ಲಾಕ್‌ಡೌನ್ ತೆರವಾಗುತ್ತಿದ್ದಂತೆ ಹೆಚ್ಚಾಗಲಿದೆಯಾ ಕೊಲೆ ಸುಲಿಗೆ ?

ಲಾಕ್‌ಡೌನ್ ಸ್ವಲ್ಪ ಸಡಿಲ ಆಗುತ್ತಿದ್ದಂತೆ ಬರುತ್ತಿರುವ ಅಪರಾಧ ಸುದ್ದಿಗಳು. ಇಂಥ ಹಲವು ಸುದ್ದಿಗಳು ಸುದ್ದಿಮನೆಯನ್ನು ಪ್ರವೇಶಿಸುತ್ತಿವೆ; ಇಷ್ಟರವರೆಗೆ ಸುಮ್ಮನಿದ್ದ ಪೊಲೀಸರ ಕಡತಗಳು ಇಂಥ ಅಪರಾಧಗಳನ್ನು ಎಂಟ್ರಿ ಮಾಡಿಕೊಳ್ಳಲು ಆರಂಭಿಸಿವೆ.

has crime rate increased in India after lockdown relaxation

ಬ್ಯಾಟರಾಯನಪುರದ ಅಶೋಕ್‌ ಅಲಿಯಾಸ್‌ ದಡಿಯಾ ಎಂಬ ರೌಡಿಶೀಟರ್ ಗುರುವಾರ ರಾತ್ರಿ ಕುಡಿದು ಮಲಗಿದ್ದ. ಅವನ ಗೆಳೆಯರೇ ಸೇರಿಕೊಂಡು ಕೊಚ್ಚಿ ಕೊಲೆ ಮಾಡಿದ್ದಾರೆ. ಅವರೂ ಕುಡಿದ ಮತ್ತಿನಲ್ಲಿದ್ದರು. ಮೂರು ದಿನಗಳ ಹಿಂದೆ ಇನ್ನೊಂದು ಕೊಲೆಯಾಗಿತ್ತು. ಅದು ಮದ್ಯದಂಗಡಿಗಳು ಓಪನ್‌ ಆದ ಹೊತ್ತಿನಲ್ಲಿ, ಕೆಲವು ಸ್ನೇಹಿತರು ಸೇರಿಕೊಂಡು ಪಾರ್ಟಿ ಮಾಡಿದ್ದರು. ಎಣ್ಣೆ ಏಟು ಜೋರಾಗಿ, ಜಗಳ ಆರಂಭವಾಗಿ, ಮೂವರು ಸೇರಿಕೊಂಡು  ಸತೀಶ್‌ ಎಂಬ ಸ್ನೇಹಿತನನ್ನು ಹೊಡೆದು ಕೊಂದಿದ್ದರು. ಇದರಿಂದ ರೊಚ್ಚಿಗೆದ್ದ ಸತೀಶನ ಸ್ನೇಹಿತರು ಸೇರಿಕೊಂಡು, ಸತೀಶನ ಕೊಲೆ ಮಾಡಿದ ಕಿರಣ್ ಎಂಬಾತನ ಸಹೋದರ ಅಭಿಷೇಕ್‌ ಎಂಬಾತನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. 

ಇವು ಲಾಕ್‌ಡೌನ್ ಸ್ವಲ್ಪ ಸಡಿಲ ಆಗುತ್ತಿದ್ದಂತೆ ಬರುತ್ತಿರುವ ಸುದ್ದಿಗಳು. ಇಂಥ ಹಲವು ಸುದ್ದಿಗಳು ಸುದ್ದಿಮನೆಯನ್ನು ಪ್ರವೇಶಿಸುತ್ತಿವೆ; ಇಷ್ಟರವರೆಗೆ ಸುಮ್ಮನಿದ್ದ ಪೊಲೀಸರ ಕಡತಗಳು ಇಂಥ ಅಪರಾಧಗಳನ್ನು ಎಂಟ್ರಿ ಮಾಡಿಕೊಳ್ಳಲು ಆರಂಭಿಸಿವೆ. ಕುಡಿದ ಮತ್ತಿನಲ್ಲಿ ಹೊಡೆದಾಟ, ಗಾಯ ಸಾಮಾನ್ಯವಾಗಿ ಯಾವ ಠಾಣೆಯಲ್ಲೂ ದಾಖಲಾಗುವುದಿಲ್ಲ. ಪೊಲೀಸರು ರಾಜಿ ಮಾಡಿಕೊಂಡು ಅಥವಾ ಕಾಸು ಕಿತ್ತುಕೊಂಡು ಕಳಿಸಿಬಿಡುತ್ತಾರೆ. ಅಥವಾ ಇನ್ನೊಂದು ಜಗಳ ಆಡುವವರೆಗೆ ರಾಜಿಯಾಗುತ್ತಾರೆ. ಇಂಥ ಘಟನೆಗಳು ಸಾವಿರ ಸಂಖ್ಯೆಯಲ್ಲಿ ರಾಜಧಾನಿಯಲ್ಲೂ ಇತರ ಕಡೆಯೂ ಸಂಭವಿಸುತ್ತಿರಬಹುದು. ಇವೆಲ್ಲ ಲಿಕ್ಕರ್‌ ಸಿಗಲು ಆರಂಭವಾದ ಬಳಿಕ ದಾಖಲಾಗುತ್ತಿರುವ ಪ್ರಕರಣಗಳು. ಅಂದ್ರೆ ಆಲ್ಕೋಹಾಲ್‌ ಅಪರಾಧಗಳಿಗೆ ಕಾರಣವಾಗ್ತಿದೆಯಾ?

ಮನುಷ್ಯ ಮನೆಯಲ್ಲಿಯೇ ಇದ್ದರೆ ತಪ್ಪೆಲ್ಲವೂ ತೆಪ್ಪಗಾಗುತ್ತದೆ!

ಪತಿಯ ಕೊಂದು, ಕೋವಿಡ್‌ನಿಂದ ಸತ್ತ ಎಂದ ಪತ್ನಿ!
ಇನ್ನೊಂದು ಬಗೆಯ ಅಪರಾಧಗಳನ್ನು ನೋಡಿ- ಇವು ಮನೆಯಲ್ಲಿ ನಡೆಯುತ್ತಿರುವ ಅಪರಾಧಗಳು. ಒಬ್ಬಾಕೆ ಹೆಂಡತಿ, ತನ್ನ ಗಂಡನನ್ನು ಕೊಲೆ ಮಾಡಿ, ಆತ ಕೋವಿಡ್‌ ಕಾಯಿಲೆಯಿಂದ ಸತ್ತ ಎಂದು ಮುಚ್ಚಿಹಾಕಲು ಹೋಗಿ ಸಿಕ್ಕಿಬಿದ್ದಿದ್ದಾಳೆ. ಕೋವಿಡ್‌ನಿಂದ ಉಸಿರುಗಟ್ಟಿ ಸಾಯುವುದಕ್ಕೂ ತಲೆದಿಂಬಿನಿಂದ ಉಸಿರುಗಟ್ಟಿ ಸಾಯಿಸುವುದಕ್ಕೂ ವ್ಯತ್ಯಾಸ ಪೊಲೀಸರಿಗೆ ಗೊತ್ತಾಗದು ಎಂದು ಆಕೆ ಭಾವಿಸಿದಳೇನೋ! ಇನ್ನೊಂದು ಪ್ರಕರಣದಲ್ಲಿ ಒಬ್ಬಾತ ತನ್ನ ಹೆಂಡತಿಯ ಶೀಲ ಶಂಕಿಸಿ ಆಕೆಯನ್ನು ಕೊಂದುಹಾಕಿದ್ದಾನೆ. ಲಾಕ್‌ಡೌನ್‌ ಸಡಿಲ ಆಗುತ್ತಿದ್ದಂತೆ ಆಕೆ ತನ್ನ ಗೆಳೆಯನ ಜೊತೆ ಸರಸ ಪ್ರಕರಣ ಮುಂದುವರಿಸಿದ್ದಾಳೆ ಎಂಬ ಗುಮಾನಿ ಅವನಿಗೆ. ಈ ಗುಮಾನಿ ಅವಳ ಕೊಲೆಯಲ್ಲಿ ಪರ್ಯವಸಾನ ಆಗಿದೆ. ಇದು ಸಾಂಸಾರಿಕ ಜಗತ್ತಿನಲ್ಲಿ ಉಂಟಾಗಿರುವ ತುಮುಲಗಳಿಂದ ಆಗಿರುವ ಕ್ರೈಮ್‌ಗಳು. 

ಇವು ಎರಡು ಬಗೆಯ ಅಪರಾಧಗಳಲ್ಲದೆ ಇನ್ನೊಂದು ಬಗೆಯ ಅಪರಾಧವೂ ರಾಜಧಾನಿಯಲ್ಲಿ ಅಲ್ಲಲ್ಲಿ ಕಂಡುಬರುತ್ತಿದೆ. ಇತ್ತೀಚೆಗೆ ಕಂಟೇನ್ಮೆಂಟ್‌ ಪ್ರದೇಶದಲ್ಲೇ ಒಂದು ಮನೆಯ ಬಾಗಿಲು ಒಡೆದು ಚಿನ್ನಾಭರಣ ದರೋಡೆ ಮಾಡಲಾಯಿತು. ನಗರದ ಹೊರಾವರಣದಲ್ಲಿ ಒಂಟಿಯಾಗಿ ತೆರಳುತ್ತಿದ್ದ ಒಬ್ಬರನ್ನು ಕೆಲವು ದುಷ್ಕರ್ಮಿಗಳು ಅಡ್ಡಗಟ್ಟಿ ಅವರಲ್ಲಿದ್ದ ಹಣ, ಮೊಬೈಲ್‌ ದೋಚಿದರು. ಲಾಕ್‌ಡೌನ್‌ ಸಮಯದಲ್ಲಿ ಇಂಥ ಅಪರಾಧಗಳು ನಾಪತ್ತೆಯಾಗಿದ್ದವು. ರಾಜಧಾನಿಯಲ್ಲಿ ಕೆಲವು ಕಡೆ ಸರಗಳ್ಳತನ ಪ್ರಕರಣಗಳೂ ವರದಿಯಾಗಿವೆ. ಲಾಕ್‌ಡೌನ್‌ ವೇಳೆ ಸರಗಳ್ಳರೂ ಮನೆಯಿಂದ ಹೊರಬಿದ್ದಿರಲಿಲ್ಲ. ಯಾಕೆಂದರೆ ಬೀದಿಯಲ್ಲಿ ಮಹಿಳೆಯರೇ ಓಡಾಡುತ್ತಿರಲಿಲ್ಲವಲ್ಲ.

ತನ್ನ ಬಟ್ಟೆ ಒಗೆಯದ್ದಕ್ಕೆ ನಾದಿನಿಯನ್ನು ಕೊಚ್ಚಿ ಕೊಲೆ ಮಾಡಿದ ಭಾವ 

ಈ ಹೊಸ ಬಗೆಯ ಅಪರಾಧಗಳು ಬಗ್ಗೆ ಹೆಚ್ಚಿನ ನಿಗಾ ಇಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಮನೋವೈದ್ಯರು, ಸಾಮಾಜಿಕ ತಜ್ಞರು ಕೂಡ ಇಂಥ ಹೊಸ ಬಗೆಯ ಅಪರಾಧಗಳು ಹೆಚ್ಚಬಹುದು ಅಂತ ಹೇಳ್ತಿದ್ದಾರೆ. ಅದ್ಯಾಕೆ? ಲಾಕ್‌ಡೌನ್‌ನಿಂದಾಗಿ ಕೂಲಿ ಕೆಲಸ, ಕಟ್ಟಡ ನಿರ್ಮಾಣ ಕೆಲಸ, ಇನ್ನಿತರ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಎಷ್ಟೋ ಮಂದಿ ಬಿಹಾರ, ಉತ್ತರ ಪ್ರದೇಶ ಮುಂತಾದ ಕಡೆಯ ಯುವಕರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಇವರಿಗೆಲ್ಲ ಪುನಃ ಕೆಲಸ ಸಿಗುವುದೇ ಅನುಮಾನ. ಲಾಕ್‌ಡೌನ್‌ ಇದ್ದಷ್ಟು ಕಾಲ ಅವರಿವರು ನೀಡುವ ಒಂದು ಹೊತ್ತಿನ ಊಟ ಸಿಗಬಹುದು. ಆದರೆ ಮದ್ಯಕ್ಕೆ ಕಾಸು ಸಿಗಲಾರದು. ಲಾಕ್‌ಡೌನ್‌ ನಂತರವೂ ಸದ್ಯಕ್ಕೆ ಕಟ್ಟಡ ನಿರ್ಮಾಣ ದೊಡ್ಡ ಪ್ರಮಾಣದಲ್ಲಿ ಗರಿಗೆದರುವ ಸಾಧ್ಯತೆ ಇಲ್ಲ. ಊರಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇವರಲ್ಲಿ ಕೆಲವರಾದರೂ ಗುಂಪು ಕಟ್ಟಿಕೊಂಡು ಇಂಥ ಅಪರಾಧಗಳಿಗೆ ಇಳಿಯುವ ಸಾಧ್ಯತೆ ಇದೆ. ಹಸಿದು ಸಾಯುವುದಕ್ಕಿಂತಲೂ ಇನ್ನೊಬ್ಬರ ತಲೆ ಒಡೆದು ಹಣ ಗಳಿಸುವುದು ಹೆಚ್ಚುಆಕರ್ಷಕ. ಸಿಕ್ಕಿಬಿದ್ದರೂ ಪರಪ್ಪನ ಅಗ್ರಹಾರದಲ್ಲಿ ಆರಾಮಾಗಿ ಮುದ್ದೆ ಸವಿಯುತ್ತ ಕಾಲ ಕಳೆಯಬಹುದು; ಹೊರತಾಗಿ ಕಷ್ಟಪಟ್ಟು ದುಡಿದು ಉಣ್ಣುವ ಅಗತ್ಯವೂ ಇಲ್ಲ. ಹೀಗಾಗಿ ಅಪರಾಧಗಳು ಹೆಚ್ಚಾಗಬಹುದು ಎನ್ನುತ್ತಾರೆ ತಜ್ಞರು. 

ಸೈಬರ್‌ ಕಳ್ಳರ ಹಾವಳಿ: ಮೋಸ ಹೋಗೋ ಮುನ್ನ ಇರಲಿ ಎಚ್ಚರ, ಭಾರತೀಯ ಸೇನೆಯ ಹೆಸರಲ್ಲಿ ವಂಚನೆ..! 

ಹೀಗಾಗಿ ನಾವು ನೀವು ಎಚ್ಚರವಾಗಿರುವುದು ಅಗತ್ಯ. ಮದ್ಯದ ಅಮಲು, ಉದ್ಯೋಗನಷ್ಟ, ಖಾಲಿ ಹೊಟ್ಟೆ ಇತ್ಯಾದಿಗಳು ಮುಂದಿನ ದಿನಗಳಲ್ಲಿ ಅನಾಹುತ ಸೃಷ್ಟಿಸಲಿವೆ. ನಿಮ್ಮ ಸುರಕ್ಷತೆ ನಿಮ್ಮ ಕೈಲಿರಲಿ. 

Latest Videos
Follow Us:
Download App:
  • android
  • ios