ಗಂಗಾವತಿಯಿಂದ ರಾಜಕೀಯ ಮರು ಪ್ರವೇಶಕ್ಕೆ ಜನಾರ್ದನ ರೆಡ್ಡಿ ಸಜ್ಜು
ಸುಮಾರು 12 ವರ್ಷಗಳ ರಾಜಕೀಯ ವನವಾಸದ ಬಳಿಕ, ರಾಜಕೀಯ ಮರುಪ್ರವೇಶಕ್ಕೆ ಸಿದ್ದತೆ ನಡೆಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಯವರು, ಗಂಗಾವತಿ ಕ್ಷೇತ್ರವನ್ನು ಇದಕ್ಕಾಗಿ ಆರಿಸಿಕೊಂಡಿದ್ದಾರೆ.
ಸೋಮರಡ್ಡಿ ಅಳವಂಡಿ
ಗಂಗಾವತಿ (ಫೆ.13): ಸುಮಾರು 12 ವರ್ಷಗಳ ರಾಜಕೀಯ ವನವಾಸದ ಬಳಿಕ, ರಾಜಕೀಯ ಮರುಪ್ರವೇಶಕ್ಕೆ ಸಿದ್ದತೆ ನಡೆಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಯವರು, ಗಂಗಾವತಿ ಕ್ಷೇತ್ರವನ್ನು ಇದಕ್ಕಾಗಿ ಆರಿಸಿಕೊಂಡಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ಪಕ್ಷ ಸ್ಥಾಪಿಸಿ, ಗಂಗಾವತಿಯಿಂದ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ.
ಬಳ್ಳಾರಿಗೆ ತೆರಳಲು ಅವರಿಗೆ ಕಾನೂನಿನ ತೊಡಕಿದ್ದು, ಈ ಹಿನ್ನೆಲೆಯಲ್ಲಿ ಗಂಗಾವತಿಯನ್ನು ತಮ್ಮ ರಾಜಕೀಯ ಹೋರಾಟದ ತಾಣ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಗಂಗಾವತಿಯಲ್ಲೇ ವಾಸ್ತವ್ಯ ಮಾಡಿ, ಪ್ರಚಾರ ಕಾರ್ಯವನ್ನು ಭರ್ಜರಿಯಾಗಿಯೇ ಆರಂಭಿಸಿದ್ದಾರೆ. ದೇವಾಲಯ, ಚಚ್‌ರ್, ಮಸೀದಿಗಳಿಗೆ ಭೇಟಿ ನೀಡುತ್ತಿದ್ದು, ಎಲ್ಲರ ವಿಶ್ವಾಸ ಗಳಿಸುವ ಯತ್ನ ನಡೆಸಿದ್ದಾರೆ. ಇದು ಬಿಜೆಪಿಯ ಹಾಲಿ ಶಾಸಕ ಪರಣ್ಣ ಮುನುವಳ್ಳಿಗೆ ಆತಂಕಕ್ಕೆ ಕಾರಣವಾಗಿದೆ. ಅವರು ಮತ್ತೆ ಬಿಜೆಪಿಯಿಂದ ಅಖಾಡಕ್ಕೆ ಇಳಿಯಲು ಯತ್ನ ನಡೆಸಿದ್ದು, ತಮ್ಮ ಜಯಕ್ಕೆ ರೆಡ್ಡಿ ಸ್ಪರ್ಧೆ ತೊಡಕಾಗಬಹುದು ಎಂಬ ಆತಂಕದಲ್ಲಿದ್ದಾರೆ.
2008ರಲ್ಲಿ ಬಿಎಸ್‌ವೈಯನ್ನು ಸಿಎಂ ಮಾಡಿದ್ದು ನಾನೇ: ಜನಾರ್ದನ ರೆಡ್ಡಿ
ಇದೇ ವೇಳೆ, ಮಾಜಿ ಸಂಸದ ಎಚ್.ಜಿ.ರಾಮುಲು ಅವರ ಪುತ್ರ ಚನ್ನಕೇಶವ ಕೂಡ ಬಿಜೆಪಿ ಟಿಕೆಟ್‌ಗೆ ಲಾಬಿ ನಡೆಸಿದ್ದಾರೆ. ಶಿಕ್ಷಣ ಸಂಸ್ಥೆಗಳ ಮೂಲಕ ತಮ್ಮದೇ ಆದ ಹೆಸರು ಮಾಡಿರುವ ನೆಕ್ಕಂಟಿ ಸೂರಿಬಾಬು ಹೆಸರೂ ಕೂಡ ಚಾಲ್ತಿಯಲ್ಲಿದೆ. ರೆಡ್ಡಿಗೆ ಸೋಲುಣಿಸಿ, ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಇನ್ನು, ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಕಾಂಗ್ರೆಸ್ ಪಕ್ಷದಿಂದಲೇ ಅಖಾಡಕ್ಕೆ ಇಳಿಯಲು ತಯಾರಿ ನಡೆಸಿದ್ದಾರೆ. ಈ ಮಧ್ಯೆ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಎಚ್.ಆರ್.ಶ್ರೀನಾಥ ಅವರು ತಮಗೆ ಟಿಕೆಟ್ ಬೇಕೇ, ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ನಮ್ಮಲ್ಲಿ ಯಾರಿಗೆ ಕೊಟ್ಟರೂ ಸರಿ, ಆದರೆ, ಇಕ್ಬಾಲ್ ಅನ್ಸಾರಿಗೆ ಮಾತ್ರ ಟಿಕೆಟ್ ಕೊಡಬೇಡಿ ಎಂದು ಬಹಿರಂಗವಾಗಿಯೇ ಪಟ್ಟು ಹಿಡಿದಿದ್ದಾರೆ. ನಾಯಕರ ಈ ಒಡಕು ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿದೆ. ಪ್ರಸ್ತುತ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯ ಬೆಳವಣಿಗೆ ಗಂಗಾವತಿಯ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಂಡು ಬರುತ್ತಿದೆ. ಹೀಗಾಗಿ, ಹಿಂದುತ್ವದ ವಿಷಯ ಕೂಡ ಕ್ಷೇತ್ರದಲ್ಲಿ ಬಲಯುತವಾಗುತ್ತಿದ್ದು, ಇದರ ಆಧಾರದ ಮೇಲೆ ಟಿಕೆಟ್ ನೀಡಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ.
ಕ್ಷೇತ್ರ ಹಿನ್ನೆಲೆ: 1978ರವರೆಗೂ ಇಲ್ಲಿ ಕಾಂಗ್ರೆಸ್ ನಡೆದದ್ದೇ ದಾರಿಯಾಗಿತ್ತು. 1983ರಲ್ಲಿ ಪಕ್ಷೇತರರಾಗಿ ಅಖಾಡಕ್ಕೆ ಇಳಿದಿದ್ದ ಎಚ್.ಎಸ್.ಮುರುಳಿಧರ ಗೆಲುವು ಸಾಧಿಸಿದ್ದರು. 1985ರಲ್ಲಿ ಗೌಳಿ ಮಹದೇವಪ್ಪ ಅವರು ಜನತಾ ಪಕ್ಷದಿಂದ ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷದ ನಾಗಾಲೋಟಕ್ಕೆ ಬ್ರೇಕ್ ಬಿದ್ದಿತ್ತು. ಬಳಿಕ ಶ್ರೀರಂಗದೇವರಾಯಲು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. 2004 ಮತ್ತು 2013ರಲ್ಲಿ ಇಕ್ಬಾಲ್ ಅನ್ಸಾರಿ, 2008 ಮತ್ತು 2018ರಲ್ಲಿ ಪರಣ್ಣ ಮುನುವಳ್ಳಿ ಗೆಲುವು ಸಾಧಿಸಿದ್ದಾರೆ.
ರಕ್ಷಣಾ ರಫ್ತು 25000 ಕೋಟಿಗೆ ಹೆಚ್ಚಿಸುವ ಗುರಿ: ಕೇಂದ್ರ ಸಚಿವ ರಾಜನಾಥ್ ಸಿಂಗ್
ಜಾತಿ ಲೆಕ್ಕಾಚಾರ: ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ, ಮುಸ್ಲಿಂ ಮತಗಳು ಶಕ್ತಿಯುತವಾಗಿದ್ದು, ನಿರ್ಣಾಯಕ ಪಾತ್ರವನ್ನು ವಹಿಸುತ್ತಿವೆ. ಹಿಂದುಳಿದ ವರ್ಗ, ಕುರುಬ ಸಮುದಾಯದ ಮತಗಳೂ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿವೆ. ಕ್ಷೇತ್ರದಲ್ಲಿ ಒಟ್ಟು 1,97,219 ಮತದಾರರಿದ್ದು, ಆ ಪೈಕಿ, ಲಿಂಗಾಯತರು 55 ಸಾವಿರ, ಮುಸ್ಲಿಮರು 44 ಸಾವಿರ, ಕುರುಬರು 25 ಸಾವಿರ ಇದ್ದಾರೆ.