ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳು: ಪ್ರಧಾನಿ ಮೋದಿ ವಾಗ್ದಾಳಿ
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಮತ್ತು ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹತ್ಯೆ ವಿಚಾರದಲ್ಲೂ ಕಾಂಗ್ರೆಸ್‌ನವರು ತುಷ್ಟೀಕರಣದ, ವೋಟ್ ಬ್ಯಾಂಕ್ ರಾಜಕೀಯ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದರು.
ಬೆಳಗಾವಿ/ದಾವಣಗೆರೆ/ಕಾರವಾರ/ಹೊಸಪೇಟೆ (ಏ.29): ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಗಂಭೀರ ಪರಿಸ್ಥಿತಿ ತಲುಪಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಮತ್ತು ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹತ್ಯೆ ವಿಚಾರದಲ್ಲೂ ಕಾಂಗ್ರೆಸ್‌ನವರು ತುಷ್ಟೀಕರಣದ, ವೋಟ್ ಬ್ಯಾಂಕ್ ರಾಜಕೀಯ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದರು. ಬೆಳಗಾವಿ, ದಾವಣಗೆರೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಭಾನುವಾರ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು ಕಾಂಗ್ರೆಸ್ ವಿರುದ್ಧ ತೀವ್ರ ಹರಿಹಾಯ್ದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ತುಷ್ಟೀಕರಣದ ರಾಜಕಾರಣ ನಡೆಯುತ್ತಿದೆ. ಕೋಮುಗಲಭೆ, ಬಾಂಬ್ ಸ್ಫೋಟದಂತಹ ಪ್ರಕರಣಗಳು ಹೆಚ್ಚುತ್ತಿವೆ. ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಯಿತು. ಚಿಕ್ಕೋಡಿಯಲ್ಲಿ ಜೈನಮುನಿ ಹತ್ಯೆಯಾಗಿದೆ. ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡೆದ ವಿದ್ಯಾರ್ಥಿನಿಯೊಬ್ಬಳ ಹತ್ಯೆ ನಡೆಯಿತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳಿದರು.
ಬರ ಪರಿಹಾರ ಅನ್ಯಾಯ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭಿಸಿತು. ಆದರೆ ಕಾಂಗ್ರೆಸ್ಸಿಗರು ಅಲ್ಲಿ ಸಿಲಿಂಡರ್ ಸ್ಫೋಟ ಆಗಿದೆ ಎಂದಿದ್ದರು. ಸ್ಫೋಟದ ಆರೋಪಿಗಳಿಗೆ ನಿಷೇಧಿತ ಪಿಎಫ್‌ಐ ಸಂಘಟನೆ ಜತೆಗೆ ನಂಟಿದೆ. ಆದರೆ, ಕೇರಳದ ವಯನಾಡು (ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ಲೋಕಸಭಾ ಕ್ಷೇತ್ರ)ದಲ್ಲಿ ಇಂಥ ಸಂಘಟನೆಗಳ ಜತೆಗೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದೆ ಎಂದು ಕಿಡಿಕಾರಿದರು.
ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹತ್ಯೆ ಇಡೀ ದೇಶದಲ್ಲಿ ತಲ್ಲಣ ಮೂಡಿಸಿದೆ. ಕಾಲೇಜು ಕಾಲೇಜು ಕ್ಯಾಂಪಸೊಂದರಲ್ಲಿ ಹಾಡಹಗಲೇ ಈ ಹತ್ಯೆ ನಡೆದಿದೆ. ಈ ರೀತಿ ಹತ್ಯೆ ಮಾಡಲು ಧೈರ್ಯ ತೋರುವವರಿಗೆ ವೋಟ್ ಬ್ಯಾಂಕಿನ ಹಿಂದೆ ಬಿದ್ದಿರುವವರು ತಮ್ಮನ್ನು ರಕ್ಷಣೆ ಮಾಡುತ್ತಾರೆಂಬ ಸ್ಪಷ್ಟ ಅರಿವಿದೆ ಎಂದು ಮೋದಿ ಆಕ್ರೋಶ ಹೊರಹಾಕಿದರು.
ನೇಹಾ ಹತ್ಯೆಯೇನು ಸಾಮಾನ್ಯ ಪ್ರಕರಣವಲ್ಲ. ಆದರೆ ಕಾಂಗ್ರೆಸ್ ಈ ಪ್ರಕರಣದ ಮೂಲಕವೂ ತನ್ನ ವೋಟ್ ಬ್ಯಾಂಕ್ ಅನ್ನು ಗಟ್ಟಿಗೊಳಿಸಲು ಯತ್ನಿಸಿತು. ನೇಹಾಳ ತಂದೆ ಕಾಂಗ್ರೆಸ್ ಕಾರ್ಯಕರ್ತರು, ಇಂಥ ಪರಿಸ್ಥಿತಿಯಲ್ಲಿ ಅವರ ಬೆಂಬಲಕ್ಕೆ ನಿಲ್ಲಬೇಕಾದ ಕಾಂಗ್ರೆಸ್ ಸರ್ಕಾರ, ನೋವು ಕೊಟ್ಟಿತು. ಈ ಘಟನೆ ತಮ್ಮ ಹೆಣ್ಣುಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಬೇಕೋ, ಬೇಡವೋ ಎಂಬ ಚಿಂತೆ ಪಾಲಕರಲ್ಲಿ ಮೂಡಿಸಿದೆ ಎಂದ ಅವರು, ಕಾಂಗ್ರೆಸ್ ಆಡಳಿತದಡಿ ಕರ್ನಾಟಕದ ಜನ ಅಸರುಕ್ಷಿತೆಯ ಭಾವ ಎದುರಿಸುತ್ತಿದ್ದಾರೆ. ಸುರಕ್ಷತೆವೊಂದನ್ನು ಹೊರತುಪಡಿಸಿ ಜನರ ಬಳಿ ಹಣ, ಗಾಡಿ ಎಲ್ಲವೂ ಇರಬಹುದು. ಆದರೆ ಮನೆಯಿಂದ ಹೊರಹೋದವರು ಅಷ್ಟೇ ಸುರಕ್ಷಿತವಾಗಿ ವಾಪಸ್ ಬರಬಹುದು ಎಂಬ ಗ್ಯಾರಂಟಿ ಮಾತ್ರ ಇಲ್ಲ ಎಂದು ಮೋದಿ ತಿಳಿಸಿದರು.
ಎಚ್.ಡಿ.ರೇವಣ್ಣಗೆ ಬಂಧನ ಭೀತಿ?: ಪ್ರಜ್ವಲ್ ಬಳಿಕ ಆರೋಪಿ ನಂ.1 ತಂದೆಗೂ ಸಂಕಷ್ಟ
ರಾಜ್ಯದಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವ ಬದಲು ಕರ್ನಾಟಕವನ್ನು ಹಾಳುಗೆಡುವುದರಲ್ಲಿ ಕಾಂಗ್ರೆಸ್ ಸರ್ಕಾರ ಬ್ಯುಸಿಯಾಗಿದೆ. ಕಾಂಗ್ರೆಸ್ ಸಮಾಜ ವಿರೋಧಿ, ದೇಶ ವಿರೋಧಿ ಮನಸ್ಥಿತಿಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಕಿಡಿಕಾರಿದರು.