Commonwealth Games 2022 ಲಾನ್‌ಬೌಲ್ಸ್ ಬೆಳ್ಳಿ ಗೆದ್ದ ಭಾರತ ಪುರುಷರ ತಂಡ
* ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಮುಂದುವರೆದ ಭಾರತದ ಪದಕ ಭೇಟೆ
* ಲಾನ್ ಬೌಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತ ಪುರುಷರ ತಂಡ
* ಈ ಮೊದಲು ಲಾನ್ ಬೌಲ್ಸ್‌ನಲ್ಲಿ ಚಿನ್ನದ ಪದಕ ಗೆದಿದ್ದ ಭಾರತ ಮಹಿಳಾ ತಂಡ
ಬರ್ಮಿಂಗ್‌ಹ್ಯಾಮ್(ಆ.07): ಕಾಮನ್‌ವೆಲ್ತ್ ಲಾನ್ ಬೌಲ್ಸ್‌ನಲ್ಲಿ ಮಹಿಳೆಯರ ಚಿನ್ನದ ಸಾಧನೆ ಬಳಿಕ ಭಾರತೀಯ ಪುರುಷರ ತಂಡ ಐತಿಹಾಸಿಕ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ. ಶನಿವಾರ ನಡೆದ ಪುರುಷರ ನಾಲ್ವರ ತಂಡ ವಿಭಾಗದ ಫೈನಲ್‌ನಲ್ಲಿ ಸುನಿಲ್ ಬಹದೂರ್, ನವನೀತ್ ಸಿಂಗ್, ಚಂದನ್ ಕುಮಾರ್ ಹಾಗೂ ದಿನೇಶ್ ಕುಮಾರ್ ಅವರನ್ನೊಳಗೊಂಡ ತಂಡ ನಾರ್ಥೆರ್ನ್ ಐರ್ಲೆಂಡ್ ವಿರುದ್ಧ 5-18ರಿಂದ ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಲಾನ್ ಬೌಲ್ಸ್ ಕ್ರೀಡೆಯಲ್ಲಿ ದೊರೆತ 2ನೇ ಪದಕವಿದು ಎನ್ನುವುದು ಬಹಳ ವಿಶೇಷ. ಇತ್ತೀಚೆಗಷ್ಟೇ ಭಾರತ ಮಹಿಳಾ ತಂಡ ಲಾನ್‌ಬೌನ್ಸ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿತ್ತು.
ಇನ್ನು ಭಾರತ ಪುರುಷರ ತಂಡವು ಲಾನ್ ಬೌಲ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಭಾರತ ಲಾನ್ ಬೌಲ್ಸ್ ತಂಡದ ತಂತ್ರಗಾರಿಕೆಯನ್ನು ಪ್ರಧಾನಿ ಮೆಚ್ಚಿಕೊಂಡು ಟ್ವೀಟ್ ಮಾಡುವ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಟೇಬಲ್ ಟೆನಿಸ್: ಭಾರತಕ್ಕೆ 2 ಪದಕ ಖಚಿತ
ತಾರಾ ಟೇಬಲ್ ಟೆನಿಸ್ ಪಟು ಶರತ್ ಕಮಲ್ ಭಾರತಕ್ಕೆ 2 ಪದಕ ಖಚಿತಪಡಿಸಿಕೊಂಡಿದ್ದಾರೆ. ಅವರು ಪುರುಷರ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಫೈನಲ್ ತಲುಪಿದ್ದಾರೆ. ಜಿ.ಸತ್ಯನ್ ಜೊತೆಗೂಡಿ ಪುರುಷರ ಡಬಲ್ಸ್‌ನಲ್ಲಿ ಆಡುತ್ತಿರುವ ಅವರು ಶನಿವಾರ ಸೆಮಿಫೈನಲ್‌ನಲ್ಲಿ ಆಸ್ಪ್ರೇಲಿಯಾದ ಜೋಡಿ ವಿರುದ್ಧ 3-2ರಿಂದ ಗೆಲುವು ಸಾಧಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಶರತ್-ಶ್ರೀಜಾ ಅಕುಲಾ ಜೋಡಿ ಆಸ್ಪ್ರೇಲಿಯಾ ಜೋಡಿ ವಿರುದ್ಧ 3-2 ಅಂತರದಿಂದ ಗೆದ್ದು ಪದಕ ಸುತ್ತಿಗೆ ಲಗ್ಗೆ ಇಟ್ಟಿತು.
ಬಾಕ್ಸಿಂಗ್: ಜಾಸ್ಮೀನ್, ಹುಸ್ಸಮುದ್ದೀನ್‌ಗೆ ಕಂಚು
ಕ್ರೀಡಾಕೂಟದಲ್ಲಿ ಭಾರತ ಬಾಕ್ಸಿಂಗ್‌ನಲ್ಲಿ 2 ಪದಕಗಳನ್ನು ಗೆದ್ದಿವೆ. ಶನಿವಾರ ಮಹಿಳೆಯರ 60 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಜಾಸ್ಮೀನ್ ಲಂಬೋರಿಯಾ ಇಂಗ್ಲೆಂಡ್‌ನ ಗೆಮ್ಮಾ ರಿಚಡ್ರ್ಸನ್ ವಿರುದ್ಧ 2-3 ಅಂತರದಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಬಳಿಕ ಪುರುಷರ 57 ಕೆ.ಜಿ. ವಿಭಾಗದಲ್ಲಿ ಮುಹಮ್ಮದ್ ಹುಸ್ಸಮುದ್ದೀನ್ ಘಾನಾದ ಜೋಸೆಫ್ ವಿರುದ್ಧ 1-4ರಿಂದ ಶರಣಾಗಿ ಕಂಚು ಪಡೆದರು. ಬಾಕ್ಸಿಂಗ್‌ನಲ್ಲಿ ಸೆಮೀಸ್‌ನಲ್ಲಿ ಸೋತವರಿಗೂ ಪದಕ ಸಿಗುತ್ತದೆ.
ಬಾಕ್ಸಿಂಗ್: ಫೈನಲ್ ತಲುಪಿದ ಅಮಿತ್, ನಿಖಾತ್, ನೀತು
ಭಾರತದ ತಾರಾ ಬಾಕ್ಸರ್‌ಗಳಾದ ಅಮಿತ್ ಪಂಘಾಲ್, ನಿಖಾತ್ ಜರೀನ್ ಹಾಗೂ ನೀತು ಫೈನಲ್ ಪ್ರವೇಶಿಸಿದ್ದಾರೆ. ಕಳೆದ ಆವೃತ್ತಿಯ ಕಾಮನ್‌ವೆಲ್ತ್‌ನಲ್ಲಿ ಬೆಳ್ಳಿ ಗೆದ್ದಿದ್ದ ಅಮಿತ್ ಶನಿವಾರ ಪುರುಷರ 51 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಜಾಂಬಿಯಾದ ಪ್ಯಾಟ್ರಿಕ್ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿದರು. ಮತ್ತೊಂದೆಡೆ ಇದೇ ಮೊದಲ ಬಾರಿ ಕಾಮನ್‌ವೆಲ್ತ್‌ನಲ್ಲಿ ಸ್ಪರ್ಧಿಸುತ್ತಿರುವ ನೀತು ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಕೆನಡಾದ ಪ್ರಿಯಾಂಕ ಧಿಲ್ಲೋನ್‌ರನ್ನು ಮಣಿಸಿ ಪದಕ ಸುತ್ತಿಗೆ ಲಗ್ಗೆ ಇಟ್ಟರು. ಹಾಲಿ ವಿಶ್ವ ಚಾಂಪಿಯನ್ ನಿಖಾತ್ ಜರೀನ್ ಮಹಿಳೆಯರ 48 ಕೆ.ಜಿ. ವಿಭಾಗದ ಸೆಮೀಸ್‌ನಲ್ಲಿ ಇಂಗ್ಲೆಂಡ್‌ನ ಸ್ಟಬ್‌ಲೇ ಅಲ್ಫಿಯಾರನ್ನು ಸೋಲಿಸಿದರು.
ಕಂಚು ಗೆದ್ದು ಕಣ್ಣೀರಿಡುತ್ತಲೇ ದೇಶದ ಕ್ಷಮೆ ಕೋರಿದ ಪೂಜಾಗೆ ಸ್ಪೂರ್ತಿ ತುಂಬಿದ ಪ್ರಧಾನಿ ನರೇಂದ್ರ ಮೋದಿ
ಪ್ರಿಯಾಂಕಾಗೆ ವೇಗ ನಡಿಗೆ ಬೆಳ್ಳಿ
ಶನಿವಾರ ನಡೆದ ಮಹಿಳೆಯರ 10,000 ಮೀ. ವೇಗ ನಡಿಗೆಯಲ್ಲಿ ಉತ್ತರ ಪ್ರದೇಶದ ಪ್ರಿಯಾಂಕ ಗೋಸ್ವಾಮಿ 43 ನಿಮಿಷ 38.83 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ಈ ಮೂಲಕ ಕಾಮನ್‌ವೆಲ್ತ್‌ನ ವೇಗ ನಡಿಗೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಅಥ್ಲೀಟ್ ಎಂಬ ಖ್ಯಾತಿಗೆ ಪಾತ್ರರಾದರು. ಆಸ್ಪ್ರೇಲಿಯಾದ ಜೆಮಿಮಾ ಮೊಂಟಗ್(42 ನಿ. 34.30 ಸೆ.) ಚಿನ್ನ ಗೆದ್ದರೆ, ಕೀನ್ಯಾದ ಎಮಿಲಿ ಎನ್‌ಗಿ ಕಂಚು ಪಡೆದರು. ಆದರೆ ಭಾರತದ ಮತ್ತೋರ್ವ ಸ್ಪರ್ಧಿ ಭಾವ್‌ನಾ ಜಾಟ್ 47 ನಿ. 14.13 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.