Asianet Suvarna News Asianet Suvarna News

Swami Vivekananda 159th Birthday: ಸ್ವಾಮಿ ವಿವೇಕಾನಂದರಿಂದ ಯುವಜನ ಕಲಿಯಬೇಕಾದ 10 ಜೀವನ ಪಾಠಗಳು

ವಿಶ್ವವಿಜೇತ, ವೀರಸನ್ಯಾಸಿ, ಸ್ವಾಮಿ ವಿವೇಕಾನಂದರು ಜನಿಸಿ ಇಂದಿಗೆ 159 ವರ್ಷಗಳು ತುಂಬಿವೆ. ಅವರ ಬದುಕು, ಬೋಧನೆಯಿಂದ ಇಂದಿನ ಯುವಜನತೆ ಕಲಿಯಬೇಕಾದ ಪಾಠಗಳೇನು? ಇಲ್ಲಿವೆ.
 

10 Life Tips youth should learn from Swami Vivekananda
Author
Bengaluru, First Published Jan 12, 2022, 11:46 AM IST
  • Facebook
  • Twitter
  • Whatsapp

1. ಪರೀಕ್ಷಿಸದೇ ನಂಬಬೇಡಿ
ಸ್ವಾಮಿ ವಿವೇಕಾನಂದರು ಶ್ರೀ ರಾಮಕೃಷ್ಣ ಪರಮಹಂಸರಲ್ಲಿ ಶಿಷ್ಯತ್ವ ಸ್ವೀಕರಿಸಿದ ಬಳಿಕ, ಅವರನ್ನೂ ಪರೀಕ್ಷಿಸಿಯೇ ಅಂಗೀಕರಿಸುತ್ತಾರೆ. ಸನ್ಯಾಸಿಯಾದ ಪರಮಹಂಸರು ಹಣದ ಮೋಹ ಕಡಿದುಕೊಂಡಿದ್ದಾರೆಯೇ ಇಲ್ಲವೇ ಎಂದು ಪರೀಕ್ಷಿಸಲು ಅವರ ಹಾಸಿಗೆಯ ಕೆಳಗೆ ಒಂದು ನಾಣ್ಯವನ್ನಿಡುತ್ತಾರೆ. ರಾಮಕೃಷ್ಣರು ಅಲ್ಲಿಗೆ ಬಂದು ಕೂರುತ್ತಲೇ ಚೇಳು ಕಡಿದವರಂತೆ ಜಿಗಿದೇಳುತ್ತಾರೆ. ಹೀಗೆ ವಿವೇಕಾನಂದರು ಗುರುವನ್ನೂ ಪರೀಕ್ಷಿಸದೇ ಬಿಡುವುದಿಲ್ಲ.

2. ಹಾಸ್ಯಪ್ರಜ್ಞೆ ಕಳೆದುಕೊಳ್ಳದಿರಿ
 ಒಮ್ಮೆ ರೆಸ್ಟೋರೆಂಟ್ ಒಂದರಲ್ಲಿ ಇವರು ಊಟ ಮಾಡಲು ತೊಡಗಿದಾಗ ಪಕ್ಕದಲ್ಲಿ ಕೂತಿದ್ದ ಬಿಳಿಯನೊಬ್ಬ, "ಎಂಥ ಸಂದರ್ಭದಲ್ಲೂ ಒಂದು ಹಕ್ಕಿ ಒಂದು ಹಂದಿಯ ಜೊತೆ ಕೂತು ಊಟ ಮಾಡುವುದಿಲ್ಲ'' ಎಂದು ಸೊಕ್ಕಿನಿಂದ ಹೇಳುತ್ತಾನೆ. ಆಗ ವಿವೇಕಾನಂದರು, ''ನಿಮಗೆ ಮುಜುಗರವಾದಾಗ ಹೇಳಿ, ನಾನು ಕೂಡಲೇ ಹಾರಿ ಹೋಗುತ್ತೇನೆ,'' ಎಂದು ಹೇಳಿ ವಾತಾವರಣ ತಿಳಿಗೊಳಿಸುತ್ತಾರೆ.

3. ಸಮಯಪ್ರಜ್ಞೆ ಇರಲಿ
ಚಿಕಾಗೋ ಧರ್ಮಸಮ್ಮೇಳನಕ್ಕೆ ಅವರು ಹೋದಾಗ, ಅಲ್ಲಿ ಹಿಂದೂ ಧರ್ಮದ ಭಗವದ್ಗೀತೆಯನ್ನು ಎಲ್ಲ ಧರ್ಮಗ್ರಂಥಗಳ ಕೆಳಗೆ ಇಡಲಾಗಿತ್ತು. ಜೊತೆಗಿದ್ದವರು ಕುಹಕದಿಂದ ಇವರ ಮುಖ ನೋಡಿ ಅದನ್ನು ತೋರಿಸಿದರು. ಆಗ ಸ್ವಾಮೀಜಿ, ''ಅದು ತಳಹದಿ. ತಳಹದಿ ಇಲ್ಲದೇ ಕಟ್ಟಡ ಕಟ್ಟುವುದು ಸಾಧ್ಯವೇ'' ಎಂದು ಪ್ರಶ್ನಸಿದರು. ಇದು ಅವರಿಗಿದ್ದ ಸಮಯಪ್ರಜ್ಞೆ.

4. ದೃಢಸಂಕಲ್ಪಕ್ಕೆ ಜಯವಿದೆ
ಸ್ವಾಮಿ ವಿವೇಕಾನಂದರಿಗೆ ಅಮೆರಿಕಕ್ಕೆ ಹೋಗುವ ಆರ್ಥಿಕ ಬಲ ಇರಲಿಲ್ಲ. ಆದರೆ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಹಿಂದೂ ಧರ್ಮದ ಧ್ವಜ ಎತ್ತಿ ಹಿಡಿಯಲು ಅವರು ದೃಢ ಸಂಕಲ್ಪ ಮಾಡಿದ್ದರು. ಆಗ ಅವರು ಬಡೋದೆಯ ಮಹಾರಾಜರಲ್ಲಿ ಧನಸಹಾಯ ಕೇಳುತ್ತಾರೆ. ಸ್ವಾಮೀಜಿಯ ದೃಢಸಂಕಲ್ಪ ಮೆಚ್ಚಿ ಹಣದ ಸಹಾಯ ಹರಿದುಬರುತ್ತದೆ. ನಿಮ್ಮಲ್ಲಿ ದೃಢಸಂಕಲ್ಪ ಇದ್ದರೆ ನೆರವು ಎಲ್ಲಿಂದಲಾದರೂ ಹರಿದುಬರುತ್ತದೆ.|

5. ಅನಾರೋಗ್ಯ ಅಡೆತಡೆಯಲ್ಲ
ನಿಮ್ಮಲ್ಲಿ ಸಾಧನೆ ಛಲ ಇದ್ದರೆ ಅನಾರೋಗ್ಯ ತಡೆಹಾಕುವುದಿಲ್ಲ ಎಂಬುದಕ್ಕೆ ವಿವೇಕಾನಂದರೇ ನಿದರ್ಶನ. ಅವರಿಗೆ ಹಲವು ಅನಾರೋಗ್ಯ ಸಮಸ್ಯೆಗಳಿದ್ದವು. ಮಧುಮೇಹ ಇತ್ತು. ಆದರೆ ಅದ್ಯಾವುದೂ ಅವರ ಸಾಧನೆಗಳಿಗೆ ತಡೆ ಹಾಕಲೇ ಇಲ್ಲ. ಅತ್ಯಲ್ಪ ವಯಸ್ಸಿನಲ್ಲೇ ಅವರು ವಿಶ್ವದಲ್ಲೇ ಹಿಂದೂಧರ್ಮದ ಕೀರ್ತಿಶಿಖರ ಎತ್ತಿ ಹಿಡಿದರು.

Sunlight In Winter :ಚಳಿಗಾಲದಲ್ಲಿ ಸೂರ್ಯನ ಬಿಸಿಲು ಪಡೆಯುವ ಪ್ರಯೋಜನಗಳೇನು ?

6. ಇರುವುದೊಂದೇ ಜೀವನ
ಸ್ವಾಮೀಜಿ ಬದುಕಿದ್ದು ಕೇವಲ ೩೯ ವರ್ಷ. ಆ ಅತ್ಯಲ್ಪ ಅವಧಿಯಲ್ಲೇ ಅವರು ಮಹತ್ವದ್ದನ್ನು ಸಾಧಿಸಿದರು. ಲೋಕ ತಿರುಗಿದರು. ಸಾವಿರಾರು ಪುಟ ಬರೆದರು. ನೂರಾರು ಕಡೆ ಭಾಷಣ ಮಾಡಿದರು. ಜೊತೆಗೆ ಆಧ್ಯಾತ್ಮದ ಸಾಧನೆಯೂ ನಡೆದೇ ಇತ್ತು. ಚಡಪಡಿಕೆಯಿಲ್ಲದೇ ಎಲ್ಲವನ್ನೂ ಸಾಧಿಸುವ ಸಂಕಲ್ಪಶಕ್ತಿ, ನಿರಾಳತೆ ಅವರಿಗೆ ಸಿದ್ಧಿಸಿತ್ತು.

7. ಹವ್ಯಾಸ ಕೈಬಿಡಬೇಡಿ
ಅನೇಕ ಯುವಕಯುವತಿಯರು ಉದ್ಯೋಗಕ್ಕೆ ಸೇರಿದಮೇಲೆ ತಮ್ಮ ನೆಚ್ಚಿನ ಹವ್ಯಾಸಗಳನ್ನು ಬಿಟ್ಟುಬಿಡುತ್ತಾರೆ. ಆದರೆ ಸ್ವಾಮೀಜಿ ಹಾಗೆ ಮಾಡಲಿಲ್ಲ. ಶಾಸ್ತ್ರೀಯ ಸಂಗೀತ ಅವರ ನೆಚ್ಚಿನ ಹವ್ಯಾಸವಾಗಿತ್ತು. ಅಧ್ಯಾತ್ಮ ಸಾಧನೆ, ಊರೂರು ತಿರುಗುವಿಕೆಗಳ ನಡುವೆಯೂ ಅದನ್ನು ಬಿಡಲಿಲ್ಲ. ನಿತ್ಯ ಬೆಳಗ್ಗೆ ಎದ್ದು ರಿಯಾಜ್ ಮಾಡುತ್ತಿದ್ದರು. ಕಛೇರಿ ನೀಡುವಷ್ಟು ಸಾಧಕರಾಗಿದ್ದರು.

Health Tips: ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದಿಂದ ರಕ್ಷಿಸಿಕೊಳ್ಳಲು ಬ್ಲ್ಯಾಕ್ ಟೀ ಕುಡಿಯಿರಿ

8. ಆತ್ಮವಿಶ್ವಾಸದ ಖನಿ
ಅಮೆರಿಕದಲ್ಲಿ ಒಬ್ಬಾತ ಇವರ ವೇಷಭೂಷಣ ನೋಡಿ "ಅನಾಗರಿಕ'' ಎಂದು ತಿರಸ್ಕರಿಸಿದ. ಆಗ ಸ್ವಾಮೀಜಿ, ''ನಿಮ್ಮ ಪಾಲಿಗೆ ಬಟ್ಟೆಯೇ ವ್ಯಕ್ತಿಯಾಗಿರಬಹುದು. ಆದರೆ ನಮ್ಮಲ್ಲಿ ವ್ಯಕ್ತಿಯನ್ನು ಅಳೆಯುವುದು ಅವನ ಚಾರಿತ್ರ್ಯದಿಂದ, ಬಟ್ಟೆಯಿಂದಲ್ಲ,'' ಎಂದು ತಕ್ಕ ಉತ್ತರ ಕೊಟ್ಟರು. ಇದು ಅವರ ಆತ್ಮವಿಶ್ವಾಸವಾಗಿತ್ತು.

9. ಜನತೆಗಾಗಿ ಮರುಗು
ದೇಶದ ಜನತೆಯ ಹಿತವೇ ಅವರ ಉಸಿರಾಗಿತ್ತು. ಪರಮಹಂಸರಲ್ಲಿಗೆ ಅವರು ಬಂದಾಗ, ''ನನಗೆ ಮೋಕ್ಷ ಬೇಕು'' ಎಂದು ಹಂಬಲಿಸಿದ್ದರು. ಆದರೆ ನಂತರ ರಾಮಕೃಷ್ಣರು ಅವರ ನೋಟವನ್ನು ತಿದ್ದಿದರು. ''ಈ ದೇಶದ ಜನತೆ ದಾರಿದ್ರ್ಯ, ದಾಸ್ಯ, ಮೂಢನಂಬಿಕೆಗಳಿಂದ ಮುಕ್ತರಾಗುವವರೆಗೂ ನನಗೆ ಮೋಕ್ಷ ಬೇಕಿಲ್ಲ'' ಎಂದು ದೃಢಸಂಕಲ್ಪರಾಗಿ ಹೇಳಿದರು.   
10. ದೊಡ್ಡ ಗುರಿಯಿರಲಿ
ಸಣ್ಣ ಉದ್ಯೋಗ, ಕೈಯಲ್ಲಿ ಒಂದಿಷ್ಟು ಹಣ, ಸುಖಿ ಸಂಸಾರ ಇವು ಸ್ವಾಮೀಜಿಯ ಆದ್ಯತೆಗಳಾಗಿರಲೇ ಇಲ್ಲ. ಬಾಲ್ಯದಲ್ಲಿಯೇ ಅವರ ಗುರಿ ದೊಡ್ಡದಾಗಿತ್ತು. ದೇವರನ್ನು ಕಾಣಬೇಕು ಎಂದು ಅವರು ಪರಮಹಂಸರಲ್ಲಿ ಪದೇ ಪದೇ ಕೇಳುತ್ತಿದ್ದರು. ಕಾಳಿಮಾತೆಯಲ್ಲಿ ವರ ಕೇಳುವಂತೆ ಪರಮಹಂಸರ ಹೇಳಿದಾಗಲೂ, ತನಗಾಗಿ ಏನನ್ನಾದರೂ ಕೇಳಬೇಕು ಎಂದು ಅವರಿಗೆ ತೋಚಲೇ ಇಲ್ಲ. ಜಗತ್ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.   

Follow Us:
Download App:
  • android
  • ios