ಸಾವಿರಾರು ಸ್ಪರ್ಧಿಗಳು ಪಾಲ್ಗೊಂಡ ಬೆಂಗಳೂರು 10k ಓಟ ಯಶಸ್ವಿ..!
ಬೆಂಗಳೂರಿನಲ್ಲಿ ದ ಗ್ರೇಟ್ 10ಕೆ ಓಟ ಯಶಸ್ವಿ
ಮ್ಯಾರಥಾನ್‌ಗೆ 7500ಕ್ಕೂ ಹೆಚ್ಚು ಸ್ಪರ್ಧಿಗಳು ನೋಂದಣಿ ಮಾಡಿಕೊಂಡಿದ್ದರು
ಬೆಂಗಳೂರಿನ ವಿಜಯ್‌ಕುಮಾರ್ ಹಾಗೂ ನೀತು ಕುಮಾರಿ 10ಕೆ ಓಟದ ಚಾಂಪಿಯನ್
ಬೆಂಗಳೂರು(ಜ.09): ರಾಜ್ಯ ಸರ್ಕಾರ, ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ(ಕೆಒಎ) ಹಾಗೂ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ(ಕೆಎಎ) ಆಯೋಜಿಸಿದ ಚೊಚ್ಚಲ ಆವೃತ್ತಿಯ ಗ್ರೇಟ್ ಬೆಂಗಳೂರು 10ಕೆ ಮ್ಯಾರಥಾನ್ ಓಟ ಭಾನುವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಮ್ಯಾರಥಾನ್‌ಗೆ 7500ಕ್ಕೂ ಹೆಚ್ಚು ಸ್ಪರ್ಧಿಗಳು ನೋಂದಣಿ ಮಾಡಿಕೊಂಡಿದ್ದರು. ಬೆಂಗಳೂರಿನ ವಿಜಯ್‌ಕುಮಾರ್ ಹಾಗೂ ನೀತು ಕುಮಾರಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ 10ಕೆ ಓಟದ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆರಂಭಗೊಂಡ ಓಟದ ಸ್ಪರ್ಧೆಯಲ್ಲಿ ವಿಜಯ್ 32.28 ನಿಮಿಷಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, ಲಕ್ಷ್ಮೇಶ(33.34 ನಿ.) ಹಾಗೂ ರಾಜೇಶ್ ಕುಮಾರ್(33.54 ನಿ.) ಕ್ರಮವಾಗಿ ಬೆಳ್ಳಿ, ಕಂಚು ಗೆದ್ದರು. ಮಹಿಳಾ ವಿಭಾಗದಲ್ಲಿ ನೀತು(40.53 ನಿಮಿಷ) ಬಂಗಾರ ಗೆದ್ದರೆ, ವೈಷ್ಣವಿ ನವೀನ್(42.01 ನಿ.) ಬೆಳ್ಳಿ, ಫರ್ಹೀನ್ ಫಿರ್ದೌಸ್(42.01) ಕಂಚು ತಮ್ಮದಾಗಿಕೊಂಡರು. ಮೊದಲ ಸ್ಥಾನ ಪಡೆದವರಿಗೆ ತಲಾ 30,000 ರು., 2ನೇ ಸ್ಥಾನಕ್ಕೆ ತಲಾ 20,000 ರು., 3ನೇ ಸ್ಥಾನಕ್ಕೆ ತಲಾ 10,000 ರು. ಬಹುಮಾನ ವಿತರಿಸಲಾಯಿತು.
ಇನ್ನು ಯುವಕರನ್ನು ಕ್ರೀಡೆಯತ್ತ ಆಕರ್ಷಿಸಲು 5 ಕಿ.ಮೀ. ಹಾಗೂ 3.5 ಕಿ.ಮೀ. ಓಟ ಸ್ಪರ್ಧೆಗಳನ್ನೂ ನಡೆಸಲಾಯಿತು. 5ಕೆ ಪುರುಷ ವಿಭಾಗದಲ್ಲಿ ಹರ್‌ಪ್ರೀತ್ ಸಿಂಗ್, ಮಹಿಳಾ ವಿಭಾಗದಲ್ಲಿ ಶರಣ್ಯ ಕ್ರಮವಾಗಿ ಮೊದಲ ಸ್ಥಾನ ಪಡೆದರು. ಓಟಕ್ಕೆ ಮಾಜಿ ಅಥ್ಲೀಟ್, ಪದ್ಮಶ್ರೀ ಪುರಸ್ಕೃತೆ ಅಂಜು ಬಾಬಿ ಜಾರ್ಜ್, ರಾಜ್ಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಚಾಲನೆ ನೀಡಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಕ್ರೀಡಾ ಇಲಾಖೆ ಹೆಚ್ಚುವರಿ ಪ್ರಧಾನ ಕಾರ‍್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
50 ಲಕ್ಷ ರು. ಸಂಗ್ರಹ
ಗ್ರೇಟ್ ಬೆಂಗಳೂರು 10ಕೆ ಓಟದ ಮೂಲಕ 50 ಲಕ್ಷ ರು. ಸಂಗ್ರಹವಾಗಿದ್ದು, ಅದನ್ನು ಶಂಕರ ಕ್ಯಾನ್ಸರ್ ಫೌಂಡೇಶನ್‌ಗೆ ದೇಣಿಗೆ ರೂಪದಲ್ಲಿ ನೀಡುವುದಾಗಿ ಕೆಒಎ ಅಧ್ಯಕ್ಷ ಡಾ.ಕೆ.ಗೋವಿಂದರಾಜು ತಿಳಿಸಿದರು.
ರಾಷ್ಟ್ರೀಯ ಕ್ರಾಸ್ ಕಂಟ್ರಿ: ರಾಜ್ಯದ ಶಿವಾಜಿಗೆ ಚಿನ್ನ
ಸಾಲ್‌ಕುಚಿ(ಅಸ್ಸಾಂ): 57ನೇ ರಾಷ್ಟ್ರೀಯ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಶಿವಾಜಿ ಪರಶುರಾಮ್ ಮಾದಪ್ಪಗೌಡರ್ ಚಿನ್ನ, ಪ್ರಣತಿ ಕಂಚಿನ ಪದಕ ಗೆದ್ದಿದ್ದಾರೆ. ಭಾನುವಾರ ನಡೆದ ಕೂಟದಲ್ಲಿ ಅಂಡರ್-20 ಪುರುಷರ ವಿಭಾಗದ 8 ಕಿ.ಮೀ. ಓಟವನ್ನು ಪರಶುರಾಮ್ 24.56 ನಿಮಿಷಗಳಲ್ಲಿ ಕ್ರಮಿಸಿ ಚಿನ್ನ ತಮ್ಮದಾಗಿಸಿಕೊಂಡರೆ, ಬಾಲಕಿಯರ ಅಂಡರ್-18 ವಿಭಾಗದ 4 ಕಿ.ಮೀ. ಸ್ಪರ್ಧೆಯಲ್ಲಿ ಪ್ರಣತಿ 15.12 ನಿಮಿಷಗಳಲ್ಲಿ ಕ್ರಮಿಸಿ ಕಂಚು ಜಯಿಸಿದರು.
ರೇಸಿಂಗ್ ಕಾರು ಅಪಘಾತ: ಚಾಲಕ ಕುಮಾರ್ ನಿಧನ
ಚೆನ್ನೈ: ಭಾರತದ ಖ್ಯಾತ ರೇಸಿಂಗ್ ಕಾರು ಚಾಲಕ ಕೆ.ಇ. ಕುಮಾರ್ ಭಾನುವಾರ ರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್ ವೇಳೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮದ್ರಾಸ್ ಇಂಟರ್‌ನ್ಯಾಷನಲ್ ಸಕ್ರ್ಯೂಟ್‌ನಲ್ಲಿ ರೇಸ್‌ನ 2ನೇ ಸುತ್ತಿನಲ್ಲಿ ಈ ಘಟನೆ ನಡೆದಿದೆ.
ಆಸ್ಪ್ರೇಲಿಯನ್ ಓಪನ್‌ಗಿಲ್ಲ ವಿಶ್ವ ನಂ.1 ಕಾರ್ಲೊಸ್ ಆಲ್ಕರಜ್..!
ರೇಸ್ ವೇಳೆ 59 ವರ್ಷದ ಕುಮಾರ್ ಅವರ ಕಾರು ಗೋಡೆಗೆ ಬಡಿದು ಟ್ರ್ಯಾಕ್‌ನಲ್ಲಿಯೇ ಪಲ್ಟಿಯಾಗಿ ಬಿದ್ದಿದೆ. ಕೂಡಲೇ ರೇಸ್ ಸ್ಥಗಿತಗೊಳಿಸಿ ಕುಮಾರ್‌ರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ಆಯೋಜಕರು ತಿಳಿಸಿದ್ದಾರೆ.