French Open: ರಾಫಾ 22 ಗ್ರ್ಯಾನ್‌ಸ್ಲಾಂ ಒಡೆಯ..!

* ಫ್ರೆಂಚ್ ಓಪನ್ ಟ್ರೋಫಿ ಜಯಿಸಿದ ರಾಫೆಲ್ ನಡಾಲ್

* ‘ಕಿಂಗ್‌ ಆಫ್‌ ಕ್ಲೇ’ ಖ್ಯಾತಿಯ ನಡಾಲ್‌ಗೆ ದಾಖಲೆಯ 14ನೇ ಗ್ರ್ಯಾನ್‌ಸ್ಲಾಂ

* ವಿಶ್ವ ನಂ.5 ರಾಫೆಲ್‌ ನಡಾಲ್‌ 22ನೇ ಬಾರಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ನಡಾಲ್

Tennis Legend Rafael Nadal wins 14th French Open and record extending 22nd Grand Slam kvn

ಪ್ಯಾರಿಸ್(ಜೂ.06)‌: ಒಂದಾದರೂ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲ್ಲಲು ಕನಸು ಕಂಡು, ಅದಕ್ಕಾಗಿ ಕಠಿಣ ಪರಿಶ್ರಮ ಪಟ್ಟು ವಿಫಲರಾದ ಎಷ್ಟೋ ಟೆನಿಸಿಗರಿದ್ದಾರೆ. ಆದರೆ ಗ್ರ್ಯಾನ್‌ಸ್ಲಾಂ ಗೆಲ್ಲುವುದನ್ನೇ ಕರಗತ ಮಾಡಿಕೊಂಡಿರುವ ಸ್ಪೇನ್‌ನ ದಿಗ್ಗಜ ಟೆನಿಸಿಗ, ವಿಶ್ವ ನಂ.5 ರಾಫೆಲ್‌ ನಡಾಲ್‌ (Rafael Nadal) 22ನೇ ಬಾರಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಭಾನುವಾರ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ (French Open Tennis Grand slam) ಅವರು ಈ ಸಾಧನೆ ಮಾಡಿದರು. ‘ಕಿಂಗ್‌ ಆಫ್‌ ಕ್ಲೇ’ ಎಂದೇ ಕರೆಯಲ್ಪಡುವ ನಡಾಲ್‌ ಫೈನಲ್‌ನಲ್ಲಿ ನಾರ್ವೆಯ ವಿಶ್ವ ನಂ.8 ಕ್ಯಾಸ್ಪೆರ್‌ ರುಡ್‌ರನ್ನು ಮಣಿಸಿ 14ನೇ ಬಾರಿ ಪ್ರೆಂಚ್‌ ಓಪನ್‌ ಗೆದ್ದಿದ್ದಾರೆ. ಟೆನಿಸ್‌ ಜಗತ್ತಿನಲ್ಲಿ ನಡಾಲ್‌, ರೋಜರ್‌ ಫೆಡರರ್‌ ಹಾಗೂ ನೋವಾಕ್‌ ಜೋಕೋವಿಚ್‌ (Novak Djokovic) ‘ಬಿಗ್‌ 3’ ಎಂದೇ ಹೆಸರುವಾಸಿ. ಕಳೆದ ವರ್ಷ ಈ ಮೂವರು ತಲಾ 20 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳೊಂದಿಗೆ ಸಮಬಲ ಸಾಧಿಸಿದ್ದರು. ಆದರೆ ಈ ವರ್ಷ ಆಸ್ಪ್ರೇಲಿಯನ್‌ ಓಪನ್‌ (Australian Open) ಗೆದ್ದ ನಡಾಲ್‌ 21ನೇ ಗ್ರ್ಯಾನ್‌ಸ್ಲಾ ಗೆದ್ದ ಮೊದಲ ಪುರುಷ ಟೆನಿಸಿಗ ಎಂಬ ಸಾಧನೆ ಮಾಡಿದ್ದರು. ಈಗ ಮತ್ತೊಂದು ಪ್ರಶಸ್ತಿ ಗೆಲ್ಲುವುದರೊಂದಿಗೆ ಅವರು ಮತ್ತೊಂದು ಹೆಜ್ಜೆ ಮುಂದೆ ಸಾಗಿದ್ದಾರೆ.

ಭಾನುವಾರ ನಡೆದ ಫೈನಲ್‌ನಲ್ಲಿ ನಡಾಲ್‌ಗೆ ಯಾವ ಕ್ಷಣದಲ್ಲೂ ರುಡ್‌ ಸರಿಸಾಟಿ ಎನಿಸಿಕೊಳ್ಳಲಿಲ್ಲ. ಭಾರೀ ನಿರೀಕ್ಷೆ ಮೂಡಿಸಿದ್ದ ಫೈನಲ್‌ ಪಂದ್ಯ ಕೆಲ ಹೋರಾಟದ ಹೊರತಾಗಿಯೂ ಏಕಪಕ್ಷೀಯವಾಗಿಯೇ ಸಾಗಿತು. ಸುಮಾರು 2 ಗಂಟೆ 18 ನಿಮಿಗಳ ಕಾಲ ನಡೆದ ಪಂದ್ಯದಲ್ಲಿ ನಡಾಲ್‌ 6-3, 6-3, 6-0 ಅಂತರದಲ್ಲಿ ರುಡ್‌ರನ್ನು ಸೋಲಿಸಿ ಪ್ರಶಸ್ತಿಗೆ ಮುತ್ತಿಟ್ಟರು. ನಡಾಲ್‌ ಅವರ ಆಕರ್ಷಕ, ಪ್ರಬಲ ಹೊಡೆತಗಳ ಮುಂದೆ ರುಡ್‌ಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಚೊಚ್ಚಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲ್ಲುವ ರುಡ್‌ ಅವರ ಕನಸು ಭಗ್ನಗೊಂಡಿತು.

ಫೈನಲ್‌ ಆಡಿದ ಮೊದಲ ನಾರ್ವೇ ಟೆನಿಸಿಗ ರುಡ್‌

ಅಭೂತಪೂರ್ವ ಪ್ರದರ್ಶನದೊಂದಿಗೆ ಟೂರ್ನಿಯಲ್ಲಿ ಎಲ್ಲರ ಗಮನಸೆಳೆದಿದ್ದ ಕ್ಯಾಸ್ಪೆರ್‌ ರುಡ್‌ ಫ್ರೆಂಚ್‌ ಓಪನ್‌ ಸಿಂಗಲ್ಸ್‌ನಲ್ಲಿ ಫೈನಲ್‌ ಆಡಿದ ಮೊದಲ ನಾರ್ವೇ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ ಚೊಚ್ಚಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲ್ಲಲು ವಿಫಲರಾದರು. ಅವರು ಸೆಮೀಸ್‌ನಲ್ಲಿ ಕ್ರೊವೇಷಿಯಾದ ವಿಶ್ವ ನಂ.10 ಮರಿನ್‌ ಸಿಲಿಚ್‌ ವಿರುದ್ಧ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದರು. ಈ ಮೊದಲು 2019 ಮತ್ತು 2021ರಲ್ಲಿ ವಿಂಬಲ್ಡನ್‌ನಲ್ಲಿ ರುಡ್‌ ಮೊದಲ ಸುತ್ತಲ್ಲೇ ನಿರ್ಗಮಿಸಿದ್ದರೆ, 2020ರ ಯುಸ್‌ ಓಪನ್‌ನಲ್ಲಿ 3ನೇ ಸುತ್ತಿನಲ್ಲಿ ಸೋತಿದ್ದರು. 2021ರ ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದರು.

‘ಫ್ರೆಂಚ್‌’ಗೆ ಮುತ್ತಿಟ್ಟ ಸ್ವಿಯಾಟೆಕ್‌

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ವಿಶ್ವ ನಂ.1 ಆಟಗಾರ್ತಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಸೋಲರಿಯದ ಆಟಗಾರ್ತಿ ಎಂದೇ ಕರೆಸಿಕೊಳ್ಳುತ್ತಿರುವ ಇಗಾ ತಮ್ಮ ಗೆಲುವಿನ ಅಜೇಯ ಓಟವನ್ನು ಶನಿವಾರ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲೂ ಮುಂದುವರಿಸಿದ್ದು, ಅಮೆರಿಕದ 18ರ ಹರೆಯದ ಕೊಕೊ ಗಾಫ್‌ರನ್ನು ಮಣಿಸಿ 2ನೇ ಬಾರಿ ಫ್ರೆಂಚ್‌ ಓಪನ್‌ ಪ್ರಶಸ್ತಿಗೆ ಮುತ್ತಿಟ್ಟರು.

ಟೂರ್ನಿಯ ಇಗಾ ಸಾಧಿಸಿದ್ದ ಪ್ರಾಬಲ್ಯ ಕಂಡು ಅವರೇ ಈ ಬಾರಿ ಪ್ರಶಸ್ತಿ ಗೆಲ್ಲುತ್ತಾರೆ ಎಂದು ಊಹಿಸಲಾಗಿತ್ತು. ನಿರೀಕ್ಷೆಯಂತೆಯೇ ಏಕಪಕ್ಷೀಯವಾಗಿ ನಡೆದ ಫೈನಲ್‌ ಕಾದಾಟದಲ್ಲಿ 21 ವರ್ಷದ ಇಗಾ ಅವರು 6-1, 6-3 ನೇರ ಸೆಟ್‌ಗಳಿಂದ ಜಯಭೇರಿ ಬಾರಿಸಿದರು. ಪಂದ್ಯ 1 ಗಂಟೆ 08 ನಿಮಿಷಗಳ ಕಾಲ ನಡೆಯಿತು. ಇಗಾ ಅವರ ಆಕರ್ಷಕ ಹೊಡೆತಗಳ ಮುಂದೆ ಕೊಕೊ ನಿರುತ್ತರರಾದರು. 2ನೇ ಸೆಟ್‌ನಲ್ಲಿ ಪ್ರತಿರೋಧ ತೋರಿದರಾದರೂ ಚೊಚ್ಚಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲ್ಲಲು ಅವರು ವಿಫಲರಾದರು.

French Open ರಾಫೆಲ್ ನಡಾಲ್ ಕ್ರೀಡಾಸ್ಪೂರ್ತಿಗೆ ಹ್ಯಾಟ್‌ ಅಫ್ ಎಂದ ತೆಂಡುಲ್ಕರ್, ರವಿಶಾಸ್ತ್ರಿ..!

2020ರಲ್ಲೂ ಫ್ರೆಂಚ್‌ ಓಪನ್‌ ಚಾಂಪಿಯನ್‌ ಆಗಿದ್ದ ಇಗಾ 2ನೇ ಗ್ರ್ಯಾನ್‌ಸ್ಲಾಂ ಹಾಗೂ ಈ ವರ್ಷದ 6ನೇ ಪ್ರಶಸ್ತಿ ಎತ್ತಿ ಹಿಡಿದರು. 2004ರ ಬಳಿಕ ಗ್ರ್ಯಾನ್‌ಸ್ಲಾಂ ಮಹಿಳಾ ಸಿಂಗಲ್ಸ್‌ ಫೈನಲ್‌ ತಲುಪಿದ ಅತಿ ಕಿರಿಯ ಆಟಗಾರ್ತಿ ಎನಿಸಿಕೊಂಡಿದ್ದ ಗಾಫ್‌ರ ಪ್ರಶಸ್ತಿ ಕನಸು ಭಗ್ನಗೊಂಡಿತು.

2+ ಪ್ರಶಸ್ತಿ ಗೆದ್ದ 24ನೇ ಆಟಗಾರ್ತಿ

ಫ್ರೆಂಚ್‌ ಓಪನ್‌ನಲ್ಲಿ 2 ಅಥವಾ ಅದಕ್ಕಿಂತಲೂ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ 24ನೇ ಆಟಗಾರ್ತಿ ಇಗಾ ಸ್ವಿಯಾಟೆಕ್‌. ಈ ಪೈಕಿ ಅಮೆರಿಕದ ಕ್ರಿಸ್‌ ಎವೆರ್ಚ್‌ ದಾಖಲೆಯ 7 ಬಾರಿ ಚಾಂಪಿಯನ್‌ ಆಗಿದ್ದರೆ, ಫ್ರಾನ್ಸ್‌ನ ಸುಜನ್ನೆ ಲೆಂಗ್ಲೆನ್‌ ಹಾಗೂ ಜರ್ಮನಿಯ ಸ್ಟೆಫ್‌ ಗ್ರಾಫ್‌ ತಲಾ 6 ಬಾರಿ ಪ್ರಶಸ್ತಿ ಪಡೆದಿದ್ದಾರೆ. ಫ್ರಾನ್ಸ್‌ನ ಆ್ಯಡಿನ್‌ ಮಸ್ಸೊನ್‌, ಆಸ್ಪ್ರೇಲಿಯಾಗ ಮಾರ್ಗರೆಟ್‌ ಕೋರ್ಚ್‌ ತಲಾ 5 ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ವೀನಸ್‌ ದಾಖಲೆ ಸರಿಗಟ್ಟಿದ ಇಗಾ

ಸತತವಾಗಿ 35 ಪಂದ್ಯಗಳನ್ನು ಗೆದ್ದುಕೊಂಡಿರುವ ಇಗಾ ಸ್ವಿಯಾಟೆಕ್‌ 2000ರ ನಂತರ ಸತತವಾಗಿ ಅತಿ ಹೆಚ್ಚು ಗೆಲುವು ಸಾಧಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಅಮೆರಿಕದ ವೀನಸ್‌ ವಿಲಿಯಮ್ಸ್‌ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. 7 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ ವೀನಸ್‌ 2000ರಲ್ಲಿ ಸತತವಾಗಿ 35 ಜಯ ಕಂಡಿದ್ದರು.
 

Latest Videos
Follow Us:
Download App:
  • android
  • ios