Wrestlers Protest: ಬೇಡಿಕೆ ಈಡೇರಿದೆ, ತನಿಖೆಗೆ ಸಹಕರಿಸಿ: ಸಚಿವ ಅನುರಾಗ್ ಠಾಕೂರ್ ಮನವಿ
ಬ್ರಿಜ್‌ಭೂಷಣ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ
ಕುಸ್ತಿಪಟುಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗಿದೆ
ಕುಸ್ತಿಪಟುಗಳು ಸಹಕರಿಸುವುದು ಅಗತ್ಯವೆಂದ ಅನುರಾಗ್ ಠಾಕೂರ್
ನವದೆಹಲಿ(ಮೇ.06): ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್‌ಭೂಷಣ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮೌನ ಮುರಿದಿದ್ದು, ಕುಸ್ತಿಪಟುಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗಿದೆ. ಈಗ ಅವರು ಪೊಲೀಸ್ ತನಿಖೆಗೆ ಸಹಕರಿಸಬೇಕು ಎಂದು ಕೋರಿದ್ದಾರೆ.
ಈ ಬಗ್ಗೆ ಲಖನೌದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಕುಸ್ತಿಪಟುಗಳ ಬೇಡಿಕೆಯಂತೆ ಪ್ರಕರಣದ ತನಿಖೆಗೆ ಸಮಿತಿ ರಚಿಸಲಾಗಿದೆ. ಬ್ರಿಜ್ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ಕೂಡಾ ದಾಖಲಿಸಿದ್ದಾರೆ. ಸುಪ್ರೀಂಕೋರ್ಟ್ ಕೂಡಾ ತನ್ನ ಆದೇಶ ಪ್ರಕಟಿಸಿದೆ. ಪೊಲೀಸರು ತನಿಖೆ ನಡೆಸಿ ಕಾನೂನು ಪ್ರಕಾರ ಸೂಕ್ತ ಕಠಿಣ ಕ್ರಮಕೈಗೊಳ್ಳಲಿದ್ದಾರೆ. ಅದಕ್ಕೆ ಕುಸ್ತಿಪಟುಗಳು ಸಹಕರಿಸುವುದು ಅಗತ್ಯ’ ಎಂದು ಹೇಳಿದ್ದಾರೆ.
ಇನ್ನು, ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಕುಸ್ತಿಪಟು ಭಜರಂಗ್ ಪೂನಿಯಾ, ‘ಕಾನೂನು ತಂಡದ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಮುಂದಿನ ನಡೆ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇವೆ’ ಎಂದಿದ್ದಾರೆ. ಪೊಲೀಸರ ತನಿಖೆಯ ಬಗ್ಗೆ ತೃಪ್ತಿ ಇಲ್ಲದಿದ್ದರೆ ಕುಸ್ತಿಪಟುಗಳು ಕೆಳ ನ್ಯಾಯಾಲಯ ಅಥವಾ ದೆಹಲಿ ಹೈಕೋರ್ಚ್ ಮೊರೆ ಹೋಗುವ ಸಾಧ್ಯತೆ ಇದೆ.
ಮಹಾವೀರ್ ಬೆಂಬಲ: ಕುಸ್ತಿಪಟುಗಳ ಪ್ರತಿಭಟನೆಗೆ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಕೋಚ್ ಮಹಾವೀರ್ ಫೋಗಾಟ್ ಕೂಡಾ ಬೆಂಬಲ ಸೂಚಿಸಿದ್ದು, ಬ್ರಿಜ್‌ಭೂಷಣ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತಮ್ಮ ವಾಪಸ್ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.
ಏಷ್ಯನ್ ವೇಟ್‌ಲಿಫ್ಟಿಂಗ್: ಮೀರಾಬಾಯಿ ಚಾನುಗೆ 5ನೇ ಸ್ಥಾನ
ಜಿಂಜು(ಕೊರಿಯಾ): ಇಲ್ಲಿ ಆರಂಭಗೊಂಡ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಅಥ್ಲೀಟ್, ಒಲಿಂಪಿಕ್ಸ್ ಪದಕ ವಿಜೇತೆ ಮೀರಾಬಾಯಿ ಚಾನು 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು, 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಈ ಕೂಟದಲ್ಲೇ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ. ಅವರು ಒಟ್ಟು 194 ಕೆ.ಜಿ.(ಸ್ನ್ಯಾಚ್‌ನಲ್ಲಿ 85 ಕೆ.ಜಿ.+ಕ್ಲೀನ್ ಅಂಡ್ ಜರ್ಕ್ನಲ್ಲಿ 109 ಕೆ.ಜಿ.) ತೂಕ ಎತ್ತಿದರು.
Doha Diamond League: ಘಟಾನುಘಟಿಗಳನ್ನು ಹಿಂದಿಕ್ಕಿ ಚಿನ್ನ ಗೆದ್ದ ನೀರಜ್ ಚೋಪ್ರಾ
ಇದು ಅವರ ವೈಯಕ್ತಿಕ ಶ್ರೇಷ್ಠ(207 ಕೆ.ಜಿ.) ಪ್ರದರ್ಶನಕ್ಕಿಂತ 13 ಕೆ.ಜಿ. ಕಡಿಮೆ. 2021ರಲ್ಲಿ ಕ್ಲೀನ್ ಆಂಡ್ ಜರ್ಕ್ನಲ್ಲಿ 119 ಕೆ.ಜಿ. ತೂಕ ಎತ್ತಿ ವಿಶ್ವ ದಾಖಲೆ ಬರೆದಿದ್ದ ಚಾನು ಈ ಬಾರಿ ನಿರಾಸೆ ಅನುಭವಿಸಿದರು. ಇದು ಅವರು 6 ವರ್ಷದಲ್ಲೇ ಎತ್ತಿದ ಕನಿಷ್ಠ ಭಾರ ಎನಿಸಿಕೊಂಡಿದೆ.
ಬಾಕ್ಸಿಂಗ್ ವಿಶ್ವಕಪ್: ಪ್ರಿ ಕ್ವಾರ್ಟರ್ಗೆ ಹುಸ್ಮುದ್ದೀನ್
ತಾಷ್ಕೆಂಟ್: ಪುರುಷರ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಬಾಕ್ಸರ್ ಮಹಮದ್ ಹುಸ್ಮುದ್ದೀನ್ ಪ್ರಿ ಕ್ವಾರ್ಟರ್ಗೆ ಲಗ್ಗೆ ಇಟ್ಟಿದ್ದಾರೆ. ಶುಕ್ರವಾರ 57 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಕಳೆದ ಬಾರಿಯ ಕಂಚಿನ ಪದಕ ವಿಜೇತ ಹುಸ್ಮುದ್ದೀನ್ ಚೀನಾದ ಲ್ಯು ಪಿಂಗ್ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿದರು.
ಅಂತಿಮ 16ರ ಸುತ್ತಿನಲ್ಲಿ ಭಾನುವಾರ ರಷ್ಯಾದ ಸ್ಯಾವಿನ್ ಎಡ್ವರ್ಡ್ ವಿರುದ್ಧ ಸೆಣಸಲಿದ್ದಾರೆ. ಆದರೆ 80 ಕೆ.ಜಿ. ವಿಭಾಗದ 2ನೇ ಸುತ್ತಿನಲ್ಲಿ ಆಶಿಶ್ ಚೌಧರಿ ಕ್ಯೂಬಾದ ಆರ್ಲೆನ್ ವಿರುದ್ಧ 2-5 ಅಂತರದಲ್ಲಿ ಸೋತು ನಿರಾಸೆ ಅನುಭವಿಸಿದರು. ಶನಿವಾರ 2ನೇ ಸುತ್ತಿನಲ್ಲಿ 67 ಕೆ.ಜಿ. ವಿಭಾಗದಲ್ಲಿ ಆಕಾಶ್, 71 ಕೆ.ಜಿ. ವಿಭಾಗದಲ್ಲಿ ನಿಶಾಂತ್ ದೇವ್ ಕಣಕ್ಕಿಳಿಯಲಿದ್ದಾರೆ.
ಮ್ಯಾಡ್ರಿಡ್ ಓಪನ್ ಟೆನಿಸ್: ಬೋಪಣ್ಣ ಫೈನಲ್ಗೆ ಲಗ್ಗೆ
ಮ್ಯಾಡ್ರಿಡ್: ಭಾರತದ ತಾರಾ ಟೆನಿಸಿಗ ರೋಹನ್ ಬೋಪಣ್ಣ ಹಾಗೂ ಆಸ್ಪ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ನಲ್ಲಿ ಫೈನಲ್ ಪ್ರವೇಶಿಸಿದ್ದು, ಈ ಆವೃತ್ತಿಯ 3ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಮಾರ್ಚ್ನಲ್ಲಿ ಎಬ್ಡೆನ್ ಜೊತೆಗೂಡಿ ಬಿಎನ್ಪಿ ಪರಿಬಾಸ್ ಓಪನ್ ಗೆದ್ದಿದ್ದ ಬೋಪಣ್ಣ, ಎಟಿಪಿ ಮಾಸ್ಟರ್ಸ್ 1000 ಟೂರ್ನಿಯಲ್ಲಿ ಚಾಂಪಿಯನ್ ಆದ ಅತಿಹಿರಿಯ ಆಟಗಾರ ಎನಿಸಿಕೊಂಡಿದ್ದರು.
ಶುಕ್ರವಾರ ಸೆಮಿಫೈನಲ್ನಲ್ಲಿ 7ನೇ ಶ್ರೇಯಾಂಕಿತ ಇಂಡೋ-ಆಸೀಸ್ ಜೋಡಿ ಮೆಕ್ಸಿಕೋದ ಸಾಂಟ್ಯಾಗೊ ಗೊಂಜಾಲೆಜ್-ಫ್ರಾನ್ಸ್‌ನ ಎಡ್ವರ್ಡ್ ರೋಜರ್ ವಿರುದ್ಧ 5-7, 7-6(3), 10-4 ಅಂತರದಲ್ಲಿ ಗೆಲುವು ಸಾಧಿಸಿತು. ಫೈನಲ್ನಲ್ಲಿ ಇವರಿಗೆ ಶ್ರೇಯಾಂಕ ರಹಿತ ರಷ್ಯಾ ಜೋಡಿ ಕರೇನ್ ಕಚನೋವ್-ಆ್ಯಂಡ್ರೆ ರುಬ್ಲೆವ್ ಸವಾಲು ಎದುರಾಗಲಿದೆ.
ಆರ್ಚರಿ ಏಷ್ಯಾಕಪ್: 14 ಪದಕ ಗೆದ್ದ ಭಾರತೀಯರು!
ತಾಷ್ಕೆಂಟ್: ಆರ್ಚರಿ ಏಷ್ಯಾಕಪ್ 2ನೇ ಹಂತದಲ್ಲಿ ಭಾರತೀಯರು ಕಾಂಪೌಂಡ್ ವಿಭಾಗದಲ್ಲಿ ಕ್ಲೀನ್‌ಸ್ವೀಪ್ ಸೇರಿದಂತೆ ಒಟ್ಟು 7 ಚಿನ್ನ, 5 ಬೆಳ್ಳಿ ಹಾಗೂ 2 ಕಂಚು ಸೇರಿ 14 ಪದಕಗಳನ್ನು ಬಾಚಿಕೊಂಡಿದ್ದು, ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಪ್ರಗತಿ, ಪರ್ನೀತ್, ರಜನೀ ಅವರಿದ್ದ ಕಾಂಪೌಂಡ್ ಮಹಿಳಾ ತಂಡ, ಕುಶಾಲ್, ಅಭಿಷೇಕ್, ಅಮಿತ್ ಅವರನ್ನೊಳಗೊಂಡ ಪುರುಷರ ತಂಡ ಹಾಗೂ ಮಿಶ್ರ ವಿಭಾಗದಲ್ಲಿ ಪರ್ನೀತ್-ಅಭಿಷೇಕ್ ಚಿನ್ನ ತಮ್ಮದಾಗಿಸಿಕೊಂಡರು.
ಕಾಂಪೌಂಡ್ ಪುರುಷರ ವೈಯಕ್ತಿಕ ವಿಭಾಗದಲ್ಲಿ ಅಭಿಷೇಕ್, ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ರಜನೀ ಬಂಗಾರದ ಸಾಧನೆ ಮಾಡಿದರು. ರೀಕರ್ವ್ ಪುರುಷರ ತಂಡ ವಿಭಾಗದಲ್ಲಿ ಜಯಂತ್, ಮೃನಾಲ್, ತುಷಾರ್, ಮಿಶ್ರ ತಂಡ ವಿಭಾಗದಲ್ಲಿ ಸಂಗೀತಾ ಹಾಗೂ ಮೃನಾಲ್ಗೆ ಚಿನ್ನದ ಪದಕ ಲಭಿಸಿತು.