ವೃತ್ತಿಬದುಕಿನ ಶ್ರೇಷ್ಠ 5ನೇ ಸ್ಥಾನಕ್ಕೆ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ- ಚಿರಾಗ್ ಶೆಟ್ಟಿ ಜೋಡಿ
ಭಾರತದ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರರ ಸಾಧನೆಗೆ ಮತ್ತೊಂದು ಗರಿ
ವಿಶ್ವ ಬ್ಯಾಡ್ಮಿಂಟನ್ ರ‍್ಯಾಂಕಿಂಗ್‌ನಲ್ಲಿ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ 5ನೇ ಸ್ಥಾನಕ್ಕೆ ಲಗ್ಗೆ
15 ಟೂರ್ನಿಗಳಿಂದ ಒಟ್ಟು 75,806 ರೇಟಿಂಗ್ ಅಂಕಗಳನ್ನು ಪಡೆದ ಭಾರತದ ಜೋಡಿ
ನವದೆಹಲಿ(ಡಿ.21): ಭಾರತದ ಡಬಲ್ಸ್ ಆಟಗಾರರಾದ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ವಿಶ್ವ ಬ್ಯಾಡ್ಮಿಂಟನ್ ರ‍್ಯಾಂಕಿಂಗ್‌ನಲ್ಲಿ ವೃತ್ತಿಬದುಕಿನ ಶ್ರೇಷ್ಠ 5ನೇ ಸ್ಥಾನಕ್ಕೇರಿದ್ದಾರೆ. ಈ ಜೋಡಿ ಈ ವರ್ಷ ಭಾರತೀಯ ಓಪನ್ ಸೂಪರ್ 500 ಹಾಗು ಫ್ರೆಂಚ್ ಓಪನ್ ಸೂಪರ್ 750 ಟೂರ್ನಿಗಳಲ್ಲಿ ಚಾಂಪಿಯನ್ ಆಗಿತ್ತು. ಜೊತೆಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚೊಚ್ಚಲ ಚಿನ್ನ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಸಹ ಗೆದ್ದಿತ್ತು.
15 ಟೂರ್ನಿಗಳಿಂದ ಒಟ್ಟು 75,806 ರೇಟಿಂಗ್ ಅಂಕಗಳನ್ನು ಪಡೆದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ 2 ಸ್ಥಾನ ಜಿಗಿತ ಕಂಡರು. ಇದೇ ವೇಳೆ ಪುರುಷರ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ ಎಚ್.ಎಸ್.ಪ್ರಣಯ್ ಅಗ್ರ 10ರೊಳಗೆ ಮತ್ತೆ ಸ್ಥಾನ ಪಡೆದು 9ನೇ ಸ್ಥಾನದಲ್ಲಿದ್ದಾರೆ. ಈ ವರ್ಷವನ್ನು 26ನೇ ಸ್ಥಾನದಲ್ಲಿ ಆರಂಭಿಸಿದ್ದ ಪ್ರಣಯ್ ಈ ಋುತುವಿನಲ್ಲಿ 7 ಟೂರ್ನಿಗಳಲ್ಲಿ ಕ್ವಾರ್ಟರ್ ಫೈನಲ್, 2ರಲ್ಲಿ ಸೆಮೀಸ್ ತಲುಪಿದ್ದರು. ಇನ್ನು ಸ್ವಿಸ್ ಓಪನ್‌ನಲ್ಲಿ ರನ್ನರ್-ಅಪ್ ಆಗಿದ್ದರು.
ಪ್ಯಾರಾ ಕ್ರೀಡಾ ಸಂಸ್ಥೆಗೆ ವೆಂಕಟೇಶ್ ಉಪಾಧ್ಯಕ್ಷ
ಬೆಂಗಳೂರು: ಕರ್ನಾಟಕ ರಾಜ್ಯ ಅಂಗವಿಕಲ ಕ್ರೀಡಾ ಸಂಸ್ಥೆಯ ಉಪಾಧ್ಯಕ್ಷರಾಗಿ ಅಂತಾರಾಷ್ಟ್ರೀಯ ಪ್ಯಾರಾ ಕ್ರೀಡಾಪಟು, ಪದ್ಮಶ್ರೀ ಪ್ರಶಸ್ತಿ ವಿಜೇತ ಕೆ.ವೈ.ವೆಂಕಟೇಶ್ ಆಯ್ಕೆಯಾಗಿದ್ದಾರೆ. ಕಳೆದ ಭಾನುವಾರ ನಡೆದ ಚುನಾವಣೆಯಲ್ಲಿ ವೆಂಕಟೇಶ್ ಅವರು 38 ಮತಗಳನ್ನು ಪಡೆದು ವಿಜಯಶಾಲಿಯಾದರು. ಇನ್ನೂ ಇಬ್ಬರು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಎಂ.ಮಹಾದೇವ, ಪ್ರಧಾನ ಕಾರ‍್ಯದರ್ಶಿಯಾಗಿ ಮಹೇಶ್ ಎಂ.ಆರ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 14 ಸದಸ್ಯರ ನೂತನ ಸಮಿತಿ 2023ರಿಂದ 2027ರ ವರೆಗೂ ಕಾರ‍್ಯನಿರ್ವಹಿಸಲಿದೆ.
ಫುಟ್ಬಾಲ್: ರಾಜ್ಯಕ್ಕೆ ಕಾರ್ತಿಕ್ ನಾಯಕ
ಬೆಂಗಳೂರು: 2022-23ರ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್‌ಶಿಪ್‌ಗೆ 22 ಸದಸ್ಯರ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ಕಾರ್ತಿಕ್ ಗೋವಿಂದಸ್ವಾಮಿ ನಾಯಕರಾಗಿದ್ದಾರೆ. ಡಿ.23ರಿಂದ ಆರಂಭಗೊಳ್ಳಲಿರುವ ಟೂರ್ನಿಯ ಗುಂಪು-1ರಲ್ಲಿರುವ ಕರ್ನಾಟಕಕ್ಕೆ ಮೊದಲ ಪಂದ್ಯದಲ್ಲಿ ಗುಜರಾತ್ ಎದುರಾಗಲಿದೆ.
FIFA ವಿಶ್ವಕಪ್ ಟ್ರೋಫಿ ತಬ್ಬಿಕೊಂಡೇ ಮಲಗಿದ ಲಿಯೋನೆಲ್ ಮೆಸ್ಸಿ..!
ಡಿಸೆಂಬರ್ 25ರಂದು ಉತ್ತರಾಖಂಡ, ಡಿಸೆಂಬರ್ 27ರಂದು ಲಡಾಖ್, ಡಿಸೆಂಬರ್ 29ರಂದು ತ್ರಿಪುರಾ, ಡಿಸೆಂಬರ್ 31ರಂದು ದೆಹಲಿ ವಿರುದ್ಧ ಪಂದ್ಯವಾಡಲಿದೆ. ಒಟ್ಟು 36 ತಂಡಗಳನ್ನು 6 ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪುಗಳಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳ ಜೊತೆ ಉತ್ತಮ ಅಂಕಗಳೊಂದಿಗೆ 2ನೇ ಸ್ಥಾನ ಪಡೆಯುವ 3 ತಂಡಗಳು ಅಂತಿಮ ಸುತ್ತಿಗೇರಲಿವೆ. ಸೌದಿ ಅರೇಬಿಯಾದಲ್ಲಿ ನಡೆಯಲಿರುವ ಅಂತಿಮ ಸುತ್ತಿಗೆ ರೈಲ್ವೇಸ್, ಸರ್ವಿಸಸ್ ನೇರ ಅರ್ಹತೆ ಪಡೆಯಲಿವೆ.
ಫೈನಲ್ ಬಗ್ಗೆ ಗೂಗಲಲ್ಲಿ ದಾಖಲೆಯ ಹುಡುಕಾಟ!
ದೋಹಾ: ಭಾನುವಾರದ ಅರ್ಜೆಂಟೀನಾ-ಫ್ರಾನ್ಸ್ ನಡುವಿನ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ಸರ್ಚ್ ಎಂಜಿನ್ ಗೂಗಲ್‌ನಲ್ಲೂ ದಾಖಲೆ ಬರೆದಿದೆ. ಈ ಬಗ್ಗೆ ಸ್ವತಃ ಗೂಗಲ್ ಸಿಇಒ ಸುಂದರ್ ಪಿಚೈ ಟ್ವೀಟ್ ಮಾಡಿದ್ದು, ‘ಫೈನಲ್ ಪಂದ್ಯ ಗೂಗಲ್‌ನಲ್ಲಿ 25 ವರ್ಷಗಳಲ್ಲೇ ಅತಿ ಹೆಚ್ಚು ಹುಡುಕಾಟಕ್ಕೆ ಒಳಪಟ್ಟ ವಿಷಯ. ಇಡೀ ವಿಶ್ವವೇ ಒಂದು ವಿಷಯದ ಬಗ್ಗೆ ಹುಡುಕಾಟ ನಡೆಸುತ್ತಿತ್ತು ಅನಿಸುತ್ತದೆ’ ಎಂದಿದ್ದಾರೆ.