ಜನವರಿ 6ಕ್ಕೆ ಎಲ್1 ಪಾಯಿಂಟ್ ತಲುಪಲಿದೆ ಆದಿತ್ಯ, ಬಾಹ್ಯಾಕಾಶ ನಿಲ್ದಾಣದ ಹೆಸರು ಘೋಷಿಸಿದ ಇಸ್ರೋ!
ಆದಿತ್ಯ-ಎಲ್1 ಮಿಷನ್‌ನ ಲಗ್ರಾಂಜಿಯನ್ ಪಾಯಿಂಟ್ಅನ್ನು ಜನವರಿ 6 ರಂದು ತಲುಪಲಿದೆ. ನಿಖರವಾದ ಸಮಯವನ್ನು ಮುಂದೆ ತಿಳಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.
ಅಹಮದಾಬಾದ್ (ಡಿ.23): ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 ಜನವರಿ 6 ರಂದು ತನ್ನ ಗಮ್ಯಸ್ಥಾನವಾದ ಲಗ್ರಾಂಜಿಯನ್ ಪಾಯಿಂಟ್ (ಎಲ್ 1) ಅನ್ನು ತಲುಪಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ. "ಆದಿತ್ಯ-ಎಲ್ 1 ಜನವರಿ 6 ರಂದು ಎಲ್ 1 ಪಾಯಿಂಟ್‌ಗೆ ಪ್ರವೇಶಿಸಲಿದೆ. ಸರಿಯಾದ ಸಮಯದಲ್ಲಿ ನಿಖರವಾದ ಸಮಯವನ್ನು ಪ್ರಕಟಿಸಲಾಗುವುದು" ಎಂದು ಸೋಮನಾಥ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಅಹಮದಾಬಾದ್‌ನಲ್ಲಿ ವಿಜ್ಞಾನ ಭಾರತಿ ಎಂಬ ಎನ್‌ಜಿಒ ಆಯೋಜಿಸಿದ್ದ ಭಾರತೀಯ ವಿಜ್ಞಾನ ಸಮ್ಮೇಳನದ ನಡುವೆ ಸೋಮನಾಥ್ ಸುದ್ದಿಗಾರರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಆದಿತ್ಯ ಎಲ್1 ವಿವರವನ್ನು ತಿಳಿಸಿದ್ದಾರೆ. "ಎಲ್ 1 ಪಾಯಿಂಟ್ ತಲುಪಿದಾಗ, ಅದು ಮುಂದೆ ಹೋಗದಂತೆ ನಾವು ಮತ್ತೊಮ್ಮೆ ಎಂಜಿನ್ ಅನ್ನು ಸ್ಟಾರ್ಟ್ ಮಾಡಬೇಕಾಗುತ್ತದೆ. ಆಗ ಅದು ಎಲ್1 ಹಂತಕ್ಕೆ ಹೋಗುತ್ತದೆ, ಅಲ್ಲಿ ತಲುಪಿದ ನಂತರ, ಅದು ಅದರ ಸುತ್ತಲೂ ತಿರುಗುತ್ತದೆ ಮತ್ತು ಎಲ್ 1 ಪಾಯಿಂಟ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ, "ಅವರು ಹೇಳಿದರು.
ಆದಿತ್ಯ-ಎಲ್1 ತನ್ನ ಗಮ್ಯಸ್ಥಾನವನ್ನು ತಲುಪಿದಾಗ, ಮುಂದಿನ ಐದು ವರ್ಷಗಳವರೆಗೆ ಸೂರ್ಯನ ಮೇಲೆ ನಡೆಯುವ ವಿವಿಧ ಘಟನೆಗಳನ್ನು ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಇಸ್ರೋ ಅಧ್ಯಕ್ಷರು ತಿಳಿಸಿದ್ದಾರೆ. "ಒಮ್ಮೆ ಇದನ್ನು ಯಶಸ್ವಿಯಾಗಿ L1 ಪಾಯಿಂಟ್‌ನಲ್ಲಿ ಇರಿಸಿದರೆ, ಅದು ಮುಂದಿನ ಐದು ವರ್ಷಗಳವರೆಗೆ ಕಾರ್ಯಾಚರಣೆಯಲ್ಲಿರುತ್ತದೆ. ಇದು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಬಹಳ ಮುಖ್ಯವಾದ ಎಲ್ಲಾ ಡೇಟಾವನ್ನು ಸಂಗ್ರಹಿಸುತ್ತದೆ. ಡೇಟಾವು ಸೂರ್ಯನ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳಲು ಸೂರ್ಯ ನಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಇಸ್ರೋ ಮುಖ್ಯಸ್ಥರು ಹೇಳಿದ್ದಾರೆ.
ಭಾರತೀಯ ಸ್ಪೇಸ್ ಸ್ಪೇಷನ್: ಭಾರತವು ಹೇಗೆ ತಾಂತ್ರಿಕವಾಗಿ ಶಕ್ತಿಶಾಲಿ ರಾಷ್ಟ್ರವಾಗಲಿದೆ ಎಂಬುದು ಈ ಹಂತದಲ್ಲಿ ಬಹಳ ಮುಖ್ಯವಾಗಿರಲಿದೆ ಎಂದು ಸೋಮನಾಥ್ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ 'ಅಮೃತ್ ಕಾಲ' ಸಮಯದಲ್ಲಿ ಭಾರತ ನಿರ್ಮಾಣ ಮಾಡಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು 'ಭಾರತೀಯ ಸ್ಪೇಸ್ ಸ್ಟೇಷನ್' ಎಂದು ಹೆಸರಿಸಲಾಗುತ್ತದೆ. ಭಾರತೀಯ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲು ಇಸ್ರೋ ಯೋಜನೆಯನ್ನು ಆರಂಭಿಸಿದೆ ಎಂದು ತಿಳಿಸಿದ್ದಾರೆ.
ಗಗನಯಾನ ಪರೀಕ್ಷೆ ಜತೆ ಮುಂದಿನ ವರ್ಷದಲ್ಲಿ ಇಸ್ರೋದಿಂದ 16 ಮಹತ್ವದ ಉಡಾವಣೆ
ಆದಿತ್ಯ L-1 ಮಿಷನ್ ಎಂದರೇನು?: ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್1 ಅನ್ನು ಸೆಪ್ಟೆಂಬರ್ 2 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC) ಉಡಾವಣೆ ಮಾಡಲಾಯಿತು. ಭೂಮಿಯಿಂದ ಸರಿಸುಮಾರು 1.5 ಮಿಲಿಯನ್ ಕಿಮೀ ದೂರದಲ್ಲಿರುವ ಮೊದಲ ಸೂರ್ಯ-ಭೂಮಿಯ ಲಗ್ರಾಂಜಿಯನ್ ಪಾಯಿಂಟ್ (L1) ಸುತ್ತ ಹಾಲೋ ಕಕ್ಷೆಯಿಂದ ಸೂರ್ಯನನ್ನು ಅಧ್ಯಯನ ಮಾಡುವ ಗುರಿಯನ್ನು ಈ ಮಿಷನ್ ಹೊಂದಿದೆ. ನೌಕೆಯಲ್ಲಿರುವ ಆದಿತ್ಯ ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪರಿಮೆಂಟ್ (ASPEX) ಎರಡನೇ ಸಾಧನವಾದ ಸೋಲಾರ್ ವಿಂಡ್ ಐಯಾನ್ ಸ್ಪೆಕ್ಟ್ರೋಮೀಟರ್ (SWIS) ಈಗಾಗಲೇ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ಈ ತಿಂಗಳ ಆರಂಭದಲ್ಲಿ ತಿಳಿಸಿತ್ತು. ಬಾಹ್ಯಾಕಾಶ ಸಂಸ್ಥೆಯ ಪ್ರಕಾರ, ASPEX ಎರಡು ಉಪಕರಣಗಳನ್ನು ಒಳಗೊಂಡಿದೆ - ಸೋಲಾರ್ ವಿಂಡ್ ಅಯಾನ್ ಸ್ಪೆಕ್ಟ್ರೋಮೀಟರ್ (SWIS) ಮತ್ತು ಸುಪ್ರಾಥರ್ಮಲ್ ಮತ್ತು ಎನರ್ಜಿಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್ (STEPS). STEPS ಉಪಕರಣವು ಸೆಪ್ಟೆಂಬರ್ 10 ರಂದು ಕಾರ್ಯನಿರ್ವಹಿಸಲು ಪ್ರಾರಂಭಿಸಿದರೆ, SWIS ಉಪಕರಣವನ್ನು ನವೆಂಬರ್ 2 ರಂದು ಸಕ್ರಿಯಗೊಳಿಸಲಾಗಿದೆ.
ಭಾರತದಿಂದ ಬರುವ ಚಂದ್ರಯಾನ-3 ಮಾಹಿತಿಗಾಗಿ ರಷ್ಯಾ, ಅಮೆರಿಕ ಕಾಯುತ್ತಿದೆ: ಜೀತೇಂದ್ರ ಸಿಂಗ್!