US Open 19 ವರ್ಷದ ಕಾರ್ಲೊಸ್‌ ಆಲ್ಕರಜ್‌ ನೂತನ ಯುಎಸ್‌ ಓಪನ್ ಚಾಂಪಿಯನ್‌..!

ಯುಎಸ್ ಓಪನ್ ಟೆನಿಸ್ ಟೂರ್ನಿಗೆ ಕಾರ್ಲೊಸ್‌ ಆಲ್ಕರಜ್‌ ನೂತನ ಅಧಿಪತಿ
19 ವರ್ಷದ ಸ್ಪೇನ್ ಟೆನಿಸಿಗ ಕಾರ್ಲೊಸ್‌ ಆಲ್ಕರಜ್‌ ಮುಡಿಗೆ ಚೊಚ್ಚಲ ಟೆನಿಸ್ ಗ್ರ್ಯಾನ್ ಸ್ಲಾಂ ಗರಿ
ಕ್ಯಾಸ್ಪರ್‌ ರುಡ್ ಎದುರು ಫೈನಲ್ ಫೈಟ್ ಗೆದ್ದ ಕಾರ್ಲೊಸ್‌ ಆಲ್ಕರಜ್‌

19 year Teen sensation Carlos Alcaraz beats Casper Ruud to win US Open title kvn

ನ್ಯೂಯಾರ್ಕ್‌(ಸೆ.12): ಸ್ಪೇನ್‌ ಯುವ ಟೆನಿಸ್ ಆಟಗಾರ ಕಾರ್ಲೊಸ್‌ ಆಲ್ಕರಜ್‌, 2022ನೇ ಸಾಲಿನ ಯುಎಸ್ ಓಪನ್ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ತಡರಾತ್ರಿ ನಡೆದ ಯುಎಸ್ ಓಪನ್ ಪುರುಷರ ಸಿಂಗಲ್ಸ್ ಫೈನಲ್‌ ಪಂದ್ಯದಲ್ಲಿ ಕಾರ್ಲೊಸ್‌ ಆಲ್ಕರಜ್‌, ನಾರ್ವೆಯ ಕ್ಯಾಸ್ಪರ್ ರುಡ್‌ ಎದುರು 6-4, 2-6, 7-6(1), 6-3 ಸೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಟೆನಿಸ್ ಗ್ರ್ಯಾನ್‌ ಸ್ಲಾಂ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಟೆನಿಸ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ಮೊದಲ ಬಾರಿಗೆ ಟೆನಿಸ್‌ ಗ್ರ್ಯಾನ್‌ ಸ್ಲಾಂನಲ್ಲಿ ಫೈನಲ್ ಪ್ರವೇಶಿಸಿದ್ದ ಕಾರ್ಲೊಸ್‌ ಆಲ್ಕರಜ್‌ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಎಲ್ಲಾ ನಿರೀಕ್ಷೆಯ ಭಾರಗಳನ್ನು ಹೊತ್ತು ಆರ್ಥರ್ ಆಶೆ ಕೋರ್ಟ್‌ನಲ್ಲಿ ಕಣಕ್ಕಿಳಿದ ಕಾರ್ಲೊಸ್‌ ಆಲ್ಕರಜ್‌, ಬರೋಬ್ಬರಿ 3 ಗಂಟೆ 20 ನಿಮಿಷಗಳ ಸೆಣಸಾಟದ ಬಳಿಕ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾದರು. ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಕಾರ್ಲೊಸ್‌ ಆಲ್ಕರಜ್‌, ಕೋರ್ಟ್‌ನಲ್ಲೇ ಅಂಗಾತ ಮಲಗಿಕೊಂಡು ಸಂಭ್ರಮ ಪಟ್ಟರು. 

ಯುಎಸ್‌ ಓಪನ್‌ ಫೈನಲ್‌ನಲ್ಲಿ ಈ ಇಬ್ಬರು ಆಟಗಾರರು ರಣಕಲಿಗಳಂತೆ ಹೋರಾಡಿದರು. ಒಂದೊಂದು ಅಂಕಗಳಿಸಲು ಇಬ್ಬರು ಆಟಗಾರರು ಸಾಕಷ್ಟು ಬೆವರು ಹರಿಸಬೇಕಾಯಿತು. 19 ವರ್ಷದ ಕಾರ್ಲೊಸ್‌ ಆಲ್ಕರಜ್‌ ಮೇಲೆ ನಾರ್ವೆಯ ಕ್ಯಾಸ್ಪರ್ ರುಡ್‌ ಬಿರುಸಿನ ಸರ್ವ್‌ ಮೂಲಕ ಒತ್ತಡ ಹೇರುವ ಪ್ರಯತ್ನವನ್ನು ಮಾಡಿದರು. ಮೊದಲ ಸೆಟ್‌ ಅನ್ನು ಕಾರ್ಲೊಸ್‌ ಆಲ್ಕರಜ್‌ ಜಯಿಸಿದರೆ, ಎರಡನೇ ಸೆಟ್‌ನಲ್ಲಿ ಕ್ಯಾಸ್ಪರ್‌ ರುಡ್‌ ಸುಲಭ ಗೆಲುವು ದಾಖಲಿಸಿ ಸಮಬಲ ಸಾಧಿಸುವಂತೆ ಮಾಡಿದರು. ಇನ್ನು ಮೂರನೇ ಸೆಟ್‌ನಲ್ಲಿ ರೋಚಕ ಮುನ್ನಡೆ ಸಾಧಿಸಿದ ಕಾರ್ಲೊಸ್‌ ಆಲ್ಕರಜ್‌ ಅವರಿಗೆ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಇನ್ನು ಕೊನೆಯ ಸೆಟ್‌ನಲ್ಲಿ ಸುಲಭ ಗೆಲುವು ದಾಖಲಿಸುವ ಮೂಲಕ 19 ವರ್ಷದ ಕಾರ್ಲೊಸ್‌ ಆಲ್ಕರಜ್‌ ಗೆಲುವಿನ ಸಂಭ್ರಮದಲ್ಲಿ ತೇಲಿದರು.

US Open 2022 ಒನ್ಸ್‌ ಜಬುರ್‌ ಮಣಿಸಿದ ಇಗಾ ಸ್ವಿಯಾಟೆಕ್‌ ಯುಎಸ್ ಓಪನ್ ಚಾಂಪಿಯನ್‌..!

ಇನ್ನು ಯುಎಸ್ ಓಪನ್ ಚಾಂಪಿಯನ್ ಪಟ್ಟ ಅಲಂಕರಿಸಿದ ಬಳಿಕ ಮಾತನಾಡಿದ ಕಾರ್ಲೊಸ್‌ ಆಲ್ಕರಜ್‌, ಚಿಕ್ಕವನಾಗಿದ್ದಾಗಿನಿಂದಲೂ ನಾನು ಈ ಸಾಧನೆ ಮಾಡಬೇಕು ಎಂದು ಕನಸು ಕಂಡಿದ್ದೆ. ಈ ಸಾಧನೆ ಮಾಡಲು ನಾನು ಸಾಕಷ್ಟು ಕಠಿಣ ಪರಿಶ್ರಮಪಟ್ಟಿದ್ದೇನೆ. ನನಗೀಗ ಮಾತೇ ಬರುತ್ತಿಲ್ಲ, ಸಾಕಷ್ಟು ಭಾವನೆಗಳು ಉಕ್ಕಿ ಬರುತ್ತಿವೆ ಎಂದು 19 ವರ್ಷದ ಆಟಗಾರ ಹೇಳಿದ್ದಾರೆ.

ಯುಎಸ್ ಓಪನ್ ಟೂರ್ನಿ ಆರಂಭಕ್ಕೂ ಮುನ್ನ ಟೆನಿಸ್ ಶ್ರೇಯಾಂಕದಲ್ಲಿ ಕಾರ್ಲೊಸ್‌ ಆಲ್ಕರಜ್‌ 4ನೇ ಸ್ಥಾನದಲ್ಲಿದ್ದರು. ಇದೀಗ ಯುಎಸ್ ಓಪನ್ ಚಾಂಪಿಯನ್ ಆಗುತ್ತಿದ್ದಂತೆಯೇ ಮೂರು ಸ್ಥಾನ ಜಿಗಿತ ಕಂಡು ನಂ.1 ಸ್ಥಾನಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಹಲವು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರಿರುವ ಕಾರ್ಲೊಸ್‌ ಆಲ್ಕರಜ್‌, ಇದೀಗ ಕೇವಲ 19ನೇ ವಯಸ್ಸಿನಲ್ಲಿಯೇ ಯುಎಸ್ ಓಪನ್ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಟೆನಿಸ್ ಜಗತ್ತಿನ ಗಮನ ಸೆಳೆದಿದ್ದಾರೆ. ಕಳೆದೆರಡು ದಶಕಗಳಿಂದ ರೋಜರ್ ಫೆಡರರ್, ರಾಫೆಲ್ ನಡಾಲ್ ಹಾಗೂ ನೋವಾಕ್ ಜೋಕೋವಿಚ್ ಟೆನಿಸ್ ಜಗತ್ತನ್ನು ಆಳಿದ್ದರು. ಇದೀಗ ಮುಂಬರುವ ವರ್ಷಗಳಲ್ಲಿ ಕಾರ್ಲೊಸ್‌ ಆಲ್ಕರಜ್‌ ಯಾವ ರೀತಿ ಪ್ರದರ್ಶನವನ್ನು ಮುಂದುವರೆಸಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.

Latest Videos
Follow Us:
Download App:
  • android
  • ios