ಇರುವ ದಡದಲ್ಲೇ ಸಂತೋಷವಾಗಿರಲು ನಾವೇಕೆ ಯತ್ನಿಸುವುದಿಲ್ಲ?
ಈ ವರ್ಷ ನಿಮ್ಮ ಮನೆಯಲ್ಲಿ ಮನದಲ್ಲಿ ಸಂತಸ ಖುಷಿ ತುಂಬಿ ತುಳುಕಬೇಕಿದ್ದರೆ, ನಿಮ್ಮ ಖುಷಿಗಾಗಿ ಇನ್ನೊಬ್ಬರನ್ನು ಅವಲಂಬಿಸಬೇಡಿ. ಸುಮ್ಮನೇ ಭಾರ ಹೊತ್ತು ಅಲೆಯಬೇಡಿ. ಈ ಮೂರು ಜೆನ್ ಕತೆಗಳು ನಿಮಗೆ ಈ ಸೂತ್ರ ತಿಳಿಸಿಕೊಡುತ್ತವೆ.
ಕಳೆದ ವರ್ಷ ನೆಮ್ಮದಿಯಿಲ್ಲದ ದಿನಗಳನ್ನು ವರ್ಷಪೂರ್ತಿ ಕಂಡಿದ್ದೇವೆ. ಈ ವರ್ಷವಾದರೂ ಹ್ಯಾಪ್ಪಿಯಾಗಿರೋಣ. ನೆಮ್ಮದಿ ಬದುಕಲ್ಲಿ ತುಂಬಲಿ. ಅದಕ್ಕೆ ಒಂದೇ ಸೂತ್ರ- ಪ್ರಯತ್ನಪೂರ್ವಕವಾಗಿ ಖುಷಿಯಾಗೇ ಇರೋದು.
ಕೆಲವೊಮ್ಮೆ ನಮ್ಮ ಸೈಕಾಲಜಿ ನಮಗರಿವಿಲ್ಲದೆ ನಮ್ಮನ್ನು ವಂಚಿಸುತ್ತಾ ಇರುತ್ತದೆ. ಹಾಗೇ ನಮ್ಮನ್ನು ಹ್ಯಾಪ್ಪಿಯಾಗೂ ಇಡುತ್ತದೆ. ವರ್ಷದ ಆರಂಭದ ದಿನ ಹ್ಯಾಪ್ಪಿಯಾಗಿ ಇದ್ದರೆ, ವರ್ಷವಿಡೀ ಅದರ ಕಂಪನಗಳು ಪ್ರತಿಫಲಿಸುತ್ತಾ ಇರುತ್ತವೆ. ಅದಕ್ಕಾಗಿಯೇ ದಿನಮುಂಚೆ ಹೊತ್ತಾರೆ ಎದ್ದು ಧ್ಯಾನ ಯೋಗ ಮಾಡಿ ದೇಹವನ್ನೂ ಮನಸ್ಸನ್ನೂ ಉಲ್ಲಾಸವಾಗಿ ಇಡೋಕೆ ಎಲ್ಲರೂ ಪ್ರಯತ್ನ ಮಾಡೋದು. ಅದರಿಂದಲೇ ಹ್ಯಾಪಿನೆಸ್ ಕಂಡುಕೊಳ್ಳುವುದಕ್ಕೆ ಪ್ರಯತ್ನಿಸುವುದು. ಕೆಲವು ಜೆನ್ ಕತೆಗಳ ಮೂಲಕ ಆ ಸಂತಸವನ್ನು ಕಂಡುಕೊಳ್ಳುವುದು, ಉಳಿಸಿಕೊಳ್ಳುವುದು ಹೇಗೆ ಅಂತ ಕಲಿಯೋಣ ಬನ್ನಿ.
ಕತೆ ಒಂದು
ಒಬ್ಬ ಝೆನ್ ಯತಿಯ ಶಿಷ್ಯ, ಒಂದು ನದಿಯನ್ನು ದಾಟುವುದಕ್ಕೆ ಪ್ರಯತ್ನ ಮಾಡುತ್ತಾ ಇದ್ದ. ಆಚೆ ದಡದಲ್ಲಿ ಗುರು ನಿಂತಿದ್ದ. ಅವನಿಗೆ ಗುರುವಿನ ಬಳಿ ಹೋಗಬೇಕಿತ್ತು. ಆದರೆ ನದಿಯಲ್ಲಿ ತುಂಬು ಪ್ರವಾಹ. ದಾಟುವುದು ಕಷ್ಟ. ಅವನು ಗುರುವಿಗೆ ಕೂಗಿ ಹೇಳಿದ- 'ಗುರುಗಳೇ, ನಾನು ಆಚೆ ದಡಕ್ಕೆ ಹೇಗೆ ಬರಲಿ?'
ಗುರು ಉತ್ತರಿಸಿದ: ನೀನೀಗ ಆಚೆ ದಡದಲ್ಲೇ ಇದ್ದೀಯ!
ಹೌದಲ್ಲವೇ? ನಾವೆಲ್ಲರೂ ಆಚೆ ದಡದಲ್ಲೇ ಇದ್ದೇವೆ. ಆದರೂ ನದಿಯ ಇನ್ನೊಂದು ದಡವೇ ನಮಗೆ ಹುಲುಸಾಗಿ, ಚೆನ್ನಾಗಿ, ತಂಪಾಗಿ ಕಾಣಿಸುತ್ತದೆ. ಅದನ್ನು ಹೊಂದಲು ಪ್ರಯತ್ನಪಡುತ್ತೇವೆ. ಆದರೆ ನಾವಿರುವಲ್ಲೇ ಖುಷಿಯನ್ನೂ ಸಂತೋಷವನ್ನೂ ಹೊಂದಲು ಪ್ರಯತ್ನಪಡುವುದಿಲ್ಲ. ಆಚೆ ದಡಕ್ಕೆ ದಾಟಿಕೊಳ್ಳಲು ಯತ್ನಿಸುತ್ತೇವೆ. ಇರುವ ದಡದಲ್ಲೇ ಸಂತೋಷವಾಗಿರಲು ನಾವೇಕೆ ಯತ್ನಿಸುವುದಿಲ್ಲ?
ಹೊಸ ವರ್ಷದಲ್ಲಿ ಈ ಐದು ಸೂತ್ರ ಪಾಲಿಸಿ, ಶ್ರೀಮಂತರಾಗಿ! ...
ಕತೆ ಎರಡು
ಮೂವರು ಯತಿಗಳು ಹಾದಿಯಲ್ಲಿ ನಡೆಯುತ್ತಿದ್ದರು. ಅವರ ದಾರಿಗೆ ಒಂದು ನದಿ ಅಡ್ಡ ಬಂತು. ಅಷ್ಟರಲ್ಲಿ ಒಬ್ಬ ಸುಂದರ ತರುಣಿ ಕೂಡ ಅಲ್ಲಿಗೆ ಬಂದಳು. ಆಕೆಯೂ ನದಿಯನ್ನು ದಾಟಬೇಕಿತ್ತು. ಆದರೆ ಅವಳಿಗೆ ಭಯ. ಯತಿಗಳಿಗೆ ಯಾವ ಭಯವೂ ಇರಲಿಲ್ಲ. ಆಕೆಯ ಆತಂಕವನ್ನು ಗಮನಿಸಿದ ಒಬ್ಬ ಯತಿ, ಅನಾಮತ್ತಾಗಿ ಆ ಸುಂದರಿಯನ್ನು ಹೊತ್ತುಕೊಂಡು, ನದಿ ದಾಟಿಸಿದ. ನಂತರ ಆಕೆ ಅವಳ ಹಾದಿಯಲ್ಲಿ ಹೋದಳು. ಯತಿಗಳು ಅವರ ಹಾದಿಯಲ್ಲಿ ಹೊರಟರು. ಇನ್ನುಳಿದ ಇಬ್ಬರು ಯತಿಗಳಿಗೆ ಹಿಂದಿನ ಘಟನೆಯೇ ಮನದಲ್ಲಿ ಕೊರೆಯುತ್ತಿತ್ತು. ಅವರು ಕೇಳಿದರು- 'ಅಲ್ಲಯ್ಯಾ, ನೀನು ಸರ್ವಸಂಗ ಪರಿತ್ಯಾಗಿ, ಸನ್ಯಾಸಿ. ಅಂಥ ಸುಂದರಿಯನ್ನು ಹಾಗೆ ಹೊತ್ತುಕೊಂಡು ಬರಬಹುದೇನಯ್ಯ?'
ಆ ಯತಿ ಉತ್ತರಿಸಿದ, 'ಅರೆ, ನಾನು ಆಗಲೇ ಅವಳನ್ನು ಇಳಿಸಿಬಿಟ್ಟೆ. ನೀವಿನ್ನೂ ಹೊತ್ತುಕೊಂಡಿದ್ದೀರಾ?'
ಎಷ್ಟು ಚೆನ್ನಾಗಿದೆಯಲ್ಲವೇ ಇದರ ನೀತಿ! ನಾವೆಲ್ಲರೂ ಒಂದಲ್ಲ ಒಂದು ಭಾರವನ್ನು ಸದಾ ಹೊತ್ತುಕೊಂಡೇ ಇರುತ್ತೇವೆ. ಅದನ್ನು ಅಲ್ಲಲ್ಲೇ ಇಳಿಸಿಬಿಡಬೇಕು. ನಿತ್ಯದ ಬೇನೆ ಬೇಗುದಿ ತಂಟೆ ತರಲೆ ತಟವಟ ಇತ್ಯಾದಿಗಳು ಇದ್ದದ್ದೇ. ಅದನ್ನು ಅಂದಂದೇ ಇಳಿಸಿ ಮುಂದೆ ಹೋಗುತ್ತಿದ್ದರೆ ಭಾರಗಳು ಹೆಚ್ಚುವುದಿಲ್ಲ. ಎಷ್ಟೆಂದು ಭಾರವನ್ನು ಹೊರುತ್ತೀರಿ! ಕೆಲವೊಮ್ಮೆ ಇನ್ನೊಬ್ಬರ ಬಗ್ಗೆ ನಾವು ಸದಾ ಚಿಂತಿಸುತ್ತಿರುತ್ತೇವೆ. ಆದರೆ ಅವರು ಅವರ ಪಾಡಿಗೆ ಜೀವಿಸುತ್ತಿರುತ್ತಾರೆ. ನಾವು ಅವರ ಬಗ್ಗೆ ಚಿಂತಿಸಿ ತಲೆ ಹಾಳು ಮಾಡಿಕೊಂಡದ್ದಷ್ಟೇ ಲಾಭ!
ಫ್ಯಾಂಟಸಿ ಫ್ಲೈಯಿಂಗ್: ವಿಮಾನವೇರಿ ನಲಿಯೋ ಪರಿ ಇದು! ...
ಕತೆ ಮೂರು
ಚುವಾಂಗ್ ತ್ಸು ಎಂಬ ಜೆನ್ ಗುರು ಒಮ್ಮೆ ಒಂದು ಕೊಳವನ್ನು ನೋಡುತ್ತಾ ಸಂತೋಷದಿಂದ ಇದ್ದ. ಅಲ್ಲಿಗೆ ಮತ್ತೊಬ್ಬ ತರಲೆ ಬಂದ. ಅವರ ಮಾತುಕತೆ ಹೀಗಿತ್ತು.
'ಗುರುಗಳೇ, ಏನು ಮಾಡುತ್ತಿರುವಿರಿ?'
'ನೋಡಲ್ಲಿ, ಮೀನುಗಳು ಎಷ್ಟು ಸಂತೋಷದಿಂದ ಇವೆ! ಅದನ್ನು ನೋಡುತ್ತಿದ್ದೇನೆ.'
'ನೀವು ಮೀನು ಅಲ್ಲವಲ್ಲ? ಅವು ಸಂತೋಷದಿಂದ ಇವೆ ಎಂಬುದು ನಿಮಗೆ ಹೇಗೆ ಗೊತ್ತಾಯಿತು?'
'ನೀನು ನಾನಲ್ಲವಲ್ಲ? ಮೀನು ಸಂತೋಷದಿಂದ ಇದೆ ಎಂಬುದು ನನಗೆ ಗೊತ್ತಾಗಲಾರದು ಎಂದು ನೀನು ಹೇಗೆ ಭಾವಿಸಿದೆ?'
ಕೆಲವರು ಹೀಗಿರುತ್ತಾರೆ. ನೀವು ಸುಮ್ಮನೇ ನಿಮ್ಮಷ್ಟಕ್ಕೆ ಸಂತೋಷದಿಂದ ಇದ್ದರೂ ನಿಮ್ಮ ನೆಮ್ಮದಿಯ ಕೊಳಕ್ಕೆ ಕಲ್ಲು ಎಸೆಯಲು ಕಾಯುತ್ತಿರುತ್ತಾರೆ. ಅವರನ್ನು ಅವರ ಪಾಡಿಗೆ ಬಿಟ್ಟುಬಿಟ್ಟು, ನಿಮ್ಮ ಕೆಲಸದಲ್ಲಿ ನೀವು ತಲ್ಲೀನರಾಗಬೇಕು. ಆಗಲೇ ಮಗ್ನತೆ, ಧ್ಯಾನ, ಖುಷಿ ಸಾಧ್ಯ. ನಿಮ್ಮ ಸಂತಸದ ಕೊಳಕ್ಕೆ ಇನ್ಯಾರೋ ಕಲ್ಲೆಸೆಯಲು ಬಿಡಬೇಡಿ. ಕಲ್ಲೆಸೆದರೂ ಕಂಪಿಸಬೇಡಿ.
ಬಾಬಾ ವಂಗಾ 2021ರ ಬಗ್ಗೆ ನುಡಿದ ಭವಿಷ್ಯವೇನು? ...