ಜೈನಮುನಿ ಹತ್ಯೆ ಖಂಡಿಸಿ ಸದನದಲ್ಲಿ ಬಿಜೆಪಿ ಹೋರಾಟ: ಬೊಮ್ಮಾಯಿ ಘೋಷಣೆ
ಬರ್ಬರವಾಗಿ ಹತ್ಯೆಗೀಡಾದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯನ್ನು ಉನ್ನತ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಸೋಮವಾರ ವಿಧಾನ ಸಭೆಯೊಳಗೆ ಹೋರಾಟ ನಡೆಸಲು ಬಿಜೆಪಿ ನಿರ್ಧರಿಸಿದೆ.
ಬೆಂಗಳೂರು (ಜು.10): ಬರ್ಬರವಾಗಿ ಹತ್ಯೆಗೀಡಾದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯನ್ನು ಉನ್ನತ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಸೋಮವಾರ ವಿಧಾನ ಸಭೆಯೊಳಗೆ ಹೋರಾಟ ನಡೆಸಲು ಬಿಜೆಪಿ ನಿರ್ಧರಿಸಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ನಿರ್ಧಾರ ಪ್ರಕಟಿಸಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಜೈನಮುನಿಗಳ ಹತ್ಯೆ ಖಂಡಿಸಿ ಸದನದ ಒಳಗೆ ಹೋರಾಟ ಕೈಗೊಳ್ಳಲಿದ್ದೇವೆ. ಹುಬ್ಬಳ್ಳಿಯ ವರೂರು ನವಗ್ರಹ ತೀರ್ಥ ಕ್ಷೇತ್ರದ ಗುಣಧರ ನಂದಿ ಮಹಾರಾಜರು ದುರ್ಘಟನೆಯನ್ನು ಖಂಡಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಈ ವೇಳೆ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಈ ಘಟನೆಯನ್ನು ಉಗ್ರವಾಗಿ ಖಂಡಿಸಿದ್ದೇವೆ. ಅಲ್ಲದೇ ಈ ಬಗ್ಗೆ ಉನ್ನತ ಮಟ್ಟಡ ತನಿಖೆ ನಡೆಸುವಂತೆ ಸರ್ಕಾರಕ್ಕೆ ಆಗ್ರಹಿಸುವುದಾಗಿ ಅವರು ತಿಳಿಸಿದ್ದಾರೆ. ಸರ್ಕಾರ ಈ ಕುರಿತು ಕಠಿಣ ನಿರ್ಧಾರ ಕೈಗೊಂಡು ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ವಹಿಸುವಂತೆ ಆಗ್ರಹಿಸಲಾಗುವುದು ಎಂದು ಬೊಮ್ಮಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೀರಶೈವ-ಲಿಂಗಾಯತ ಮೀಸಲಾತಿ: ಕಲಬುರಗಿಯಲ್ಲಿ 100ಕ್ಕೂ ಹೆಚ್ಚು ಮಠಾಧೀಶರ ಸಭೆ
ಮೂಲ್ಕಿ ಅರಸರಿಂದ ಖಂಡನೆ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಜೈನಮುನಿಗಳಾದ ಆಚಾರ್ಯ ಶ್ರೀ ನಂದಿ ಮಹಾರಾಜರ ಹತ್ಯೆಗೆ ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ತೀವ್ರ ಸಂತಾಪ ಹಾಗೂ ಖಂಡನೆ ವ್ಯಕ್ಯಪಡಿಸಿದ್ದಾರೆ. ಜೈನ ಪರಂಪರೆಯ ಇತಿಹಾಸದಲ್ಲೇ ಮುನಿಯೊಬ್ಬರ ಹತ್ಯೆಯಾಗಿರುವುದು ಇದೇ ಪ್ರಥಮವಾಗಿದೆ. ಈಗಾಗಲೇ ಹತ್ಯೆ ಮಾಡಿರುವ ಆರೋಪಿಗಳ ಬಂಧನವಾಗಿದ್ದು, ಈ ವಿಚಾರಕ್ಕೆ ರಾಜ್ಯ ಸರ್ಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ಇನ್ನು ಮುಂದೆ ಇಂತಹ ಪ್ರಕರಣಗಳು ಪುನರಾವರ್ತನೆಯಾಗದಂತೆ ಪೊಲೀಸ್ ಇಲಾಖೆ ಎಚ್ಚರವಹಿಸಿ ಸೂಕ್ತ ರಕ್ಷಣೆ ಕೊಡಬೇಕು ಎಂದು ಸಂಬಂಧಪಟ್ಟಆಡಳಿತವನ್ನು ವಿನಂತಿಸಿದ್ದಾರೆ.
ಜೈನ ಮುನಿ ಹಂತಕರಿಗೆ ಕಠಿಣ ಶಿಕ್ಷೆ ನೀಡಿ: ಹಿರೇಕೋಡಿ ನಂದಿ ಪರ್ವತ ಆಶ್ರಮದ ಜೈನಮುನಿ ಹತ್ಯೆಗೈದ ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಕೊಳ್ಳಬೇಕೆಂದು ಶಾಸಕ ರಾಜು ಕಾಗೆ ಒತ್ತಾಯಿಸಿದ್ದಾರೆ. ಸಮಾಜದಲ್ಲಿ ಶಾಂತಿ ಮಂತ್ರದ ಮೂಲಕ ಅಹಿಂಸಾ ತತ್ವಗಳನ್ನು ಪ್ರತಿಪಾದಿಸುತ್ತ ಸಮಾಜ ಸುಧಾರಣೆಗೆ ಜೀವನವನ್ನೇ ಮುಡುಪಾಗಿಡುವ ಜೈನ ಮುನಿಗಳ ಹತ್ಯೆ ನಿಜಕ್ಕೂ ದಿಗ್ಭ್ರಮೆ ಉಂಟು ಮಾಡಿದೆ ಎಂದು ರಾಜು ಕಾಗೆ ದುಃಖ ವ್ಯಕ್ತಪಡಿಸಿದರು. ಕಳೆದ ಹಲವು ವರ್ಷಗಳಿಂದ ಮುನಿ ಮಹಾರಾಜರು ಜೈನ ಹಾಗೂ ಜೈನೇತರ ವಿದ್ಯಾರ್ಥಿಗಳಿಗೆ ಹಾಗೂ ಅಲ್ಲಿಗೆ ಬರುವಂತ ಭಕ್ತಾಧಿಗಳಿಗೆ ಜೀವನ ಶೈಲಿ ಬಗ್ಗೆ ಹೇಳಿ ಕೊಡುತ್ತಿದ್ದರು.
ಶಿವಮೊಗ್ಗದಲ್ಲಿ ವಿಶ್ವದ ಎತ್ತರದ ಸುಬ್ರಹ್ಮಣ್ಯ ಮೂರ್ತಿ ಸ್ಥಾಪನೆ: 151 ಅಡಿ ಮೂರ್ತಿ ಪ್ರತಿಷ್ಠಾಪನೆಗೆ ಶಿಲಾನ್ಯಾಸ
ಎಲ್ಲರೊಟ್ಟಿಗೆ ಕೂಡಿ ಬಾಳಬೇಕೆಂಬ ಸಂದೇಶಗಳನ್ನು ನೀಡುತ್ತಿದ್ದರು. ಯಾರಿಗೂ ಕೇಡನ್ನು ಬಯಸದೆ ಧರ್ಮದ ಉದ್ಧಾರಕ್ಕೆ ಶ್ರಮಿಸುತ್ತಿದ್ದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮುನಿ ಮಹಾರಾಜರ ಹತ್ಯೆ ಹಿಂದಿರುವ ಪ್ರತಿಯೊಂದು ಸಂಗತಿಗಳನ್ನು ಪೊಲೀಸರು ಪತ್ತೆ ಮಾಡಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ರಾಜು ಕಾಗೆ ಆಗ್ರಹಿಸಿದರು. ಈ ವೇಳೆ ಅರುಣಕುಮಾರ ಯಲಗುದ್ರಿ, ಸಂಜಯ ಕುಚನೂರೆ, ಶಾಂತಿನಾಥ ನಂದೇಶ್ವರ, ವಿಜಯಕುಮಾರ ಅಕಿವಾಟೆ, ವಿನೋದ ಬರಗಾಲೆ, ಬಾಹುಬಲಿ ಕುಸನಾಳೆ, ಸಂಜಯ ಕುಸನಾಳೆ, ಸತೀಶ ಯರಂಡೋಲಿ, ಸೇರಿದಂತೆ ಅನೇಕರು ಇದ್ದರು.