ತಾಯಿಯಾದ 20 ದಿನಕ್ಕೇ ಆರ್ಚರಿ ಅಭ್ಯಾಸಕ್ಕೆ ದೀಪಿಕಾ ಕುಮಾರಿ!
ಮಗುವಿಗೆ ಜನ್ಮ ನೀಡಿ 20 ದಿನಕ್ಕೆ ಅಭ್ಯಾಸ ಆರಂಭಿಸಿದ ದೀಪಿಕಾ ಕುಮಾರಿ
28 ವರ್ಷದ ದೀಪಿಕಾ ಕುಮಾರಿ ಅವರಿಗೆ ಕಳೆದ ತಿಂಗಳು ಹೆರಿಗೆಯಾಗಿತ್ತು
ರಾಷ್ಟ್ರೀಯ ಮುಕ್ತ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ದೀಪಿಕಾ ಅಭ್ಯಾಸ ಆರಂಭ
ಕೋಲ್ಕತಾ(ಜ.09): ಭಾರತದ ತಾರಾ ಆರ್ಚರಿ ಪಟು ದೀಪಿಕಾ ಕುಮಾರಿ ಹೆಣ್ಣು ಮಗುವಿಗೆ ಜನ್ಮವಿತ್ತ 20 ದಿನಗಳಲ್ಲೇ ಅಭ್ಯಾಸಕ್ಕೆ ಮರಳಿ ಎಲ್ಲರ ಗಮನ ಸೆಳೆದಿದ್ದಾರೆ. 28 ವರ್ಷದ ದೀಪಿಕಾಗೆ ಕಳೆದ ತಿಂಗಳು ಹೆರಿಗೆಯಾಗಿತ್ತು. ಅವರೀಗ ಕೋಲ್ಕತಾದ ಸಾಯ್ ಕೇಂದ್ರದಲ್ಲಿ ತರಬೇತಿ ನಡೆಸುತ್ತಿದ್ದಾರೆ. ಗರ್ಭಿಣಿಯಾಗಿದ್ದ 7ನೇ ತಿಂಗಳವರೆಗೂ ನಿರಂತರ ಅಭ್ಯಾಸ, ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ದೀಪಿಕಾ 3 ತಿಂಗಳ ಕಾಲ ಆರ್ಚರಿಯಿಂದ ದೂರ ಉಳಿಯುವಂತಾಗಿತ್ತು. ಜನವರಿ 10ರಿಂದ 17ರ ವರೆಗೆ ನಡೆಯಲಿರುವ ರಾಷ್ಟ್ರೀಯ ಹಿರಿಯರ ಮುಕ್ತ ಟ್ರಯಲ್ಸ್ ಮೂಲಕ ಮತ್ತೆ ಸ್ಪರ್ಧಾತ್ಮಕ ಆರ್ಚರಿಗೆ ಮರಳುವ ನಿರೀಕ್ಷೆಯಲ್ಲಿದ್ದಾರೆ.
ಎರಡು ಬಾರಿ ವಿಶ್ವ ನಂ.1 ಪಟ್ಟ ಅಲಂಕರಿಸಿರುವ ದೀಪಿಕಾ ಕುಮಾರಿ, ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೂರು ಬಾರಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟಿರುವ ದೀಪಿಕಾ ಕುಮಾರಿ, ತಮ್ಮ ಸಿದ್ದತೆಯ ಕುರಿತಂತೆ ಮಾತನಾಡಿದ್ದು, ಈಗ ಸಾಧ್ಯವಾಗಿಲ್ಲವೆಂದರೆ ಮತ್ತೆಂದು ಸಾಧ್ಯವಿಲ್ಲ ಎನ್ನುವುದನ್ನು ಮನಗಂಡಿದ್ದಾರೆ.
ಖಂಡಿತವಾಗಿಯೂ ನಾನು ರಾಷ್ಟ್ರೀಯ ಹಿರಿಯರ ಮುಕ್ತ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲಿದ್ದೇನೆ. ಒಂದು ವೇಳೆ ಈ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳದೇ ಹೋದರೇ, ಒಂದು ವರ್ಷಗಳ ಕಾಲ ಆರ್ಚರಿಯಿಂದ ದೂರವೇ ಉಳಿಯಬೇಕಾಗುತ್ತದೆ. ಹೀಗಾಗಿ ನನ್ನ ಬಳಿ ಬೇರೆ ಯಾವ ಆಯ್ಕೆಯೂ ಉಳಿದಿಲ್ಲ ಎಂದು ದೀಪಿಕಾ ಕುಮಾರಿ ಹೇಳಿದ್ದಾರೆ.
ವೃತ್ತಿಬದುಕಿನ 92ನೇ ಪ್ರಶಸ್ತಿ ಜಯಿಸಿದ ಜೋಕೋವಿಚ್
ಅಡಿಲೇಡ್: ಜನವರಿ 16ರಿಂದ ಆರಂಭವಾಗಲಿರುವ ಆಸ್ಪ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂಗೂ ಮುನ್ನ ಮಾಜಿ ವಿಶ್ವ ನಂ.1 ಆಟಗಾರ, ಸರ್ಬಿಯಾದ ನೋವಾಕ್ ಜೋಕೋವಿಚ್ ಭರ್ಜರಿ ಸಿದ್ಧತೆ ನಡೆಸಿದ್ದು, ಅಡಿಲೇಡ್ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಭಾನುವಾರ ಫೈನಲ್‌ನಲ್ಲಿ ಅಮೆರಿಕದ ಸೆಬಾಸ್ಟಿಯನ್ ಕೊರ್ಡಾ ವಿರುದ್ಧ ಜೋಕೋ 6-7(8), 7-6(3), 6-4 ಸೆಟ್‌ಗಳಿಂದ ಗೆಲುವು ಸಾಧಿಸಿದರು. 16 ವರ್ಷಗಳ ಬಳಿಕ ಅಡಿಲೇಡ್ ಪ್ರಶಸ್ತಿ ಗೆದ್ದ ಜೋಕೋ, ವೃತ್ತಿಬದುಕಿನ ಪ್ರಶಸ್ತಿ ಗಳಿಕೆಯನ್ನು 92ಕ್ಕೆ ಏರಿಸಿದರು. ಕೋವಿಡ್ ಲಸಿಕೆ ಪಡೆಯದ ಕಾರಣ ಕಳೆದ ವರ್ಷ ಆಸ್ಪ್ರೇಲಿಯನ್ ಓಪನ್‌ನಿಂದ ಹೊರಬಿದ್ದಿದ್ದ ಜೋಕೋ ಈ ಬಾರಿ ಆಡಲು ಸಜ್ಜಾಗಿದ್ದು, 22ನೇ ಗ್ರ್ಯಾನ್ ಸ್ಲಾಂ ಮೇಲೆ ಕಣ್ಣಿಟ್ಟಿದ್ದಾರೆ.
ಆಸ್ಪ್ರೇಲಿಯನ್ ಓಪನ್‌ಗೆ ಜಪಾನಿನ ಒಸಾಕ ಅಲಭ್ಯ
ಮೆಲ್ಬರ್ನ್: 2 ಬಾರಿ ಚಾಂಪಿಯನ್, ಮಾಜಿ ವಿಶ್ವ ನಂ.1 ಟೆನಿಸ್ ಆಟಗಾರ್ತಿ ನವೋಮಿ ಒಸಾಕ ಜನವರಿ 16ರಿಂದ ಆರಂಭವಾಗಲಿರುವ ಆಸ್ಪ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂನಿಂದ ಹಿಂದೆ ಸರಿದಿದ್ದಾರೆ. ಆದರೆ ಟೂರ್ನಿಯಲ್ಲಿ ಆಡದಿರಲು ಕಾರಣವೇನು ಎಂಬುದನ್ನು ಬಹಿರಂಗಪಡಿಸಿಲ್ಲ.
ಸಾವಿರಾರು ಸ್ಪರ್ಧಿಗಳು ಪಾಲ್ಗೊಂಡ ಬೆಂಗಳೂರು 10k ಓಟ ಯಶಸ್ವಿ..!
2021ರಲ್ಲಿ ಮಾನಸಿಕ ಆರೋಗ್ಯ ಸರಿಯಿಲ್ಲದ ಕಾರಣ ಫ್ರೆಂಚ್ ಓಪನ್ ತಪ್ಪಿಸಿಕೊಂಡಿದ್ದ ಜಪಾನ್‌ನ ಒಸಾಕ ಬಳಿಕ ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಟೋಕಿಯೋ ಟೆನಿಸ್ ಟೂರ್ನಿಯಲ್ಲಿ ಕೊನೆಯ ಬಾರಿಗೆ ಸ್ಪರ್ಧಿಸಿದ್ದರು. ಟೂರ್ನಿಯಿಂದ ಕಾರ್ಲೊಸ್ ಆಲ್ಕರಜ್, ವೀನಸ್ ವಿಲಿಯಮ್ಸ್, ಸಿಮೋನಾ ಹಾಲೆಪ್ ಕೂಡಾ ಹಿಂದೆ ಸರಿದಿದ್ದಾರೆ.
16ರ ಪ್ರಾಣೇಶ್ ಭಾರತದ 79ನೇ ಗ್ರ್ಯಾಂಡ್‌ಮಾಸ್ಟರ್
ಸ್ಟಾಕ್‌ಹೋಮ್(ಸ್ವೀಡನ್): ತಮಿಳುನಾಡಿನ 16 ವರ್ಷದ ಚೆಸ್ ಆಟಗಾರ ಎಂ.ಪ್ರಾಣೇಶ್ ಭಾರತದ 79ನೇ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. 3 ಜಿಎಂ ನಾಮ್‌ರ್ ಪೂರ್ತಿಗೊಳಿಸಿದ್ದ ಪ್ರಾಣೇಶ್ ಸ್ವೀಡನ್‌ನಲ್ಲಿ ನಡೆದ ಫಿಡೆ ರಿಲ್ಟನ್ ಕಪ್ ಟೂರ್ನಿಯಲ್ಲಿ 2500 ಎಲೋ ರೇಟಿಂಗ್ ಅಂಕಗಳನ್ನು ಪೂರ್ಣಗೊಳಿಸಿ ಗ್ರ್ಯಾಂಡ್‌ಮಾಸ್ಟರ್ ಎನಿಸಿಕೊಂಡರು. ಕಳೆದ ಗುರುವಾರ ಮುಕ್ತಾಯಗೊಂಡ ಟೂರ್ನಿಯಲ್ಲಿ 22ನೇ ಶ್ರೇಯಾಂಕಿತ ಪ್ರಾಣೇಶ್ ಎಲ್ಲಾ 8 ಪಂದ್ಯಗಳನ್ನು ಗೆದ್ದು 8 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು.