ಪ್ರಶಾಂತ್ ನಾತು ಅಂಕಣ | ಕುರ್ಚಿ ಬಿಟ್ಟು ಸಿದ್ದು ಇಳಿಯಲ್ಲ, ಡಿಕೆಶಿ ಬಿಡೋಲ್ಲ! ಮುಂದೇನು?
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ನಡೆಯುತ್ತಿರುವ ಅಧಿಕಾರದ ಹೋರಾಟದ ಬಗ್ಗೆ ಈ ಲೇಖನವು ವಿಶ್ಲೇಷಿಸುತ್ತದೆ. ಡಿಕೆಶಿ ಅವರಿಗೆ ಗಾಂಧಿ ಕುಟುಂಬದ ಬೆಂಬಲ ಇದ್ದರೆ, ಸಿದ್ದರಾಮಯ್ಯ ಅವರು ಶಾಸಕರ ಬೆಂಬಲದ ಮೇಲೆ ಭರವಸೆ ಇಟ್ಟಿದ್ದಾರೆ. ಈ ಪೈಪೋಟಿ ರಾಜ್ಯ ಕಾಂಗ್ರೆಸ್‌ನ ಭವಿಷ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಲೇಖನವು ಚರ್ಚಿಸುತ್ತದೆ.
ರಾಜಸತ್ತೆ ಇರಲಿ ಅಥವಾ ಪ್ರಜಾಪ್ರಭುತ್ವ ಇರಲಿ, ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಕಾಣುವ ಒಂದು ಸತ್ಯ ಎಂದರೆ- ಒಂದು ಒರೆಯಲ್ಲಿ ಎರಡು ಕತ್ತಿಗಳನ್ನು ಇಟ್ಟುಕೊಂಡು ಪ್ರಭುತ್ವವನ್ನು ಸುಸೂತ್ರವಾಗಿ ಬಹಳ ದಿನ ನಡೆಸಲು ಸಾಧ್ಯವಾಗುವುದಿಲ್ಲ. ಅದು ತಂದೆ-ಮಗ ಇರಲಿ, ಅಣ್ಣ-ತಮ್ಮ ಇರಲಿ, ಮಿತ್ರರು ಇರಲಿ ಅಥವಾ ವೈಚಾರಿಕ ಸಂಗಾತಿಗಳು ಇರಲಿ. ಒಂದು ಕುರ್ಚಿ- ಇಬ್ಬರು ವ್ಯಕ್ತಿಗಳು, ಅದರಲ್ಲಿ ಯಾರು ಕೂರುವುದು ಅನ್ನುವ ಪ್ರಶ್ನೆ ಬಂದಾಗ ಸಂಘರ್ಷ, ತಿಕ್ಕಾಟ, ಬಡಿದಾಟ ನಡೆಯುವುದು ಹೊಸ ವಿಷಯ ಏನಲ್ಲ. ಒಂದೋ ಸಾಮ್ರಾಜ್ಯದ ಹಿರಿಕರು ಈ ಸಂಘರ್ಷ ಪರಿಹಾರಕ್ಕೆ ಸಂಧಾನ ಸೂತ್ರ ತಯಾರು ಮಾಡಬೇಕು. ಮುಖ್ಯವಾಗಿ ಎರಡೂ ಗುಂಪುಗಳು ಇದನ್ನು ಒಪ್ಪಿಕೊಳ್ಳಬೇಕು. ಇಲ್ಲವೇ ಹೇಗೆ ಬೇಕೋ ಹಾಗೆ ಕತ್ತಿ ಇರಿದು ಬಡಿದಾಡಿಕೊಳ್ಳಿ. ಯಾರು ಬಲಶಾಲಿಯೋ ಆತನಿಗೆ ಕುರ್ಚಿ ಎಂದು ಬಿಟ್ಟು ಬಿಡಬೇಕು ಅಷ್ಟೇ. ರಾಜಸತ್ತೆ ಇದ್ದಾಗ ಯುದ್ಧಗಳು ಯಾರು ಬಲಶಾಲಿ ಎಂದು ತೀರ್ಮಾನಿಸಿಬಿಡುತ್ತಿದ್ದವು. ಆದರೆ ಪ್ರಜಾಪ್ರಭುತ್ವದಲ್ಲಿ ಅದೂ ರಾಷ್ಟ್ರೀಯ ಪಾರ್ಟಿಗಳಲ್ಲಿ ಇಬ್ಬರಲ್ಲಿ ಯಾರು ಬಲಶಾಲಿಗಳು ಎಂಬುದು ತೀರ್ಮಾನ ಆಗುವುದು ಮೂರು ಸಂಗತಿಗಳ ಮೇಲೆ. 1. ನಿಮಗೆ ಚುನಾವಣೆ ಗೆಲ್ಲಿಸುವ ಸಾಮರ್ಥ್ಯ ಎಷ್ಟಿದೆ? 2. ನಿಮಗೆ ಚುನಾಯಿತ ಶಾಸಕರಲ್ಲಿ ಎಷ್ಟು ಮಂದಿಯ ಬೆಂಬಲವಿದೆ? 3.ದಿಲ್ಲಿ ನಾಯಕರು ನಿಮ್ಮ ಜೊತೆ ಎಷ್ಟು ನಿಲ್ಲುತ್ತಾರೆ ಎಂಬುದರ ಮೇಲೆ.
ನೀವು 75 ವರ್ಷಗಳ ರಾಜಕಾರಣ ನೋಡಿದರೆ, ಬಹುತೇಕ ಬಾರಿ ಯಾರಿಗೆ ಚುನಾವಣೆ ಗೆಲ್ಲುವ ಸಾಮರ್ಥ್ಯ ಇರುತ್ತದೋ ಅವರಿಗೆ ದಿಲ್ಲಿ ಪ್ರತಿಕೂಲ ಇರುತ್ತದೆ. ಆದರೆ ಯಾರಿಗೆ ದಿಲ್ಲಿ ರೆಡ್ ಕಾರ್ಪೆಟ್ ಹಾಸುತ್ತದೆಯೋ, ಅವರಿಗೆ ಚುನಾವಣೆ ಗೆಲ್ಲಿಸುವ ಶಕ್ತಿ ಕಡಿಮೆ ಇರುತ್ತದೆ. ಅರ್ಥಾತ್ ಹಲ್ಲು ಇದ್ದವನಿಗೆ ಕಡಲೆ ಕಾಯಿ ಸಿಗುವುದಿಲ್ಲ. ಕಡಲೆಕಾಯಿ ಇದ್ದವನಿಗೆ ಹಲ್ಲು ಗಟ್ಟಿ ಇರುವುದಿಲ್ಲ!
ದಿಲ್ಲಿಯಲ್ಲಿ 2023 ಏನಾಗಿತ್ತು?
2023ರಲ್ಲಿ ನಡೆದ ವಿಧಾನಸಭೆ ಚುನಾವಣೆ ಭರ್ಜರಿಯಾಗಿ ಗೆದ್ದಾಗಲೇ ಡಿ.ಕೆ.ಶಿವಕುಮಾರ್ ಅವರಿಗೆ ಮಾಸ್ ಲೀಡರ್ ಆಗಿದ್ದ ಸಿದ್ದರಾಮಯ್ಯ ಅವರನ್ನು ಮೀರಿಸಿ ಕೂಡಲೇ ತನ್ನನ್ನು ದಿಲ್ಲಿಯವರು ಮುಖ್ಯಮಂತ್ರಿ ಮಾಡುವುದಿಲ್ಲ ಅಂತ ಗೊತ್ತಿತ್ತು. ಆದರೆ ಈಗಲೇ ಹಟ ಹಿಡಿದರೆ ಮಾತ್ರ 30 ತಿಂಗಳ ನಂತರ ಕುರ್ಚಿಯಲ್ಲಿ ಕೂರಬಹುದು ಅನ್ನುವ ಲೆಕ್ಕಾಚಾರದಲ್ಲಿ ಮೂಗು ಒತ್ತಿ ಒತ್ತಿ ಹಿಡಿದರು. ನಿರೀಕ್ಷೆಯಂತೆ ಹೈ ಕಮಾಂಡ್ ಬಾಯಿ ತೆರೆಯಿತು. ಡಿಕೆ ಆಪ್ತರು ಹೇಳುವ ಪ್ರಕಾರ, ಹಿಮಾಚಲದಲ್ಲಿದ್ದ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ‘ಫೇಸ್ ಟೈಮ್’ (ಆ್ಯಪಲ್ ಕಂಪನಿಯ ಆ್ಯಪ್)ನಲ್ಲಿ ಮಾತಾಡಿ, 2025ರ ಅಂತ್ಯಕ್ಕೆ ನೀವೇ ಸಿಎಂ ಎನ್ನುವ ಭರವಸೆ ನೀಡಿದ್ದರು. ಅದಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲಾ ಸಾಕ್ಷಿ ಇದ್ದರು. ಆದರೆ ನೀವು ಸಿದ್ದು ಆಪ್ತರನ್ನು ಕೇಳಿ ನೋಡಿ ‘ದಿಲ್ಲಿ ನಾಯಕರು ಸಿದ್ದು ಬಳಿ 30 ತಿಂಗಳ ಅವಧಿ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಮತ್ತು ಅಂತಹ ಒಪ್ಪಂದಕ್ಕೆ ಸಿದ್ದು ಒಪ್ಪಿಗೆ ನೀಡಿಲ್ಲ ಅಂದ ಬಳಿಕ ಒಪ್ಪುವ ಪ್ರಶ್ನೆ ಎಲ್ಲಿ ಬಂತು?’ ಎಂದು ಕೇಳುತ್ತಾರೆ. ಪೇಚು ಇರುವುದೇ ಇಲ್ಲಿ. ಡಿ.ಕೆ.ಶಿವಕುಮಾರ್ ಅವರು ಒಪ್ಪಂದ ಆಗಿದೆ, ಅದರಂತೆ ಈ ವರ್ಷದ ಅಂತ್ಯಕ್ಕೆ ‘ಸಿಂಹಾಸನ ಖಾಲಿ ಕರೋ’ ಅನ್ನುತ್ತಿದ್ದರೆ, ಸಿದ್ದು ಬಣ ಬೇಕಿದ್ದರೆ ಶಾಸಕರ ತಲೆ ಎಣಿಸಿ. ಬಹುಮತ ಇದ್ದರೆ ನೋಡೋಣ ಅನ್ನುವ ರಣತಂತ್ರ ಹೆಣೆಯುತ್ತಿದೆ. ಪವರ್ ಪಾಲಿಟಿಕ್ಸ್‌ನ ಅರ್ಥವೇ ಕುರ್ಚಿ ಮೇಲೆ ಕೂತವರು ಶತಾಯಗತಾಯ ಉಳಿಸಿಕೊಳ್ಳಲು ಪ್ರಯತ್ನ ಮಾಡುವುದು, ಕುರ್ಚಿ ಮೇಲೆ ಕೂರಬೇಕು ಅನ್ನುವವರು ಮೊದಲು ರಮಿಸಿ, ಆಮೇಲೆ ಬೆದರಿಸಿ ಅದು ಆಗದಿದ್ದರೆ ಸ್ವತಃ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಹೇಳಿದಂತೆ ಒದ್ದಾದರೂ ಅಧಿಕಾರ ಗಳಿಸಿಕೊಳ್ಳಬೇಕು. ಸನ್ಯಾಸಿಗಳೇ ಪೀಠಕ್ಕೋಸ್ಕರ ಕಿತ್ತಾಡುವಾಗ ರಾಜಕಾರಣಿಗಳಂತೂ ಸೈ ರೇ ಸೈ ಬಿಡಿ.
ಇದನ್ನೂ ಓದಿ: ಪ್ರಶಾಂತ್ ನಾತು ಅಂಕಣ | ರವಿ ಬಂಧನದಿಂದ ಸರ್ಕಾರ ಸಾಧಿಸಿದ್ದೇನು? ತನಿಖೆಯ ಬದಲು ಅತಿರೇಕ ಬೇಕಿತ್ತಾ?
ಸಿದ್ದು ಕೊಡೋಲ್ಲ ಡಿಕೆಶಿ ಬಿಡೋಲ್ಲ
ಚನ್ನಪಟ್ಟಣ ಉಪಚುನಾವಣೆ ಗೆಲ್ಲುವವರೆಗೆ ಸುಮ್ಮನಿದ್ದ ಡಿ.ಕೆ.ಶಿವಕುಮಾರ್‌ಗೆ ಮುಂದಿನ ತಿಂಗಳೇ ಏನು ಕುರ್ಚಿ ಮೇಲೆ ಕೂರುವ ಉಮೇದಿ ಇಲ್ಲ. ಅವರ ಮನಸ್ಸಿನಲ್ಲಿ ವರ್ಷದ ಅಂತ್ಯದ ಸಮಯ ಸಾರಿಣಿ ಬಗ್ಗೆ ಖಚಿತತೆ ಇರುವಂತಿದೆ. ಆದರೆ ದಿಲ್ಲಿ ವರಿಷ್ಠರು ಮತ್ತು ಶಾಸಕರನ್ನು ಮಾನಸಿಕವಾಗಿ ಸಿದ್ದರಾಮಯ್ಯ ಅವರ ಬದಲಾವಣೆಗೆ ತಯಾರು ಮಾಡುವುದಕ್ಕಾಗಿಯೇ ಶಿವಕುಮಾರ್ ಆಂಗ್ಲವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದು. ಸಿದ್ದು ಬಣವನ್ನು ಉದ್ದೇಶಿಸಿಯೇ ‘ಒದ್ದಾದರೂ ಅಧಿಕಾರ ತೆಗೆದುಕೊಳ್ಳುತ್ತೇನೆ’ ಎಂದು ವಿಧಾನಸಭೆಯಲ್ಲಿ ಹೇಳುವ ಪ್ರಯತ್ನ ಮಾಡಿದ್ದು. ಈ ಹೇಳಿಕೆ ಬರುತ್ತಲೇ ಎದ್ದು ಕೂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಕಿಹೊಳಿ, ಪರಮೇಶ್ವರ್, ಎಂ.ಬಿ.ಪಾಟೀಲ್, ಮಹಾದೇವಪ್ಪ, ಕೆ.ಎನ್. ರಾಜಣ್ಣ... ಹೀಗೆ ಅನೇಕರನ್ನು ನೀವು ಯಾಕೆ ಮುಖ್ಯಮಂತ್ರಿ ಆಗಬಾರದು ಎಂದು ಎಬ್ಬಿಸಿ ಕೂರಿಸಿದ್ದಾರೆ. ಅಷ್ಟೇ ಅಲ್ಲ, ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ತೆಗೆಸಿ ಅನ್ನುವ ಪ್ರಸ್ತಾವನೆಯು ಕೂಡ ಸಿದ್ದು ಬಣದ ರಣ ತಂತ್ರದ ಭಾಗ. ಒಂದು ವೇಳೆ ಡಿಕೆ ಬದಲಾವಣೆಗೆ ಹೈ ಕಮಾಂಡ್ ಅಸ್ತು ಎಂದರೆ, ಮುಖ್ಯಮಂತ್ರಿ ಒಪ್ಪಂದದ ಅವಧಿ ಬಂದಾಗ ಡಿಕೆ ಸ್ವಲ್ಪ ದುರ್ಬಲವಾಗಬಹುದು. ಒಂದು ವೇಳೆ, ಬದಲಾವಣೆ ಆಗದೇ ಇದ್ದರೆ ಪ್ರಬಲ ಡಿಕೆ ಅವರನ್ನು ಸ್ವಲ್ಪ ವಿಚಲಿತರನ್ನಾಗಿ ಮಾಡುವ ಪ್ರಯತ್ನ ಮಾಡುವುದು. ಜಾರಕಿಹೊಳಿ ಮತ್ತು ಪರಮೇಶ್ವರ ಇಬ್ಬರಿಗೂ ಕೂಡ ಪ್ರಬಲ ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ಅವರನ್ನು ಬಿಟ್ಟು ತಮ್ಮನ್ನು ಮುಖ್ಯಮಂತ್ರಿ ಮಾಡುವುದು ಕಷ್ಟವಿದೆ ಎಂದು ಗೊತ್ತಿಲ್ಲದೇ ಇಲ್ಲ. ಆದರೆ ಹೀಗೆ ಸದ್ದು ಮಾಡಿ ಪ್ರತಿ ನಾಯಕ ಆಗುವುದರಿಂದ ನಿರ್ಣಯ ತೆಗೆದುಕೊಳ್ಳುವ ಪ್ರಶ್ನೆ ಬಂದಾಗ ದಿಲ್ಲಿ ನಾಯಕರ ಎದುರು ತಮ್ಮ ಮಹತ್ವ ಮತ್ತು ಪ್ರಸ್ತುತತೆ ಎರಡೂ ಹೆಚ್ಚುತ್ತದೆ ಎನ್ನುವ ಆಲೋಚನೆ ಇದೆ. ಸಿದ್ದು ರಣತಂತ್ರ ಮಾತ್ರ ಒಂದೇ. ಬೀಸುವ ದೊಣ್ಣೆಯಿಂದ ಪಾರಾದರೆ ಆಯುಷ್ಯ ಹೆಚ್ಚು ಅನ್ನುವ ಹಾಗೇ ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಕುರ್ಚಿ ಭಾಗ್ಯ ಅಬಾಧಿತವಾಗಿ ಮುಂದುವರೆಯಬೇಕು. ಅವರಿಗೇನು ಡಿಕೆ ಬೇಡ, ಪರಮೇಶ್ವರ್ ಅಥವಾ ಜಾರಕಿಹೊಳಿ ಬಂದು ಕುಳಿತುಕೊಳ್ಳಲಿ ಎಂದೇನೂ ಅನುಕಂಪ ಇರುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ದಿನ ಒಳ ಜಗಳ ನಡೆಯುತ್ತಿದ್ದರೆ ತನ್ನ ಉಸಾಬರಿಗೆ ಬರುವ ಧೈರ್ಯವನ್ನು ದಿಲ್ಲಿಯವರು ತೋರಿಸುವುದಿಲ್ಲ ಎಂದೇ ಹೊಸ ಹೊಸ ಬೆಳವಣಿಗೆಗಳು ಕಾಣಲು ಸಿಗುತ್ತಿವೆ. ಇದು ಇನ್ನು ಆರಂಭ ಮಾತ್ರ. ಅಂತ್ಯ ಇನ್ನೂ ರಣ ರೋಚಕವಾಗಿರಲಿದೆ ಅನ್ನಿಸುತ್ತಿದೆ.
ಸಿದ್ದು-ಗೆಹಲೋಟ್, ಡಿಕೆಶಿ-ಪೈಲಟ್!
ರಾಜ್ಯದಲ್ಲಿ ಈಗ ನಡೆಯುತ್ತಿರುವಂತೆ ಇಬ್ಬರು ನಾಯಕರ ನಡುವೆ ಪೈಪೋಟಿ, ಜಗಳ, ಕಿತ್ತಾಟ, ರಂಪಾಟ ಕಳೆದ 6 ವರ್ಷದಲ್ಲಿ ಕಾಂಗ್ರೆಸ್‌ನಲ್ಲಿ ಮೂರು ರಾಜ್ಯಗಳಲ್ಲಿ ನಡೆದಿದೆ. 2018ರಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸ್ವತಃ ಪ್ರಿಯಾಂಕಾ ಗಾಂಧಿ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಚಿನ್ ಪೈಲಟ್‌ಗೆ ‘ಈಗ ನೀವು ಅಶೋಕ್ ಗೆಹಲೋಟ್‌ಗೆ ಅಧಿಕಾರ ಬಿಟ್ಟು ಕೊಡಿ. 2023ರ ಚುನಾವಣೆಗೆ ಮುಂಚೆ ನೀವು ಮುಖ್ಯಮಂತ್ರಿ ಆಗಿ’ ಎಂದು ಭರವಸೆ ನೀಡಿದರು. ಆದರೆ ಅಶೋಕ್ ಗೆಹಲೋಟ್ ಅವರಿಗೆ, ಬನ್ನಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಎಂದರು ಕೂಡ ಅವರು ಒಪ್ಪಲಿಲ್ಲ. ಶಾಸಕರು ನನ್ನ ಜೊತೆಗಿದ್ದಾರೆ, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗೆ ಇಳಿಯೋಲ್ಲ ಎಂದು ರಾಹುಲ್ ಮತ್ತು ಪ್ರಿಯಾಂಕಾರಿಗೆ ಕಡ್ಡಿ ಮುರಿದಂತೆ ಗೆಹಲೋಟ್ ಹೇಳಿದರು. ಈ ಜಗಳದ ನಂತರ ರಾಜಸ್ಥಾನದಲ್ಲಿ ಕಾಂಗ್ರೆಸ್ 2023ರಲ್ಲಿ ಹೀನಾಯವಾಗಿ ಸೋತಿತು. ಇನ್ನು ಮಧ್ಯಪ್ರದೇಶದಲ್ಲಿ ಕಮಲನಾಥ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ನಡುವೆ ಜಗಳ ಎದ್ದಾಗ ದಿಲ್ಲಿ ನಾಯಕರೇ ಏನು ಮಾಡಲು ಆಗದೇ ಅಧಿಕಾರವೂ ಹೋಯಿತು, ಪಾರ್ಟಿ ಕೂಡ ಹೋಳಾಯಿತು. ಇನ್ನು ಛತ್ತೀಸ್‌ಗಢದಲ್ಲಿ ಕೂಡ ಅಧಿಕಾರ ಬಂದಾಗ ಭೂಪೇಶ್ ಬಘೇಲ್ ಮತ್ತು ಸಿಂಗದೇವ ನಡುವೆ ಜಗಳ ಆಗಿ, ಒಪ್ಪಂದ ಆಗಿದೆ ಅನ್ನುವ ಗುಸುಗುಸುಗಳ ಮಧ್ಯೆ ಭೂಪೇಶ್ ಯಾವುದೇ ಕಾರಣಕ್ಕೂ ಅಧಿಕಾರದಿಂದ ಕೆಳಗೆ ಇಳಿಯಲು ಒಪ್ಪಲಿಲ್ಲ. ಪರಿಣಾಮ ಸ್ವರೂಪವಾಗಿ ಎಷ್ಟೇ ಗ್ಯಾರಂಟಿ ಕೊಟ್ಟರೂ ಅಧಿಕಾರ ಮರಳಿ ಬರಲಿಲ್ಲ. ಸಿಂಹಾಸನದ ರುಚಿ ಮತ್ತು ಮಹಿಮೆಯೇ ಹಂಗೆ. ಅದರ ಮೇಲೆ ಒಮ್ಮೆ ಕೂತರೆ ಕೆಳಗೆ ಇಳಿಯಲು ಮನಸ್ಸು ಬರುವುದಿಲ್ಲ. ಹಾಗೆಯೇ ಸಿಂಹಾಸನದ ಕನಸು ಬಿದ್ದರೆ, ನನಸು ಆಗುವವರೆಗೆ ಅದು ನಿಮ್ಮನ್ನು ಸುಮ್ಮನೆ ಕೂರಲು ಬಿಡುವುದಿಲ್ಲ. ಅದಕ್ಕೆ ಅಲ್ಲವೇ ಡಿವಿಜಿ ಹೇಳಿದ್ದು ‘ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಕುದಿಯುತಿಹುದಾವಗಂ- ಮಂಕು ತಿಮ್ಮ’ ಎಂದು.
ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ಸಾಧ್ಯವೇ?: ಸಮುದಾಯವರು ಅಧ್ಯಯನ ನಡೆಸಿದರೆ ತಲೆ ಬಿಸಿ ಏರುತ್ತಾ?
ಮುಂದೇನು ಆಗಬಹುದು?
ರಾಜ್ಯ ಕಾಂಗ್ರೆಸ್‌ನ ಭವಿಷ್ಯ ನಿರ್ಧರಿಸುವ ಶಕ್ತಿ ಇರುವುದು 6 ಮಂದಿಗೆ. 1.ಗಾಂಧಿ ಕುಟುಂಬ. 2.ಖರ್ಗೆ ಸಾಹೇಬರು. 3.ಸಿದ್ದರಾಮಯ್ಯ. 4.ಡಿ.ಕೆ. ಶಿವಕುಮಾರ್. 5.ಸತೀಶ್ ಜಾರಕಿಹೊಳಿ. 6.ಡಾ। ಜಿ. ಪರಮೇಶ್ವರ್.
ಇದರಲ್ಲಿ ಗಾಂಧಿ ಕುಟುಂಬ ಡಿ.ಕೆ. ಶಿವಕುಮಾರ್ ಜೊತೆ ನಿಲ್ಲುವ ಸಾಧ್ಯತೆ ಜಾಸ್ತಿ. ಏಕೆಂದರೆ ಸ್ವತಃ ಸೋನಿಯಾರಿಗೆ ತನ್ನ ಸಲುವಾಗಿ ಡಿಕೆಶಿ ತಿಹಾರ್ ಜೈಲಿಗೆ ಹೋಗಿದ್ದರು ಅನ್ನುವ ಅನುಕಂಪವಿದೆ. ಅದರರ್ಥ ಸಿದ್ದು ಅವರನ್ನು ಬೇಸರಗೊಳಿಸಿ ಅವಮಾನ ಮಾಡುತ್ತಾರೆ ಎನ್ನುವುದು ಸಾಧ್ಯ ಇಲ್ಲದ ಮಾತು. ಇನ್ನು ಖರ್ಗೆ ಮತ್ತು ಪರಮೇಶ್ವರ್ ಅವರು ಗಾಂಧೀ ಕುಟುಂಬದ ಮಾತು ಮೀರುವ ಪ್ರಶ್ನೆಯೇ ಇರುವುದಿಲ್ಲ. ಆದರೆ ಯಾವುದೇ ವ್ಯವಸ್ಥೆಯಲ್ಲಿ ತಮ್ಮ ಪ್ರಸ್ತುತತೆ ಇರಲಿ ಎಂದು ಬಯಸುವವರು. ಇನ್ನು ಸಿದ್ದರಾಮಯ್ಯ ಅವರು ಸಂಘರ್ಷಕ್ಕೆ ಇಳಿಯದೆಯೇ, ತನಗೇನೂ ತಕರಾರು ಇಲ್ಲ. ಆದರೆ ಡಿ.ಕೆ. ಶಿವಕುಮಾರ್‌ಗೆ ಶಾಸಕರು ಬೆಂಬಲ ಕೊಡುತ್ತಾರಾ ನೋಡಿ ಎಂದು ಹೇಳುತ್ತಾ ಎಷ್ಟು ದಿನ ಸಾಧ್ಯವೋ ಅಷ್ಟು ದಿನ ದೂಡುವ ಮನಸ್ಥಿತಿಯಲ್ಲಿ ಇದ್ದಾರೆ. ವಯಸ್ಸಿನ ಕಾರಣದಿಂದ 2028ಕ್ಕೆ ತನ್ನ ನಾಯಕತ್ವದಲ್ಲಿ ಚುನಾವಣೆಗೆ ಹೋಗಲು ಆಗುವುದಿಲ್ಲ ಎನ್ನುವುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಇನ್ನು ಡಿ.ಕೆ. ಶಿವಕುಮಾರ್ ಅವರಿಗೆ ಸಿದ್ದುರನ್ನು ಚೆನ್ನಾಗಿ ನೋಡಿಕೊಂಡೇ ಅಧಿಕಾರ ಹತ್ತಿದರೆ ಹಿಂದುಳಿದ ಸಮುದಾಯ ತನ್ನಿಂದ ದೂರ ಹೋಗಲಿಕ್ಕಿಲ್ಲ ಎಂದೇ ತಾಳ್ಮೆಯಿಂದ ಇದ್ದಾರೆ. ಆದರೆ ತನ್ನನ್ನು ಬಿಟ್ಟು ಬೇರೆಯವರನ್ನು ಕೂರಿಸಿದರೆ ಸುಮ್ಮನೆ ಅವಮಾನ ನುಂಗಿ, ಅವಕಾಶ ಬಿಟ್ಟು ಕೊಡುವ ಜಾಯಮಾನದವರಂತೂ ಶಿವಕುಮಾರ ಅಲ್ಲವೇ ಅಲ್ಲ. ಅವರು ಯಾವುದೇ ಹಂತಕ್ಕೂ ಹೋಗಿ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ ಅನ್ನಿಸುತ್ತದೆ. ಇನ್ನು ಸಿದ್ದು ಮತ್ತು ಡಿಕೆಶಿ ಬಿಟ್ಟರೆ ಅತೀ ಹೆಚ್ಚು ಶಾಸಕರ ಬೆಂಬಲ ಇರುವುದು ಸತೀಶ್ ಜಾರಕಿಹೊಳಿ ಅವರಿಗೆ. ಅವರು ಕೂಡ ಯಾವುದೇ ಹಂತಕ್ಕೆ ಹೋಗಿ ಡಿಕೆಶಿ ಮುಖ್ಯಮಂತ್ರಿ ಆಗುವುದನ್ನು ತಡೆಯುವ ತೀರ್ಮಾನ ಮಾಡಿದರೆ ಏನು ಬೇಕಾದರೂ ಆಗಬಹುದು. ಆದರೆ ನೆನಪಿಡಿ. ರಾಜಕಾರಣಿಗಳು ನಮ್ಮ ನಿಮ್ಮ ತರಹ ಹೃದಯದಿಂದ ಜಗಳ ಆಡುವ ಆಸಾಮಿಗಳಲ್ಲ. ಜಾಣ ರಾಜಕಾರಣಿಯ ಮೊದಲ ಗುಣಲಕ್ಷಣವೇ ಮೆದುಳಿನಿಂದ ಅದು ಸ್ವಉದ್ದೇಶ ಪ್ರಾಪ್ತಿಗಾಗಿ ಮಾತ್ರ ಜಗಳ ಆಡುವುದು. ಹೀಗಾಗಿ ಏನು ಬೇಕಾದರೂ ಆಗಬಹುದು. ಈ ನಿರೀಕ್ಷಿತ ಕಿತ್ತಾಟವು ನಿಯಂತ್ರಿತವೋ ಅನಿಯಂತ್ರಿತವೋ ಎನ್ನುವುದು 2028ಕ್ಕೆ ಮುನ್ನುಡಿ ಬರೆಯಬಲ್ಲದು.