ಏಷ್ಯನ್ ಅಂಡರ್ 18 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: 24 ಪದಕ ಬೇಟೆಯಾಡಿದ ಭಾರತ
* ಏಷ್ಯನ್ ಅಂಡರ್ 18 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯರ ಭರ್ಜರಿ ಪ್ರದರ್ಶನ
* 15 ಚಿನ್ನ ಸಹಿತ 24 ಪದಕ ಜಯಿಸಿದ ಯುವ ಅಥ್ಲೀಟ್‌ಗಳು
* ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದ ಭಾರತ
ನವದೆಹಲಿ(ಮೇ.01): ಏಷ್ಯನ್ ಅಂಡರ್ 18 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಯುವ ಅಥ್ಲೀಟ್‌ಗಳು ಒಂದು ಚಿನ್ನ, 5 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಕೊಳ್ಳೆಹೊಡೆಯುವಲ್ಲಿ ಯಶಸ್ವಿಯಾಗಿದೆ. ಕೊನೆಯ ದಿನ ಭಾರತೀಯ ಮಹಿಳಾ ತಂಡವು 4*400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡುವಲ್ಲಿ ಯಶಸ್ವಿಯಾಗಿದೆ.
ಏಪ್ರಿಲ್ 27ರಿಂದ 30ರ ವರೆಗೆ ತಾಷ್ಕೆಂಟ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ಯುವ ಅಥ್ಲೀಟ್‌ಗಳು 15 ಚಿನ್ನ 7 ಬೆಳ್ಳಿ ಹಾಗೂ 2 ಕಂಚಿನ ಪದಕ ಸಹಿತ ಒಟ್ಟು 24 ಪದಕಗಳನ್ನು ಬೇಟೆಯಾಡುವ ಮೂಲಕ ಚೀನಾ ಬಳಿಕ ಎರಡನೇ ಸ್ಥಾನದೊಂದಿಗೆ ಕ್ರೀಡಾಕೂಟವನ್ನು ಮುಗಿಸಿದೆ.
ಏಷ್ಯನ್ ಅಂಡರ್ 18 ಮಹಿಳಾ 4*400 ರಿಲೇ ಸ್ಪರ್ಧೆಯಲ್ಲಿ ಭಾರತ ತಂಡವು ಚಿನ್ನದ ಪದಕಕ್ಕೆ ಮುತ್ತಿಕ್ಕಿದರೆ, ಪುರುಷರ ತಂಡವು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಇನ್ನು ಭಾನುವಾರ ನಡೆದ ಏಷ್ಯನ್ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬಪಿ ಹನ್ಸದಾ ಅವರು ಪುರುಷರ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಅಥ್ಲೀಟ್ ಎನ್ನುವ ಇತಿಹಾಸವನ್ನು ಬಪಿ ನಿರ್ಮಿಸಿದ್ದಾರೆ.
ಬಪಿ ಹನ್ಸದಾ ಅವರು ಕೇವಲ 51.38 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ತೋರಿದರು. ಈ ಮೊದಲು ಬಪಿ ಹನ್ಸದಾ ಅವರು ಈ ಹಿಂದಿನ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ 51.96 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು. ಆದರೆ ಇದೀಗ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡರು. ಇದು ಬಪಿ 400 ಮೀಟರ್ ಸ್ಪರ್ಧೆಯಲ್ಲಿ ಕೇವಲ 5ನೇ ಬಾರಿಗೆ ಪಾಲ್ಗೊಂಡಿರುವುದಾಗಿದ್ದು, ತಮ್ಮ ಪಾಲಿನ ಮೂರನೇ ಮಹತ್ವದ ಸ್ಪರ್ಧೆಯಲ್ಲೇ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
Wrestlers Protest: ಮಾಧ್ಯಮಗಳ ವಿರುದ್ಧ ಕುಸ್ತಿಪಟುಗಳ ಆಕ್ರೋಶ!
ಇನ್ನು ರೆಝೋನಾ ಮಲೈಕ್ 200 ಮೀಟರ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದರು. ಫೈನಲ್‌ನಲ್ಲಿ ಅವರು ಕೇವಲ 24.38 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ರಜತ ಪದಕ ತಮ್ಮದಾಗಿಸಿಕೊಂಡರು. ಇನ್ನು 400 ಮೀಟರ್ ಸ್ಪರ್ಧೆಯಲ್ಲಿ ಅವರು ಚಿನ್ನದ ಪದಕ ಜಯಿಸಿದ್ದರು.
ಮಹಿಳೆಯರ ಶಾಟ್‌ಫುಟ್ ಸ್ಪರ್ಧೆಯಲ್ಲಿ ಅನುಪ್ರಿಯ 16.37 ಮೀಟರ್ ದೂರ ಎಸೆಯುವ ಮೂಲಕ ಕಂಚಿನ ಪದಕ ಜಯಿಸಿದರೆ, ಅಭಯ್ ಸಿಂಗ್ ಚೀನಾದ ಓಟಗಾರನನ್ನು ಹಿಂದಿಕ್ಕಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಅಭಯ್ ಸಿಂಗ್ ಫೈನಲ್‌ನಲ್ಲಿ ಕೇವಲ 29.39 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.