ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಟಿ20 ವಿಶ್ವಕಪ್ ಚಾಂಪಿಯನ್ ಆಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ, ವಿಡಿಯೋ ಸಂದೇಶದ ಮೂಲಕ ಟೀಂ ಇಂಡಿಯಾ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ನವದೆಹಲಿ: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಬರೋಬ್ಬರಿ 11 ವರ್ಷಗಳ ಬಳಿಕ ಭಾರತ ತಂಡವು ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನು ಟೀಂ ಇಂಡಿಯಾ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

"ಈ ಅದ್ಭುತ ವಿಜಯ ಸಾಧಿಸಿದ್ದಕ್ಕಾಗಿ ಇಡೀ ದೇಶದ ಪರವಾಗಿ ನಿಮಗೆ ಅಭಿನಂದನೆಗಳು. ಇಂದಿನ ಈ ನಿಮ್ಮ ಈ ಪ್ರದರ್ಶನದ ಬಗ್ಗೆ 140 ಕೋಟಿ ಭಾರತೀಯರು ಹೆಮ್ಮೆ ಪಡುತ್ತಿದ್ದಾರೆ. ನೀವೆಲ್ಲಾ ಸೇರಿ ವಿಶ್ವಕಪ್ ಗೆದ್ದಿದ್ದೀರ. ಇದರಿಂದ ದೇಶದ ಎಲ್ಲಾ ಹಳ್ಳಿಗಳಲ್ಲಿ, ಬೀದಿಗಳಲ್ಲಿ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯೂ ಸಂಭ್ರಮದಲ್ಲಿ ತೇಲುವಂತೆ ಮಾಡಿದ್ದೀರ. ನೀವು ಪ್ರತಿಯೊಬ್ಬರ ಹೃದಯ ಗೆದ್ದಿದ್ದೀರ. ಸಾಕಷ್ಟು ತಂಡಗಳು ಪಾಲ್ಗೊಂಡಿದ್ದರೂ ನೀವು ಸೋಲೇ ಕಾಣದೇ ಉಳಿದುಕೊಂಡಿದ್ದೀರ. ಇದೇನು ಸಣ್ಣ ಸಾಧನೆಯಲ್ಲ. ನಮ್ಮ ತಂಡದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದು ಮೋದಿ ವಿಡಿಯೋ ಸಂದೇಶದ ಮೂಲಕ ಶುಭ ಹಾರೈಸಿದ್ದಾರೆ.

Scroll to load tweet…

2024ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ವಿರಾಟ್ ಕೊಹ್ಲಿ(76) ಆಕರ್ಷಕ ಅರ್ಧಶತಕದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 176 ರನ್ ಬಾರಿಸಿತ್ತು. ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 8 ವಿಕೆಟ್ ಕಳೆದುಕೊಂಡು 169 ರನ್ ಗಳಿಸುವ ಮೂಲಕ ಕೇವಲ 7 ರನ್ ಅಂತರದ ಸೋಲು ಅನುಭವಿಸಿತು.

9ನೇ ಆವೃತ್ತಿ ಟಿ20 ವಿಶ್ವ ಸಮರಕ್ಕೆ ಅದ್ಧೂರಿ ತೆರೆ..! ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಇನ್ನು ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆಯೇ ವಿವಿಧ ಕ್ಷೇತ್ರಗಳ ಗಣ್ಯರು ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ್ದಾರೆ. ಅದರ ಕೆಲವು ಝಲಕ್ ಇಲ್ಲಿದೆ ನೋಡಿ

ನಾವೆಲ್ಲರೂ ಹೆಮ್ಮೆಯಿಂದ ಬೀಗುವ ಕ್ಷಣವಿದು 

ವಿಶ್ವ ಚಾಂಪಿಯನ್ ತಂಡಕ್ಕೆ ಅಭಿನಂದನೆಗಳು. ಇದು ನಮ್ಮ ದೇಶಕ್ಕೆ ಒಂದು ಅದ್ಭುತ ಕ್ಷಣ. ನಮ್ಮ ಆಟಗಾರರು ಸಾಟಿಯಿಲ್ಲದ ಟೀಮ್ ಸ್ಪಿರಿಟ್ ಮತ್ತು ಕ್ರೀಡಾಸ್ಫೂರ್ತಿಯೊಂದಿಗೆ ವಿಶ್ವಕಪ್ ಉದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದರು . ಅವರ ಐತಿಹಾಸಿಕ ಸಾಧನೆಗೆ ರಾಷ್ಟ್ರವು ಹೆಮ್ಮೆಯಿಂದ ಬೀಗುತ್ತಿದೆ.

• ಅಮಿತ್ ಶಾ ಕೇಂದ್ರ ಗೃಹ ಸಚಿವ

ಸೂರ್ಯ, ಎಂತಹ ಅದ್ಭುತ ಕ್ಯಾಚ್!

ಟೂರ್ನಮೆಂಟ್‌ನಾದ್ಯಂತ ಅದ್ಭುತವಾದ ವಿಶ್ವಕಪ್ ವಿಜಯ ಮತ್ತು ಅದ್ಭುತ ಪ್ರದರ್ಶನಕ್ಕಾಗಿ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು! ಸೂರ್ಯ, ಎಂತಹ ಅದ್ಭುತ ಕ್ಯಾಚ್! ರೋಹಿತ್, ಈ ಗೆಲುವು ನಿಮ್ಮ ನಾಯಕತ್ವಕ್ಕೆ ಸಾಕ್ಷಿ. ರಾಹುಲ್, ಟೀಮ್ ಇಂಡಿಯಾ ನಿಮ್ಮ ಮಾರ್ಗದರ್ಶನವನ್ನು ಕಳೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ. ಅದ್ಭುತವಾದ ಮೆನ್ ಇನ್ ಬ್ಲೂ ನಮ್ಮ ದೇಶಕ್ಕೆ ಹೆಮ್ಮೆ ತಂದಿದೆ.

• ರಾಹುಲ್ ಗಾಂಧಿ. ಲೋಕಸಭೆ ಪ್ರತಿಪಕ್ಷ ನಾಯಕ

17 ವರ್ಷದ ಕಾಯುವಿಕೆ ಅಂತ್ಯ

17 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯ! ಎಲ್ಲಾ ಭಾರತೀಯರಿಗೆ ಹೆಮ್ಮೆಯ ಕ್ಷಣ! ನಮ್ಮ ಹುಡುಗರು ವಿಶ್ವ ಚಾಂಪಿಯನ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಅದ್ಭುತ ಗೆಲುವು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಪಂದ್ಯಾವಳಿಯುದ್ದಕ್ಕೂ ಟೀಮ್ ಇಂಡಿಯಾ ಪ್ರದರ್ಶಿಸಿದ ನಿರ್ಣಯ ಮತ್ತು ಕೌಶಲ್ಯವು ಅಸಾಧಾರಣವಾಗಿದೆ, ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ತಮ್ಮ ಪರಾಕ್ರಮವನ್ನು ಪ್ರದರ್ಶಿಸಿದೆ. ಆಟಗಾರರು ಹೆಸರಿಗೆ ತಕ್ಕ ಪ್ರದರ್ಶನವನ್ನು ನೀಡಿದ್ದಾರೆ.

• ಜೆ.ಪಿ. ನಡ್ಡಾ ಬಿಜೆಪಿ ಅಧ್ಯಕ್ಷ

ಅಬ್ಬಾ ಎಂತಹಾ ಫೈನಲ್!!!

ಅಭಿನಂದನೆಗಳು ಭಾರತ. ದಕ್ಷಿಣ ಆಫ್ರಿಕನ್ನರೇ ನೀವು ಉತ್ತಮವಾಗಿ ಆಡಿದ್ದೀರಿ. ಸೂಪರ್ ವರ್ಲ್ಡ್‌ ಕಪ್‌, ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ನಾವು ಇನ್ನಷ್ಟು ಕ್ರಿಕೆಟ್ ಆಡೋಣ.

- ಸತ್ಯಾ ನಾದೆಲ್ಲಾ ಮೈಕ್ರೋಸಾಫ್ಟ್ ಸಿಇಒ

ಇದು ಅಸಾಮಾನ್ಯ ಗೆಲುವು

ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ನನ್ನ ಹೃತ್ತೂರ್ವಕ ಅಭಿನಂದನೆಗಳು. ಉತ್ಸಾಹದೊಂದಿಗೆ ತಂಡ ಆಡಿತು. ತಂಡವು ಕಷ್ಟಕರ ಸಂದರ್ಭಗಳಲ್ಲೂ ಎಲ್ಲವನ್ನೂ ಮೆಟ್ಟಿನಿಂತು ಸಾಗಿತು ಮತ್ತು ಪಂದ್ಯಾವಳಿಯ ಉದ್ದಕ್ಕೂ ಅತ್ಯುತ್ತಮ ಕೌಶಲ್ಯಗಳನ್ನು ಪ್ರದರ್ಶಿಸಿತು. ಇದು ಅಂತಿಮ ಪಂದ್ಯದಲ್ಲಿ ಅಸಾಮಾನ್ಯ ಗೆಲುವು. ಚೆನ್ನಾಗಿದೆ, ಟೀಮ್ ಇಂಡಿಯಾ! ನಾವು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ!

- ದೌಪದಿ ಮುರ್ಮು, ರಾಷ್ಟ್ರಪತಿ

ಸಂಘಟಿತ ಯತ್ನ ಇದು: ಸಿದ್ದರಾಮಯ್ಯ

ಪ್ರಶಸ್ತಿ ವಿಜೇತ ಭಾರತ ತಂಡಕ್ಕೆ ಅಭಿನಂದನೆಗಳು. ನಿರ್ಣಾಯಕ ಹಂತದಲ್ಲಿ ನಮ್ಮವರು ತೋರಿದ ಸಂಘಟಿತ ಪ್ರದರ್ಶನ ಪಂದ್ಯದ ದಿಕ್ಕನ್ನೇ ಬದಲಿಸಿತು. ಇಡೀ ಪಂದ್ಯಾವಳಿಯಲ್ಲಿ ಒಂದು ಪಂದ್ಯವನ್ನೂ ಸೋಲದೆ ಅಜೇಯರಾಗುಳಿದು ಟಿ20 ಜಯಿಸಿದ
ಭಾರತ ತಂಡದ ಸಾಧನೆ ನಿಜಕ್ಕೂ ಶ್ಲಾಘನೀಯ. ಒಂದು ಹಂತದಲ್ಲಿ ಗೆಲುವಿನ ಸನಿಹಕ್ಕೆ ಬಂದು ಕಡೆ ಕ್ಷಣದಲ್ಲಿ ಪಂದ್ಯ ಸೋತಿರುವ ದಕ್ಷಿಣ ಆಫ್ರಿಕಾ ತಂಡದ ಆಟವೂ ಮೆಚ್ಚತಕ್ಕದ್ದೆ. ಕೋಟ್ಯಂತರ ಜನರ ಹರಕೆ, ಹಾರೈಕೆಗಳು ಕಡೆಗೂ ಫಲಕೊಟ್ಟಿದೆ.

 • ಸಿದ್ದರಾಮಯ್ಯ, ಮುಖ್ಯ ಮಂತ್ರಿ