'ದರ್ಶನ್ ನಂಬಿಕೊಂಡು ಹಣ ಹಾಕಿದ್ದಾರೆ..' ಬ್ಯಾನ್ ಬಗ್ಗೆ ಮಾತನಾಡಿದ ನಿರ್ಮಾಪಕರ ಸಂಘದ ಅಧ್ಯಕ್ಷ!
Umesh Banakar on Darshan ದರ್ಶನ್ ಅವರನ್ನು ಕನ್ನಡ ಸಿನಿಮಾಗಳಿಂದ ಬ್ಯಾನ್ ಮಾಡುವ ಬಗ್ಗೆ ನಿರ್ಮಾಪಕದ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮಾತನಾಡಿದ್ದಾರೆ. ಇನ್ನು ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್‌ಎಂ ಸುರೇಶ್ ಈ ವಿಚಾರದಲ್ಲಿ ಏಕಾಏಕಿ ನಿರ್ಧಾರ ಸಾಧ್ಯವಿಲ್ಲ ಎಂದಿದ್ದಾರೆ.
ಬೆಂಗಳೂರು (ಜೂ.13): ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಹಾಗೂ ಆತನ ಸಹಚರರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದರ ನಡುವೆ ದರ್ಶನ್ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಒತ್ತಾಯ ಕೇಳಿ ಬರುತ್ತಿದೆ. ಈ ನಡುವೆ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ದರ್ಶನ್ ವಿರುದ್ಧ ಏಕಾಏಕಿ ಕ್ರಮ ತೆಗೆದುಕೊಳ್ಳೋಕೆ ಆಗೋದಿಲ್ಲ. ಅವರನ್ನ ನಂಬಿಕೊಂಡು ಸಾಕಷ್ಟು ನಿರ್ಮಾಪಕರು ಹಣ ಹಾಕಿದ್ದಾರೆ. ಅವರ ಬಗ್ಗೆಯೂ ವಿಚಾರ ಮಾಡಬೇಕಾಗುತ್ತದೆ ಎಂದಿದ್ದಾರೆ. ಆ ಮೂಲಕ ದರ್ಶನ್ ವಿರುದ್ಧ ನಿರ್ಮಾಪಕರ ಸಂಘವಾಗಲಿ, ಫಿಲ್ಮ್ ಚೇಂಬರ್ ಆಗಲಿ ಯಾವುದೇ ದೊಡ್ಡ ಮಟ್ಟದ ಕ್ರಮ ತೆಗೆದುಕೊಳ್ಳೋದಿಲ್ಲ ಅನ್ನೋ ಸೂಚನೆ ಸಿಕ್ಕಿದೆ. ಫಿಲ್ಮ್ ಚೇಂಬರ್ ಕೂಡ ಇಂದು ಸಭೆ ನಡೆಸುತ್ತಿದ್ದು, ದರ್ಶನ್ ವಿಚಾರದಲ್ಲಿ ಏನು ನಿರ್ಧಾರ ಮಾಡಬೇಕು ಅನ್ನೋದನ್ನು ತೀರ್ಮಾನಿಸಲಿದೆ.
ನಿರ್ಮಾಪಕದ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಮಾತನಾಡಿದ್ದು, 'ಈ ಘಟನೆ ಆಗಬಾರದಿತ್ತು. ಆದರೆ, ಆಗಿ ಹೋಗಿದೆ. ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಯಾವ ರೀತಿಯಲ್ಲಿ ಸಾಂತ್ವನ ಅಥವಾ ಸ್ಪಂದನೆ ತೋರಬಹುದು ಅನ್ನೋದನ್ನ ನಾವು ಚರ್ಚೆ ಮಾಡುತ್ತೇವೆ. ಜೀವ ಅಮೂಲ್ಯವಾದದ್ದು. ಅಲ್ಲದೆ, ಅವರ ಕುಟುಂಬಕ್ಕೆ ಆಧಾರಸ್ತಂಬವಾಗಿದ್ದವರು. ಈಗ ವಿಚಾರಣೆ ನಡೆಯುತ್ತಿದೆ. ಈ ಕೇಸ್‌ನ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ. ಫಿಲ್ಮ್ ಚೇಂಬರ್ ಕಡೆಯಿಂದ ಸದ್ಯಕ್ಕೆ ಯಾವುದೇ ಕ್ರಮ ಇರೋದಿಲ್ಲ. ಯಾಕೆಂದರೆ, ಇದೀಗ ಕಾನೂನು ಪ್ರಕ್ರಿಯೆಯಲ್ಲಿದೆ. ಪೊಲೀಸ್ ಹಾಗೂ ಕೋರ್ಟ್ ಏನು ಹೇಳುತ್ತದೆ ಅನ್ನೋದನ್ನ ನೋಡಿಕೊಂಡು ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.
ನಾವು ಈ ವಿಚಾರದಲ್ಲಿ ಸಡನ್ ಆಗಿ ತೀರ್ಮಾನಕ್ಕೆ ಬರೋದಕ್ಕೆ ಆಗೋದಿಲ್ಲ. ಯಾರನ್ನೂ ಬ್ಯಾನ್ ಮಾಡೋ ಅಧಿಕಾರ ನಮಗೆ ಇರೋದಿಲ್ಲ. ಪ್ರಜಾಪ್ರಭುತ್ವದಲ್ಲಿ ಹಾಗೆ ಮಾಡೋಕೆ ಸಾಧ್ಯವಿಲ್ಲ. ನಾವು ಹಿಂದೆಯೂ ಯಾರನ್ನೂ ಬ್ಯಾನ್ ಮಾಡಿರಲಿಲ್ಲ. ನಾವು ಅಸಹಕಾರ ತೋರಿಸಬಹುದಷ್ಟೇ. ವ್ಯಕ್ತಿಯ ವಿರುದ್ಧ ಆರೋಪ ಸಾಬೀತಾದ ಪಕ್ಷದಲ್ಲಿ ಅವರ ವಿರುದ್ಧ ನಾವು ಅಸಹಕಾರ ತೋರಬಹುದು. ಅದಲ್ಲದೆ, ದರ್ಶನ್ ಅವರನ್ನ ನಂಬಿಕೊಂಡು ಕೋಟ್ಯಂತರ ಅಭಿಮಾನಿಗಳಿದ್ದಾರೆ. ನಿರ್ಮಾಪಕರು ಅವರ ಮೇಲೆ ಹಣ ಹಾಕಿದ್ದಾರೆ. ಅವರ ಬಗ್ಗೆಯೂ ನಾವು ಯೋಚನೆ ಮಾಡಬೇಕು. ಆ ಸಿನಿಮಾಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ನೂರು ಜನ ಅಪರಾಧಿಗಳಿಗೆ ಶಿಕ್ಷೆ ಆಗದೇ ಇದ್ರೂ ಪರವಾಗಿಲ್ಲ ಆದರೆ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬೇಕು ಅಂತಾ ನಮ್ಮ ಕಾನೂನೇ ಹೇಳುತ್ತೆ. ಎಲ್ಲಾ ಹಿರಿಯರ ಅಭಿಪ್ರಾಯ ಕೇಳಲಿದ್ದೇವೆ. ಮುಂದೆ ನಾವು ಏನು ತೀರ್ಮಾನ ತೆಗೆದುಕೊಳ್ಳಬೇಕು ಅನ್ನೋದರ ಬಗ್ಗೆ ಮಾತ್ರವೇ ಫಿಲ್ಮ್ ಚೇಂಬರ್‌ನಲ್ಲಿ ಚರ್ಚೆ ಆಗಲಿದೆ ಎಂದು ಉಮೇಶ್ ಬಣಕಾರ್ ತಿಳಿಸಿದ್ದಾರೆ.
ಆಗಿರುವ ಘಟನೆಗಳನ್ನ ಅವಲೋಕನ ಮಾಡ್ತೇವೆ. ಕಾನೂನು ತಜ್ಞರ ಜೊತೆಗೂ ಈ ಬಗ್ಗೆ ಚರ್ಚೆ ಮಾಡ್ತೇವೆ. ನಮ್ಮ ಸಂಘಕ್ಕೆ ಸಾಮಾಜಿಕ ಬದ್ಧತೆ ಇದೆ. ಕಾವೇರಿ ಗಲಾಟೆ, ಮಹದಾಯಿ ಗಲಾಟೆಯಿಂದ ಹಿಡಿದು ಎಲ್ಲಾ ವಿಚಾರದಲ್ಲೂ ನಾವು ಸಾಮಾಜಿಕ ಬದ್ಧತೆ ತೋರಿದ್ದೇವೆ ಎಂದು ತಿಳಿಸಿದ್ದಾರೆ.
'ಹೆಂಡ್ತಿಗೆ ಹೊಡೆದ್ರೂ ಜೈ, ಕೊಲೆ ಮಾಡಿದ್ರೂ ಸೈ..' ದರ್ಶನ್ ಫ್ಯಾನ್ಸ್‌ಗೆ ಬುದ್ದಿ ಹೇಳೋರು ಯಾರು?
ಮುಂದೆ ನಾವು ಏನು ಮಾಡಬೇಕು ಅನ್ನೋದರ ಬಗ್ಗೆ ಮಾತ್ರವೇ ಚರ್ಚೆ ಆಗುತ್ತದೆ. ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುವುದು ನಮ್ಮ ಧರ್ಮ ಅದನ್ನು ಮಾಡಲಿದ್ದೇವೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಖಂಡಿತವಾಗಿ ಶಿಕ್ಷೆ ಆಗುತ್ತದೆ. ಈಗಾಗಲೇ ದರ್ಶನ್ ಅವರ ಡೆವಿಲ್ ಫಿಲ್ಮ್‌ಗೆ ಕೋಟ್ಯಂತರ ರೂಪಾಯಿ ಬಂಡವಾಳ ಹಾಕಲಾಗಿದೆ. ಏಕಾಏಕಿ ನಾವೇ ಒಂದು ತೀರ್ಮಾನ ಮಾಡಿಕೊಳ್ಳೋಕೆ ಸಾಧ್ಯವಿಲ್ಲ. ಎಲ್ಲವನ್ನೂ ಯೋಚನೆ ಮಾಡಿ ನಿರ್ಧಾರ ಮಾಡಬೇಕಾಗುತ್ತದೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್‌ಎಂ ಸುರೇಶ್ ಹೇಳಿದ್ದಾರೆ. ಇನ್ನೊಂದೆಡೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅವರ ವಿಚಾರಣೆ ಇನ್ನಷ್ಟು ತೀವ್ರವಾಗಿ ನಡೆಯುತ್ತಿದೆ. ಅದರ ನಡುವೆ ದರ್ಶನ್ ಕುರಿತಾಗಿ ಒಂದೊಂದೇ ವಿಚಾರಗಳು ಹೊರಬೀಳುತ್ತಿದೆ.
Darshan Arrest: ಜಡ್ಜ್ ಮುಂದೆ ಕಣ್ಣೀರಿಟ್ಟ ದರ್ಶನ್, ಪವಿತ್ರಾ ಗೌಡ!