡಿ.ಗುಕೇಶ್, ಬೋರ್ಡ್ 3ರಲ್ಲಿ ಅರ್ಜುನ್ ಎರಿಗೈಸಿ, ಮಹಿಳಾ ವಿಭಾಗದ 3ನೇ ಬೋರ್ಡ್‌ನಲ್ಲಿ ದಿವ್ಯಾ ದೇಶ್‌ಮುಖ್, 4ನೇ ಬೋರ್ಡ್‌ನಲ್ಲಿ ವಂತಿಕಾ ಅಗರ್‌ವಾಲ್ ಚಿನ್ನದ ಪದಕ ಗೆದ್ದರು.
ಪುರುಷರಿಗೆ 3ನೇ, ಮಹಿಳಾ ತಂಡಕ್ಕೆ ಎರಡನೇ ಪದಕ
ಭಾರತದ ತಂಡಗಳು ಚೆಸ್ ಒಲಿಂಪಿಯಾಡ್‌ನಲ್ಲಿ ಒಟ್ಟಾರೆ 5 ಪದಕಗಳನ್ನು ಗೆದ್ದಿವೆ. ಪುರುಷರ ತಂಡ 2014 ಹಾಗೂ 2022ರಲ್ಲಿ ಕಂಚಿನ ಪದಕ ಜಯಿಸಿದ್ದವು. ಈ ವರ್ಷ ತಂಡಕ್ಕೆ ಮೊದಲ ಚಿನ್ನ ಲಭಿಸಿದೆ. ಅತ್ತ ಮಹಿಳಾ ತಂಡ 2022ರಲ್ಲಿ ನಡೆದಿದ್ದ ಒಲಿಂಪಿಯಾಡ್‌ನಲ್ಲಿ ಕಂಚು ಜಯಿಸಿತ್ತು. ಚಿನ್ನದ ಪದಕದ ಬರವನ್ನು ಈ ಸಲ ನೀಗಿಸಿದೆ.
ಭಾರತಕ್ಕೆ ಸತತ 2ನೇ ಸಮಗ್ರ ಟ್ರೋಫಿ
2022ರಲ್ಲಿ ಭಾರತ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ತೋರಿದ್ದ ಉತ್ತಮ ಪ್ರದರ್ಶನದಿಂದಾಗಿ ಸಮಗ್ರ ಚಾಂಪಿಯನ್ ಟ್ರೋಫಿ ತನ್ನದಾಗಿಸಿಕೊಂಡಿತ್ತು. ಈ ಬಾರಿ ಭಾರತ ಮತ್ತೆ ಪ್ರಶಸ್ತಿ ಗೆದ್ದಿದೆ. ಈ ವರೆಗೂ ರಷ್ಯಾ ದಾಖಲೆಯ 6 ಬಾರಿ ಪ್ರಶಸ್ತಿ ಜಯಿಸಿದ್ದರೆ, ಚೀನಾ 3, ಉಕ್ರೇನ್ 2 ಬಾರಿ ಟ್ರೋಫಿ ತನ್ನದಾಗಿಸಿಕೊಂಡಿವೆ.