ಯಾದಗಿರಿ ಜಿಲ್ಲೆಯಲ್ಲಿ ಕಾಂಗ್ರೆಸ್, ಕಮಲ ಬಂಡಾಯ, ಜೆಡಿಎಸ್‌ಗೆ ಲಾಭ?
ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿಯೊಳಗಿನ ಒಳಗುದಿ ಜೆಡಿಎಸ್‌ಗೆ ಬಲ ಮೂಡಿಸಲಿದೆ ಅನ್ನೋ ಮಾತುಗಳಿವೆ. ಇನ್ನು, ತಾಂಡಾಗಳೇ ಹೆಚ್ಚಿರುವ ಇಲ್ಲಿ ಒಳಮೀಸಲಾತಿಯ ಕುದಿ ತಾಂಡವ ಕಂಡು ಬರುತ್ತಿದೆ.
ಆನಂದ್ ಎಂ. ಸೌದಿ
ಯಾದಗಿರಿ(ಏ.27): ಯಾದಗಿರಿ ಜಿಲ್ಲೆಯಲ್ಲಿ 4 ಮತಕ್ಷೇತ್ರಗಳಿವೆ. ಯಾದಗಿರಿ, ಸುರಪುರ ಹಾಗೂ ಶಹಾಪುರ ಇವುಗಳು ರಾಯಚೂರು ಲೋಕಸಭೆ ಕ್ಷೇತ್ರದೊಳಗಾದರೆ, ಗುರುಮಠಕಲ್ ಕ್ಷೇತ್ರ ಕಲಬುರಗಿ ವ್ಯಾಪ್ತಿಗೆ. ಕಳೆದ ಬಾರಿ 2 ಕಡೆಗಳಲ್ಲಿ (ಯಾದಗಿರಿ-ಸುರಪುರ) ಬಿಜೆಪಿ, ಒಂದೊಂದು ಕಡೆ ಕಾಂಗ್ರೆಸ್ (ಶಹಾಪುರ) ಹಾಗೂ ಜೆಡಿಎಸ್ (ಗುರುಮಠಕಲ್) ಗೆದ್ದಿದ್ದವು. ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿಯೊಳಗಿನ ಒಳಗುದಿ ಜೆಡಿಎಸ್‌ಗೆ ಬಲ ಮೂಡಿಸಲಿದೆ ಅನ್ನೋ ಮಾತುಗಳಿವೆ. ಇನ್ನು, ತಾಂಡಾಗಳೇ ಹೆಚ್ಚಿರುವ ಇಲ್ಲಿ ಒಳಮೀಸಲಾತಿಯ ಕುದಿ ತಾಂಡವ ಕಂಡು ಬರುತ್ತಿದೆ.
ಯಾದಗಿರಿ
ಡಾ. ಮಾಲಕರೆಡ್ಡಿ, ಯಾರಿಗೆ ಅಡ್ಡಿ?
ಹಾಲಿ ಶಾಸಕ, ಬಿಜೆಪಿಯ ವೆಂಕಟರೆಡ್ಡಿ ಮುದ್ನಾಳ್, ಕಾಂಗ್ರೆಸ್‌ನ ತುನ್ನೂರು ಚೆನ್ನಾರೆಡ್ಡಿ ಹಾಗೂ ಜೆಡಿಎಸ್‌ನ ಡಾ. ಮಾಲಕರೆಡ್ಡಿ ನಡುವೆ ತ್ರಿಕೋನ ಸ್ಪರ್ಧೆ. ಶಾಸಕ ಮುದ್ನಾಳ್ ವಿರುದ್ಧ ಕಮಲ ಪಾಳೆಯದಲ್ಲೇ ಕೆಸರೆರಚಾಟ. ಆಡಳಿತ ವಿರೋಧಿ ಅಲೆ ಇಲ್ಲಿ ಗುಪ್ತಗಾಮಿನಿ. ತೀವ್ರ ವಿರೋಧಗಳ ಮಧ್ಯೆಯೂ ಟಿಕೆಟ್ ಗಿಟ್ಟಿಸಿದ ಮುದ್ನಾಳ್‌ರಿಗೆ ಬಿಎಸ್‌ವೈ ಜಾದೂ ಕೊನೆಯ ಪ್ರಯೋಗ.
ಮಹೇಶಣ್ಣ ನೀವು ಸ್ಟ್ರಾಂಗ್ ಆಗಬೇಕು: ಕುಂಯ್ ಕುಂಯ್ ಅನ್ಕೊಂತ ಕುಂತ್ರ ಆಗಲ್ಲ!
ಖರ್ಗೆ ಹಾಗೂ ಪಕ್ಷನಿಷ್ಠತೆ ಕಾರಣದಿಂದಾಗಿ ತುನ್ನೂರು ಅವರನ್ನು ‘ಕೈ’ ಹಿಡಿದಿದೆ. ಕಾಂಗ್ರೆಸ್ ಇಷ್ಟ, ಆದರೆ ಅಭ್ಯರ್ಥಿ ಜೊತೆ ಹೊಂದಾಣಿಕೆ ಕಷ್ಟಅನ್ನೋದು ಕೈಪಾಳೆಯದ ಅಂತ ರಾಳ. ‘ಆರ್ಕೆ ಸಾಬ್’ (ಮಲ್ಲಿಕಾರ್ಜು ಖರ್ಗೆಯವರ ಅಳಿಯ ರಾಧಾಕೃಷ್ಣ) ಎಲ್ಲರನ್ನೂ ನಿಭಾಯಿಸ್ತಾರೆ ಅನ್ನೋ ವಿಶ್ವಾಸ ಚೆನ್ನಾರೆಡ್ಡಿ ಅವರದ್ದು.
ಕೈ ಟಿಕೆಟ್ ಸಿಗದಿದ್ದರಿಂದ ಕೊನೆಯ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಡಾ.ಮಾಲಕರೆಡ್ಡಿ ಅವರಿಗೀಗ ‘ಖರ್ಗೆ ಕಾಂಗ್ರೆಸ್’ ವಿರುದ್ಧ ಕೆಂಡದಂತಹ ಕೋಪ. ಕಾಂಗ್ರೆಸ್, ಬಿಜೆಪಿಯಲ್ಲಿನ ಒಳಜಗಳಗಳಿಂದಾಗಿ ‘ರಾಜಕೀಯ ಸಂತ’ನಿಗೆ ಪಟ್ಟಕಟ್ಟುವ ಪ್ರಯತ್ನ ನಡೆಯುತ್ತಿದೆ. ಅಂದಹಾಗೆ, ಪಕ್ಷೇತರ ಸ್ಪರ್ಧಿಸಿರುವ ಬೀರನಕಲ್, ಎಸ್ಯುಸಿಐ ಕೆ. ಸೋಮಶೇಖರ್ ನಿರ್ಲಕ್ಷಿಸುವಂತಿಲ್ಲ.
ಸುರಪುರ
‘ನಾಯಕ’ರಿಬ್ಬರ ಕದನ ಕುತೂಹ
ಶೂರರಪುರ ಐತಿಹ್ಯದ ಸುರಪುರಕ್ಕೆ ಬಿಜೆಪಿಯ ನರಸಿಂಹ ನಾಯಕ್ (ರಾಜೂಗೌಡ) ಹಾಲಿ ಶಾಸಕರು. ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ್ ಇಲ್ಲಿನ ಕಾಂಗ್ರೆಸ್ ಹುರಿಯಾಳು. ಇಲ್ಲಿ ಇವರಿಬ್ಬರ ಮಧ್ಯೆ ನೇರಸ್ಪರ್ಧೆ. ಒಂದು ಕಾಲದ ಗುರು-ಶಿಷ್ಯರು ಇಂದು ರಾಜಕೀಯ ವೈರಿಗಳು. ಗಲಾಟೆ- ಗುಂಪು ಘರ್ಷಣೆಗಳ ಕುಖ್ಯಾತಿಯಿಂದಾಗಿ ಇದು ಕ್ರಿಟಿಕಲ್ ಕ್ಷೇತ್ರ.
ಇನ್ನು, ರಾಜೂಗೌಡರ ವಿರುದ್ಧದ ಅಲೆಯನ್ನು ಎನ್‌ಕ್ಯಾಶ್ ಮಾಡಲು ಹೊರಟಂತಿರುವ ಕಾಂಗ್ರೆಸ್ಸಿನ ರಾಜಾ ವೆಂಕಟಪ್ಪ ನಾಯಕ್, ಕ್ಷೇತ್ರದಲ್ಲಿ ಭ್ರಷ್ಟಾಚಾರ ಹಾಗೂ ದೌರ್ಜನ್ಯಗಳ ವಿರುದ್ಧ ತಮ್ಮ ಹೋರಾಟ ಎಂದು ಗುಡುಗಿದ್ದಾರೆ. ಇಲ್ಲಿ ಶಾಸಕ ರಾಜೂಗೌಡರ ಪರ ಮುನಿಸಿಕೊಂಡಂತಿರುವ ಪ್ರಮುಖ ಸಮುದಾಯಗಳು ‘ಕೈ’ ಹಿಡಿಯುವ ಸಾಧ್ಯತೆಯಿದೆ. ಬಿಜೆಪಿ ಯುವ ಮೋರ್ಚಾದ ತಾಲೂಕು ಅಧ್ಯಕ್ಷರಾಗಿದ್ದ ಶ್ರವಣಕುಮಾರ ನಾಯಕ್ ಈಗ ಜೆಡಿಎಸ್ ಅಭ್ಯರ್ಥಿ. ಮಂಜುನಾಥ್ ನಾಯಕ್ ಇಲ್ಲಿ ಆಮ್ ಆದ್ಮಿ.
ಗುರುಮಠಕಲ್
ಕೋಲಿ ಮತಗಳಿಗೇ ಗಾಳ!
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ರಾಜಕೀಯ ಶುರುವಿಗೆ ಕಾರಣವಾದ, ಕಾಂಗ್ರೆಸ್ ಭದ್ರಕೋಟೆ ಎಂದೆನಿಸಿದ್ದ ಗುರುಮಠಕಲ್‌ನಲ್ಲಿ ಸದ್ಯ ಜೆಡಿಎಸ್‌ನ ನಾಗನಗೌಡ ಕಂದಕೂರು ಹಾಲಿ ಶಾಸಕರು. ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದರೆ, ಲಲಿತಾ ಅನಪುರ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.
ಹಾಲಿ ಶಾಸಕರ ಪುತ್ರ ಶರಣಗೌಡ ಕಂದಕೂರ ಈಗ ಜೆಡಿಎಸ್ ಅಭ್ಯರ್ಥಿ. ಸಮ್ಮಿಶ್ರ ಸರ್ಕಾರವಧಿಯಲ್ಲಿ ‘ಆಪರೇಶನ್ ಕಮಲ’ದ ಬಿಎಸ್ವೈ ಆಡಿಯೋ ರಿಲೀಸ್ ಮಾಡಿ ಎಚ್ಡಿಕೆ ಸರ್ಕಾರ ಉಳಿಸಿದವರು. ಕೋಲಿ ಮತಗಳು ಇಲ್ಲಿ ನಿರ್ಣಾಯಕ, ಚಿಂಚನಸೂರು ಈ ಸಮಾಜದ ಪ್ರಭಾವಿ ನಾಯಕ. ಖರ್ಗೆ ಸೋಲಿಸುವುದಾಗಿ ಸಡ್ಡು ಹೊಡೆದಿದ್ದ ಬಾಬುರಾವ್, ಕಾಂಗ್ರೆಸ್ ಸೇರಿ ಟಿಕೆಟ್ ಪಡೆದಿದ್ದು ಇದೇ ಖರ್ಗೆ ಕೃಪಾಕಟಾಕ್ಷದಿಂದ. ಸದ್ಯ ಅನುಕಂಪ ಹಾಗೂ ಕುಲಬಾಂಧವರ ಮತಗಳು ತಮಗೇ ಸಿಗುತ್ತವೆ ಅನ್ನೋ ವಿಶ್ವಾಸ ಅವರದ್ದು.
ಇತ್ತ, ಯಾದಗಿರಿ ಬಿಜೆಪಿ ಟಿಕೆಟ್ ಕೇಳಿದ್ದ ಲಲಿತಾ ಅನಪುರಗೆ ಸಿಕ್ಕಿದ್ದು ಗುರುಮಠಕಲ್. ಕೇಂದ್ರ ಸಚಿವೆ ಸಾ್ವ ನಿರಂಜನ ಜ್ಯೋತಿ ಅವರಿಗೆ ಆಪ್ತರು ಎನ್ನುವ ಜೊತೆಗೆ, ಸ್ಥಳೀಯ ವಾಗಿ ಕೋಲಿ ಸಮಾಜದ ಪ್ರಬಲ ನಾಯಕಿ. ಹಾಗಾಗಿ ಇದೇ ಸಮುದಾಯದ ಬಾಬುರಾವ್ ಹಾಗೂ ಲಲಿತಾ ಅವರಿಗೆ ಮತ ಹಂಚಿ ಹೋಗಬಹುದು.
ಮೇ ಮೊದಲ ವಾರ ಜೆಡಿಎಸ್ ಪರ ದೀದಿ, ಕೆಸಿಆರ್ ಪ್ರಚಾರ: ಕೇರಳ ಸಿಎಂ ಕರೆಸುವ ಬಗ್ಗೆಯೂ ಚಿಂತನೆ
ಶಹಾಪುರ
ಇಬ್ಬರ ಜಗಳ ಮೂರನೇಯವರಿಗೆ ಲಾಭ?
ಶಹಾಪುರದಲ್ಲಿ ಮಾಜಿ ಸಚಿವ, ಕಾಂಗ್ರೆಸ್‌ನ ಶರಣಬಸಪ್ಪಗೌಡ ದರ್ಶನಾಪುರ ಹಾಲಿ ಶಾಸಕರು. 2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಮೀನರೆಡ್ಡಿ ಯಾಳಗಿ ಈಗ ಬಿಜೆಪಿ ಅಭ್ಯರ್ಥಿಯಾದರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ, ಬಿಎಸ್‌ವೈ ಬಣದ ಗುರು ಪಾಟೀಲ್ ಶಿರವಾಳ ಈಗ ಜೆಡಿಎಸ್ ಅಭ್ಯರ್ಥಿ!
ಬಣಜಿಗ, ಕುರುಬ, ರೆಡ್ಡಿ ಲಿಂಗಾಯತ, ಮುಸ್ಲಿಂ ಮತಗಳು ಇಲ್ಲಿ ನಿರ್ಣಾಯಕ. ಇನ್ನು, ಬಿಜೆಪಿ ಟಿಕೆಟ್ ಸಿಗದಿದ್ದರಿಂದ ಗುರು ಪಾಟೀಲರು ಜೆಡಿಎಸ್ ಕದ ತಟ್ಟಿಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ಸಾಂಪ್ರದಾಯಿಕ ಮತಗಳು ಬೇರೆ. ರೆಡ್ಡಿ ಲಿಂಗಾಯತ ಹಾಗೂ ಮುಸ್ಲಿಂ ಮತಗಳ ವಿಭಜನೆ ಇಲ್ಲಾಗಬಹುದು. ಕೆಆರ್‌ಎಸ್, ಆಪ್ ಹಾಗೂ ಪಕ್ಷೇತರರ ಸ್ಪರ್ಧೆ ಇಲ್ಲಿದೆ.