ಇಂದಿನಿಂದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್
ಇಂದಿನಿಂದ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್ಶಿಪ್ ಆರಂಭ
ದುಬೈನಲ್ಲಿ ಆರಂಭವಾಗಲಿರುವ ಬ್ಯಾಡ್ಮಿಂಟನ್ ಟೂರ್ನಿ
ಭಾರತ ಮೊದಲ ಪಂದ್ಯದಲ್ಲಿ ಕಜಕಸ್ತಾನ ವಿರುದ್ಧ ಸೆಣಸಾಟ
ದುಬೈ(ಫೆ.14): ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್ಶಿಪ್ ಮಂಗಳವಾರ ದುಬೈನಲ್ಲಿ ಆರಂಭವಾಗಲಿದ್ದು, ಭಾರತದ ಸವಾಲನ್ನು ಪಿ.ವಿ.ಸಿಂಧು ಹಾಗೂ ಲಕ್ಷ್ಯ ಸೇನ್ ಮುನ್ನಡೆಸಲಿದ್ದಾರೆ. ಮಂಗಳವಾರ ಭಾರತ ಮೊದಲ ಪಂದ್ಯದಲ್ಲಿ ಕಜಕಸ್ತಾನ ವಿರುದ್ಧ ಸೆಣಸಲಿದೆ.
ಮಹಿಳಾ ಸಿಂಗಲ್ಸ್ನಲ್ಲಿ ಸಿಂಧು ಜೊತೆ ಆಕರ್ಷಿ ಕಶ್ಯಪ್ ಇದ್ದು, ಸೇನ್, ಎಚ್.ಎಸ್.ಪ್ರಣಯ್ ಪುರುಷರ ಸಿಂಗಲ್ಸ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಅನುಪಸ್ಥಿತಿಯಲ್ಲಿ ಚಿರಾಗ್ ಶೆಟ್ಟಿ, ಧ್ರುವ್ ಕಪಿಲ್ ಜೊತೆ ಆಡಲಿದ್ದಾರೆ. ‘ಬಿ’ ಗುಂಪಿನಲ್ಲಿ ಭಾರತದ ಜೊತೆ ಬಲಿಷ್ಠ ಮಲೇಷ್ಯಾ, ಯುಎಇ ಕೂಡಾ ಸ್ಥಾನ ಪಡೆದಿವೆ. 17 ತಂಡಗಳು ಕೂಟದಲ್ಲಿ ಪಾಲ್ಗೊಳ್ಳಲಿದ್ದು, 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ಕ್ವಾರ್ಟರ್ ಫೈನಲ್ಗೇರಲಿವೆ.
ಫುಟ್ಬಾಲ್: ಕರ್ನಾಟಕ, ಗೋವಾ ಪಂದ್ಯ ಇಂದು
ಭುವನೇಶ್ವರ: ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಸೆಮಿಫೈನಲ್ ರೇಸ್ನಲ್ಲಿ ಉಳಿಯುವ ನಿರೀಕ್ಷೆಯಲ್ಲಿರುವ ಕರ್ನಾಟಕ ತಂಡ ನಿರ್ಣಾಯಕ ಪಂದ್ಯದಲ್ಲಿ ಮಂಗಳವಾರ ಗೋವಾ ವಿರುದ್ಧ ಸೆಣಸಲಿದೆ.
ಪ್ರಧಾನಿ ಮೋದಿ ಜತೆ ಭೋಜನಾಕೂಟದಲ್ಲಿ ಪಾಲ್ಗೊಂಡ ಕನ್ನಡದ ದಿಗ್ಗಜ ಕ್ರಿಕೆಟಿಗರು..!
ಆರಂಭಿಕ ಪಂದ್ಯದಲ್ಲಿ ಪಂಜಾಬ್ ವಿರುದ್ಧ 2-2 ಗೋಲುಗಳಿಂದ ಡ್ರಾ ಸಾಧಿಸಿದ್ದ ಕರ್ನಾಟಕ, 2ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೇರಳ ವಿರುದ್ಧ 1-0 ಗೋಲಿನ ಅಂತರದಲ್ಲಿ ಜಯಿಸಿತ್ತು. ಸದ್ಯ ತಂಡ 4 ಅಂಕಗಳನ್ನು ಹೊಂದಿದ್ದು, ‘ಎ’ ಗುಂಪಿನಲ್ಲಿ 3ನೇ ಸ್ಥಾನದಲ್ಲಿದೆ. ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆದ ತಂಡಗಳು ಸೆಮೀಸ್ಗೇರಲಿವೆ.
ಪಂದ್ಯ: ಬೆಳಗ್ಗೆ 9ಕ್ಕೆ, ನೇರ ಪ್ರಸಾರ: ಫ್ಯಾನ್‌ಕೋಡ್