ಶಕ್ತಿ ಯೋಜನೆಯಿಂದ ರಾಜ್ಯದ ದೇವಸ್ಥಾನ ಭರ್ತಿ: ಕಾಂಗ್ರೆಸ್ ಗ್ಯಾರಂಟಿಗಳಿಗೆ ಜಿಟಿಡಿ ಪ್ರಶಂಸೆ
ರಾಜ್ಯ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆ, ಶಕ್ತಿ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜೆಡಿಎಸ್‌ನ ಹಿರಿಯ ಸದಸ್ಯ ಜಿ.ಟಿ.ದೇವೇಗೌಡ, ಶಕ್ತಿ ಯೋಜನೆಯಿಂದ ರಾಜ್ಯದ ಪುರಾಣ ಪುಣ್ಯ ಕ್ಷೇತ್ರಗಳು, ದೇವಸ್ಥಾನಗಳು ತುಂಬಿ ತುಳುಕುತ್ತಿವೆ ಎಂದು ಹೇಳಿದರು.
ವಿಧಾನಸಭೆ (ಜು.13): ರಾಜ್ಯ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆ, ಶಕ್ತಿ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜೆಡಿಎಸ್‌ನ ಹಿರಿಯ ಸದಸ್ಯ ಜಿ.ಟಿ.ದೇವೇಗೌಡ, ಶಕ್ತಿ ಯೋಜನೆಯಿಂದ ರಾಜ್ಯದ ಪುರಾಣ ಪುಣ್ಯ ಕ್ಷೇತ್ರಗಳು, ದೇವಸ್ಥಾನಗಳು ತುಂಬಿ ತುಳುಕುತ್ತಿವೆ ಎಂದು ಹೇಳಿದರು. ಬುಧವಾರ ರಾಜ್ಯಪಾಲರ ಭಾಷಣ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ಅತ್ಯಂತ ಮಹತ್ವದ್ದಾಗಿದ್ದು, ಸಿದ್ದರಾಮಯ್ಯ ಅವರು ತಮ್ಮ ಅನುಭವದಿಂದ ಯೋಜನೆ ಜಾರಿಗೊಳಿಸಿದ್ದಾರೆ.
ತಮಗೂ ಕೂಡ ಬಾಲ್ಯದಲ್ಲಿ ಅನ್ನದ ಮಹತ್ವ ಅರಿತುಕೊಳ್ಳುವಂತಹ ಅನುಭವಗಳಾಗಿವೆ. ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದಿರುವುದು ಖಂಡನೀಯ. ಬಿಜೆಪಿಯವರು ಗ್ಯಾರಂಟಿ ಯೋಜನೆಗಳನ್ನು ತಕ್ಷಣದಿಂದಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುವ ನೈತಿಕ ಹಕ್ಕು ಇಲ್ಲ. ಸರ್ಕಾರ ಹಣಕಾಸು ಸಂಪನ್ಮೂಲ ಹೊಂದಿಸಿಕೊಂಡು ಜಾರಿ ಮಾಡಲಿ ಎಂದು ಹೇಳಿದರು. ಇದೇ ವೇಳೆ ಈಗಾಗಲೇ ಮಂಜೂರಾಗಿರುವ ಕಾಮಗಾರಿಗಳಿಗೆ ನೀಡಲಾಗಿರುವ ತಡೆಯಾಜ್ಞೆ ತೆರವು ಮಾಡಬೇಕು.
ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ: ಭವಿಷ್ಯ ನುಡಿದ ಶಾಸಕ ವಿಜಯೇಂದ್ರ
ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಮುಂದುವರಿಸಲು ಅವಕಾಶ ನೀಡಬೇಕು. ಗ್ಯಾರಂಟಿ ಯೋಜನೆಯಿಂದಾಗಿ ಅವುಗಳಿಗೆ ಸಮಸ್ಯೆಯಾಗಬಾರದು. ಶಾಸಕಾರ ಪ್ರದೇಶಾಭಿವೃದ್ಧಿ ನಿಧಿಯಡಿ ನೀಡಲಾಗುತ್ತಿರುವ ಎರಡು ಕೋಟಿ ರು. ಅನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದರು. ಇದಕ್ಕೆ ದನಿಗೂಡಿಸಿದ ಎಂ.ಟಿ.ಕೃಷ್ಣಪ್ಪ, ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿಸಿಕೊಳ್ಳುವುದೇ ಕಷ್ಟ. ಮಂಜೂರಾಗಿರುವ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ತಕ್ಷಣ ಮಂಜೂರಾಗಿರುವ ಕಾಮಗಾರಿಗಳನ್ನು ಮುಂದುವರಿಸಲು ಟೆಂಡರ್ ಕರೆದು ಆರಂಭಿಸಬೇಕು ಎಂದು ಆಗ್ರಹಿಸಿದರು.
ಕೊಳಗೇರಿ ವಸತಿ ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಮನವಿ: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಕೊಳಗೇರಿ ವಸತಿ ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಶಾಸಕ ಜಿ.ಟಿ. ದೇವೇಗೌಡ ಮನವಿ ಮಾಡಿದರು. ವಿಧಾನಸಭೆ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಮಾತಾಡಿದ ಅವರು, ನೀರಾವರಿ ಸಚಿವರಾಗಿದ್ದ ದಿವಂಗತ ನಜೀರ್ ಸಾಬ್ ಅವರು ಮರಣ ಹೊಂದುವ ಮುನ್ನ ನನ್ನ ಪ್ರಜೆಗಳು ಸುತ್ತಲು ಇದ್ದಾರೆ, ಕುಡಿಯಲು ನೀರು ಕೊಟ್ಟೆ, ಸೂರು ಕೊಟ್ಟಿಲ್ಲ ಎಂದು ಪರಿತಪಿಸುತ್ತಿದ್ದರು.
ಅಂತ ಮಹತ್ತರ ಖಾತೆಯ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ನಿಮಗೆ ನೀಡಿದ್ದು, ಬಡವರಿಗೆ, ನಿರ್ಗತಿಕರಿಗೆ ಸೂರು ಒದಗಿಸಿಕೊಟ್ಟು ಅವರ ಆಸೆಯನ್ನು ಪೂರೈಸುವಂತೆ ತಿಳಿಸಿದರು. ನನ್ನ ಮತಕ್ಷೇತ್ರ ವ್ಯಾಪ್ತಿಯ ಹಂಚ್ಯಾ, ಸಾತಗಳ್ಳಿ, ಮಂಡಕಳ್ಳಿ, ರೂಪನಗರ (ಬೋಗಾದಿ), ಸಾತಗಳ್ಳಿ (ವಿಟಿಯು ಹಿಂಭಾಗ), ಕುಪ್ಪಲೂರು, ರಾಜೀವ್‌ನಗರ, ಏಕಲವ್ಯನಗರ ಹಾಗೂ ಕೆಸರೆಯಲ್ಲಿ ನಿರ್ಮಸಿರುವ ಒಟ್ಟು 8 ಕೊಳಗೇರಿ ವಸತಿ ಪ್ರದೇಶಗಳ 3904 ಮನೆಗಳಲ್ಲಿ ಸುಮಾರು 12752 ಫಲಾನುಭವಿಗಳು ವಾಸ ಮಾಡುತ್ತಿದ್ದು, ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಯುಜಿಡಿ, ನೀರಿನ ಟ್ಯಾಂಕ್, ವಿದ್ಯುತ್ ದೀಪಗಳನ್ನು ಅಳವಡಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ಬಿಜೆಪಿ ನೋಟಿಸ್‌ಗೆ ಉತ್ತರ ಕೊಡಲ್ಲ: ಮತ್ತೊಮ್ಮೆ ರೇಣುಕಾಚಾರ್ಯ ಗುಟುರು
ವಿದ್ಯುತ್ ಬಿಲ್ ಪಾವತಿ ಮಾಡದೇ ಸಂಪರ್ಕ ಕಡಿತಗೊಳಿಸಿದ್ದು, ತುರ್ತಾಗಿ ವಿದ್ಯುತ್ ಬಿಲ್ ಪಾವತಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈಗಾಗಲೇ ರೂಪನಗರ (ಬೋಗಾದಿ) ಹಾಗೂ ಕುಪ್ಪಲೂರು ಕೊಳಗೇರಿ ವಸತಿ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ ಸಂಬಂಧಪಟ್ಟಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಿದ್ದು, ಇನ್ನುಳಿದ 6 ವಸತಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ಹಸ್ತಾಂತರಿಸುವಂತೆ ಮನವಿ ಮಾಡಿದರು. ಶಾಸಕರ ಮನವಿಗೆ ಸ್ಪಂದಿಸಿದ ಸಚಿವ ಜಮೀರ್ ಅಹಮದ್ ಖಾನ್ ಅವರು, ಶೀಘ್ರದಲ್ಲೇ ಸಂಬಂಧಪಟ್ಟಅಧಿಕಾರಿಗಳು ಹಾಗೂ ನಿಮ್ಮನ್ನು ಕರೆದು ಸಭೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.