ಪ್ರಶಾಂತ್ ನಾತು ಅಂಕಣ | ರವಿ ಬಂಧನದಿಂದ ಸರ್ಕಾರ ಸಾಧಿಸಿದ್ದೇನು? ತನಿಖೆಯ ಬದಲು ಅತಿರೇಕ ಬೇಕಿತ್ತಾ?

ವಿಧಾನ ಪರಿಷತ್ತಿನಲ್ಲಿ ಸಿ.ಟಿ.ರವಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಮಾತಿನ ಚಕಮಕಿ ಮತ್ತು ಪೊಲೀಸರ ನಡವಳಿಕೆ ಪ್ರಶ್ನಾರ್ಹ. ಶಾಸಕರ ಹಕ್ಕುಗಳು ಮತ್ತು ಸದನದ ಘಟನೆಗಳ ಕುರಿತು ಕಾನೂನಿನ ವ್ಯಾಖ್ಯಾನದ ಅಗತ್ಯವಿದೆ.

ct Ravi arrested over his obscene remarks on Laxmi Hebbalkar India Gate Prashant Natu column here rav

ಪೂರ್ತಿ ಸರೋವರವೇ ಕೊಳಕು ಆಗಿರುವಾಗ ಅಲ್ಲಿಂದಲೇ ಬಿಂದಿಗೆಯಲ್ಲಿ ತಂದ ನೀರು ಮಾತ್ರ ಪರಿಶುದ್ಧವಾಗಿರಬೇಕು ಎಂದು ಅಂದುಕೊಳ್ಳುವುದೇ ಮೂರ್ಖತನ ಎನ್ನುವಂಥ ವಿಚಿತ್ರ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ದೈನಂದಿನ ಬದುಕಿನಲ್ಲಿ ನಾವು ಪರಸ್ಪರ ಮಾತನಾಡಿಕೊಳ್ಳುವ ರೀತಿ- ನೀತಿಗಳಲ್ಲಿಯೇ ಶಾಲೀನತೆ, ಸಂಯಮ, ಆದರ, ಗೌರವಗಳು ಕಡಿಮೆ ಆಗಿರುವಾಗ ಹೇಗಾದರೂ ಮಾಡಿ ರಾಜಕಾರಣದ ಮೆಟ್ಟಿಲು ಹತ್ತಿದರೆ ಸಾಕು, ಹೇಗೋ ಪ್ರಚಾರ ದೊರೆತರೆ ಸಾಕು ಎಂದೇ ಸದಾ ಕಾಯುವ ರಾಜಕಾರಣದ ವೃತ್ತಿಯಲ್ಲಿರುವ ಸಿ.ಟಿ.ರವಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್‌ ಅವರಿಂದ ಪರಸ್ಪರ ಗೌರವ, ಆದರ, ವಿವೇಕ ಪೂರ್ಣ ನಡವಳಿಕೆಗಳನ್ನು ನಿರೀಕ್ಷಿಸುವುದು ನಮ್ಮಗಳ ಆಶಯ ಕಲ್ಪಿತ ಭ್ರಮೆ ಆದೀತು ಅಷ್ಟೇ. 

ವಿಧಾನಪರಿಷತ್‌ನಲ್ಲಿ ನಡೆದಿದ್ದು ಎಲ್ಲವೂ ಅತಿರೇಕವೇ. ಅಂಬೇಡ್ಕರ್‌ ಕುರಿತು ಚರ್ಚೆ ನಡೆದಾಗ ಸಿ.ಟಿ.ರವಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಡ್ರಗ್ ಅಡಿಕ್ಟ್‌ ಎಂದು ಹೇಳುವ ಅವಶ್ಯಕತೆ ಇರಲಿಲ್ಲ. ಅದನ್ನು ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕಾರ್‌ ಸಭಾಪತಿಗಳ ಗಮನಕ್ಕೆ ತಂದಿದ್ದರೆ ಸಾಕಿತ್ತು. ಅವರು ರವಿಯನ್ನು ಕೊಲೆಗಡುಕ ಅಂತ ವೈಯಕ್ತಿಕವಾಗಿ ನಿಂದಿಸುವ ಅಗತ್ಯ ಇರಲಿಲ್ಲ. ಇದಾದ ಮೇಲೆ ಸಿ.ಟಿ.ರವಿ ಕೆರಳಿ, ಎದುರು ಮಹಿಳೆ ಕೂತಾಗ ‘prostitute’ ಎಂದು ಕೇಳಿಸುವ ರೀತಿಯಲ್ಲಿ ಹೆಣ್ಣನ್ನು ಅವಮಾನಿಸುವ ಪದ ಬಳಕೆ ಮಾಡಿದ್ದು ಎಲ್ಲಾ ಖಾಸಗಿ ಚಾನೆಲ್‌ಗಳ ಟಿವಿ ಆಡಿಯೋದಲ್ಲಿ ಸ್ಪಷ್ಟವಾಗಿ ಕೇಳುತ್ತದೆ. ಹಾಗಿರುವಾಗ ಪೊಲೀಸರು ಎಫ್ಐಆರ್ ಹಾಕಿದ್ದು ಸರಿಯಿದೆ. ಆದರೆ ಒಬ್ಬ ಶಾಸಕನನ್ನು ರಾತ್ರಿ ಜೀಪ್‌ನಲ್ಲಿ 4 ಜಿಲ್ಲೆಗಳ 10 ಪೊಲೀಸ್ ಸ್ಟೇಷನ್‌ಗಳಿಗೆ ಓಡಾಡಿಸಿ, ತಲೆ ಒಡೆದರೂ ಪ್ರಥಮ ಚಿಕಿತ್ಸೆ ಕೊಡಿಸದೆ ಓಡಾಡಿಸಿದ್ದು ಇನ್ನೊಂದು ಅತಿರೇಕ. ನಮ್ಮ ಬಳಿ ನಾಲಿಗೆ ಇದೆ ಎಂದು ಏನು ಬೇಕಾದರೂ ಮಾತನಾಡುವುದು ಅಥವಾ ನಮ್ಮ ಬಳಿ ಅಧಿಕಾರವಿದೆ ಎಂದು ಹೇಗೆ ಬೇಕಾದರೂ ಅದನ್ನು ಚಲಾಯಿಸುವುದು ಸಾಮಾನ್ಯ ಜನರಲ್ಲಿ ರಾಜಕಾರಣ ಮತ್ತು ರಾಜಕಾರಣಿಗಳ ಬಗ್ಗೆ ಇರುವ ತಾತ್ಸಾರವನ್ನು ಇನ್ನಷ್ಟು ಹೆಚ್ಚಿಸಬಹುದು.

 

'ಘಟನೆ ನಡೆದುಹೋಗಿದೆ ಮುಂದುವರಿಸೋದ್ರಲ್ಲಿ ಅರ್ಥವಿಲ್ಲ': ಅಚ್ಚರಿ ಮೂಡಿಸಿದ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ!

ಶಾಸಕ-ಸಂಸದರಿಗಿರುವ ಹಕ್ಕುಗಳು

ನಮ್ಮ ಸಂವಿಧಾನವು ವಿಧಾನಸಭೆ, ಪರಿಷತ್ತು, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಜನಪ್ರತಿನಿಧಿಗಳಿಗೆ ಒಂದು ಬೇಷರತ್ತಾದ ಮಾತಿನ ಅಧಿಕಾರವನ್ನು ಕೊಡುತ್ತದೆ. ಹೀಗಾಗಿ ಅಲ್ಲಿ ಆಡಿದ ಮಾತುಗಳಿಗೆ ಮಾನಹಾನಿ ಕೇಸ್‌ಗಳಿಂದ ವಿನಾಯಿತಿಯನ್ನು ಕೊಡಲಾಗಿದೆ. ಜನಪ್ರತಿನಿಧಿಗಳು ಶಾಸನ ಸಭೆಯ ಒಳಗಡೆ ನ್ಯಾಯಾಲಯದ ತೀರ್ಪು ಮತ್ತು ನ್ಯಾಯಾಧೀಶರ ಬಗ್ಗೆ ಮಾತಾಡಿದರೂ ಕೂಡ ಅವರ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತಿಲ್ಲ. ಅದೇ ನಮ್ಮ ಸಂವಿಧಾನವು ಆ ಜನಪ್ರತಿನಿಧಿಗಳ ಮಾತು ಮತ್ತು ಚಟುವಟಿಕೆಗಳನ್ನು ಸದನದ ಒಳಗಡೆ ನಿಯಂತ್ರಿಸುವ ಅಧಿಕಾರವನ್ನು ಆ ನಿರ್ದಿಷ್ಟ ಸದನದ ಅಧ್ಯಕ್ಷರಿಗೂ ಕೊಡುತ್ತದೆ. ವಿಧಾನಪರಿಷತ್ತಿನಲ್ಲಿ ಗುರುವಾರ ಪರಸ್ಪರ ಬೈದಾಡಿಕೊಂಡ ಘಟನೆ ನಡೆದದ್ದು ಸಭಾಪತಿಗಳು ಸದನ ಮುಂದೂಡಿದ ಅನಂತರ. ಉಭಯ ಸದನಗಳಲ್ಲಿ ಸದನ adjourn ಆದ ತತಕ್ಷಣ ಕ್ಯಾಮೆರಾ ಮತ್ತು ಆಡಿಯೋ ಬಂದ್‌ ಆಗುತ್ತದೆ. ಹೀಗಾಗಿ ಸಭಾಪತಿಗಳ ಬಳಿ ಯಾವುದೇ ತಾಂತ್ರಿಕ ಸಾಕ್ಷ್ಯ ಲಭ್ಯವಿಲ್ಲ. ಖಾಸಗಿ ಚಾನೆಲ್‌ಗಳ ಸಾಕ್ಷ್ಯವನ್ನು ಸಭಾಪತಿಗಳು ಪರಿಗಣಿಸಿಲ್ಲ. ಬೆಳಗಾವಿ ಪೊಲೀಸರು ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಂದ ದೂರು ಬಂದಿದೆ, ಸ್ಥಳ ಮಹಜರು ಮಾಡುತ್ತೇವೆ ಎಂದಾಗ ಸಭಾಪತಿ ಹೊರಟ್ಟಿ ಅವರು ಅವಕಾಶ ನೀಡಿಲ್ಲ. ಹೀಗಿರುವಾಗ ಸಭಾಪತಿಗಳು ಒಂದು ರೂಲಿಂಗ್ ನೀಡಿದ ನಂತರ ಏಕಾಏಕಿ ಪೊಲೀಸರು ಸದನದ ಒಳಗಡೆ ನಡೆದ ಘಟನೆಗೆ ಸಂಬಂಧಿಸಿದಂತೆ ಶಾಸಕರನ್ನು ಬಂಧಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಬಂಧಿಸಿ ಬೆಂಗಳೂರಿಗೆ ಒಯ್ದು ಕೋರ್ಟ್‌ಗೆ ಹಾಜರುಪಡಿಸಿದ್ದರೂ ಸಾಕಿತ್ತೋ ಏನೋ? ಅದು ಬಿಟ್ಟು ಎಲ್ಲೆಲ್ಲೋ ಕರೆದೊಯ್ದು, ಕೊನೆಗೆ ಹೈಕೋರ್ಟ್ ಕೂಡಲೇ ಬಿಡಿ ಅಂತ ಹೇಳಿದ್ದು ಸರ್ಕಾರಕ್ಕೆ, ಪೊಲೀಸರಿಗೆ ಮುಖಭಂಗ ಅಲ್ಲದೇ ಮತ್ತೇನು?

ಪಿ.ವಿ.ನರಸಿಂಹರಾಯರ ಪ್ರಕರಣ

ಪಿ.ವಿ.ನರಸಿಂಹ ರಾಯರು ಅಲ್ಪಮತ ಸರ್ಕಾರದ ಪ್ರಧಾನಿ ಆಗಿದ್ದಾಗ 1993ರಲ್ಲಿ ಅವಿಶ್ವಾಸ ಗೊತ್ತುವಳಿ ಮೇಲಿನ ಮತದಾನದ ಸಂದರ್ಭದಲ್ಲಿ ಜಾರ್ಖಂಡ್‌ ಮುಕ್ತಿ ಮೋರ್ಚಾ(ಜೆಎಂಎಂ)ದ ಸಂಸದರಿಗೆ ಲಂಚ ಕೊಟ್ಟು ವೋಟು ಹಾಕಿಸಿಕೊಂಡ ಪ್ರಕರಣ ಭಾರೀ ಚರ್ಚೆ ಆಗಿತ್ತು. ಆಗ ಸಂಸದರಾಗಿದ್ದ ಶಿಬು ಸೊರೇನ್‌ ಪಕ್ಷಕ್ಕೆ ಸೇರಿದ ಮುಗ್ಧ ಸಂಸದರು ನರಸಿಂಹ ರಾಯರ ಕಡೆಯವರು ಕೊಟ್ಟ ಹಣವನ್ನು ಪಾರ್ಲಿಮೆಂಟ್ ಭವನದ ಒಳಗಡೆ ಇದ್ದ ಬ್ಯಾಂಕ್‌ನಲ್ಲೇ ಹೋಗಿ ಡೆಪಾಸಿಟ್ ಮಾಡಿದ್ದರು! ಆದರೆ 1998ರಲ್ಲಿ ಸುಪ್ರೀಂಕೋರ್ಟ್‌ನ 5 ಸದಸ್ಯರ ಸಂವಿಧಾನ ಪೀಠ ರಾಜ್ಯ ಮತ್ತು ರಾಷ್ಟ್ರದ ಶಾಸನಸಭೆಯ ಸದಸ್ಯರ ವಿರುದ್ಧ ಸದನದ ಒಳಗಡೆ ನಡೆದ ಘಟನಾವಳಿಗಳ ಹಿನ್ನೆಲೆಯಲ್ಲಿ ಕ್ರಿಮಿನಲ್ ಕೇಸ್ ಚಲಾಯಿಸಲು ಸಂವಿಧಾನದ ಆರ್ಟಿಕಲ್ 105ರ ಪ್ರಕಾರ ವಿನಾಯಿತಿ ಇದೆ ಎಂದು ತೀರ್ಪು ನೀಡಿತ್ತು. ಆದರೆ 25 ವರ್ಷಗಳ ನಂತರ 7 ಸದಸ್ಯರ ಸುಪ್ರೀಂ ಪೀಠ ಪಿ.ವಿ. ನರಸಿಂಹರಾವ್ ಅವರ ಜೆಎಂಎಂ ಲಂಚ ಪ್ರಕರಣದಲ್ಲಿ ‘ಸದನದ ಒಳಗಡೆ ಆಡಿದ ಮಾತು, ತೆಗೆದುಕೊಂಡ ನಿರ್ಣಯಕ್ಕೆ ಮಾತ್ರ ವಿನಾಯಿತಿ ಇದೆಯೇ ಹೊರತು ಹಣ ತೆಗೆದುಕೊಂಡು ವೋಟ್ ಮಾಡಿದ್ದು ಸಾಬೀತು ಆದರೆ ಹಾಕಲಾಗುವ ಕ್ರಿಮಿನಲ್ ಪ್ರಕರಣಕ್ಕೆ ಅಲ್ಲ’ ಎಂದು ತೀರ್ಪು ನೀಡಿದೆ. ಈಗ ಸಿ.ಟಿ.ರವಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್‌ ಬೈದಾಡಿ ಕೊಂಡ ಪ್ರಕರಣದಲ್ಲಿ ಸದನ ಮುಂದೂಡಿಕೆ ಆಗಿದ್ದಾಗ ಏನೇ ಮಾತಾಡಿದರೂ ವಿನಾಯಿತಿ ಇದೆಯಾ? ಇರುತ್ತದೆಯಾ? ಎನ್ನುವುದು ಪುನರಪಿ ವ್ಯಾಖ್ಯಾನ ಆಗಬೇಕು. ಈ ವ್ಯಾಖ್ಯಾನವನ್ನು ಸಭಾಪತಿಗಳು ಮಾಡುತ್ತಾರಾ ಅಥವಾ ಹೈಕೋರ್ಟ್, ಸುಪ್ರೀಂಕೋರ್ಟ್‌ಗಳು ಮಾಡುತ್ತವೆಯಾ ಎನ್ನುವುದು ಕೂಡ ಗಮನಿಸಬೇಕಾದ ಕುತೂಹಲಭರಿತ ಅಂಶ.

ಮಾತು ತಂದ ಸಮಸ್ಯೆ ಗಳು

ಒಂದು ರಾಷ್ಟ್ರೀಯ ಪಾರ್ಟಿಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ, 20 ವರ್ಷದಿಂದ ಜನಪ್ರತಿನಿಧಿ ಆಗಿರುವ, ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದಿರುವ ಸಿ.ಟಿ.ರವಿ ಮೇಲೆ ‘prostitute’ ಪದ ಬಳಕೆ ಮಾಡಿದ್ದಾರೆ ಅನ್ನುವ ಆರೋಪ ಬಂದಿರುವುದು ಒಳ್ಳೆಯ ಸಂಗತಿ ಅಲ್ಲ. ಸಿ.ಟಿ.ರವಿ ಅವರಿಗೆ ಪೊಲೀಸರ ಅತಿರೇಕದಿಂದ ಶುಕ್ರವಾರ ಪೂರ್ತಿ ಒಂದು ದಿನದ ಪ್ರಚಾರ ಸಿಕ್ಕಿರಬಹುದು. ಆದರೆ ಇಂಥ ಪದಗಳ ಬಳಕೆಯ ಆರೋಪಗಳು ರಾಜಕಾರಣಕ್ಕೂ ಒಳ್ಳೆಯದಲ್ಲ, ವೈಯಕ್ತಿಕವಾಗಿ ಸಿ.ಟಿ.ರವಿ ಅವರ ರಾಜಕೀಯ ಇಮೇಜ್ ಮತ್ತು ಭವಿಷ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ. ತುಂಬಾ ಹಿಂದೆ ಏನಲ್ಲ, ಒಂದೂವರೆ ವರ್ಷದ ಹಿಂದೆ- ಯಡಿಯೂರಪ್ಪ ಅವರ ಅಡುಗೆ ಮನೆಯಲ್ಲಿ ಬಿಜೆಪಿ ಟಿಕೆಟ್ ನಿರ್ಧಾರ ಆಗುವುದಿಲ್ಲ ಎಂದು ಸಿ.ಟಿ.ರವಿ ಹೇಳಿದ ನಂತರ ಲಿಂಗಾಯತರು ಅಸಮಾಧಾನಗೊಂಡಿದ್ದರಿಂದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ರವಿ ಸೋಲು ಕಾಣಬೇಕಾಯಿತು. ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರಿಗೆ ಆಡಿದ ಒಂದು ಮಾತಿನಿಂದ ರವಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಆಮೇಲೆ ಸಿ.ಟಿ.ರವಿ ವಿಧಾನ ಪರಿಷತ್ತು ಸದಸ್ಯರಾಗಲು ತಿಣುಕಾಡಬೇಕಾಯಿತು. ಸಾರ್ವಜನಿಕ ಜೀವನದಲ್ಲಿ ಮೇಲುಮುಖ ಚಲನೆ ಬಯಸುವವರು ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳುವುದು ಒಳ್ಳೆಯದು.

ಪೊಲೀಸರ ಅತಿರೇಕಗಳು

ಸಿ.ಟಿ.ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್‌ ನಡುವಿನ ಮಾತಿನ ತಿಕ್ಕಾಟದಲ್ಲಿ ಸಭಾಪತಿಗಳಿಗೆ ಹಾಗೂ ಪೊಲೀಸರಿಗೆ ಕೊಟ್ಟಿರುವ ದೂರು ಎಲ್ಲವೂ ಕೂಡ ಅವರವರ ವೈಯಕ್ತಿಕ ಹಕ್ಕುಗಳು. ಆದರೆ ಗುರುವಾರ ಸಂಜೆಯಿಂದ ಬೆಳಗಾವಿ ಪೊಲೀಸರು ನಡೆದುಕೊಂಡಿರುವ ರೀತಿ ಮಾತ್ರ ತೀವ್ರ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಅದು ಹೇಗೆ ಲಕ್ಷ್ಮೀ ಹೆಬ್ಬಾಳ್ಕರ್‌ ಬೆಂಬಲಿಗರು ವಿಧಾಸಭೆಯ ಒಳಗಡೆ ಪ್ರವೇಶ ಪಡೆದರು? ಪಂಚಮಸಾಲಿ ಹೋರಾಟಗಾರರಿಗೆ ಊರು ಪ್ರವೇಶಿಸಲು ನಿರ್ಬಂಧ ಹಾಕಿದ್ದ ಬೆಳಗಾವಿ ಪೊಲೀಸರು ಹೆಬ್ಬಾಳ್ಕರ್‌ ಬೆಂಬಲಿಗರನ್ನು ಒಳಗೆ ಬಿಟ್ಟಿದ್ದು ಯಾಕೆ ಮತ್ತು ಹೇಗೆ? ಒಬ್ಬ ಶಾಸಕನನ್ನು ನೇರವಾಗಿ ಕೋರ್ಟ್‌ಗೆ ಹಾಜರುಪಡಿಸದೇ ಯರಗಟ್ಟಿ- ಮುಧೋಳ- ರಾಮದುರ್ಗ- ಯಾದವಾಡಗಳ ಹಳ್ಳಿ ಹಳ್ಳಿಗೆ ಮಧ್ಯರಾತ್ರಿ ಕರೆದುಕೊಂಡು ಹೋಗಿ ಕಬ್ಬಿನ ಗದ್ದೆಗಳಿಗೆ, ನಿರ್ಜನ ಪ್ರದೇಶಗಳಲ್ಲಿ ಸುತ್ತಾಡಿಸಿದ್ದು ಯಾಕೆ? ಅದರಿಂದ ಸಾಧ್ಯ ಆಗಿದ್ದು ಏನು? ಈ ಪ್ರಶ್ನೆಗೆ ಏನು ಬೇಕಾದರೂ ಅತಿರೇಕ ಮಾಡಬಲ್ಲೆವು ಎಂದು ತೋರಿಸಿದ ಪೊಲೀಸರು ಮತ್ತು ಅವರನ್ನು ನಿಯಂತ್ರಿಸುವ ರಾಜಕೀಯ ನಾಯಕರೇ ಉತ್ತರ ಕೊಡಬೇಕು. ಸಿ.ಟಿ.ರವಿ ‘prostitute’ ಪದ ಬಳಕೆ ಮಾಡಿದ್ದರ ಬಗ್ಗೆ ಕೂಲಂಕಷ ತನಿಖೆ ನಡೆಸುವುದು ಅತ್ಯವಶ್ಯ. ಆದರೆ ಅದರ ಹೆಸರಲ್ಲಿ ಪೊಲೀಸರು ನಡೆಸಿರುವ ಅತಿರೇಕಗಳಿಂದ ಆಡಳಿತ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಜಾಸ್ತಿ.

'ಸಂವಿಧಾನ ಬದಲಿಸಿದ್ದು ಯಾರು?': ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಜನ್ಮ ಜಾಲಾಡಿದ ಬಿಎಲ್ ಸಂತೋಷ್!

ಮೂರು ಕಪ್ಪು ಚುಕ್ಕೆಗಳು

ಘಟನೆ 1: ಅಂದು 1994 ಡಿಸೆಂಬರ್ 11, ಬೆಂಗಳೂರಿನ ವಿಧಾನಸೌಧದ ಒಳಗೆ, ಹೊರಗೆ ಜನವೋ ಜನ. ದೇವೇಗೌಡರಿಗೆ ಎಲ್ಲಿ ಮುಖ್ಯಮಂತ್ರಿ ಸ್ಥಾನ ತಪ್ಪಿ ಬಿಡುತ್ತದೋ ಎಂದು ಶಾಸಕಾಂಗ ಸಭೆ ನಡೆಯುವ ಜಾಗದ ಸುತ್ತಮುತ್ತ ಸೇರಿದ್ದ ರಾಮನಗರ, ಮಂಡ್ಯ, ಹಾಸನದಿಂದ ಬಂದಿದ್ದ ಗೌಡರ ಬೆಂಬಲಿಗರು ರಾಮಕೃಷ್ಣ ಹೆಗಡೆಯವರ ಮೇಲೆ ಕಲ್ಲು, ಚಪ್ಪಲಿ ತೂರಿದ್ದರು. ಅಷ್ಟೇ ಅಲ್ಲ, ರಾಜಭವನಕ್ಕೂ ನುಗ್ಗಿ ಗಲಾಟೆ ಎಬ್ಬಿಸಿದ್ದರು. ಆಗಿನ ಪೊಲೀಸ್‌ ಆಯುಕ್ತರಾಗಿದ್ದ ಪಿ.ಕೋದಂಡ ರಾಮಯ್ಯ ಅವರು ಮುಂದೆ ಜನತಾ ದಳದ ಸಂಸದರಾದರು ಅನ್ನೋದು ಕಾಕತಾಳೀಯ ಅಂತೂ ಅಲ್ಲ.

ಘಟನೆ 2: 2010 ಅಕ್ಟೋಬರ್ 11, ವಿಧಾನಸಭೆಯ ಪ್ರವೇಶ ದ್ವಾರದಲ್ಲಿ ಪೊಲೀಸ್‌ ಸಮವಸ್ತ್ರದಲ್ಲಿ ಆಗಿನ ಪೊಲೀಸ್‌ ಆಯುಕ್ತ ಶಂಕರ ಬಿದರಿ ನಿಂತಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕೆರಳಿಸಿತ್ತು. ಬಾಗಿಲು ಒದ್ದು ಸಿಟ್ಟಿನಲ್ಲಿ ಸಿದ್ದು ಒಳಗೆ ಹೋಗಿದ್ದರು. ವಿಧಾನಸಭೆಯ ಒಳಗೆ ನೂರಾರು ಪೊಲೀಸರು ಬಂದಿದ್ದು ಇತಿಹಾಸದಲ್ಲಿ ಮೊದಲ ಬಾರಿ. ಕೇಳಿದರೆ ಬಿದರಿ ಅವರು, ಸ್ಪೀಕರ್ ಬೋಪಯ್ಯ ಪತ್ರ ಬರೆದಿದ್ದಾರೆ ನೋಡಿ ಎಂದು ತೋರಿಸಿ ನುಣುಚಿಕೊಂಡಿದ್ದರು.

ಘಟನೆ 3: ಡಿಸೆಂಬರ್ 19 2024, ಸಿ.ಟಿ.ರವಿ ಮೇಲೆ ವಿಧಾನಸಭೆಯ ಕಟ್ಟಡದ ಒಳಗೆ ಹೆಬ್ಬಾಳ್ಕರ್‌ ಬೆಂಬಲಿಗರು ನುಗ್ಗಿ ನಡೆಸಿದ ಒದರಾಟ, ಚೀರಾಟ, ಹೊಡೆದಾಟ.

1957ರಲ್ಲಿಯೇ ಪಂಡಿತ್‌ ಜವಾಹರ್‌ ಲಾಲ್‌ ನೆಹರು ಅವರು ಅಟಲ್‌ ಬಿಹಾರಿ ವಾಜಪೇಯಿ ಅವರ ಭಾಷಣ ಕೇಳಿ ಮುಂದೆ ಇವರು ಪ್ರಧಾನಿ ಆಗುತ್ತಾರೆ ಅಂದಿದ್ದರಂತೆ. ಅದೇ ವಾಜಪೇಯಿ 1978ರಲ್ಲಿ ವಿದೇಶ ಸಚಿವರಾದಾಗ ತನ್ನ ಕಚೇರಿಯಲ್ಲಿ ತೆಗೆದು ಹಾಕಿದ್ದ ನೆಹರು ಫೋಟೋವನ್ನು ಮರಳಿ ಹಾಕಿಸಿದ್ದರಂತೆ. ಅವರೆಲ್ಲಿ? ಇವರೆಲ್ಲಿ? ಕಾಲಾಯಃ ತಸ್ಮೈ ನಮಃ.

Latest Videos
Follow Us:
Download App:
  • android
  • ios