Chandrayaan-3: ಚಂದ್ರನ ಮೇಲೆ ಮತ್ತೊಮ್ಮೆ ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಮಾಡಿದ ವಿಕ್ರಮ್ ಲ್ಯಾಂಡರ್!
ಚಂದ್ರನ ದಕ್ಷಿಣ ಧ್ರುವದಲ್ಲಿರುವ ಭಾರತದ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಮತ್ತೊಂದು ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ. ಇದರ ಮಾಹಿತಿಯನ್ನು ಇಸ್ರೋ ತನ್ನ ಟ್ವಿಟರ್ ಪುಟದಲ್ಲಿ ಹಂಚಿಕೊಂಡಿದೆ.
ಬೆಂಗಳೂರು (ಸೆ.4): ಭಾರತದ ಐತಿಹಾಸಿಕ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಮತ್ತೊಂದು ಐತಿಹಾಸಿಕ ಸಾಫ್ಟ್ ಲ್ಯಾಂಡ್ ಮಾಡಿದೆ. ಈ ಬಗ್ಗೆ ಇಸ್ರೋ ದೊಡ್ಡ ಮಟ್ಟದ ಅಪ್‌ಡೇಟ್ ಬಹಿರಂಗ ಮಾಡಿದೆ. ಆಗಸ್ಟ್ 23 ರಂದು ನಡೆಸಿದ್ದ ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಭಾರತದ ಹಿರಿಮೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ್ದರೆ, ಸೆಪ್ಟೆಂಬರ್ 4 ರಂದು ಮಾಡಿರುವ ಮತ್ತೊಂದು ಸಾಫ್ಟ್ ಲ್ಯಾಂಡಿಂಗ್ ಭವಿಷ್ಯದ ದಿನಗಳಲ್ಲಿ ಭಾರತಕ್ಕೆ ಆಗಬಹುದಾದ ದೊಡ್ಡ ಮಟ್ಟದ ಸಹಾಯವನ್ನು ಎತ್ತಿ ತೋರಿಸಿದೆ. ಮುಂದಿನ ದಿನಗಳಲ್ಲಿ ಚಂದ್ರನಿಂದ ನೌಕೆಯನ್ನು ಯಶಸ್ವಿಯಾಗಿ ಭೂಮಿಗೆ ವಾಪಾಸ್ ಕರೆತರುವ ನಿಟ್ಟಿನಲ್ಲಿ ಇಸ್ರೋ ಪ್ರಯತ್ನ ಮಾಡಲಿದೆ. ಅದರ ನಿಟ್ಟಿನಲ್ಲಿ ಚಂದ್ರನ ನೆಲದಿಂದಲೇ ತನ್ನ ಲ್ಯಾಂಡರ್‌ಅನ್ನು ಹಾರಿಸುವಲ್ಲಿ ಇಸ್ರೋ ಯಶ ಕಂಡಿದೆ.
ಈ ಬಗ್ಗೆ ಟ್ವೀಟ್‌ನಲ್ಲಿ ಮಾಹಿತಿ ನೀಡಿರುವ ಇಸ್ರೋ, ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಮತ್ತೊಮ್ಮೆ ಸಾಫ್ಟ್ ಲ್ಯಾಂಡಿಂಗ್. ವಿಕ್ರಮ್ ಲ್ಯಾಂಡರ್ ತನ್ನ ಮಿಷನ್ ಉದ್ದೇಶಗಳನ್ನು ಮೀರಿಸುವಲ್ಲಿ ಯಶಸ್ವಿಯಾಗಿದೆ. ಲ್ಯಾಂಡರ್ ಯಶಸ್ವಿಯಾಗಿ ಹಾಪ್ ಪ್ರಯೋಗಕ್ಕೆ ಒಳಗಾಗಿದೆ. ಸೂಚನೆಯ ಮೇರೆಗೆ, ಅದು ತನ್ನ ಎಂಜಿನ್‌ಗಳನ್ನು ಹಾರಿಸಿದೆ. ನಿರೀಕ್ಷೆಯಂತೆ ಸುಮಾರು 40 ಸೆಂ.ಮೀ ಎತ್ತರಕ್ಕೆ ಏರಿತು ಮತ್ತು 30 - 40 ಸೆಂ.ಮೀ ದೂರದಲ್ಲಿ ಸುರಕ್ಷಿತವಾಗಿ ಇಳಿದಿದೆ. ಇದರಿಂದಾಗಿ ಭವಿಷ್ಯದಲ್ಲಿ ಚಂದ್ರನಿಂದ ಯಶಸ್ವಿಯಾಗಿ ವಾಪಾಸ್ ಬರುವ ಮಾದರಿಗಳು ಹಾಗೂ ಯಶಸ್ವಿ ಮಾನವ ಸಹಿತ ಕಾರ್ಯಾಚರಣೆಗಳಿಗೆ ನೆರವಾಗಲಿದೆ. ಎಲ್ಲಾ ವ್ಯವಸ್ಥೆಗಳು ಉತ್ತಮವಾಗಿ ನಿರ್ವಹಣೆ ತೋರಿದ್ದು ಮತ್ತು ಆರೋಗ್ಯಕರವಾಗಿವೆ. ನಿಯೋಜಿತ ರಾಂಪ್, ಚಾಸ್ಟೆ ಮತ್ತು ಇಲ್ಸಾಗಳನ್ನು ಹಿಂದಕ್ಕೆ ಮಡಚಲಾಯಿತು ಮತ್ತು ಪ್ರಯೋಗದ ನಂತರ ಯಶಸ್ವಿಯಾಗಿ ಮರುನಿಯೋಜಿಸಲಾಯಿತು ಎಂದು ಇಸ್ರೋ ಬರೆದುಕೊಂಡಿದೆ.
ಶಿವಶಕ್ತಿ ಪಾಯಿಂಟ್‌ನಲ್ಲಿ ಲ್ಯಾಂಡ್ ಆಗಿದ್ದ ವಿಕ್ರಮ್ ಲ್ಯಾಂಡರ್‌ನ ಇಂಜಿನ್‌ಗಳನ್ನು ಮತ್ತೊಮ್ಮೆ ಸ್ಟಾರ್ಟ್ ಮಾಡಿ, ಸ್ವಲ್ಪ ಮೇಲಕ್ಕೆ ಏರಿಸಿ, ಕೊಂಚ ಬದಿಗೆ ಸರಿಸಿ ಲ್ಯಾಂಡ್ ಮಾಡುವ ಉದ್ದೇಶ ಇಸ್ರೋದ ಈ ಯೋಜನೆಗೆ ಇದ್ದಿರಲಿಲ್ಲ. ಆದರೆ. ಚಂದ್ರನಲ್ಲಿ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ನ ಎಲ್ಲಾ ಕೆಲಸಗಳು ಸಂಪೂರ್ಣವಾಗಿ ಪೂರ್ಣಗೊಂಡಿವೆ. ಪ್ರಗ್ಯಾನ್ ಹಾಗೂ ವಿಕ್ರಮ್ ಇನ್ನು ನಿದ್ರಾವಸ್ಥೆಗೆ ಹೋಗಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಕೂಡ ಹೇಳಿದ್ದರು. ಆದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಕತ್ತಲು ಆವರಿಸುವ ಮುನ್ನ ಒಂದು ಕೊನೆಯ ಹಂತದ ಪ್ರಯತ್ನವಾಗಿ ಇಸ್ರೋ ಈ ಐತಿಹಾಸಿಕ ಕಾರ್ಯಾಚರಣೆಯನ್ನು ಮಾಡಿದ್ದು, ಅದರಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಇನ್ನು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಕಾಲಿಡುವ ವೇಳೆಗೆ ತನ್ನಲ್ಲಿ ಇನ್ನೂ 150 ಕೆಜಿಯ ಇಂಧನವನ್ನು ಉಳಿಸಿಕೊಂಡಿತ್ತು. ಅದರಿಂದಾಗಿ ಇಸ್ರೋಗೆ ಈ ಕಾರ್ಯಾಚರಣೆ ಮಾಡಲು ಇಂಧನದ ಅವಕಾಶವೂ ಸಿಕ್ಕಿದೆ.
ಚಂದ್ರನ ಮೇಲೆ ನಾಸಾ ಕಾಲಿಟ್ಟಿದ್ದು ನಿಜಾನಾ?; ಇಲ್ಲಿದೆ ಸಾಕ್ಷಿ..!
ಈ ಕಾರ್ಯಾಚರಣೆ ಯಾಕೆ ಪ್ರಮುಖ: ಮುಂದಿನ ದಿನಗಳಲ್ಲಿ ಇಸ್ರೋ ಚಂದ್ರನಿಂದ ಖನಿಜಗಳು, ಸಣ್ಣಪುಟ್ಟ ಕಲ್ಲುಗಳು ಭೂಮಿಗೆ ವಾಪಾಸ್ ತರುವ ಇರಾದೆ ಹೊಂದಿದೆ. ಯಾವುದೇ ಬಾಹ್ಯಾಕಾಶ ಯೋಜನೆಯ ಮೂಲ ಉದ್ದೇಶಗಳು ಅದೇ ಆಗಿರುತ್ತದೆ. ಆ ಸಮಯದಲ್ಲಿ ಲ್ಯಾಂಡರ್‌ಗೆ ಭೂಮಿಯಿಂದಲೇ ಕಮಾಂಡ್ ನೀಡಿ ಅದನ್ನು ಸ್ಟಾರ್ಟ್ ಮಾಡಬೇಕಿರುತ್ತದೆ. ಚಂದ್ರನ ನೆಲದಿಂದ ಮೇಲಕ್ಕೆ ಹಾರುವ ಈ ಲ್ಯಾಂಡರ್ ಕಕ್ಷೆಯಲ್ಲಿ ಸುತ್ತುವರಿಯುತ್ತಿರುವ ಪ್ರಪಲ್ಶನ್ ಮಾಡ್ಯುಲ್‌ಗೆ ಕೂಡಿಕೊಳ್ಳಬೇಕು. ಈ ಪ್ರಪಲ್ಶನ್ ಮಾಡ್ಯುಲ್ ವಾಪಾಸ್ ಭೂಮಿಗೆ ಬರಬೇಕು. ಹಾಗಾಗಬೇಕೆಂದರೆ, ಚಂದ್ರನ ಮೇಲಿರುವ ಭಾರತದ ಲ್ಯಾಂಡರ್ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎನ್ನುವ ಪರೀಕ್ಷೆ ಎನ್ನುವ ರೀತಿಯಲ್ಲಿ ಈ ಕಾರ್ಯಾಚರಣೆ ಮಾಡಲಾಗಿದೆ.
ಚಂದ್ರಯಾನ-3 ಉಡಾವಣೆ ಕೌಂಟ್‌ಡೌನ್ ಧ್ವನಿ ನೀಡಿದ್ದ ಇಸ್ರೋ ವಿಜ್ಞಾನಿ ಇನ್ನಿಲ್ಲ: ಹೃದಯಾಘಾತದಿಂದ ನಿಧನ