Asianet Suvarna News Asianet Suvarna News

TEMPO: ಬಾಹ್ಯಾಕಾಶಕ್ಕೆ ಟೆಂಪೋ ಕಳಿಸಲಿರುವ ನಾಸಾ, ಏನಿದರ ಉಪಯೋಗ?

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ಬಾಹ್ಯಾಕಾಶಕ್ಕೆ ರಾಕೆಟ್‌ಗಳನ್ನು ಉಡಾಯಿಸುವುದರಲ್ಲಿ ಹೆಸರುವಾಸಿ. ಈಗ ನಾಸಾ, ಬಾಹ್ಯಾಕಾಶಕ್ಕೆ ಟೆಂಪೋ ಕಳಿಸಲು ಉತ್ಸುಕವಾಗಿದೆ. ಹಾಗಂತ ನೀವು ಬಹಳ ಅಚ್ಚರಿ ಪಡಬೇಕಂತಿಲ್ಲ. 

NASA will now fly Tempo to space a new satellite will be launched next month san
Author
First Published Apr 7, 2023, 7:02 PM IST

ನವದೆಹಲಿ (ಏ.7): ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮುಂದಿನ ತಿಂಗಳು ಟೆಂಪೋವನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಿದೆ. ಆದರೆ, ಭೂಮಿಯಲ್ಲಿ ಜನರ ಸಾಗಾಟಕ್ಕೆ ಬಳಸುವ ಟೆಂಪೋ ಇದಲ್ಲ. ಇದೊಂದು ಉಪಗ್ರಹ. ಅದರ ಹೆಸರು ಟೆಂಪೋ. ಟೆಂಪೋ ಎನ್ನುವುದರ ವಿಸ್ತ್ರತ ರೂಪ, ಟ್ರೋಪೋಸ್ಫಿರಿಕ್ ಎಮಿಷನ್ ಮಾನಿಟರಿಂಗ್ ಆಫ್ ಪೊಲ್ಯೂಷನ್ ಇನ್ಸ್ಟ್ರುಮೆಂಟ್. ನಿಗದಿಯಂತೆ ಇದನ್ನು ನಾಸಾ ತನ್ನ ಕೇಪ್‌ ಕೆನವೆರಲ್‌ ಬಾಹ್ಯಾಕಾಶ ನಿಲ್ದಾಣದಿಂದ ಏಪ್ರಿಲ್‌ ಮೊದಲ ವಾರದಲ್ಲಿ ನಭಕ್ಕೆ ಉಡಾವಣೆ ಮಾಡಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಇದನ್ನು ಮುಂದಿನ ತಿಂಗಳು ಉಡಾಯಿಸುವುದಾಗಿ ನಾಸಾ ಘೋಷಣೆ ಮಾಡಿದೆ. ಟೆಂಪೋ ವಿಶೇಷ ಉಪಕರಣಗಳೊಂದಿಗೆ ಸಜ್ಜುಗೊಂಡಿರುವ ಉಪಗ್ರಹ, ಇದು ಹಗಲು ಹೊತ್ತಿನಲ್ಲಿ ಪ್ರತಿ ಗಂಟೆಗೆ ಉತ್ತರ ಅಮೆರಿಕಾದ ಮೂಲಕ ಹಾದುಹೋಗುತ್ತದೆ. ಇದು ಪ್ರತಿ ಬಾರಿ 10 ಚದರ ಕಿಲೋಮೀಟರ್ ಪ್ರದೇಶದಲ್ಲಿ ವಾಯು ಮಾಲಿನ್ಯ ಮಟ್ಟದ ಡೇಟಾವನ್ನು ದಾಖಲಿಸುತ್ತದೆ. ಇದರ ವ್ಯಾಪ್ತಿಯು ಅಟ್ಲಾಂಟಿಕ್ ಸಾಗರದಿಂದ ಪೆಸಿಫಿಕ್ ಮಹಾಸಾಗರದವರೆಗೆ ಮತ್ತು ಮಧ್ಯ ಕೆನಡಾದಿಂದ ಮೆಕ್ಸಿಕೋ ನಗರದವರೆಗೆ ಇರುತ್ತದೆ. ಬಾಲ್‌ ಏರೋಸ್ಪೇಸ್‌ ನಿರ್ಮಾಣ ಮಾಡಿರುವ ಈ ಟೆಂಪೋ ದೊಡ್ಡ ವಾಷಿಂಗ್‌ ಮಷಿನ್‌ ಗಾತ್ರದಲ್ಲಿದೆ. ಮ್ಯಾಕ್ಸರ್‌ ನಿರ್ಮಾಣ ಮಾಡಿರುವ ಇಂಟೆಲ್ಸಾಟ್‌ 40ಇ ಉಪಗ್ರಹದೊಂದಿಗೆ ಇದನ್ನು ಉಡಾವಣೆ ಮಾಡಲಾಗುತ್ತದೆ.

ಕಳೆದ 30 ವರ್ಷಗಳಿಂದ ಭೂಮಿಯ ಗಾಳಿಯನ್ನ ಸ್ವಚ್ಛಗೊಳಿಸುವ ಪ್ರಯತ್ನ ಪ್ರಪಂಚದಾದ್ಯಂತ ನಡೆಯುತ್ತಿದೆ. ದೊಡ್ಡ ದೊಡ್ಡ ಕಾರ್ಖಾನೆಗಳು, ವಾಹನಗಳಿಂದ ಹೊರಬರುವ ಹೊಗೆ ಜನರ ಆರೋಗ್ಯವನ್ನು ಹಾಳು ಮಾಡುತ್ತಿದೆ. ಅಮೆರಿಕದಲ್ಲಿ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ನಿರಂತರ ಸುಧಾರಣೆ ಕಂಡುಬಂದಿದೆ, ಆದರೆ ಇನ್ನೂ ದೇಶದ ಜನಸಂಖ್ಯೆಯ 40 ಪ್ರತಿಶತದಷ್ಟು ಜನರು ಕೆಟ್ಟ ಗಾಳಿಯನ್ನು ಉಸಿರಾಡುತ್ತಾರೆ. ಇದನ್ನು ಅಮೆರಿಕದ ನಿಗದಿತ ಮಾನದಂಡಗಳೇ ತಿಳಿಸಿವೆ.

ಟೆಂಪೋದ (TEMPO) ಮುಖ್ಯ ಕಾರ್ಯವೆಂದರೆ ಮೂರು ಪ್ರಮುಖ ಮಾಲಿನ್ಯಕಾರಕ ಅಂಶಗಳ ಡೇಟಾವನ್ನು ಕಲೆಹಾಕುವುದು. ಸಾರಜನಕ ಡೈಆಕ್ಸೈಡ್, ಫಾರ್ಮಾಲ್ಡಿಹೈಡ್ ಮತ್ತು ಓಝೋನ್. ಸಾರಜನಕ ಡೈಆಕ್ಸೈಡ್ ಅಥವಾ ನೈಟ್ರೋಜನ್‌ ಡೈಆಕ್ಸೈಡ್‌ ಎನ್ನುವುದು ಹಾನಿಕಾರಕ ಅನಿಲವಾಗಿದ್ದು, ಇಂಧನವನ್ನು ಸುಟ್ಟಾಗ ಅದರಿಂದ ಈ ಅನಿಲ ಬಿಡುಗಡೆ ಆಗುತ್ತದೆ. ಇದರಿಂದ ಉಸಿರಾಟದ ಸಮಸ್ಯೆಗಳು ವ್ಯಾಪಕವಾಗಿ ಕಾಡುತ್ತದೆ. ಅಸ್ತಮಾದಂಥ ಕಾಯಿಲೆಗಳೂ ಬರುತ್ತದೆ.  ಫಾರ್ಮಾಲ್ಡಿಹೈಡ್ ಬಣ್ಣ, ಅಂಟು ಮತ್ತು ಗ್ಯಾಸೋಲಿನ್ ಉಪಉತ್ಪನ್ನವಾಗಿದೆ. ಇದರಿಂದ ಕಣ್ಣಿನ ಸಮಸ್ಯೆ, ಕ್ಯಾನ್ಸರ್ ನಂತಹ ಸಮಸ್ಯೆಗಳು ಉಂಟಾಗುತ್ತವೆ. ಓಝೋನ್ ಪ್ರಮಾಣವು ಹೆಚ್ಚಾದರೆ, ಸೂರ್ಯನ ನೇರಳಾತೀತ ಕಿರಣಗಳು ಚರ್ಮಕ್ಕೆ ಹಾನಿ ಉಂಟು ಮಾಡಲಿದೆ.

ಈ ಉಪಗ್ರಹದ ಉಡಾವಣೆಯಿಂದ ಪ್ರತಿ ಗಂಟೆಗೆ ಅಮೆರಿಕದ ಮಾಲಿನ್ಯದ ನಿಖರವಾದ ಮಾಹಿತಿ ಪಡೆಯಲು ಸಾಧ್ಯವಾಗಲಿದೆ ಎಂದು  ಟೆಂಪೋದ ನಾಸಾ ಕಾರ್ಯಕ್ರಮದ ವಿಜ್ಞಾನಿ ಬ್ಯಾರಿ ಲೆಫರ್ ಹೇಳಿದ್ದಾರೆ. ಇದು ಬಹಳ ಖುಷಿಕೊಡುವಂಥ ವಿಚಾರ, ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ತಜ್ಞರಿಗೂ ಇದರಿಂದ ನೆರವಾಗಲಿದೆ. ಯಾವ ರೀತಿಯ ಮಾಲಿನ್ಯ, ಭೂಮಿಯ ಮೇಲಿನ ಜನರಿಗೆ ಯಾವ ರೀತಿಯ ರೋಗಗಳನ್ನು ಹರಡುತ್ತದೆ ಎನ್ನುವ ಮಾಹಿತಿಯನ್ನು ಅವರು ಪಡೆಯಲು ಸಸಾಧ್ಯವಾಗುತ್ತದೆ. ದೀರ್ಘಕಾಲದ ಕಾಯಿಲೆ ಯಾವುದು,ಮುಂದೆ ಬರಬಹುದಾದ ಅಪಾಯವೇನು ಎಲ್ಲವನ್ನೂ ಇದರ ಮೂಲಕ ತಿಳಿಯಬಹುದು ಎಂದು ಲೆಫರ್‌ ಹೇಳಿದ್ದಾರೆ.

ಚಂದ್ರನ ಅಂಗಳದಿಂದ ಮಂಗಳ ಯಾನ: ನಾಸಾ ಯೋಜನೆಗೆ ಭಾರತೀಯ ಮೂಲದ ಕ್ಷತ್ರಿಯನ ಸಾರಥ್ಯ..!

ನಾಸಾ ವಿಜ್ಞಾನಿಗಳು ಕಳೆದ ಎರಡು ದಶಕಗಳಿಂದ ಭೂಮೇಲ್ಮೈ ಕಕ್ಷೆಯಿಂದ ವಾಯು ಮಾಲಿನ್ಯವನ್ನು ಅಧ್ಯಯನ ಮಾಡುತ್ತಿದ್ದಾರೆ. ಈ ಉಪಗ್ರಹಗಳು 760 ಕಿಮೀ ಮೇಲೆ ಹಾರಾಟ ಮಾಡುತ್ತಿವೆ. ಅಲ್ಲಿಂದ ಭೂಮಿಯ ಬಗ್ಗೆ ಮಾಹಿತಿ ಸಂಗ್ರಹಿಸಿ. ಸ್ಮಿತ್ಸೋನಿಯನ್ ಆಸ್ಟ್ರೋಫಿಸಿಕಲ್ ಅಬ್ಸರ್ವೇಟರಿಯ ವಾಯುಮಂಡಲದ ಭೌತಶಾಸ್ತ್ರಜ್ಞ ಕ್ಯಾರೊಲಿನ್ ನೋಲನ್ ಹೇಳುವ ಪ್ರಕಾರ, ನ್ಯೂಯಾರ್ಕ್ ನಗರವು ಪ್ರತಿ ಮಧ್ಯಾಹ್ನ ಒಂದೂವರೆ ಗಂಟೆಗೆ ಉಪಗ್ರಹ ಡೇಟಾವನ್ನು ಪಡೆಯುತ್ತದೆ. ಆದರೆ ದಿನಕ್ಕೆ ಒಂದು ಡೇಟಾ ಮಾತ್ರ ಈ ಉಪಗ್ರಹದಿಂದ ಪಡೆಯುತ್ತದೆ. ಅಗತ್ಯವಿದ್ದಾಗ ಎರಡು ಬಾರಿ ಡೇಟಾ ಪಡೆಯಬಹುದು. ಆದರೆ, ಎಲ್ಲಾ ಸಮಯದಲ್ಲಿ ಇದು ಸಾಧ್ಯವಿಲ್ಲ ಎಂದಿದ್ದಾರೆ.

ಇಂಚಿಂಚೂ ಭೂಮಿ ಜಾಲಾಡುವ ‘ನಿಸಾರ್‌’ ಉಪಗ್ರಹ ಸಿದ್ಧ: ಇಸ್ರೋ ಸಾಧನೆ

ಈ ಸಮಸ್ಯೆಯನ್ನು ಟೆಂಪೋ ಕೊನೆ ಮಾಡಲಿದೆ. ಭೂಮಿಯ ತಿರುಗುವಿಕೆಯ ಜೊತೆಗೆ ಅಮೆರಿಕದ ಮೇಲೆಯೇ ಇದು ಹಾರಾಟ ಮಾಡುತ್ತಿರುತ್ತದೆ. ಅದರಲ್ಲೂ ವಿಶೇಷವಾಗಿ ಉತ್ತರ ಅಮೆರಿಕ ಸ್ಥಾನದಲ್ಲಿ ಹಾರಾಟ ಮಾಡುತ್ತಿರುತ್ತದೆ. ಅಮೆರಿಕದ ಪಶ್ಚಿಮದಿಂದ ಪೂರ್ವ ತೀರದ ಮಾಹಿತಿಯನ್ನು ಪ್ರತಿ ಗಂಟೆಗೂ ಕಳಿಸುತ್ತದೆ. ದೇಶದ ಪ್ರತಿ ನಗರಕ್ಕೂ ಇದರ ಡೇಟಾ ಲಭ್ಯವಿರಲಿದೆ.  ಟೆಂಪೋ ದಕ್ಷಿಣ ಕೊರಿಯಾದ ಜಿಯೋ-ಕಾಂಪ್‌ಸಾಟ್-2ಬಿ ಉಪಗ್ರಹ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಮುಂಬರುವ ಉಪಗ್ರಹ ಸೆಂಟಿನೆಲ್-4 ಜೊತೆ ಕೂಡಿಕೊಳ್ಳಲಿದೆ. ಅದರೊಂದಿಗೆ ಏಷ್ಯಾ ಮತ್ತು ಯುರೋಪ್ ವಾಯು ಗುಣಮಟ್ಟದ ಮಾಹಿತಿಯೂ ತಿಳಿಯಲಿದೆ.

Follow Us:
Download App:
  • android
  • ios