ಲೋಕಸಭೆ ಚುನಾವಣೆಗೆ ಸಚಿವರ ಸ್ಪರ್ಧೆ ಕಡ್ಡಾಯ: ಬೇಕಂತಲೇ ಸೋತರೆ ಮಂತ್ರಿಗಿರಿಯಿಂದ ವಜಾ ಎಂದ ಸುರ್ಜೇವಾಲ!
ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಪತ್ತೆಗೆ ನಡೆಸುವ ಸರ್ವೇಯಲ್ಲಿ ಸಕಾರಾತ್ಮಕ ವರದಿ ಬಂದರೆ ಸಚಿವರು ಸ್ಪರ್ಧೆ ಮಾಡಬೇಕಾಗುತ್ತದೆ. ಅಷ್ಟೆ ಅಲ್ಲ, ಗೆಲ್ಲುವ ಪ್ರಮಾಣಿಕ ಪ್ರಯತ್ನವನ್ನು ಮಾಡಬೇಕಾಗುತ್ತದೆ.
ಬೆಂಗಳೂರು (ಜ.21): ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಪತ್ತೆಗೆ ನಡೆಸುವ ಸರ್ವೇಯಲ್ಲಿ ಸಕಾರಾತ್ಮಕ ವರದಿ ಬಂದರೆ ಸಚಿವರು ಸ್ಪರ್ಧೆ ಮಾಡಬೇಕಾಗುತ್ತದೆ. ಅಷ್ಟೆ ಅಲ್ಲ, ಗೆಲ್ಲುವ ಪ್ರಮಾಣಿಕ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಒಂದು ವೇಳೆ ಸಚಿವ ಸ್ಥಾನ ಉಳಿಸಿಕೊಳ್ಳಲು ಚುನಾವಣೆಯನ್ನು ಲಘುವಾಗಿ ತೆಗೆದುಕೊಂಡಿದ್ದು ಕಂಡುಬಂದರೆ ಅಂತಹ ಸಚಿವರು ತಲೆದಂಡವನ್ನು ಎದುರಿಸಬೇಕಾಗುತ್ತದೆ. ಹೀಗಂತ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಎಚ್ಚರಿಕೆ ನೀಡಿದ್ದಾರೆ.
ಕ್ವೀನ್ಸ್ ರಸ್ತೆ ಬಳಿಯ ಇಂದಿರಾ ಭವನದಲ್ಲಿ ಲೋಕಸಭೆ ಚುನಾವಣೆ ಕುರಿತು ನಡೆದ ಕೆಪಿಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ಈ ಎಚ್ಚರಿಕೆ ನೀಡಿರುವ ಅವರು, ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯಿರುವ ಸಚಿವರನ್ನು ಕಣಕ್ಕೆ ಇಳಿಸುವ ಉದ್ದೇಶ ಹೈಕಮಾಂಡ್‌ಗೆ ಇದೆ. ನನ್ನ ಪ್ರಕಾರ ಈ ಸವಾಲು ಸ್ವೀಕರಿಸಲು 8-10 ಸಚಿವರು ತಯಾರಿರಬೇಕಾಗುತ್ತದೆ. ಸಚಿವ ಸ್ಥಾನ ಉಳಿಸಿಕೊಳ್ಳಲು ಸ್ಪರ್ಧೆಯಿಂದ ಹಿಂಜರಿಯುವುದು ಅಥವಾ ಸ್ಪರ್ಧಿಸಿದ ನಂತರ ಗೆಲುವಿಗಾಗಿ ಪರಿಪೂರ್ಣ ಪ್ರಯತ್ನ ನಡೆಸದಿರುದನ್ನು ಹೈಕಮಾಂಡ್ ಸಹಿಸುವುದಿಲ್ಲ ಎಂದು ತಿಳಿಸಿದರು.
ರಾಮನ ಬಗ್ಗೆ ಸಚಿವ ರಾಜಣ್ಣ ಹೇಳಿಕೆ ಕಾಂಗ್ರೆಸ್ ಮಾನಸಿಕತೆ ತೋರಿಸುತ್ತದೆ: ಸಂಸದ ನಳಿನ್ ಕುಮಾರ್
ಎಐಸಿಸಿ ಸ್ಕ್ರೀನಿಂಗ್ ಸಮಿತಿ ಅಧ್ಯಕ್ಷ ಹರೀಶ್ ಚೌಧರಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಚುನಾವಣಾ ಸಮಿತಿ ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಭೆ ವೇಳೆಯ 28 ಲೋಕಸಭೆ ಕ್ಷೇತ್ರಗಳಿಗೆ ಸಮನ್ವಯಕಾರರನ್ನಾಗಿ ನೇಮಿಸಿರುವ ಸಚಿವರಿಂದ ಬಂದಿರುವ ಸಂಭಾವ್ಯ ಅಭ್ಯರ್ಥಿಗಳ ಪ್ರಸ್ತಾವನೆ ಕುರಿತು ಪರಿಶೀಲನೆ ನಡೆಸಲಾಯಿತು. ಈ ವೇಳೆ 18 ರಿಂದ 20 ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರಕ್ಕೂ ಒಂದರಿಂದ ಮೂರು ಮಂದಿವರೆಗೆ ಸಂಭಾವ್ಯ ಅಭ್ಯರ್ಥಿಗಳ ಕುರಿತು ಪ್ರಸ್ತಾವನೆ ಬಂದಿದೆ. ಆದರೆ, 8-10 ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿ ಕೊರತೆ ಕಂಡುಬಂದಿದೆ.
ಹೀಗಾಗಿ ಪಕ್ಷಕ್ಕಾಗಿ ಅನಿವಾರ್ಯವಾದರೆ 8-10 ಮಂದಿ ಸಚಿವರು ಚುನಾವಣೆಗೆ ನಿಲ್ಲಬೇಕಾಗಿ ಬರಬಹುದು. ಸಚಿವ ಸ್ಥಾನ ಉಳಿಸಿಕೊಳ್ಳಲು ಸ್ಪರ್ಧೆಗೆ ನಿರಾಸಕ್ತಿ ತೋರುವುದು ಅಥವಾ ಉದ್ದೇಶಪೂರ್ವಕವಾಗಿ ಚುನಾವಣೆಲ್ಲಿ ಸೋಲುವುದು ಮಾಡಿದರೆ ಅಂತಹವರ ತಲೆದಂಡ ಆಗಲಿದೆ. ಇಂತಹ ಅಶಿಸ್ತಿನ ಮೇಲೆ ನಿಗಾ ವಹಿಸಲು ಚುನಾವಣಾ ವೀಕ್ಷಕರು ಕೆಲಸ ಮಾಡಲಿದ್ದಾರೆ. ಹೀಗಾಗಿ ಚುನಾವಣೆಗೆ ಸ್ಪರ್ಧಿಸುವ ಸಚಿವರು ಶೇ.100 ರಷ್ಟು ಶ್ರಮ ಹಾಕಿ ಚುನಾವಣೆ ಗೆಲ್ಲಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಜೆಡಿಎಸ್ ಹಾಗೂ ಬಿಜೆಪಿ ಒಟ್ಟಾಗಿ ಚುನಾವಣೆ ಎದುರಿಸುತ್ತಿವೆ. ಹೀಗಾಗಿ ಚುನಾವಣೆ ಭಿನ್ನವಾಗಿರಲಿದ್ದು ಕಾಂಗ್ರೆಸ್ ಪಾಲಿಗೆ ಸವಾಲಿನದ್ದಾಗರಿಲಿದೆ. ಹೈಕಮಾಂಡ್ ಕರ್ನಾಟಕದ ಬಗ್ಗೆ ತುಂಬಾ ಆಶಾಭಾವನೆ ಹೊಂದಿದೆ. ಹೀಗಾಗಿ ಪ್ರತಿಯೊಬ್ಬರೂ ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರತ್ಯೇಕ ಸರ್ವೇ: ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ . ಶಿವಕುಮಾರ್, ಸಂಭಾವ್ಯ ಅಭ್ಯರ್ಥಿಗಳ ಕುರಿತು ಕ್ಷೇತ್ರದ ಉಸ್ತುವಾರಿಗಳು ನೀಡಿರುವ ವರದಿ ಅಂತಿಮವಲ್ಲ. ಹೈಕಮಾಂಡ್ ಹಾಗೂ ನಾವು (ಕೆಪಿಸಿಸಿ) ಪ್ರತ್ಯೇಕ ಸರ್ವೇ ಮಾಡಲಿದ್ದೇವೆ. ಬಳಿಕ ಕೇಂದ್ರ ಚುನಾವಣಾ ಸಮಿತಿಯು ಅಂತಿಮ ಪರಿಶೀಲನೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ ಎಂದು ಹೇಳಿದರು. ಈ ಬಾರಿ ತುಂಬಾ ಸವಾಲಿದ್ದು, ಸಚಿವರು ಪೂರ್ಣ ಪ್ರಮಾಣದಲ್ಲಿ ಚುನಾವಣೆಗೆ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ತಾಕೀತು ಮಾಡಿದರು ಎಂದು ಮೂಲಗಳು ತಿಳಿಸಿವೆ.
ರಾಮನಗರದಲ್ಲಿ ರಾಮಮಂದಿರ ಕಟ್ಟಲು ಕಾಂಗ್ರೆಸ್ ಸರ್ಕಾರದಿಂದ ಆಗುವುದಿಲ್ಲ: ಸಿ.ಪಿ.ಯೋಗೇಶ್ವರ್
ಮುಖ್ಯಮಂತ್ರಿ ಸಿದ್ದರಾಮಯ್ಯ, ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳದಿದ್ದರೆ ಕನಿಷ್ಠ 6-7 ಸ್ಥಾನ ಗೆಲ್ಲಬಹುದಿತ್ತು. ಇದೀಗ ಬಿಜೆಪಿಯು ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಒಂದು ವೇಳೆ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಒಮ್ಮತ ಮೂಡದಿದ್ದರೆ ಮಂಡ್ಯ, ಹಾಸನ, ತುಮಕೂರಿನಂತಹ ಕ್ಷೇತ್ರಗಳಲ್ಲಿ ಬಿಜೆಪಿಗೆ ನಷ್ಟ ಉಂಟಾಗಲಿದ್ದು, ನಾವು ಅದರ ಸದುಪಯೋಗ ಪಡೆಯಲು ಪ್ರಯತ್ನಿಸಬೇಕು. ಅಂತಹ ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಬೇಕು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕೇಂದ್ರದ ಮಾಜಿ ಸಚಿ ಮಾರ್ಗರೇಟ್ ಆಳ್ವ, ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.