ಮನೆಮಂದಿಯೊಟ್ಟಿಗೆ ಕುಳಿತು ಊಟ ಮಾಡಿದ್ರೆ ಟೆನ್ಷನ್ ಮಾಯ!
ನಾವು ಊಟ ಮಾಡೋದು ನಮ್ಮ ಹೊಟ್ಟೆಗಾದ್ರೂ ಎಲ್ಲರ ಜೊತೆಗೂಡಿ ಸೇವಿಸಿದಾಗ ಸಿಗುವ ತೃಪ್ತಿ, ಖುಷಿಯೇ ಬೇರೆ. ಹರಟೆ ಹೊಡೆಯುತ್ತ ಒಂದೊಂದೇ ತುತ್ತು ಹೊಟ್ಟೆಗಿಳಿಸುತ್ತಿದ್ರೆ ತಟ್ಟೆ ಖಾಲಿಯಾಗಿದ್ದೇ ತಿಳಿಯಲ್ಲ. ಆರೋಗ್ಯದ ದೃಷ್ಟಿಯಿಂದಲೂ ಸಹ ಭೋಜನ ಒಳ್ಳೆಯದಂತೆ.
ಹಿಂದೆಲ್ಲ ಕೂಡು ಕುಟುಂಬದಲ್ಲಿ ಮನೆಮಂದಿಯೆಲ್ಲ ಊಟ,ತಿಂಡಿ ಒಟ್ಟಿಗೆ ಕುಳಿತು ಮಾಡುತ್ತಿದ್ದರು.ಅದೆಷ್ಟೇ ಕೆಲಸವಿದ್ದರೂ,ಊಟದ ಸಮಯಕ್ಕೆ ಬಿಡುವು ಮಾಡಿಕೊಳ್ಳುತ್ತಿದ್ದರು. ಊಟದ ಜೊತೆ ಅಲ್ಲೊಂದು ಚೆಂದದ ಮಾತುಕತೆಯೂ ನಡೆಯುತ್ತಿತ್ತು. ಕುಟುಂಬ ಸದಸ್ಯರ ನಡುವೆ ಅದೆಷ್ಟೇ ಕೋಪ-ತಾಪಗಳಿದ್ದರೂ ಊಟದ ಸಮಯದಲ್ಲಿ ಅದು ಕರಗಿ ಶಾಂತವಾಗುತ್ತಿತ್ತು. ಅಷ್ಟೇ ಅಲ್ಲ,ಅಲ್ಲೊಂದು ಆತ್ಮೀಯ ಮಾತುಕತೆ, ನಗು ಎಲ್ಲವೂ ಇರುತ್ತಿತ್ತು. ಇಂದು ಕುಟುಂಬಗಳು ವಿಭಕ್ತಗೊಂಡಿವೆ. ಕುಟುಂಬದ ಗಾತ್ರ ಮಾತ್ರ ಚಿಕ್ಕದಾಗಿಲ್ಲ,ಬಾಂಧವ್ಯದ ಬೆಸುಗೆ ಕೂಡ ಸಡಿಲಗೊಂಡಿದೆ ಎಂದೇ ಹೇಳಬಹುದು. ಆಧುನಿಕ ಜೀವನಶೈಲಿ ನಮ್ಮನ್ನು ಎಷ್ಟು ಬ್ಯುಸಿ ಆಗಿಸಿದೆಯೆಂದ್ರೆ ಮನೆಯಲ್ಲಿ ಪತಿ-ಪತ್ನಿ ಕೂಡ ಒಟ್ಟಿಗೆ ಕುಳಿತು ಊಟ ಮಾಡಲಾಗದಷ್ಟು! ಆದ್ರೆ ಲಾಕ್‍ಡೌನ್‍ನಿಂದಾಗಿ ವೇಗವಾಗಿ ಓಡುತ್ತಿದ್ದ ಬದುಕಿಗೆ ಲಗಾಮು ಬಿದ್ದಿದೆ. ವರ್ಕ್ ಫ್ರಂ ಹೋಂ ಜೊತೆ ಅನಗತ್ಯವಾಗಿ ಹೊರ ಹೋಗಲು ಸಾಧ್ಯವಿಲ್ಲದ ಕಾರಣ ಎಲ್ಲರಿಗೂ ಮನೆಯೇ ಮಂತ್ರಾಲಯವಾಗಿದೆ. ಕುಟುಂಬ ಸದಸ್ಯರೆಲ್ಲ ಜೊತೆಯಾಗಿ ಕಾಲ ಕಳೆಯಲು ಅವಕಾಶ ಸಿಕ್ಕಿದೆ. ಊಟ-ತಿಂಡಿಯಲ್ಲೂ ಎಲ್ಲರೂ ಒಂದುಗೂಡಿದ್ರಿಂದ ಅವರ ನಡುವಿನ ಸಂವಹನ ಹೆಚ್ಚಿ ಬಾಂಧವ್ಯದ ಬೆಸುಗೆ ಗಟ್ಟಿಕೊಂಡಿದೆ. ಕುಟುಂಬ ಸದಸ್ಯರು ಊಟ-ತಿಂಡಿಯನ್ನು ಜೊತೆಯಾಗಿ ಮಾಡೋದ್ರಿಂದ ಅವರ ನಡುವಿನ ಸಂವಹನ ಉತ್ತಮಗೊಳ್ಳುವ ಜೊತೆಗೆ ಬಾಂಧವ್ಯ ಹೆಚ್ಚುತ್ತದೆ ಎಂದು ಇತ್ತೀಚೆಗೆ ನಡೆದ ಅಧ್ಯಯನ ಕೂಡ ಹೇಳಿದೆ.
ಸಂಬಂಧ ಹಳಿ ತಪ್ಪುತ್ತಿದ್ದಾಗ ಎಚ್ಚರಿಸುವ ರೆಡ್ ಫ್ಲ್ಯಾಗ್‌ಗಳು
ಮಗು ದಪ್ಪಗಿದ್ರೆ, ಪೋಷಕರಿಗೆ ತೂಕದ್ದೇ ಚಿಂತೆ!
ಜರ್ನಲ್ ಆಫ್ ನ್ಯುಟ್ರಿಷನ್ ಎಜುಕೇಷನ್ ಆಂಡ್ ಬಿಹೇವಿಯರ್‍ನಲ್ಲಿ ಪ್ರಕಟವಾದ ಅಧ್ಯಯನವೊಂದು ಹೇಳುವ ಪ್ರಕಾರ ತಮ್ಮ ಮಗು ದಪ್ಪಗಿದೆ ಎಂಬ ಭಾವನೆ ಹೊಂದಿರುವ ಪೋಷಕರು ಊಟದ ಸಮಯದಲ್ಲಿ ಕನಿಷ್ಠ ನಾಲ್ಕು ಬಾರಿಯಾದ್ರೂ ತೂಕದ ಕುರಿತು ಮಾತನಾಡುತ್ತಾರೆ. ತೂಕ ತಗ್ಗಿಸಿಕೊಳ್ಳುವ ಅಥವಾ ಹೆಚ್ಚಿಸದ ಆಹಾರಗಳ ಬಗ್ಗೆ ಡೈನಿಂಗ್ ಟೇಬಲ್‍ನಲ್ಲಿ ಮುಕ್ತವಾಗಿ, ಆರೋಗ್ಯಕರ ಚರ್ಚೆ ನಡೆಸುತ್ತಾರೆ. ಆದ್ರೆ ಮಕ್ಕಳ ತೂಕ ಇಳಿಸಬೇಕು ಎಂಬ ಕಾರಣಕ್ಕೆ ಅವರಿಗೆ ಅಗತ್ಯವಿರುವಷ್ಟು ಆಹಾರ ಸೇವಿಸಲು ಯಾವುದೇ ತಡೆ ಹಾಕಬೇಡಿ. ಅವರ ಶರೀರಕ್ಕೆ ಅಗತ್ಯವಿರುವಷ್ಟು ಪೌಷ್ಟಿಕಾಂಶ ಸಿಗುವಂತೆ ಎಚ್ಚರ ವಹಿಸೋದು ಕೂಡ ಅಗತ್ಯ.
ಹೆಣ್ಣು ಮಗುವಿರುವ ಮನೆಯಲ್ಲಿ ಒಟ್ಟಿಗೆ ಊಟ ಮಾಡ್ತಾರಂತೆ!
ಈ ಅಧ್ಯಯನದಲ್ಲಿ ಪತ್ತೆಯಾದ ಇನ್ನೊಂದು ಅಚ್ಚರಿಯ ವಿಷಯವೆಂದ್ರೆ ಹೆಣ್ಣು ಮಗುವಿರುವ ಕುಟುಂಬದ ಸದಸ್ಯರು ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಅಷ್ಟೇ ಅಲ್ಲ, ಇವರು ಟಿವಿ ಮುಂದೆ ಕುಳಿತು ಊಟ ಮಾಡೋದು ಕೂಡ ಕಡಿಮೆ. ಪುಟ್ಟ ಮಕ್ಕಳಿರುವ ಮನೆಯಲ್ಲಂತೂ ಹೆಚ್ಚಾಗಿ ಎಲ್ಲರೂ ಊಟ, ತಿಂಡಿಯನ್ನು ಜೊತೆಯಾಗಿ ಮಾಡುತ್ತಾರಂತೆ.
ಒಟ್ಟಿಗೆ ಕೂತ್ರು ಮಾತಿಲ್ಲ, ಕತೆಯಿಲ್ಲ
ಕೆಲವು ಮನೆಗಳಲ್ಲಿ ಕುಟುಂಬ ಸದಸ್ಯರೆಲ್ಲ ಒಟ್ಟಿಗೆ ಕುಳಿತೇ ಊಟ ಮಾಡುತ್ತಾರೆ. ಆದ್ರೆ ಎಲ್ಲರೂ ಟಿವಿ ಇಲ್ಲವೆ ಮೊಬೈಲ್‍ನಲ್ಲೇ ಮುಳುಗಿರುವ ಕಾರಣ ಏನು ತಿನ್ನುತ್ತಿದ್ದೇವೆ ಎಂಬುದರ ಅರಿವೇ ಇಲ್ಲದಿರುವಾಗ ಸುತ್ತ ಕುಳಿತವರ ಪರಿವಿರೋದಾದ್ರು ಹೇಗೆ? ಇಂಥ ಅಭ್ಯಾಸ ಆರೋಗ್ಯಕ್ಕೂ ಒಳ್ಳೆಯದ್ದಲ್ಲ, ಸಂಬಂಧಕ್ಕೂ ಹಿತವಲ್ಲ.
ಗಂಡ-ಹೆಂಡ್ತಿ ಜಗಳವಾಡಬಾರ್ದು ಅಂದ್ರೆ ಏನ್ ಮಾಡ್ಬೇಕು ಗೊತ್ತಾ?
ಒತ್ತಡ ತಗ್ಗುತ್ತೆ
ಮನೆಯವರೆಲ್ಲ ಒಟ್ಟಿಗೆ ಕುಳಿತು ಊಟ ಮಾಡೋದ್ರಿಂದ ಅಲ್ಲಿ ಹರಟೆ, ಹಾಸ್ಯ, ನಗು ಎಲ್ಲವೂ ಇರುತ್ತೆ. ಇದ್ರಿಂದ ಮನಸ್ಸಿನ ಒತ್ತಡ ತಗ್ಗಿ ಹಗುರವಾಗುತ್ತೆ. 2008ರಲ್ಲಿ ಬ್ರಿಗಾಮ್ ಯಂಗ್ ಯುನಿವರ್ಸಿಟಿ ಸಂಶೋಧಕರು ಐಬಿಎಂ ಉದ್ಯೋಗಿಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ ಉದ್ಯೋಗಸ್ಥ ಮಹಿಳೆಯರಿಗೆ ಕೆಲಸಕ್ಕೆ ಸಂಬಂಧಿಸಿ ಅದೆಷ್ಟೇ ಒತ್ತಡಗಳಿದ್ದರೂ ರಾತ್ರಿ ಮನೆಯವರ ಜೊತೆಗೂಡಿ ಊಟ ಮಾಡಿದಾಗ ತಗ್ಗುತ್ತದೆಯಂತೆ.
ಊಟ ರುಚಿಸುತ್ತೆ
ಮನೆಯ ಎಲ್ಲ ಸದಸ್ಯರ ಜೊತೆ ಊಟ ಮಾಡುವಾಗ ಮಕ್ಕಳು ಕೂಡ ಖುಷಿಯಿಂದ ತಿನ್ನುತ್ತಾರೆ. ದೊಡ್ಡವರು ತಿನ್ನುವ ಆಹಾರಗಳನ್ನೇ ಹೊಟ್ಟೆ ತುಂಬಾ ಸೇವಿಸುತ್ತಾರೆ. 2000ರಲ್ಲಿ ನಡೆದ ಸಮೀಕ್ಷೆಯೊಂದರಲ್ಲಿ ಕುಟುಂಬದವರ ಜೊತೆ ಊಟ ಮಾಡುವಾಗ 9-14 ವಯಸ್ಸಿನ ಮಕ್ಕಳು ತರಕಾರಿ ಹಾಗೂ ಹಣ್ಣುಗಳಂತಹ ಆರೋಗ್ಯಕರ ಆಹಾರಗಳನ್ನು ಹೆಚ್ಚಾಗಿ ಸೇವಿಸಿರೋದು ಕಂಡುಬಂದಿದೆ.