Australian Open: ನೋವಾಕ್ ಜೋಕೋವಿಚ್ 3ನೇ ಸುತ್ತಿಗೆ ಲಗ್ಗೆ
ಮೂರನೇ ಸುತ್ತಿಗೆ ಲಗ್ಗೆಯಿಟ್ಟ ನೋವಾಕ್ ಜೋಕೋವಿಚ್
ಕಾಲು ನೋವಿನ ಸಮಸ್ಯೆಯ ನಡುವೆಯೂ ಛಲಬಿಡದೇ ಹೋರಾಡಿದ ಜೋಕೋವಿಚ್
ಎನ್ಜೋ ಕೌಕಾಡ್ ವಿರುದ್ಧ ಸುಲಭ ಗೆಲುವು ದಾಖಲಿಸಿದ ಸರ್ಬಿಯಾದ ಟೆನಿಸಿಗ
ಮೆಲ್ಬರ್ನ್: 21 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ, ಸರ್ಬಿಯಾದ ನೋವಾಕ್ ಜೋಕೋವಿಚ್ ಕಾಲು ನೋವಿನ ಸಮಸ್ಯೆಯ ನಡುವೆಯೂ ಆಸ್ಪ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ 3ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಗುರುವಾರ ಪುರುಷರ ಸಿಂಗಲ್ಸ್ 2ನೇ ಸುತ್ತಿನಲ್ಲಿ ಟೂರ್ನಿಯ 9 ಬಾರಿ ಚಾಂಪಿಯನ್ ಜೋಕೋ ಫ್ರಾನ್ಸ್‌ನ ಎನ್ಜೋ ಕೌಕಾಡ್ ವಿರುದ್ಧ 6-1, 6-7(5-7), 6-2, 6-0 ಸೆಟ್‌ಗಳಲ್ಲಿ ಜಯಿಸಿದರು. ಸುಲಭವಾಗಿ ಮೊದಲ ಸೆಟ್ ಗೆದ್ದ ಜೋಕೋಗೆ 2ನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಎದುರಾಯಿತು. ಜೊತೆಗೆ ಬಲಗಾಲಿನ ನೋವಿಗೂ ತುತ್ತಾಗಿ ವೈದ್ಯಕೀಯ ಸಹಾಯ ಪಡೆದರು. ಆದರೂ 3, 4ನೇ ಸೆಟ್‌ಗಳಲ್ಲಿ ಜೋಕೋ ತಮ್ಮ ನೈಜ ಆಟ ಪ್ರದರ್ಶಿಸಿ ಜಯಿಸಿದರು.
ಅಗ್ರ ಆಟಗಾರರು ಔಟ್!
2022ರ ಫ್ರೆಂಚ್ ಓಪನ್, ಯುಎಸ್ ಓಪನ್ ರನ್ನರ್-ಅಪ್, 2ನೇ ಶ್ರೇಯಾಂಕಿತ ನಾರ್ವೆಯ ಕ್ಯಾಸ್ಪರ್ ರುಡ್ 2ನೇ ಸುತ್ತಿನಲ್ಲೇ ಸೋತು ಹೊರಬಿದ್ದರು. ಅಮೆರಿಕದ ಬ್ರೂಕ್ಸ್‌ಬೈ ವಿರುದ್ಧ 3-6, 7-5, 6-7, 2-6 ಸೆಟ್‌ಗಳಲ್ಲಿ ಪರಾಭವಗೊಂಡರು. 8ನೇ ಶ್ರೇಯಾಂಕಿತ ಅಮೆರಿಕದ ಟೇಲರ್ ಫ್ರಿಟ್‌್ಜ, ವಿಶ್ವ ನಂ.13 ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಕೂಡಾ ಸೋತು ಅಭಿಯಾನ ಕೊನೆಗೊಳಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ 2ನೇ ಶ್ರೇಯಾಂಕಿತೆ ಟ್ಯುನೀಶಿಯಾಗೆ ಒನ್ಸ್ ಜಬುರ್ 1-6, 7-5, 1-6 ಸೆಟ್‌ಗಳಲ್ಲಿ ಚೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೊವಾ ವಿರುದ್ಧ ಸೋತು ನಿರಾಸೆ ಅನುಭವಿಸಿದರು.
ಆಸ್ಟ್ರೇಲಿಯನ್ ಓಪನ್‌ನಲ್ಲಿ ನಡಾಲ್‌ಗೆ ಸೋಲಿನ ಆಘಾತ!
ಸಾನಿಯಾ ಜೋಡಿ ಶುಭಾರಂಭ
ಮೆಲ್ಬರ್ನ್: ವೃತ್ತಿಬದುಕಿನ ಕೊನೆ ಗ್ರ್ಯಾನ್‌ಸ್ಲಾಂ ಆಡುತ್ತಿರುವ ಭಾರತದ ಸಾನಿಯಾ ಮಿರ್ಜಾ ಮಹಿಳಾ ಡಬಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಕಜಕಸ್ತಾನದ ಆ್ಯನಾ ದನಿಲಿನಾ ಜೊತೆ ಕಣಕ್ಕಿಳಿದಿರುವ ಸಾನಿಯಾ ಮೊದಲ ಸುತ್ತಿನಲ್ಲಿ ಹಂಗೇರಿಯ ದಲ್ಮಾ ಗಾಲ್ಫಿ-ಅಮೆರಿಕದ ಬೆರ್ನಾಂಡ ಪೆರಾ ವಿರುದ್ಧ 6-2, 7-5 ನೇರ ಸೆಟ್‌ಗಳಲ್ಲಿ ಗೆದ್ದರು. ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಭಾರತದ ಯೂಕಿ ಭಾಂಬ್ರಿ-ಸಾಕೇತ್ ಮೈನೇನಿ, ರಾಮ್‌ಕುಮಾರ್ ರಾಮನಾಥನ್-ಮೆಕ್ಸಿಕೋದ ವರೆಲಾ ಜೋಡಿ ಮೊದಲ ಸುತ್ತಲ್ಲೇ ಸೋತು ಹೊರಬಿತ್ತು.
ಸೊಂಟದ ಗಾಯ: ರಾಫೆಲ್ ನಡಾಲ್ 8 ವಾರ ಟೆನಿಸ್‌ನಿಂದ ಔಟ್
ಮೆಲ್ಬರ್ನ್: ಸೊಂಟದ ಮೂಳೆಯ ನೋವಿನ ನಡುವೆಯೂ ಆಸ್ಪ್ರೇಲಿಯನ್ ಓಪನ್‌ನಲ್ಲಿ ಆಡಿ 2ನೇ ಸುತ್ತಿನಲ್ಲೇ ಸೋತು ಹೊರಬಿದ್ದ ಸ್ಪೇನ್‌ನ ರಾಫೆಲ್ ನಡಾಲ್ ಗುರುವಾರ ಎಂಆರ್‌ಐ ಸ್ಕ್ಯಾನ್‌ಗೆ ಒಳಗಾಗಿದ್ದು, ಗಾಯದ ಪ್ರಮಾಣ ತೀವ್ರವಾಗಿರುವುದು ಕಂಡು ಬಂದಿದೆ. ಅವರು 6ರಿಂದ 8 ವಾರ ಟೆನಿಸ್‌ನಿಂದ ಹೊರಗುಳಿಯಲಿದ್ದಾರೆ ಎಂದು ಅವರ ವ್ಯವಸ್ಥಾಪಕ ತಿಳಿಸಿದ್ದಾರೆ. ರಾಫೆಲ್ ನಡಾಲ್ ಅವರು ವಿಶ್ರಾಂತಿಗಾಗಿ ಸ್ಪೇನ್‌ಗೆ ಮರಳಿದ್ದಾರೆ. ಮೇ ಅಂತ್ಯದಲ್ಲಿ ನಡೆಯಲಿರುವ ಫ್ರೆಂಚ್ ಓಪನ್‌ಗೂ ಮುನ್ನ ಪೂರ್ಣ ಫಿಟ್ನೆಸ್ ಸಾಧಿಸುವ ಗುರಿ ಇದೆ ಎಂದಿದ್ದಾರೆ.
ನಸುಕಿನ 4ರ ತನಕ ನಡೆದ ಆಸ್ಟ್ರೇಲಿಯನ್ ಓಪನ್ ಪಂದ್ಯ:
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಗುರುವಾರ, ಬ್ರಿಟನ್ ಆಂಡಿ ಮರ್ರೆ ಹಾಗೂ ಆಸ್ಟ್ರೇಲಿಯಾದ ಕೊಕ್ಕಿನಾಕಿಸ್ ನಡುವಿನ ಪುರುಷರ ಸಿಂಗಲ್ಸ್ ನ ಎರಡನೇ ಪಂದ್ಯ ಬೆಳಗಿನ ಜಾವ 4 ಗಂಟೆ 6 ನಿಮಿಷದ(ಆಸ್ಟ್ರೇಲಿಯಾ ಕಾಲಮಾನ)ವರೆಗೂ ನಡೆಯಿತು. ರಾತ್ರಿ 10.15ಕ್ಕೆ (ಆಸ್ಟ್ರೇಲಿಯಾ ಕಾಲಮಾನ) ಪಂದ್ಯ ಆರಂಭಗೊಂಡರೂ, ಉಭಯ ಆಟಗಾರರು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಿ ಐದೂವರೆ ಗಂಟೆಗೂ ಅಧಿಕ ಕಾಲ ಸೆಣಸಾಡಿದರು. 5 ಸೆಟ್‌ಗಳ ರೋಚಕ ಕಾದಾಟದಲ್ಲಿ ಬ್ರಿಟನ್‌ನ ಆಂಡಿ ಮರ್ರೆ ಕೊನೆಗೂ ಗೆಲುವಿನ ನಗೆ ಬೀರಿದರು.