ಹಾವೇರಿಯಲ್ಲಿ ಗೆದ್ದು ಬೀಗಿದ ಶಿಗ್ಗಾವಿ ಬಸಣ್ಣ: ಸುಲಭವಾಗಿ ಸೋಲಲಿಲ್ಲ ಲಕ್ಷ್ಮೇಶ್ವರ ಸ್ವಾಮೇರು!
ಭಾರಿ ಜಿದ್ದಾಜಿದ್ದಿನಿಂದ ಕೂಡಿದ್ದ ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಗೆದ್ದು ಬೀಗಿದ್ದಾರೆ. 43,513 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ
ಹಾವೇರಿ (ಜೂ.04): ಭಾರಿ ಜಿದ್ದಾಜಿದ್ದಿನಿಂದ ಕೂಡಿದ್ದ ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಗೆದ್ದು ಬೀಗಿದ್ದಾರೆ. 43,513 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ (ಒಟ್ಟು 20 ಸುತ್ತು) ಮುನ್ನಡೆ ಕಾಯ್ದುಕೊಂಡ ಬಸವರಾಜ ಬೊಮ್ಮಾಯಿ 7,05,538 ಮತಗಳನ್ನು ಪಡೆದರು. ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ (6,62,025)ವಿರೋಚಿತ ಸೋಲನ್ನಪ್ಪಿದರು. ಅನುಭವಿ ರಾಜಕಾರಣಿ ಮತ್ತು ಯುವ ರಾಜಕಾರಣಿಯ ನಡುವಿನ ಸ್ಪರ್ಧೆಯಲ್ಲಿ ಬೊಮ್ಮಾಯಿ ಗೆಲುವಿನ ನಗೆ ಬೀರಿದರು.
ಮೋದಿ ಗ್ಯಾರಂಟಿ ಮತ್ತು ಕಾಂಗ್ರೆಸ್ ಗ್ಯಾರಂಟಿ ನಡುವೆ ಭಾರಿ ಪೈಪೋಟಿ ನಡೆದು, ಅಂತಿಮವಾಗಿ ಮತದಾರರು ಕ್ಷೇತ್ರದಲ್ಲಿ ಕಮಲವನ್ನು ಅರಳಿಸಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 2009, 2014 ಮತ್ತು 2019ರಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ‘ಹ್ಯಾಟ್ರಿಕ್ ಗೆಲುವು‘ ಸಾಧಿಸುವ ಮೂಲಕ ಕಮಲದ ಪಾಳೆಯಕ್ಕೆ ಹಾವೇರಿ ಕ್ಷೇತ್ರ ಭದ್ರಕೋಟೆ ಎನಿಸಿತ್ತು. 2024ರ ಚುನಾವಣೆಯಲ್ಲೂ ಬೊಮ್ಮಾಯಿ ಜಯ ಗಳಿಸುವ ಮೂಲಕ ಬಿಜೆಪಿಯ ಗೆಲುವಿನ ಓಟ ಮುಂದುವರಿಸಿದ್ದಾರೆ.
ಉತ್ತರ ಕನ್ನಡ ಕೋಟೆಯಲ್ಲಿ ಮತ್ತೆ ಹಾರಿದ ಕೇಸರಿ ಬಾವುಟ: ಮೊದಲ ಬಾರಿ ಗೆದ್ದ ಸರದಾರ ಕಾಗೇರಿ ಹಿನ್ನೆಲೆ ಏನು ಗೊತ್ತಾ?
ಬೊಮ್ಮಾಯಿ ಗೆಲುವಿಗೆ ಕಾರಣಗಳು
1) ನರೇಂದ್ರ ಮೋದಿ ಸಮರ್ಥ ನಾಯಕ ಎಂದು ನಂಬಿರೋ ಯುವ ಮತದಾರರು ಬಿಜೆಪಿಯತ್ತ ಮನಸ್ಸು ಮಾಡಿ ಮತ ಚಲಾಯಿಸಿದ್ದರು
2) ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ ಪ್ರಕರಣದ ನೆರಳು ಹಾವೇರಿ ಮೇಲೂ ಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿಗೆ ಮೈನಸ್ ಆದರೆ ಅದೇ ಕೋಮು ಅಂಶಗಳು ಬೊಮ್ಮಾಯಿಗೆ ವರವಾದವು
3) ಗ್ಯಾರಂಟಿ ಯೋಜನೆಗಳತ್ತ ಗ್ರಾಮೀಣ ಮಹಿಳೆಯರು ಆಕರ್ಷಿತರಾಗಿ ಕಾಂಗ್ರೆಸ್ ಗೆ ಬಟನ್ ಒತ್ತಿದ್ದರೂ, ಪುರುಷ ಮತದಾರರು ಸಹಜವಾಗೇ ತಮಗೆ ಸಿಗದ ಗ್ಯಾರಂಟಿ ಯೋಜನೆಗಳ ನೇರ ಪ್ರಯೋಜನಗಳ ಬಗ್ಗೆ ಅಸಮಾಧಾನವನ್ನು ಬಿಜೆಪಿಗೆ ಬಟನ್ ಒತ್ತುವ ಮೂಲಕ ತೀರಿಸಿಕೊಂಡರು.
4) ಬಸವರಾಜ ಬೊಮ್ಮಾಯಿ ಹಾವೇರಿ - ಗದಗ ಭಾಗಕ್ಕೆ ಚಿರಪರಿಚಿತ, ಖ್ಯಾತ ರಾಜಕಾರಣಿಯಾಗಿದ್ದು, ಮತದಾರರಿಗೆ ಬಿಜೆಪಿ ಬಟನ್ ಒತ್ತಲು ದಾರಿ ಆಯ್ತು.
ಜೊತೆಗೆ ಪಕ್ಷ ಸಂಘಟನೆ, ಹಾವೇರಿ ಜಿಲ್ಲೆಗೆ ನೀಡಿರುವ ನೀರಾವರಿ ಯೋಜನೆಗಳು ಹಾಗೂ ಜಲಸಂಪನ್ಮೂಲ ಮತ್ತು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಣೆ ಈ ಅಂಶಗಳು ಬೊಮ್ಮಾಯಿಗೆ ಗೆಲುವು ತಂದುಕೊಟ್ಟಿವೆ ಎನ್ನಲಾಗುತ್ತಿದೆ
ಸಭ್ಯ ಅಭ್ಯರ್ಥಿ ಆನಂದ್ ಸ್ವಾಮಿ ಗಡ್ಡದೇವರಮಠ ವಿರೋಚಿತ ಸೋಲಿಗೆ ಕಾರಣ ಏನು?
1) ಪಕ್ಷದ ಮುಖಂಡರ ಒಳೇಟು ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಸೋಲಿಗೆ ಕಾರಣ ಎನ್ನಲಾಗ್ತಿದೆ.
ಹಾವೇರಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳು (ಹಿರೇಕೆರೂರು, ಹಾವೇರಿ, ಬ್ಯಾಡಗಿ, ರಾಣೆಬೆನ್ನೂರು, ಹಾನಗಲ್) ಮತ್ತು ಗದಗ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರಗಳು (ಗದಗ, ರೋಣ, ಶಿರಹಟ್ಟಿ) ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಹಾವೇರಿ ಲೋಕಸಭಾ ಕ್ಷೇತ್ರ ಒಳಗೊಂಡಿದೆ. 7 ಕಾಂಗ್ರೆಸ್ ಶಾಸಕರು ಮತ್ತು ಏಕೈಕ ಬಿಜೆಪಿ ಶಾಸಕರಿದ್ದಾರೆ. 7 ಕಾಂಗ್ರೆಸ್ ಶಾಸಕರಿದ್ದರೂ ಆನಂದಸ್ವಾಮಿಗೆ ಗೆಲುವನ್ನು ತಂದುಕೊಡುವಲ್ಲಿ ವಿಫಲರಾಗಿದ್ದಾರೆ ಬಸವರಾಜ ಬೊಮ್ಮಾಯಿಗೆ ಟಿಕೆಟ್ ಘೋಷಣೆಯಾದ ಸಂದರ್ಭದಲ್ಲಿ ಗೆಲುವು ಸುಲಭದ ತುತ್ತು ಎಂದು ಬಿಜೆಪಿ ವಲಯದಲ್ಲಿ ಮಾತು ಕೇಳಿಬಂದಿತ್ತು. ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಮತ್ತು ಕಾಂಗ್ರೆಸ್ ನಾಯಕರ ಅಬ್ಬರ ಪ್ರಚಾರದಿಂದ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತು.
ಬೊಮ್ಮಾಯಿಗೆ ಸಾಥ್ ನೀಡಿದ್ದ ಮಾಜಿಗಳು: ಬೊಮ್ಮಾಯಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದ ಪ್ರತಿ ಹಳ್ಳಿ–ಹಳ್ಳಿಯಲ್ಲೂ ಚುನಾವಣಾ ಪ್ರಚಾರ ನಡೆಸಿದ್ರು.ಮತದಾರರ ವಿಶ್ವಾಸ ಗಳಿಸಲು ಇನ್ನಿಲ್ಲದ ಕಸರತ್ತು ನಡೆಸಿದರು. ಬಿಜೆಪಿಯ ಮಾಜಿ ಸಚಿವ ಬಿ.ಸಿ.ಪಾಟೀಲ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ ಬೊಮ್ಮಾಯಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡು ಬೆಂಬಲ ನೀಡಿದರು. ಗದಗ ಜಿಲ್ಲೆಯ ಶಾಸಕ ಸಿ.ಸಿ. ಪಾಟೀಲ, ಶಿರಹಟ್ಟಿಯ ಶಾಸಕ ಚಂದ್ರ ಲಮಾಣಿ, ಮಾಜಿ ಶಾಸಕ ಕಳಕಪ್ಪ ಬಂಡಿ ಹಾಗೂ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಈ ಮೂವರು ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬೊಮ್ಮಾಯಿಗೆ ಗೆಲುವು ತಂದುಕೊಡಲು ನಿರಂತರವಾಗಿ ಶ್ರಮಿಸಿದರು. ಬಿಜೆಪಿ ಮುಖಂಡರ ಸಂಘಟಿತ ಪ್ರಚಾರದಿಂದ ಕ್ಷೇತ್ರದಲ್ಲಿ ಕಮಲ ಅರಳಲು ಕಾರಣವಾಯಿತು ಎಂದು ಕಾರ್ಯಕರ್ತರು ಅನಿಸಿಕೆ ವ್ಯಕ್ತಪಡಿಸ್ತಿದ್ದಾರೆ.
ಮೋದಿ ಕ್ಯಾಬಿನೇಟ್ ನಲ್ಲಿ ಸ್ಥಾನ ಪಡೆಯುತ್ತಾರಾ ಬೊಮ್ಮಾಯಿ?: ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದು, ಲೋಕಸಭಾ ಚುನಾವಣೆಯಲ್ಲಿ ಗೆದ್ದು ನನ್ನ ತಂಡ ಸೇರುವಂತೆ ಶುಭ ಕೋರಿದ್ದರು. ಇದು ಬಿಜೆಪಿ ಕಾರ್ಯಕರ್ತರಲ್ಲಿ ಹೆಚ್ಚಿನ ಹುರುಪು ತಂದುಕೊಟ್ಟಿತ್ತು. ತಮ್ಮ ತಂದೆ ಎಸ್ ಆರ್ ಬೊಮ್ಮಾಯಿಯವರಂತೆ ಸಿಎಂ ಹುದ್ದೆ ಬಳಿಕ ಕೇಂದ್ರ ಸಚಿವರೂ ಆಗ್ತಾರೆ ಎಂಬ ಚರ್ಚೆ ನಡೆದಿದೆ.
‘ಆನಂದ’ ತಂದುಕೊಡದ ಗ್ಯಾರಂಟಿ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳೇ ಗೆಲುವಿನ ದಡ ಮುಟ್ಟಿಸುತ್ತವೆ ಎಂದು ಬಲವಾಗಿ ನಂಬಿದ್ದ ಆನಂದಸ್ವಾಮಿ ಗಡ್ಡದೇವರಮಠ ಅವರ ನಂಬಿಕೆ ಮತ್ತು ಕಾಂಗ್ರೆಸ್ ನಾಯಕರ ಮಹತ್ವಾಕಾಂಕ್ಷೆ ಹುಸಿಯಾಗಿದೆ. ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ನಂತರ ರಾಜ್ಯದಲ್ಲಿ ಎದುರಿಸಿದ ಮೊದಲ ಚುನಾವಣೆ ಇದಾಗಿತ್ತು. ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಗಳ ಫಲಾನುಭವಿಗಳಾದ ಮಹಿಳೆಯರು ‘ಕೈ’ ಹಿಡಿದರೆ ಕಾಂಗ್ರೆಸ್‌ಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂಬ ನಿರೀಕ್ಷೆ ಹುಸಿಯಾಗಿದೆ. ತಂದೆ ಎಸ್.ಆರ್. ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾದ ನಂತರ ಕೇಂದ್ರ ರಾಜಕಾರಣಕ್ಕೆ ತೆರಳಿದ್ದರು. ಅಪ್ಪನ ಹಾದಿಯಲ್ಲೇ ಮಗ ಬಸವರಾಜ ಬೊಮ್ಮಾಯಿ ಕೂಡ ಸಿಎಂ ಹುದ್ದೆಗೇರಿದ ನಂತರ ಕೇಂದ್ರ ರಾಜಕಾರಣಕ್ಕೆ ಹೋಗುತ್ತಿದ್ದು, ಕೇಂದ್ರ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ ಎಂದು ಬಿಜೆಪಿ ಮುಖಂಡರು ಆಶಾಭಾವ ವ್ಯಕ್ತಪಡಿಸಿದ್ದಾರೆ
ಮಗ ಸೋತ ಜಾಗದಲ್ಲಿ ಗೆದ್ದು ಬೀಗಿದ ಅಪ್ಪ: ಗೆಲುವಿಗೆ ಕಾರಣವಾಯ್ತು ಎಚ್‌ಡಿಕೆ ನಾಮಬಲ, ಮೈತ್ರಿ ಒಗ್ಗಟ್ಟಿನ ಫಲ
ಕುಗ್ಗಿದ ಗೆಲುವಿನ ಅಂತರ!: 2009, 2014 ಮತ್ತು 2019ರ ಮೂರು ಲೋಕಸಭಾ ಚುನಾವಣೆಗಳಲ್ಲೂ ‘ಹ್ಯಾಟ್ರಿಕ್ ಗೆಲುವು‘ ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರ ಗೆಲುವಿನ ಅಂತರ ಚುನಾವಣೆಯಿಂದ ಚುನಾವಣೆಗೆ ಹೆಚ್ಚಳವಾಗಿತ್ತು. 2009ರಲ್ಲಿ 87,920, 2014ರಲ್ಲಿ 87,571 ಹಾಗೂ 2019ರಲ್ಲಿ ಬರೋಬ್ಬರಿ 1,40,882 ಮತಗಳ ಅಂತರದಿಂದ ಶಿವಕುಮಾರ ಉದಾಸಿ ಜಯಭೇರಿ ಬಾರಿಸಿದ್ದರು. ಈ ಬಾರಿ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಬಿಜೆಪಿ ಮುಖಂಡರು ಬೀಗಿದ್ದರು. ಆದರೆ, ಈ ಬಾರಿ ಕೇವಲ 43,513 ಮತಗಳ ಅಂತರದಿಂದ ಬೊಮ್ಮಾಯಿ ಸರಳ ಗೆಲುವು ಪಡೆದಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳೇ ಗೆಲುವಿನ ಅಂತರವನ್ನು ಕಡಿಮೆ ಮಾಡಿವೆ ಎಂದು ಕ್ಷೇತ್ರದ ಜನರು ವಿಶ್ಲೇಷಿಸಿದ್ದಾರೆ.