Asianet Suvarna News Asianet Suvarna News

ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಯಾರು?: ಬಿಜೆಪಿಗೆ ಟಕ್ಕರ್‌ ಕೊಡುತ್ತಾ ಕಾಂಗ್ರೆಸ್‌

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಂಪುಟದಲ್ಲಿ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರ ತವರು ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿ ಪಕ್ಷಗಳದ್ದೇ ಮೇಲುಗೈ.

Karnataka Assembly Election 2023 Who is the Congress Candidate against Araga Jnanendra gvd
Author
First Published Mar 22, 2023, 9:26 AM IST

ಗೋಪಾಲ ಯಡಿಗೆರೆ

ಶಿವಮೊಗ್ಗ (ಮಾ.22): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಂಪುಟದಲ್ಲಿ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರ ತವರು ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿ ಪಕ್ಷಗಳದ್ದೇ ಮೇಲುಗೈ. ಪ್ರಸ್ತುತ ಬಿಜೆಪಿ ಶಾಸಕರಾಗಿರುವ ಆರಗ ಜ್ಞಾನೇಂದ್ರ, ಮತ್ತೊಮ್ಮೆ ಬಿಜೆಪಿ ಟಿಕೆಟ್‌ಗೆ ಯತ್ನಿಸುತ್ತಿದ್ದು, ಅವರ ಸ್ಪರ್ಧೆ ಬಹುತೇಕ ಖಚಿತ. ಇನ್ನು, ಜೆಡಿಎಸ್‌ನಿಂದ ರಾಜಾರಾಮ್‌ ಸ್ಪರ್ಧೆ ಖಚಿತವಾಗಿದೆ. ಆದರೆ, ಕಾಂಗ್ರೆಸ್‌ ಅಭ್ಯರ್ಥಿ ಯಾರು ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಕಡಿದಾಳ್‌ ಮಂಜಪ್ಪ ಈ ಕ್ಷೇತ್ರದ ಪ್ರಥಮ ಶಾಸಕ. 

ಸಮಾಜವಾದಿ ನೇತಾರ ಶಾಂತವೇರಿ ಗೋಪಾಲಗೌಡ, ಕೋಣಂದೂರು ಲಿಂಗಪ್ಪ, ಕಡಿದಾಳ್‌ ದಿವಾಕರ್‌ರಂತಹ ದಿಗ್ಗಜ ನಾಯಕರನ್ನು ವಿಧಾನಸಭೆಗೆ ಕಳುಹಿಸಿದ ಕ್ಷೇತ್ರವಿದು. 2018ರ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ಅವರು 67,527 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಿಮ್ಮನೆ ರತ್ನಾಕರ್‌ ಅವರು 45,572 ಮತಗಳನ್ನು ಪಡೆದು ಸೋಲು ಕಂಡರು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಯಾರಿಗೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಕಿಮ್ಮನೆ ರತ್ನಾಕರ್‌ ವಿರುದ್ಧ ಸೋತಿದ್ದ ಆರ್‌.ಎಂ.ಮಂಜುನಾಥ ಗೌಡ, ಸದ್ಯ ಕಾಂಗ್ರೆಸ್‌ನಲ್ಲಿ ಇದ್ದಾರೆ. ಮಂಜುನಾಥ್‌ ಗೌಡ ಅವರು ಕಾಂಗ್ರೆಸ್‌ಗೆ ಸೇರಿದರೂ ಕಿಮ್ಮನೆ ರತ್ನಾಕರ್‌ ಇವರ ವಿರುದ್ಧ ಕಿಡಿಕಾರುತ್ತಲೇ ಇದ್ದರು. 

ದೇಶದ ಆದರ್ಶ ರಾಜಕಾರಣಿ ಎಸ್‌.ಎಂ.ಕೃಷ್ಣ: ಎಂಎಲ್‌ಸಿ ದಿನೇಶ್‌ ಗೂಳಿಗೌಡ

ಪಕ್ಷದೊಳಗೆ ಇಬ್ಬರೂ ಆರೋಪ, ಪ್ರತ್ಯಾರೋಪ ಮಾಡಿಕೊಂಡು ಓಡಾಡುತ್ತಿದ್ದರು. ಪ್ರತ್ಯೇಕವಾಗಿ ಕಾರ್ಯಕ್ರಮಗಳನ್ನು ಮಾಡುತ್ತಾ ಪಕ್ಷದ ಸಂಘಟನೆ ಮಾಡುತ್ತಿದ್ದರೂ ಇಬ್ಬರು ಎಂದೂ ಕೂಡ ಒಂದೇ ವೇದಿಕೆ ಮೂಲಕ ಸಂಘಟನೆಗೆ ಮುಂದಾಗಿರಲಿಲ್ಲ. ಆದರೆ, ಇತ್ತೀಚಿನ ಬೆಳವಣಿಗೆಯಲ್ಲಿ ಇವರಿಬ್ಬರೂ ಒಂದಾಗಿದ್ದು, ಪಕ್ಷದ ಸಂಘಟನೆಗೆ ಇಬ್ಬರೂ ಸೇರಿ ಹೆಗಲು ಕೊಡುತ್ತಿದ್ದಾರೆ. ಪಕ್ಷ ಯಾರಿಗೆ ಟಿಕೆಟ್‌ ಕೊಟ್ಟರೂ ಸಂಘಟನೆ ಮಾಡುತ್ತೇವೆ ಎಂದು ಇಬ್ಬರೂ ಹೇಳುತ್ತಿದ್ದಾರೆ. ಹಾಗೊಂದು ವೇಳೆ ಇವರು ಹೇಳಿದಂತೆ ಇವರಿಬ್ಬರಲ್ಲಿ ಯಾರಿಗೆ ಟಿಕೆಟ್‌ ಕೊಟ್ಟರೂ ಇಬ್ಬರು ಸೇರಿ ಚುನಾವಣಾ ಪ್ರಚಾರ ಮಾಡಿದರೆ ಬಿಜೆಪಿಗೆ ಇದು ನುಂಗಲಾರದ ತುತ್ತಾಗುವುದರಲ್ಲಿ ಸಂಶಯವಿಲ್ಲ.

ಹಲವು ವರ್ಷಗಳಿಂದ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್‌ ಮತ್ತು ಆರಗ ಜ್ಞಾನೇಂದ್ರ ಈ ಕ್ಷೇತ್ರದಿಂದ ಆರಿಸಿ ಬರುತ್ತಿದ್ದಾರೆ. 1994ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಆರಗ ಜ್ಞಾನೇಂದ್ರ, ಅಂದಿನ ಪ್ರಬಲ ಸ್ಪರ್ಧಿ ಡಾ.ಬಿ.ಚಂದ್ರೇಗೌಡರನ್ನು ಸೋಲಿಸಿ, ಮೊದಲ ಬಾರಿಗೆ ವಿಧಾನಸಭೆಯ ಮೆಟ್ಟಿಲು ಏರಿದರು. ಬಳಿಕ, 1999 ಹಾಗೂ 2004ರಲ್ಲೂ ಆರಗ ಜ್ಞಾನೇಂದ್ರ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕಿಮ್ಮನೆ ರತ್ನಾಕರ್‌ ಅವರನ್ನು ಸೋಲಿಸಿ ಹ್ಯಾಟ್ರಿಕ್‌ ಬಾರಿಸಿದರು. ಆದರೆ, 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕಿಮ್ಮನೆ ರತ್ನಾಕರ್‌, ತಿರುಗೇಟು ನೀಡಿ, ಆರಗ ಜ್ಞಾನೇಂದ್ರರಿಗೆ ಸೋಲಿನ ರುಚಿ ತೋರಿಸಿದ್ದರು. ಬಳಿಕ, 2018ರಲ್ಲಿ ಆರಗ ಜ್ಞಾನೇಂದ್ರ ಮತ್ತೆ ಗೆಲುವಿನ ಕೇಕೆ ಹಾಕಿದರು.

ಕ್ಷೇತ್ರದ ಹಿನ್ನೆಲೆ: ಕಳೆದ 14 ಚುನಾವಣೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು 6 ಬಾರಿ, ಸಮಾಜವಾದಿ ಮತ್ತು ಬಿಜೆಪಿ ಅಭ್ಯರ್ಥಿಗಳು ತಲಾ 3 ಬಾರಿ, ಜನತಾ ಪಕ್ಷ ಮತ್ತು ಜನತಾದಳದ ಅಭ್ಯರ್ಥಿಗಳು ತಲಾ ಒಮ್ಮೆ ಜಯ ಗಳಿಸಿದ್ದಾರೆ. 1994, 1999 ಹಾಗೂ 2004ರಲ್ಲಿ ಗೆದ್ದು ಆರಗ ಜ್ಞಾನೇಂದ್ರ ಅವರು ಹ್ಯಾಟ್ರಿಕ್‌ ಗೆಲುವು ಸಾಧಿಸಿದರು. 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕಿಮ್ಮನೆ ರತ್ನಾಕರ್‌ ಅವರು ಆರಗ ಜ್ಞಾನೇಂದ್ರರಿಗೆ ಸೋಲಿನ ರುಚಿ ತೋರಿಸಿದ್ದರು. ಆದರೆ, 2018ರಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದ ಆರಗ ಜ್ಞಾನೇಂದ್ರ, ಪ್ರಸ್ತುತ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದಾರೆ.

ಎಸ್ಸಿ ಎಸ್ಟಿ ಮೀಸಲು ಹೆಚ್ಚಳ ಕಾಯ್ದೆ ಬೋಗಸ್‌: ಸುರ್ಜೇವಾಲಾ ಆರೋಪ

ಜಾತಿ ಲೆಕ್ಕಾಚಾರ: ಒಟ್ಟು 1,71,373 ಮತದಾರರ ಪೈಕಿ, ಲಿಂಗಾಯತರು 19,634, ಬ್ರಾಹ್ಮಣರು 20,714, ಒಕ್ಕಲಿಗರು 50,758, ಈಡಿಗರು 30,069, ಮುಸ್ಲಿಮರು 12,257, ಎಸ್‌ಸಿ 5,298 ಮತದಾರರಿದ್ದಾರೆ. ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರವಿದು.

Follow Us:
Download App:
  • android
  • ios