ಮಂಗಳ ಗ್ರಹದ ಮೇಲೆ ಲ್ಯಾಂಡರ್, ಪುಟ್ಟ ಹೆಲಿಕಾಪ್ಟರ್ ಕಳಿಸಲು ಸಿದ್ಧತೆ ಆರಂಭಿಸಿದ ಇಸ್ರೋ!
ನಾಸಾದಂತೆಯೇ, ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಕೂಡ ತನ್ನ ಮುಂದಿನ ಮಂಗಳಯಾನ ಕಾರ್ಯಾಚರಣೆಯಲ್ಲಿ ಪುಟ್ಟ ಹೆಲಿಕಾಪ್ಟರ್ ಕಳುಹಿಸಲು ಯೋಜನೆ ರೂಪಿಸಿದೆ. ಈ ಮಿಷನ್ ಬಹುಶಃ 2030 ರ ಸುಮಾರಿಗೆ ಜಾರಿಗೆ ಬರಬಹುದು. ಈ ಹೆಲಿಕಾಪ್ಟರ್ ಬಹುತೇಕ ನಾಸಾದ ಇಂಜೆನ್ಯೂಟಿ ರೀತಿಯೇ ಇರುತ್ತದೆ. ಇದನ್ನು ಪರ್ಸೆವೆರೆನ್ಸ್ ರೋವರ್‌ನೊಂದಿಗೆ ಮಂಗಳಕ್ಕೆ ಕಳುಹಿಸಲಾಗಿದೆ.
ಬೆಂಗಳೂರು (ಫೆ.26): ಚಂದ್ರಯಾನದ ದೊಡ್ಡ ಯಶಸ್ಸಿನ ಬಳಿಕ ಇಸ್ರೋ ತನ್ನ ಮುಂದಿನ ಮಂಗಳಯಾನ ಮಿಷನ್‌ನಲ್ಲಿ ಕಾರ್ಯ ನಿರ್ವಹಿಸಲು ಆರಂಭ ಮಾಡಿದೆ. ಈ ಬಾರಿ ಮಂಗಳಯಾನದ ನೌಕೆ ಮಂಗಳ ಗ್ರಹದ ಕಕ್ಷೆಯಲ್ಲಿ ಸುತ್ತುವ ಕೆಲಸ ಮಾತ್ರ ಮಾಡೋದಿಲ್ಲ. ಚಂದ್ರಯಾನ-4 ರೀತಿ, ಮಂಗಳ ಗ್ರಹದ ಮೇಲೆ ನೌಕೆ ಕಾಲಿಡಲಿದೆ. ಮಂಗಳಯಾನ-2 ಮಿಷನ್‌ನಲ್ಲಿ ಈ ಬಾರಿ ಇಸ್ರೋ ಲ್ಯಾಂಡರ್ ಜೊತೆಗೆ ನಾಸಾ ಕಳಿಸಿದ್ದಂಥ ಇಂಗೆನ್ಯುಟಿ ಹೆಲಿಕಾಪ್ಟರ್‌ಅನ್ನೂ ಕಳಿಸಲಿದೆ. ನಾಸಾದ ಇಂಜೆನ್ಯೂಟಿ (Ingenuity) ಹೆಲಿಕಾಪ್ಟರ್ ಈಗಾಗಲೇ ಮಂಗಳನ ಅಂಗಳದಲ್ಲಿ 50ಕ್ಕೂ ಹೆಚ್ಚು ಬಾರಿ ಹಾರಾಟ ನಡೆಸಿ ತನ್ನ ಅಧ್ಯಯನವನ್ನು ಇತ್ತೀಚೆಗೆ ಕೊನೆಗೊಳಿಸಿದೆ. ಇದಕ್ಕೂ ಮುನ್ನ ಭಾರತವು ಮಂಗಳಯಾನವನ್ನು ಅಂದರೆ ಮಾರ್ಸ್ ಆರ್ಬಿಟರ್ ಮಿಷನ್ (MOM) ಅನ್ನು ನವೆಂಬರ್ 2013 ರಲ್ಲಿ ಕಳುಹಿಸಿತ್ತು. ಇದು ಸೆಪ್ಟೆಂಬರ್ 2014 ರಲ್ಲಿ ಮಂಗಳ ಗ್ರಹದ ಕಕ್ಷೆಯನ್ನು ಪ್ರವೇಶಿಸಿತ್ತು. ಈ ನೌಕೆಯು ಮಂಗಳ ಗ್ರಹದ ಸುತ್ತ ಸುತ್ತುವ ಬಾಹ್ಯಾಕಾಶ ನೌಕೆಯಾಗಿತ್ತು. ಇಸ್ರೋ ಇಟ್ಟ ನಿರೀಕ್ಷೆಗಿಂತ ಹೆಚ್ಚು ಕೆಲಸ ಮಾಡಿದ್ದ ಮಾಮ್, 2022ರಲ್ಲಿ ತನ್ನ ಸಂಪರ್ಕವನ್ನು ಕಳೆದುಕೊಂಡಿತು.
ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯದ ವಿಜ್ಞಾನಿ ಜೈದೇವ್ ಪ್ರದೀಪ್ ಇತ್ತೀಚೆಗೆ ವೆಬ್‌ನಾರ್‌ನಲ್ಲಿ ಇಸ್ರೋ ಮಂಗಳ ಗ್ರಹಕ್ಕೆ ಹೆಲಿಕಾಪ್ಟರ್ ಕಳುಹಿಸಲು ಸಿದ್ಧತೆ ನಡೆಸುತ್ತಿದೆ ಎನ್ನುವ ವಿಚಾರವನ್ನು ಬಹಿರಂಗಪಡಿಸಿದರು. ಈ ಬಾರಿ ಇಸ್ರೋ ಮಂಗಳ ಗ್ರಹದ ಮೇಲ್ಮೈ ಮೇಲೆ ಇಳಿಯಲಿದೆ. ಆದ್ದರಿಂದ ಪೇಲೋಡ್‌ಗಳು ಮೇಲ್ಮೈಯಲ್ಲಿ ಉಳಿಯಬಹುದು ಮತ್ತು ವೈಜ್ಞಾನಿಕ ತನಿಖೆಗಳನ್ನು ನಡೆಸಬಹುದು. ಹೆಲಿಕಾಪ್ಟರ್ ಮೂಲಕ ವೈಮಾನಿಕ ಸಮೀಕ್ಷೆ ನಡೆಸಬಹುದು ಎಂದಿದ್ದಾರೆ.
ಇಸ್ರೋದ ಡ್ರೋನ್ ಹೆಲಿಕಾಪ್ಟರ್‌ನಲ್ಲಿ ತಾಪಮಾನ ಸಂವೇದಕ, ತೇವಾಂಶ ಸಂವೇದಕ, ಒತ್ತಡ ಸಂವೇದಕ, ಗಾಳಿ ವೇಗ ಅರಿಯುವ ಸಂವೇದಕ, ವಿದ್ಯುತ್ ಕ್ಷೇತ್ರ ಸಂವೇದಕ, ಮುನುಷ್ಯ ಜಾತಿಯ ಕುರುಹು ತಿಳಿಯುವ ಸಂವೇದಕ ಮತ್ತು ಧೂಳಿನ ಸಂವೇದಕ ಇರುತ್ತದೆ. ಇದಲ್ಲದೆ, ಇದು ಗಾಳಿಯಲ್ಲಿ ಹಾರುವಾಗ ಏರೋಸಾಲ್‌ಗಳನ್ನು ಸಹ ಪರಿಶೀಲಿಸುತ್ತದೆ. ಇದು 328 ಅಡಿ ಎತ್ತರದಲ್ಲಿ ಹಾರಲು ಸಾಧ್ಯವಾಗುತ್ತದೆ. ನಾಸಾದ ಹೆಲಿಕಾಪ್ಟರ್ ಗರಿಷ್ಠ 79 ಅಡಿಗಳವರೆಗೆ ಏರುವ ಸಾಮರ್ಥ್ಯ ಮಾತ್ರವೇ ಇತ್ತು.
ನಾಸಾದ ಹೆಲಿಕಾಪ್ಟರ್ ಇಂಜೆನ್ಯೂಟಿ ತನ್ನ ಸಂಪೂರ್ಣ ಕಾರ್ಯಾಚರಣೆಯಲ್ಲಿ ಒಟ್ಟು ಎರಡು ಗಂಟೆಗಳ ಕಾಲ ಹಾರಾಟ ನಡೆಸಿತು. ಒಟ್ಟಾರೆ 17 ಕಿಲೋಮೀಟರ್ ದೂರವನ್ನು ಕ್ರಮಿಸಿತ್ತು. ಫೆಬ್ರವರಿ 2021 ರಲ್ಲಿ ಜೆಜೆರೊ ಕ್ರೇಟರ್‌ನಲ್ಲಿ ಪರ್ಸೆವೆರೆನ್ಸ್ ರೋವರ್‌ನೊಂದಿಗೆ ಇಂಜೆನ್ಯೂಟಿ ಹೆಲಿಕಾಪ್ಟರ್ ಮಂಗಳ ಗ್ರಹದ ಮೇಲೆ ಇಳಿದಿತ್ತು.. ಅಲ್ಲಿಯವರೆಗೆ ಮಂಗಳನ ವಾತಾವರಣದಲ್ಲಿ ಹಾರಾಟ ಸಾಧ್ಯವೇ ಅಥವಾ ಇಲ್ಲವೇ ಎನ್ನುವುದು ಗೊತ್ತಿರಲಿಲ್ಲ.
Watch: ಮಂಗಳ ಗ್ರಹದ ಮೇಲೆ 54ನೇ ಬಾರಿ ಹೆಲಿಕಾಪ್ಟರ್ ಹಾರಿಸಿದ ನಾಸಾ!
ಚೀನಾ ಕೂಡ ಮಂಗಳ ಗ್ರಹಕ್ಕೆ ಡ್ರೋನ್ ಕಳುಹಿಸಲು ಸಿದ್ಧತೆ: 1.8 ಕೆಜಿ ತೂಕದ ಇಂಜೆನ್ಯೂಟಿ ಮಂಗಳ ಗ್ರಹದಲ್ಲಿ 72 ಬಾರಿ ಹಾರಾಟ ನಡೆಸಿದೆ. ಜನವರಿ 2024 ರಲ್ಲಿ, ಅದರ ರೋಟರ್ ಬ್ಲೇಡ್ಗಳು ಕೆಲಸ ಮಾಡುವುದನ್ನು ನಿಲ್ಲಿಸಿದವು. ಇದೀಗ ಈ ಹೆಲಿಕಾಪ್ಟರ್ ಮಂಗಳ ಗ್ರಹದ ಮೇಲ್ಮೈ ಮೇಲೆ ಕೆಲಸ ಮಾಡುವುದನ್ನು ನಿಲ್ಲಿಸಿದೆ. ನಾಸಾದ ಇಂಜೆನ್ಯೂಟಿ ಹೆಲಿಕಾಪ್ಟರ್‌ನಿಂದ ಭಾರತ ಮಾತ್ರವೇ ಅಲ್ಲ ಚೀನಾ ಕೂಡ ಸ್ಫೂರ್ತಿ ಪಡೆದಿದೆ. ಚೀನಾ ಕೂಡ ಮಂಗಳ ಗ್ರಹಕ್ಕೆ ಡ್ರೋನ್ ಕಳುಹಿಸಲು ತಯಾರಿ ನಡೆಸುತ್ತಿದೆ. ಆ ಮೂಲಕ ಮಂಗಳ ಗ್ರಹದಿಂದ ಮಾದರಿಗಳನ್ನು ತರುವ ಪ್ರಯತ್ನ ಮಾಡಲಿದೆ.
ಮಂಗಳನಿಂದ ಹಾರಿದ ನಾಸಾದ ಪುಟ್ಟ ಹೆಲಿಕಾಪ್ಟರ್!