ಕೃಷ್ಣರಾಜದಲ್ಲಿ ಯಾರು ರಾಜ?: ಹಳೇ ಹುಲಿಗಳ ನಡುವೆ ಟಿಕೆಟ್‌ಗಾಗಿ ಹೊಸಬರ ಪೈಪೋಟಿ..!

ಬಿಜೆಪಿಯಿಂದ ರಾಮದಾಸ್‌, ಕಾಂಗ್ರೆಸ್‌ನಿಂದ ಎಂಕೆಎಸ್‌ಗೆ ಟಿಕೆಟ್‌ ತಪ್ಪಿಸಲು ಯತ್ನ, ಜೆಡಿಎಸ್‌ನಿಂದ ಮತ್ತೊಮ್ಮೆ ಕೆ.ವಿ.ಮಲ್ಲೇಶ್‌ ಸ್ಪರ್ಧೆ

Newcomers Compete for Tickets at Krishnaraja Constituency in Mysuru grg

ಅಂಶಿ ಪ್ರಸನ್ನಕುಮಾರ್‌

ಮೈಸೂರು(ಏ.02):  ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಮೈಸೂರಿನ ಕೃಷ್ಣರಾಜ ಕ್ಷೇತ್ರ ಅಘೋಷಿತವಾಗಿ ಬ್ರಾಹ್ಮಣರ ಕ್ಷೇತ್ರ ಎನಿಸಿಕೊಂಡಿದೆ. ಹೆಚ್ಚು ಬಾರಿ ಆ ವರ್ಗದವರು ಗೆದ್ದಿರುವುದು ಇದಕ್ಕೆ ಕಾರಣ. ಕಳೆದ ಐದು ಚುನಾವಣೆಗಳಿಂದ ಇಲ್ಲಿ ಎಸ್‌.ಎ.ರಾಮದಾಸ್‌ ಹಾಗೂ ಎಂ.ಕೆ.ಸೋಮಶೇಖರ್‌ ನಡುವೆಯೇ ಹೋರಾಟ ನಡೆದಿದೆ. ಈ ಪೈಕಿ ರಾಮದಾಸ್‌ ಮೂರು, ಸೋಮಶೇಖರ್‌ ಎರಡು ಬಾರಿ ಗೆದ್ದಿದ್ದಾರೆ. ಈ ಬಾರಿ ಇವರಿಬ್ಬರಿಗೂ ಆಯಾ ಪಕ್ಷಗಳಲ್ಲಿ ಟಿಕೆಟ್‌ ತಪ್ಪಿಸುವ ಯತ್ನ ನಡೆಯುತ್ತಿದೆ.

ಬಿಜೆಪಿಯಿಂದ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಎಸ್‌.ಎ.ರಾಮದಾಸ್‌ ಮತ್ತೊಮ್ಮೆ ಕಣಕ್ಕಿಳಿಯುವ ಸಾಧ್ಯತೆ ಇದೆ. 1994ರಿಂದ ಈವರೆಗೆ ಅವರು ನಾಲ್ಕು ಬಾರಿ ಗೆದ್ದಿದ್ದಾರೆ. ಎರಡು ಬಾರಿ ಸೋತಿದ್ದಾರೆ. ಜೊತೆಗೆ, ಎಂಡಿಎ ಮಾಜಿ ಅಧ್ಯಕ್ಷ ಎಚ್‌.ವಿ.ರಾಜೀವ್‌, ನಗರಾಧ್ಯಕ್ಷ ಟಿ.ಎಸ್‌.ಶ್ರೀವತ್ಸ, ಮೈಲ್ಯಾಕ್‌ ಮಾಜಿ ಅಧ್ಯಕ್ಷ ಎನ್‌.ವಿ.ಫಣೀಶ್‌, ನಗರ ಕಾರ್ಯದರ್ಶಿ ಎಸ್‌.ಎಂ.ಶಿವಪ್ರಕಾಶ್‌ ಬಿಜೆಪಿಯ ಟಿಕೆಟ್‌ ಆಕಾಂಕ್ಷಿಗಳು. ಈ ಪೈಕಿ ರಾಜೀವ್‌ ಅವರು ಯಡಿಯೂರಪ್ಪನವರ ಮೂಲಕ ಟಿಕೆಟ್‌ ಗಿಟ್ಟಿಸಲು ಯತ್ನಿಸುತ್ತಿದ್ದಾರೆ. ರಾಜೀವ್‌ ಅವರು 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ, ಸೋತಿದ್ದರು.

ಮಹದೇವಪುರ ಕದನ: ಬಿಜೆಪಿ ಭದ್ರಕೋಟೆಯಲ್ಲಿ ಲಿಂಬಾವಳಿಗೆ ಕಾಂಗ್ರೆಸ್‌ ಸವಾಲು..!

ಕಾಂಗ್ರೆಸ್‌ನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ಮತ್ತೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಪಾಲಿಕೆ ಮಾಜಿ ಸದಸ್ಯ ಎಂ. ಪ್ರದೀಪ್‌ಕುಮಾರ್‌, ಮುಖಂಡರಾದ ಎನ್‌.ಎಂ. ನವೀನ್‌ಕುಮಾರ್‌, ಎನ್‌.ಭಾಸ್ಕರ್‌, ಗುರುಪಾದಸ್ವಾಮಿ ಕೂಡ ‘ಕೈ’ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ಕಳೆದ ಬಾರಿ ಕಣದಲ್ಲಿದ್ದ ಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್‌ಗೆ ಈ ಬಾರಿಯೂ ಟಿಕೆಟ್‌ ಘೋಷಿಸಲಾಗಿದೆ.

1952ರಲ್ಲಿ ಇದು ಮೈಸೂರು ನಗರ ದಕ್ಷಿಣ ಕ್ಷೇತ್ರವಾಗಿತ್ತು. ಕಾಂಗ್ರೆಸ್‌ನ ಬಿ.ನಾರಾಯಣಸ್ವಾಮಿ ಆಯ್ಕೆಯಾಗಿದ್ದರು. 1957ರಲ್ಲಿ ಮೈಸೂರು ನಗರ ಕ್ಷೇತ್ರವಾಯಿತು. ಆಗ ಕಾಂಗ್ರೆಸ್‌ನ ಕೆ.ಎಸ್‌.ಸೂರ್ಯನಾರಾಯಣ ರಾವ್‌ ಆಯ್ಕೆಯಾದರು. 1962ರಲ್ಲಿ ಕೆ.ಎಸ್‌.ಸೂರ್ಯನಾರಾಯಣ ರಾವ್‌ ಪುನರಾಯ್ಕೆಯಾದರು. 1967ರಲ್ಲಿ ಕೃಷ್ಣರಾಜ ಕ್ಷೇತ್ರ ಎಂದು ಹೆಸರಿಸಲಾಯಿತು. ಆಗ ಪಕ್ಷೇತರರಾದ ಸಾಹುಕಾರ್‌ ಚನ್ನಯ್ಯ ಗೆದ್ದರು. 1972ರಲ್ಲಿ ಕಾಂಗ್ರೆಸ್‌ನ ಡಿ.ಸೂರ್ಯನಾರಾಯಣ ಗೆದ್ದರು. 1974ರ ಉಪ ಚುನಾವಣೆಯಲ್ಲಿ ಸಂಸ್ಥಾ ಕಾಂಗ್ರೆಸ್‌ನ ವೆಂಕಟಲಿಂಗಯ್ಯ ಆಯ್ಕೆಯಾದರು. 1978ರಲ್ಲಿ ಜನತಾಪಕ್ಷದ ಎಚ್‌.ಗಂಗಾಧರನ್‌ ಆಯ್ಕೆಯಾದರು. 1983ರಲ್ಲಿ ಗಂಗಾಧರನ್‌ ಬಿಜೆಪಿ ಟಿಕೆಟ್‌ ಮೇಲೆ ಪುನರಾಯ್ಕೆಯಾದರು. 1985ರಲ್ಲಿ ಜನತಾಪಕ್ಷದ ವೇದಾಂತ ಹೆಮ್ಮಿಗೆ ಜಯಶೀಲರಾದರು. 1989ರಲ್ಲಿ ಕಾಂಗ್ರೆಸ್‌ನ ಕೆ.ಎನ್‌.ಸೋಮಸುಂದರಂ ಗೆದ್ದರು. 1994, 1999ರಲ್ಲಿ ಬಿಜೆಪಿಯ ಎ.ರಾಮದಾಸ್‌ ಗೆದ್ದರು. 2004ರಲ್ಲಿ ಜೆಡಿಎಸ್‌ನ ಎಂ.ಕೆ.ಸೋಮಶೇಖರ್‌ ಗೆದ್ದರು. 2008ರಲ್ಲಿ ಬಿಜೆಪಿಯ ಎಸ್‌.ಎ.ರಾಮದಾಸ್‌, 2013ರಲ್ಲಿ ಕಾಂಗ್ರೆಸ್‌ನ ಎಂ.ಕೆ.ಸೋಮಶೇಖರ್‌, 2018ರಲ್ಲಿ ಬಿಜೆಪಿಯ ಎಸ್‌.ಎ.ರಾಮದಾಸ್‌ ಗೆಲುವಿನ ರುಚಿ ಕಂಡರು. ಈ ಕ್ಷೇತ್ರದಿಂದ ಗೆದ್ದವರ ಪೈಕಿ ರಾಮದಾಸ್‌ ಸಚಿವರಾಗಿದ್ದರು.

ಕ್ಷೇತ್ರದ ಹಿನ್ನೆಲೆ

ಮೈಸೂರು ನಗರ ಮೊದಲು ಉತ್ತರ ಮತ್ತು ದಕ್ಷಿಣ ಎಂದಾಗಿತ್ತು. ಈ ಹಿಂದೆ ಈಗಿನ ಕೃಷ್ಣರಾಜ ಕ್ಷೇತ್ರವು ಮೈಸೂರು ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿತ್ತು. 1967ರಲ್ಲಿ ಕೃಷ್ಣರಾಜ ಕ್ಷೇತ್ರವಾಯಿತು. ಒಂದು ಉಪ ಚುನಾವಣೆ ಸೇರಿದಂತೆ ಈವರೆಗೆ 16 ಬಾರಿ ಚುನಾವಣೆಗಳು ನಡೆದಿದ್ದು, ಏಳು ಬಾರಿ ಕಾಂಗ್ರೆಸ್‌, ಐದು ಬಾರಿ ಬಿಜೆಪಿ, ಮೂರು ಬಾರಿ ಜನತಾ ಪರಿವಾರ ಹಾಗೂ ಒಂದು ಬಾರಿ ಪಕ್ಷೇತರರು ಗೆದ್ದಿದ್ದಾರೆ.

ಶಿರಸಿಯಲ್ಲಿ ಈವರೆಗೆ ಸೋಲನ್ನೇ ಕಾಣದ ಕಾಗೇರಿ ಗೆಲುವಿನ ಓಟ ಮುಂದುವರಿಸ್ತಾರಾ?

ಜಾತಿ ಲೆಕ್ಕಾಚಾರ

ಕ್ಷೇತ್ರದಲ್ಲಿ ಒಟ್ಟು 2,39,332 ಮತದಾರರಿದ್ದಾರೆ. ಒಕ್ಕಲಿಗರು, ಲಿಂಗಾಯತರು, ಕುರುಬರು ಗೆದ್ದಿದ್ದರೂ ಇದೊಂದು ರೀತಿಯಲ್ಲಿ ಅಘೋಷಿತ ಬ್ರಾಹ್ಮಣರ ಕ್ಷೇತ್ರ. ಬ್ರಾಹ್ಮಣರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೂ, ಎಂ.ಕೆ.ಸೋಮಶೇಖರ್‌ ಅವರು ಹೊಸ ಸಮೀಕರಣದ ಮೂಲಕ 2004ರಲ್ಲಿ ಜೆಡಿಎಸ್‌, 2013ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. 2004ರಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಅಲೆ ಇದ್ದರೆ, 2013ರಲ್ಲಿ ಬಿಜೆಪಿ-ಕೆಜೆಪಿ ನಡುವೆ ಮತ ವಿಭಜನೆಯ ಲಾಭ ಪಡೆದಿದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Political Express: ಜೆಡಿಎಸ್‌ ಅಧಿಕಾರಕ್ಕೆ ತರಲು ರೇವಣ್ಣ ಟೆಂಪಲ್ ರನ್!

Latest Videos
Follow Us:
Download App:
  • android
  • ios