Karnataka election 2023: ಮಂಗಳೂರು ದಕ್ಷಿಣ: ಕಾಂಗ್ರೆಸ್ಸಿಗೂ, ಬಿಜೆಪಿಗೂ ಗೆಲವು ಕೊಟ್ಟಕ್ಷೇತ್ರ
ದ.ಕ.ಜಿಲ್ಲೆಯ ಕೇಂದ್ರ ಸ್ಥಾನ ಮಂಗಳೂರು. ಕಡಲ ನಗರಿ ಖ್ಯಾತಿಯ ಮಂಗಳೂರು ಜಿಲ್ಲೆಯ ಆರ್ಥಿಕ ಚಟುವಟಿಕೆಯ ಪ್ರಬಲ ನಗರ. ಹಿಂದಿನಿಂದಲೂ ಕಾಂಗ್ರೆಸ್‌ನ ಆಡುಂಬೊಲ ಕ್ಷೇತ್ರವಾಗಿದ್ದ ಮಂಗಳೂರು ದಕ್ಷಿಣ ಈಗ ಬಿಜೆಪಿ ತೆಕ್ಕೆಯಲ್ಲಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಲ್ಲೂ ಶಾಸಕರಾಗಿ ಆಯ್ಕೆಯಾಗಿದ್ದಾರೆ
ಆತ್ಮಭೂಷಣ್
ಮಂಗಳೂರು (ಏ.27) : ದ.ಕ.ಜಿಲ್ಲೆಯ ಕೇಂದ್ರ ಸ್ಥಾನ ಮಂಗಳೂರು. ಕಡಲ ನಗರಿ ಖ್ಯಾತಿಯ ಮಂಗಳೂರು ಜಿಲ್ಲೆಯ ಆರ್ಥಿಕ ಚಟುವಟಿಕೆಯ ಪ್ರಬಲ ನಗರ. ಹಿಂದಿನಿಂದಲೂ ಕಾಂಗ್ರೆಸ್‌ನ ಆಡುಂಬೊಲ ಕ್ಷೇತ್ರವಾಗಿದ್ದ ಮಂಗಳೂರು ದಕ್ಷಿಣ ಈಗ ಬಿಜೆಪಿ ತೆಕ್ಕೆಯಲ್ಲಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಲ್ಲೂ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಯೋಗೀಶ್ ಭಟ್ ಅವರು ಸತತ ನಾಲ್ಕು ಬಾರಿ ಗೆದ್ದ ಕ್ಷೇತ್ರ ಇದು. ಈ ಕ್ಷೇತ್ರ 1952ರಿಂದ ತೊಡಗಿ ಇಲ್ಲಿವರೆಗೆ 71 ವರ್ಷಗಳ ಚುನಾವಣಾ ಇತಿಹಾಸ ಹೊಂದಿದೆ. ನಗರ ಪ್ರದೇಶವಾದ ಇಲ್ಲಿ ಕ್ರೈಸ್ತರು ಮತ್ತು ಬಿಲ್ಲವರ ಪ್ರಾಬಲ್ಯ ಇದೆ.
ಮದ್ರಾಸ್ ರಾಜ್ಯ ಇದ್ದಾಗ ಈ ಕ್ಷೇತ್ರಕ್ಕೆ ಮಂಗಳೂರು(Mangaluru) ಎಂದೇ ಹೆಸರಿತ್ತು. ಮೊದಲ ಚುನಾವಣೆ ಎದುರಿಸಿದ್ದು 1952ರಲ್ಲಿ. ಕಾಂಗ್ರೆಸ್‌ನ ಎಲ್.ಸಿ.ಪಾಯಸ್ ಮೊದಲ ಶಾಸಕರಾದರು. ನ್ಯಾಯವಾದಿಯಾಗಿದ್ದ ಇವರು ಕಾಂಗ್ರೆಸ್‌ನ ಹಿರಿಯ ನಾಯಕ. 1957ರಲ್ಲಿ ಮೈಸೂರು ರಾಜ್ಯಕ್ಕೆ ಸೇರಿದಾಗ ನಡೆದ ಚುನಾವಣೆಯಲ್ಲಿ ವೈಕುಂಠ ಬಾಳಿಗಾ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. 1962 ಮತ್ತು 1967ರಲ್ಲಿ ಕಾಂಗ್ರೆಸ್‌ನ ಮಣೇಲ್ ಶ್ರೀನಿವಾಸ ನಾಯಕ್ ಶಾಸಕರಾಗಿದ್ದರು. 1972ರಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಶಾಸಕರಾದರು. ಎಡ್ಡಿ ಸಲ್ದಾನಾ ಅವರು ಕಾಂಗ್ರೆಸ್‌ನಿಂದ ಗೆದ್ದು ಆಯ್ಕೆಯಾದರು. 1978ರಲ್ಲಿ ಪಿ.ಎಫ್.ರಾಡ್ರಿಗಸ್ ಶಾಸಕರಾದರು. 1983ರಲ್ಲಿ ಒಂದು ಬಾರಿ ಮಾತ್ರ ಈ ಕ್ಷೇತ್ರ ಬಿಜೆಪಿ ವಶಕ್ಕೆ ಹೋಗಿತ್ತು. ಧನಂಜಯ ಕುಮಾರ್ ಮೊದಲ ಬಿಜೆಪಿ ಶಾಸಕ ಎನಿಸಿದ್ದರು. ಆ ಬಳಿಕ ಮತ್ತೆ ಕ್ಷೇತ್ರ ಕಾಂಗ್ರೆಸ್ ವಶಕ್ಕೆ ಹೋಯಿತು. 1985 ಹಾಗೂ 1989ರಲ್ಲಿ ಕಾಂಗ್ರೆಸ್‌ನ ಬ್ಲೇಸಿಯಸ್ ಡಿ ಸೋಜಾ ಶಾಸಕರಾದರು. ಇಲ್ಲಿ ಮಣೇಲ್ ಶ್ರೀನಿವಾಸ ನಾಯಕ್ ಹಾಗೂ ಬ್ಲೇಸಿಯಸ್ ಡಿಸೋಜಾ ಮಾತ್ರ ಎರಡು ಬಾರಿ ಶಾಸಕರಾದವರು.
ಜೆಡಿಎಸ್ ಅಭ್ಯರ್ಥಿಗೆ ಮಸೀದಿಯಲ್ಲಿ ಕಾಂಗ್ರೆಸ್ ಧಮ್ಕಿ: ನಾಮಪತ್ರ ವಾಪಸ್ ಬಳಿಕವೂ ಕಿಡ್ನಾಪ್!
ಬಿಜೆಪಿ ಹಿಡಿತಕ್ಕೆ:
1994ರಿಂದ 2008ರ ವರೆಗೆ ಈ ಕ್ಷೇತ್ರ ಬಿಜೆಪಿ ಹಿಡಿತದಲ್ಲಿತ್ತು. ಗೌಡ ಸಾರಸ್ವತ ಸಮುದಾಯದ ಯೋಗೀಶ್ ಭಟ್ ಅವರು ಶಾಸಕರಾಗಿದ್ದರು. 1999, 2004 ಹಾಗೂ 2008ರಲ್ಲಿ ಯೋಗೀಶ್ ಭಟ್ ಅವರೇ ಸತತವಾಗಿ ಜಯಿಸಿದರು. ಸುಮಾರು ನಾಲ್ಕು ಅವಧಿಯಲ್ಲಿ ಅಂದರೆ 20 ವರ್ಷಗಳ ಕಾಲ ಯೋಗೀಶ್ ಭಟ್ ಅವರೊಬ್ಬರನ್ನೇ ಶಾಸಕರಾಗಿ ಆರಿಸಿದ ಕ್ಷೇತ್ರ ಇದು. ಆದರೆ 2013ರಲ್ಲಿ ಕಾಂಗ್ರೆಸ್‌ನ ಜೆ.ಆರ್. ಲೋಬೋ ಗೆದ್ದು ಬೀಗಿದ್ದರು. ಆದರೆ 2018ರಲ್ಲಿ ಈ ಕ್ಷೇತ್ರವನ್ನು ಮತ್ತೆ ತನ್ನ ವಶಕ್ಕೆ ತೆಗೆದುಕೊಂಡಿತು. ಬಿಜೆಪಿಯ ವೇದವ್ಯಾಸ ಕಾಮತ್ ಶಾಸಕರಾಗಿ ಆಯ್ಕೆಯಾದರು.
ಮಂಗಳೂರಿಗೆ ದಕ್ಕಿದ ಸಚಿವ ಸ್ಥಾನ
ಶಾಸಕರಾಗಿ ಆಯ್ಕೆಯಾದ ಪ್ರಥಮದಲ್ಲೇ ಪಿ.ಎಫ್.ರಾಡ್ರಿಗಸ್ ಅವರಿಗೆ ಗುಂಡೂರಾವ್ ಸರ್ಕಾರದಲ್ಲಿ ಸಚಿವರಾಗುವ ಅವಕಾಶ ಲಭಿಸಿತ್ತು. ನಗರ ಸಭಾ ಅಧ್ಯಕ್ಷರಾಗಿದ್ದ ಶಾಸಕರಾದ ಬ್ಲೇಸಿಯಸ್ ಡಿಸೋಜಾ ಎರಡನೇ ಅವಧಿಯಲ್ಲಿ ಪುನರಾಯ್ಕೆಯಾದಾಗ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಕಾರ್ಮಿಕ ಸಚಿವರಾದರು.
ಬಿಜೆಪಿಯ ಯೋಗೀಶ್ ಭಟ್ ಅವರು ನಾಲ್ಕನೇ ಅವಧಿಗೆ ಶಾಸಕರಾದಾಗ ವಿಧಾನಸಭೆಯ ಉಪಸಭಾಪತಿ ಆಗಿದ್ದರು. ಅಲ್ಲದೆ ಕೈಗಾರಿಕೆ ಹಾಗೂ ಬಂಡವಾಳ ಹೂಡಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿದ್ದರು.
ಅಲ್ಲಿಯೂ ಸೈ, ಇಲ್ಲಿಯೂ ಜೈ!
1952ರಲ್ಲಿ ಪಾಣೆಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿದ್ದ ವೈಕುಂಠ ಬಾಳಿಗಾ ಅವರು 1957ರಲ್ಲಿ ಮಂಗಳೂರು-1 ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಎರಡನೇ ಬಾರಿ ಶಾಸಕರಾದರು. 1962 ಮತ್ತು 1967ರಲ್ಲಿ ವೈಕುಂಠ ಬಾಳಿಗಾ ಅವರು ಕಾಂಗ್ರೆಸ್‌ನಿಂದ ಬೆಳ್ತಂಗಡಿಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಹೀಗೆ ವೈಕುಂಠ ಬಾಳಿಗಾ ಅವರು ಮೂರು ಕಡೆಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದರು.
ಮಂಗಳೂರು: ಶತ್ರು ನಾಶಕ್ಕಾಗಿ ಪ್ರತ್ಯಂಗಿರಾ ಹೋಮ ಮಾಡಿಸಿದ ಕುಮಾರಸ್ವಾಮಿ
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.