44ನೇ ಚೆಸ್ ಒಲಿಂಪಿಯಾಡ್‌ಗೆ ಸಿದ್ಧಗೊಂಡ ಚೆನ್ನೈ: ನೇಪಿಯರ್ ಸೇತುವೆಗೆ ಚೆಸ್‌ಬೋರ್ಡ್ ರಂಗು.. ವಿಡಿಯೋ
ಜುಲೈ 28 ರಿಂದ ಆರಂಭವಾಗಲಿರುವ 44ನೇ ಚೆಸ್ ಒಲಿಂಪಿಯಾಡ್‌ಗೆ ಚೆನ್ನೈ ಸಿದ್ಧಗೊಂಡಿದೆ. ಇದರ ಭಾಗವಾಗಿ ಚೆನ್ನೈನಲ್ಲಿರುವ ಬ್ರಿಟಿಷ್ ಕಾಲದ ನೇಪಿಯರ್ ಸೇತುವೆಯನ್ನು ಚದುರಂಗ ಫಲಕದಂತೆ ಅಲಂಕರಿಸಲಾಗಿದೆ.
ಚೆನ್ನೈ: ಜುಲೈ 28 ರಿಂದ ಆರಂಭವಾಗಲಿರುವ 44ನೇ ಚೆಸ್ ಒಲಿಂಪಿಯಾಡ್‌ಗೆ ಚೆನ್ನೈ ಸಿದ್ಧಗೊಂಡಿದೆ. ಇದರ ಭಾಗವಾಗಿ ಚೆನ್ನೈನಲ್ಲಿರುವ ಬ್ರಿಟಿಷ್ ಕಾಲದ ನೇಪಿಯರ್ ಸೇತುವೆಯನ್ನು ಚದುರಂಗ ಫಲಕದಂತೆ ಅಲಂಕರಿಸಲಾಗಿದೆ. ತಮಿಳುನಾಡು ಸರ್ಕಾರದ ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ಅವರು ಈ ಚೆಸ್ ಬೋರ್ಡ್‌ನಂತೆ ಪೈಂಟಿಂಗ್ ಮಾಡಲ್ಪಟ್ಟ ನೇಪಿಯರ್ ಸೇತುವೆಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಭಾರತದ ಚೆಸ್ ಕ್ಯಾಪಿಟಲ್ ಆಗಿರುವ ಚೆನ್ನೈ 'ಗ್ರ್ಯಾಂಡ್ ಚೆಸ್ ಒಲಂಪಿಯಾಡ್ 2022' ಅನ್ನು ಆಯೋಜಿಸಲು ಸಿದ್ಧವಾಗಿದೆ ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಅವರು ಟ್ವಿಟ್ಟರ್‌ನಲ್ಲಿ ಚೆಸ್‌ಬೋರ್ಡ್ ಅನ್ನು ಹೋಲುವ ಕಪ್ಪು ಮತ್ತು ಬಿಳಿ ಬಾಕ್ಸ್‌ಗಳ ಮಾದರಿಯಲ್ಲಿ ಸೇತುವೆಗೆ ಬಣ್ಣ ಬಳಿದಿರುವುದರ ವಿಡಿಯೋವನ್ನು ತೋರಿಸಿದ್ದಾರೆ. ಚೆಸ್‌ಬೋರ್ಡ್‌ನಂತೆ ಕಾಣುವ ಸೇತುವೆಯ ಮೇಲೆ ವಾಹನಗಳು ಚಲಿಸುತ್ತಿದ್ದರೆ ಬಹುತೇಕ ಅನಿಮೇಟೆಡ್ ಸಿನಿಮಾಗಳಲ್ಲಿ ಕಾಣಿಸುವ ಅನಿಮೇಟೆಡ್ ರಸ್ತೆಯಂತೆ ಕಾಣಿಸುತ್ತದೆ.
44ನೇ ಚೆಸ್ ಒಲಿಂಪಿಯಾಡ್‌ನ ಪ್ರಚಾರಕ್ಕೆ ತಮಿಳು ಸಿನಿಮಾ ತಾರೆಯರು, ನಿರ್ದೇಶಕರು, ನಿರ್ಮಾಪಕರು ಕೂಡ ಕೈ ಜೋಡಿಸಿದ್ದಾರೆ. ಎರಡು ದಿನದ ಹಿಂದೆ, ಸೌತ್ ಸೂಪರ್‌ಸ್ಟಾರ್ ರಜನಿಕಾಂತ್ ಚೆಸ್ ಒಲಿಂಪಿಯಾಡ್ ಪ್ರಚಾರಕ್ಕಾಗಿ 'ನಮ್ಮ ಊರು (ನಮ್ಮ ನಗರ) ಚೆನ್ನೈಗೆ ಸ್ವಾಗತ' ಎಂಬ 39 ಸೆಕೆಂಡುಗಳ ಟೀಸರ್ ಅನ್ನು ಬಿಡುಗಡೆ ಮಾಡಿದ್ದರು.
ತಮಿಳುನಾಡಿನ ಸಾಂಸ್ಕೃತಿಕ ವೈಭವ ಹಾಗೂ ಸಾಂಪ್ರದಾಯಿಕ ಮತ್ತು ಆಧುನಿಕ ನೃತ್ಯ ಪ್ರಕಾರಗಳ ಪ್ರದರ್ಶನಗಳನ್ನು ಈ ಪ್ರಚಾರದ ಟೀಸರ್‌ನಲ್ಲಿ ತೋರಿಸಲಾಗಿದೆ. ಚಲನಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ಈ ಟೀಸರ್‌ನ್ನು ನಿರ್ದೇಶಿಸಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಗಾರ ಎಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಚೆಸ್ ಒಲಿಂಪಿಯಾಡ್ ಟಾರ್ಚ್ ರಿಲೇಗೆ ಪ್ರಧಾನಿ ಮೋದಿ ಚಾಲನೆ
ಈ ವಿಡಿಯೋದಲ್ಲಿ 'ನಮ್ಮ ಊರು ಚೆನ್ನೈಗೆ ಸುಸ್ವಾಗತ' ಎಂದು ಪ್ರಾರಂಭವಾಗುವ ಸಂದರ್ಭದಲ್ಲಿ, 'ವರುಗ ವರುಗ ತಮಿಜ್ನಾಟ್ಟುಕು ವರುಗ (ತಮಿಳುನಾಡಿಗೆ ಬೆಚ್ಚಗಿನ ಸ್ವಾಗತ) ಎಂಬ ಪದಗಳು ಹಾದು ಹೋಗುತ್ತವೆ. ಜೊತೆಗೆ ವಿಡಿಯೋದ ಅಂತ್ಯದಲ್ಲೂ ಇದೇ ಪದಗಳಿವೆ. ಜೊತೆಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ರೆಹಮಾನ್ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ, ಇದು ಸೇತುವೆಯನ್ನು ಸಹ ಪ್ರದರ್ಶಿಸುತ್ತದೆ.
ವಿಶ್ವ ಚೆಸ್ ಚಾಂಪಿಯನ್ ಮ್ಯಾಗ್ನಸ್‌ನ ಮತ್ತೊಮ್ಮೆ ಮಣಿಸಿದ ಭಾರತದ ಆರ್ ಪ್ರಗ್ನಾನಂದ
ವಿಶ್ವದ ಅತಿದೊಡ್ಡ ಚೆಸ್ ಈವೆಂಟ್‌ನ 44 ನೇ ಆವೃತ್ತಿಯು ( 44th Chess Olympiad) ಚೆನ್ನೈ ಬಳಿಯ ಮಹಾಬಲಿಪುರಂನಲ್ಲಿ ಜುಲೈ 28 ರಿಂದ ಆಗಸ್ಟ್ 10 ರವರೆಗೆ ನಡೆಯಲಿದೆ. ಇದಕ್ಕೂ ಮೊದಲು, ರಷ್ಯಾದಲ್ಲಿ 44 ನೇ ಚೆಸ್ ಒಲಿಂಪಿಯಾಡ್ ಅನ್ನು ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಉಕ್ರೇನ್ ಮೇಲಿನ ಆಕ್ರಮಣದಿಂದಾಗಿ ಅದನ್ನು ಭಾರತಕ್ಕೆ ಸ್ಥಳಾಂತರಿಸಲಾಗಿತ್ತು.