Asianet Suvarna News Asianet Suvarna News

ಕಾಂಗ್ರೆಸ್ ಸೋಲಿನ ಹಿಂದಿನ ಕಾರಣವೇ ನಾಯಕರ ಘರ್ಷಣೆ

ರಾಜ್ಯದಲ್ಲಿ ನಡೆದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಕೇವಲ 2 ಸ್ಥಾನಗಳಲ್ಲಿ ಗೆಲುವು ಕಂಡಿದ್ದು ಈ ಸೋಲಿನ ಹಿಂದಿನ ಕಾರಣ ಕಾಂಗ್ರೆಸ್ ನಾಯಕರೇ ಎನ್ನಲಾಗಿದೆ.

Reason Behind Congress Lost In Karnataka By Election
Author
Bengaluru, First Published Dec 10, 2019, 9:57 AM IST

ಬೆಂಗಳೂರು (ಡಿ.10):  ಪಕ್ಷ ಹಾಗೂ ಉಪ ಚುನಾವಣೆಯ ತಯಾರಿಯ ಮೇಲೆ ಏಕಸ್ವಾಮ್ಯ ಸಾಧಿಸುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ತಂಡದ ಹಪಾಹಪಿ, ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಧೋರಣೆ ಹಾಗೂ ಇದರಿಂದ ಆಕ್ರೋಶಗೊಂಡಿದ್ದ ಇತರ ನಾಯಕರು ನೀಡಿದ ಒಳಏಟಿನ ಫಲ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ನೀರಸ ಪ್ರದರ್ಶನ.

ಉಪ ಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳು ಕಾಂಗ್ರೆಸ್‌ನವಾಗಿದ್ದವು (ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ ಕ್ಷೇತ್ರಗಳು). ಈ ಪೈಕಿ ಕೇವಲ ಎರಡು ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಮಾತ್ರ ಕಾಂಗ್ರೆಸ್‌ ಶಕ್ತವಾಗಿದೆ. ಇದು ಸ್ಪಷ್ಟವಾಗಿ ಕಾಂಗ್ರೆಸ್‌ನ ದುರ್ಬಲ ಪ್ರಚಾರ ಹಾಗೂ ಚುನಾವಣಾ ತಂತ್ರಗಾರಿಕೆಯ ಫಲ ಎಂಬುದನ್ನು ನಿರೂಪಿಸುತ್ತದೆ. ಜತೆಗೆ, ಪಕ್ಷದಲ್ಲಿ ಹೆಚ್ಚುತ್ತಿದ್ದ ಸಿದ್ದರಾಮಯ್ಯ ಅವರ ಪ್ರಾಬಲ್ಯದ ಬಗ್ಗೆ ಪಕ್ಷದ ಇತರ ನಾಯಕರು ಅಸೂಯೆಗೊಂಡಿದ್ದರು. ಇಂತಹ ಮನಸ್ಥಿತಿಯಲ್ಲಿದ್ದ ಇತರೆ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವ್ಯವಸ್ಥಿತ ಹೋರಾಟ ಸಂಘಟಿಸುವ ನಾಯಕತ್ವ ಪ್ರದರ್ಶನ ಮಾಡುವಲ್ಲಿ ಸಿದ್ದರಾಮಯ್ಯ ಕೂಡ ವಿಫಲರಾದರು. ಇದರ ಪರಿಣಾಮವಾಗಿ ಕಾಂಗ್ರೆಸ್‌ ಇದೀಗ ಎರಡು ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.

ವಾಸ್ತವವಾಗಿ ಕಾಂಗ್ರೆಸ್‌ ಪಕ್ಷ ಉಪ ಚುನಾವಣೆಗೆ ಸಮರ್ಪಕ ಸಿದ್ಧತೆ ನಡೆಸಲಿಲ್ಲ. ಈ ಬಗೆಗೆ ನಡೆದ ಹಿರಿಯ ನಾಯಕರ ಸಭೆಯಲ್ಲಿ ಕೆಸರೆರಚಾಟ ನಡೆಯಿತು. ತಮ್ಮ ವಿರುದ್ಧ ಕೆಲ ನಾಯಕರು ನಡೆಸಿದ ವಾಗ್ದಾಳಿಯಿಂದಾಗಿ ಸಿದ್ದರಾಮಯ್ಯ ಇತರ ನಾಯಕರ ಜತೆ ಕುಳಿತು ಮಾತನಾಡುವ ಮನಸ್ಥಿತಿಯನ್ನು ಕಳೆದುಕೊಂಡರು. ಶಾಸಕಾಂಗ ಪಕ್ಷದ ನಾಯಕತ್ವ ವಹಿಸಿಕೊಂಡಾಗಲೇ ಅವರಿಗೆ ಇತರ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತೆ ಹೈಕಮಾಂಡ್‌ನಿಂದ ಪರೋಕ್ಷ ಸಂದೇಶ ರವಾನೆಯಾಗಿತ್ತು.

"

ಆದರೆ, ಸಿದ್ದರಾಮಯ್ಯ ಈ ದಿಸೆಯಲ್ಲಿ ಗಂಭೀರ ಪ್ರಯತ್ನ ಮಾಡಲಿಲ್ಲ. ಇನ್ನು ಹಿರಿಯ ನಾಯಕರ ಸಭೆಯಲ್ಲಿ ಬಿ.ಕೆ. ಹರಿಪ್ರಸಾದ್‌ ಹಾಗೂ ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ಅವರು ತಮ್ಮ ವಿರುದ್ಧ ವಾಗ್ದಾಳಿಗೆ ಇಳಿದ ನಂತರವಂತೂ ಸಿದ್ದರಾಮಯ್ಯ ಇಂತಹ ಪ್ರಯತ್ನಗಳಿಂದ ದೂರ ಉಳಿದರು. ಬದಲಾಗಿ ತಮ್ಮ ಆಪ್ತರಾಗಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರೊಂದಿಗೆ ಸೇರಿ ಯಾರ ಬೆಂಬಲವನ್ನೂ ಪಡೆಯದೆ ಏಕಪಕ್ಷೀಯವಾಗಿ ಸಿದ್ಧತೆಗಳನ್ನು ಆರಂಭಿಸಿದರು.

ಬಿಜೆಪಿ ಭರ್ಜರಿ ಗೆಲುವಿನ ಹಿಂದಿನ ಕಾರಣ ಏನು?...

ಸಮರ್ಪಕ ಪ್ರಚಾರ ತಂತ್ರ ಇರಲಿಲ್ಲ:  ಅಭ್ಯರ್ಥಿಗಳ ಆಯ್ಕೆಯಲ್ಲೂ ಸಿದ್ದರಾಮಯ್ಯ ಅವರ ತಂಡ ಮೇಲುಗೈ ಸಾಧಿಸಿತ್ತು. ಇದು ಇತರ ನಾಯಕರನ್ನು ಸಿಟ್ಟಿಗೆಬ್ಬಿಸಿತ್ತು. ಹೀಗಾಗಿಯೇ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ್‌ ಹಾಗೂ ಡಿ.ಕೆ. ಶಿವಕುಮಾರ್‌ ಅವರಂತಹ ನಾಯಕರು ಕೊನೆ ಕ್ಷಣದಲ್ಲಿ ಪ್ರಚಾರಕ್ಕೆ ಆಗಮಿಸದರೇ ಹೊರತು ಆರಂಭದಿಂದಲೂ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿಲ್ಲ. ವಾಸ್ತವವಾಗಿ ಕಾಂಗ್ರೆಸ್‌ ಈ ಬಾರಿಯ ಉಪ ಚುನಾವಣೆಗೆ ಸಮರ್ಪಕ ಪ್ರಚಾರ ತಂತ್ರ ಹೊಂದಿರಲಿಲ್ಲ. ಒಂದು ಕಡೆ ಸಿದ್ದರಾಮಯ್ಯ ಪ್ರತಿಯೊಂದು ಕ್ಷೇತ್ರಕ್ಕೂ ಭೇಟಿ ನೀಡಿ ಪ್ರಚಾರ ನಡೆಸಿದರೇ ಹೊರತು ಸಾಮೂಹಿಕವಾಗಿ ಎಲ್ಲಾ ನಾಯಕರು ಒಗ್ಗೂಡಿ ಪ್ರಚಾರವನ್ನು ನಡೆಸಲಿಲ್ಲ. ಸಾಮಾನ್ಯವಾಗಿ ಉಪ ಚುನಾವಣೆಗಳು ಆಡಳಿತ ಪಕ್ಷದ ಪರವಾಗಿರುತ್ತವೆ. ಇದನ್ನು ಅರಿತಿದ್ದ ಪಕ್ಷದ ಇತರ ನಾಯಕರು ಸಿದ್ದರಾಮಯ್ಯ ಹಾಗೂ ಅವರ ತಂಡ ಉಪ ಚುನಾವಣೆಯ ಸಂಪೂರ್ಣ ಹೊಣೆಗಾರಿಕೆ ಹೊರಲು ಮುಂದಾದಾಗ ಮುಗುಂ ಆಗಿ ಉಳಿಯಿತು.

ಇದಕ್ಕೆ ಸಿದ್ದರಾಮಯ್ಯ ಹಾಗೂ ಅವರ ತಂಡ ಇಡೀ ಪಕ್ಷವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿರುವುದು ಹಾಗೂ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಇತರ ನಾಯಕರಿಗೆ ಪಕ್ಷದಲ್ಲಿ ಯಾವುದೇ ಬೆಲೆ ಇರುವುದಿಲ್ಲ, ಇದಕ್ಕೊಂದು ಬ್ರೇಕ್‌ ಬೀಳಬೇಕು ಎಂಬ ನಿಲುವಿಗೆ ಬಂದಿದ್ದು ಕಾರಣ. ಹೀಗಾಗಿ ಯಾವ ನಾಯಕರೂ ಸಕ್ರಿಯವಾಗಿ ಉಪ ಚುನಾವಣೆ ಸಿದ್ಧತೆಯಲ್ಲಿ ಪಾಲ್ಗೊಳ್ಳಲಿಲ್ಲ. ಕಡೆಯ ದಿನಗಳಲ್ಲಿ ತೋರಿಕೆಗೆ ಮಾತ್ರ ಕೆಲ ನಾಯಕರು ಪ್ರಚಾರ ನಡೆಸಿದರು.

ಸಂಪನ್ಮೂಲದ ಕೊರತೆ:  ಕಾಂಗ್ರೆಸ್‌ನ ಇತರ ನಾಯಕರ ಅಸಹಕಾರದ ಜತೆಗೆ ನಾಯಕತ್ವವನ್ನು ಬಹುವಾಗಿ ಕಾಡಿದ ಮತ್ತೊಂದು ಅಂಶ ಸಂಪನ್ಮೂಲದ ಕೊರತೆ. ಪ್ರಚಾರಕ್ಕೆ ಬರದ ನಾಯಕರು ಸಂಪನ್ಮೂಲ ಕ್ರೋಡೀಕರಿಸುವುದರಲ್ಲಿ ಸಿದ್ದರಾಮಯ್ಯ ಅವರ ತಂಡಕ್ಕೆ ಬೆಂಬಲ ನೀಡುವ ಸಾಧ್ಯತೆಯೇ ಇರಲಿಲ್ಲ. ಹೀಗಾಗಿ ಸಂಪೂರ್ಣವಾಗಿ ಸಂಪನ್ಮೂಲ ಹೊಂದಿಸುವ ಹೊಣೆ ಸಿದ್ದರಾಮಯ್ಯ ಅವರ ಮೇಲೆ ಬಿತ್ತು. ಸಾಧ್ಯವಿರುವಷ್ಟುನೆರವನ್ನು ಸಿದ್ದರಾಮಯ್ಯ ಕ್ರೋಡೀಕರಿಸಿದರೂ ಕೂಡ ಇದು ಬಿಜೆಪಿಗೆ ಈ ವಿಷಯದಲ್ಲಿ ಸರಿಸಾಟಿಯಾಗಲು ಸಾಧ್ಯವಾಗಲಿಲ್ಲ.

ಇನ್ನು ಪ್ರಚಾರದಲ್ಲಿ ಕೂಡ ಜೆಡಿಎಸ್‌ ಜತೆ ಮೈತ್ರಿ ವಿಚಾರ ಪ್ರಸ್ತಾಪಗೊಂಡಿದ್ದು ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆ ಉಂಟುಮಾಡಿತು. ಒಂದು ಬಾರಿ ಮೈತ್ರಿ ನಡೆಯಲಿದೆ ಎಂದರೆ ಮತ್ತೊಂದು ಬಾರಿ ಮೈತ್ರಿ ಇಲ್ಲ ಎಂಬ ಹೇಳಿಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರಿಂದ ಹೊರಬಿತ್ತು. ಮೈತ್ರಿ ಸರ್ಕಾರದ ಅಪಸವ್ಯಗಳನ್ನು ಕಂಡಿದ್ದ ರಾಜ್ಯದ ಜನತೆಗೆ ಈಗ ಮತ್ತೆ ಇಂತಹ ಗೊಂದಲದ ಹೇಳಿಕೆಗಳಿಗಿಂತ ಸುಭದ್ರ ಸರ್ಕಾರ ನೀಡುವ ಬಿಜೆಪಿಯ ಭರವಸೆ ಅಪ್ಯಾಯಮಾನವಾಗಿ ಕಂಡಿದ್ದು ಕೂಡ ಕಾಂಗ್ರೆಸ್‌ ಹಿನ್ನಡೆಗೆ ಬಹು ದೊಡ್ಡ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.

Follow Us:
Download App:
  • android
  • ios