Bagalkote constituency: ಮೇಟಿ 8ನೇ ಕ್ಲಾಸ್, ಸವದಿ ಪಿಯುಸಿ, ಕಾಶಪ್ಪನವರ ಎಂಬಿಬಿಎಸ್!
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳಲ್ಲಿ ಪದವೀಧರರು, ಎಲ್‌ಎಲ್‌ಬಿ ಮುಗಿಸಿದವರು, ಎಂಜನಿಯರಿಂಗ್ ಕಲಿತವರು, ವೈದ್ಯಕೀಯ ಅಧ್ಯಯನ ಮಾಡಿದವರು ಇದ್ದರೆ, ಇಬ್ಬರಲ್ಲಿ ಒಬ್ಬರು ಎಂಟನೇ ಕ್ಲಾಸ್‌ವರೆಗೆ ಓದಿದ್ದರೆ, ಇನ್ನೊಬ್ಬರು ಪಿಯುಸಿವರೆಗೆ ಮಾತ್ರ ವ್ಯಾಸಂಗ ಮಾಡಿ ರಾಜಕಾರಣದಲ್ಲಿ ಉನ್ನತ ಸ್ಥಾನ ಪಡೆದವರಾಗಿದ್ದಾರೆ.
ಬಾಗಲಕೋಟೆ (ಮೇ.19) : ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳಲ್ಲಿ ಪದವೀಧರರು, ಎಲ್‌ಎಲ್‌ಬಿ ಮುಗಿಸಿದವರು, ಎಂಜನಿಯರಿಂಗ್ ಕಲಿತವರು, ವೈದ್ಯಕೀಯ ಅಧ್ಯಯನ ಮಾಡಿದವರು ಇದ್ದರೆ, ಇಬ್ಬರಲ್ಲಿ ಒಬ್ಬರು ಎಂಟನೇ ಕ್ಲಾಸ್‌ವರೆಗೆ ಓದಿದ್ದರೆ, ಇನ್ನೊಬ್ಬರು ಪಿಯುಸಿವರೆಗೆ ಮಾತ್ರ ವ್ಯಾಸಂಗ ಮಾಡಿ ರಾಜಕಾರಣದಲ್ಲಿ ಉನ್ನತ ಸ್ಥಾನ ಪಡೆದವರಾಗಿದ್ದಾರೆ.
ರಾಜಕಾರಣದಲ್ಲಿ ಶೈಕ್ಷಣಿಕ ಅರ್ಹತೆ ಮಾನದಂಡಗಳು ಯಾವತ್ತಿಗೂ ಇಲ್ಲ. ಹೀಗಾಗಿ ರಾಜಕಾರಣದ ಆಳ, ಅಗಲ, ಅನುಭವ, ಜನಸಂಪರ್ಕ, ಪ್ರತಿನಿತ್ಯದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ಸಾಮರ್ಥ್ಯವಿದ್ದರೆ ಯಶಸ್ವಿ ರಾಜಕಾರಣಿಯಾಗಲು ಸಾಧ್ಯ ಎಂಬುದನ್ನು ನಮ್ಮ ಜಿಲ್ಲೆಯ ರಾಜಕಾರಣಿಗಳು ಸಹ ಹಲವು ಬಾರಿ ಜನಪ್ರತಿನಿಧಿಗಳಾಗುವ ಮೂಲಕ ಸಾಬೀತುಪಡಿಸಿದ್ದಾರೆ.
ಕಾದು ನೋಡಿ, ನವೆಂಬರ್‌ಗೆ ರಾಜ್ಯ ರಾಜಕೀಯದಲ್ಲಿ ಬದಲಾವಣೆ: ಎಚ್.ಡಿ.ಕುಮಾರಸ್ವಾಮಿ
ತಿಮ್ಮಾಪುರ ಎಲ್‌ಎಲ್‌ಬಿ ಪದವೀಧರ:
1989ರಲ್ಲಿಯೇ 27ನೇ ವಯಸ್ಸಿಗೆ ಕಾಂಗ್ರೆಸ್ಸಿನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಮುಧೋಳ ಮೀಸಲು ಕ್ಷೇತ್ರದ ಆರ್.ಬಿ.ತಿಮ್ಮಾಪುರ ಅವರು ಬಿಎ ಎಲ್‌ಎಲ್‌ಬಿ ಪದವೀಧರರು. ಕೃಷಿ ಕುಟುಂಬದ ಹಿನ್ನೆಲೆಯ ತಿಮ್ಮಾಪುರ ಕಾಲೇಜು ದಿನಗಳಲ್ಲಿ ಉತ್ತಮ ಕಬಡ್ಡಿ ಪಟು ಸಹ ಹೌದು. ಹೀಗಾಗಿ ನಾಲ್ಕು ದಶಕಗಳ ರಾಜಕಾರಣದಲ್ಲಿ ಸಚಿವರಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿರುವ ಅವರು ಸಾಮಾಜಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಬಾರಿ ಮೂರನೇ ಬಾರಿಗೆ ಚುನಾಯಿತರಾಗಿದ್ದಾರೆ.
ಬಿಎಸ್‌ಸಿ ಪದವೀಧರ ಜೆ.ಟಿ.ಪಾಟೀಲ:
ಬೀಳಗಿ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಚುನಾಯಿತರಾಗಿರುವ ಜೆ.ಟಿ.ಪಾಟೀಲ ಬಿ.ಎಸ್‌ಸಿ ಪದವೀಧರರು. ಯುವ ಕಾಂಗ್ರೆಸ್ ಸಂಘಟನೆಯ ಮೂಲಕ ರಾಜಕಾರಣ ಪ್ರವೇಶಿಸಿರುವ ಅವರು ಅಪ್ಪಟ ಕೃಷಿ ಕುಟುಂಬದಿಂದ ಬಂದವರು. ತಮ್ಮದೇ ಆದ ನೂರಾರು ಎಕರೆ ಜಮೀನಿನಲ್ಲಿ ಕೃಷಿ ಮಾಡಿರುವ ಅವರಿಗೆ ರಾಜಕಾರಣ ಉದ್ಯೋಗವಲ್ಲ, ಬದಲಾಗಿ ಸೇವೆ ಎಂದು ಅರಿತು ಕಾರ್ಯನಿರ್ವಹಿಸಿರುವ ಅವರು ಈಗಲೂ ಸಹ ಮತದಾರರ ಭಾವನೆಗಳನ್ನು ಅರಿತು ಕಾರ್ಯನಿರ್ವಹಿಸುತ್ತಿದ್ದಾರೆ.
ಗುಡಗುಂಟಿ ಎಂಜನಿಯರಿಂಗ್ ಪದವೀಧರ:
ಜಮಖಂಡಿ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾಯಿತರಾಗಿರುವ ಜಗದೀಶ ಗುಡಗುಂಟಿ ಮೆಕ್ಯಾನಿಕಲ್ ಎಂಜನಿಯರಿಂಗ್ ಪದವೀಧರರು. ಆರಂಭಿಕ ದಿನಗಳಲ್ಲಿ ಮುಂಬೈ, ಪುಣೆ ನಗರಗಳಲ್ಲಿ ಉದ್ಯೋಗ ಅರಿಸಿ ಬದುಕು ಕಟ್ಟಿಕೊಂಡ ಅವರು ನಂತರದ ದಿನಗಳಲ್ಲಿ ಸಕ್ಕರೆ ಕಾರ್ಖಾನೆಯ ಆಳ ಅಗಲವನ್ನು ತಿಳಿದುಕೊಂಡು ಜಮಖಂಡಿ ತಾಲೂಕಿನ ಸಿದ್ಧಾಪುರದಲ್ಲಿ ಸ್ವಂತ ಸಕ್ಕರೆ ಕಾರ್ಖಾನೆಯನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಅವರದ್ದು. ಕನ್ನಡ ಸಂಘ, ಸಂಘಟನೆಯ ಮೂಲಕ ನಾಡುನುಡಿಗೆ ಸೇವೆ ಸಲ್ಲಿಸುವ ಸ್ವಭಾವದ ಅವರು ಈ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಜನರ ಸೇವೆಗೆ ಮುಂದಾಗಿದ್ದಾರೆ.
ವೈದ್ಯಕೀಯ ಪದವಿ ಪಡೆದಿರುವ ಕಾಶಪ್ಪನವರ:
ಹುನಗುಂದ ಕ್ಷೇತ್ರದಿಂದ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ವಿಜಯಾನಂದ ಕಾಶಪ್ಪನವರ ಎಂಬಿಬಿಎಸ್ ಪದವೀಧರರು. ಸದಾಕಾಲವು ಜನರ ಜೊತೆ ಇರುವ ಕಾಶಪ್ಪನವರ ಕ್ಷೇತ್ರದಲ್ಲಿ ಪ್ರಿಮಿಯರ್ ಕ್ರಿಕೆಟ್ ನಂತಹ ಕ್ರೀಡೆಗಳನ್ನು ನಡೆಸುವ ಮೂಲಕ ಯುವ ಸಮೂಹಕ್ಕೆ ಉತ್ತೇಜನ ನೀಡುತ್ತಿದ್ದು, ತಮ್ಮ ಸಂಘಟನಾತ್ಮಕ ಚಟುವಟಿಕೆಗಳಿಂದ ಕ್ರಿಯಾಶೀಲರಾಗಿದ್ದಾರೆ.
ಬಿಬಿಎ ಪದವೀಧರ ಚಿಮ್ಮನಕಟ್ಟಿ:
ಇದೇ ಮೊದಲಬಾರಿಗೆ ಶಾಸಕರಾಗಿ ಬಾದಾಮಿ ಕ್ಷೇತ್ರವನ್ನು ಪ್ರತಿನಿಧಿಸುವ ಭೀಮಸೇನ ಚಿಮ್ಮನಕಟ್ಟಿಬಿಬಿಎ ಪದವೀಧರರಾಗಿದ್ದು, ತಮ್ಮದೇ ಶಿಕ್ಷಣ ಸಂಸ್ಥೆಯಾದ ಕಾಳಿದಾಸ ಶಿಕ್ಷಣ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ತಮ್ಮ ಸಂಸ್ಥೆಯ ಮೂಲಕ ವಿವಿಧ ಚಟುವಟಿಕೆಗಳನ್ನು ನಡೆಸುವ ಅವರು ಹಲವು ವರ್ಷಗಳ ಕಾಲ ಕಾಳಿದಾಸ ಉತ್ಸವ ನಡೆಸಿ ಬಾದಾಮಿ ಭಾಗದ ಕಲಾವಿದರಿಗೆ ಅವಕಾಶವನ್ನು ನೀಡಿದ್ದರು.
ಸವದಿ ಓದಿದ್ದು ಪಿಯುಸಿ:
ತೇರದಾಳ ಕ್ಷೇತ್ರದ ಶಾಸಕರಾಗಿರುವ ಸಿದ್ದು ಸವದಿ ಅವರು ಓದಿದ್ದು ಪಿಯುಸಿ. ಆದರೂ ಸಹ ಅವರ ರಾಜಕೀಯ ಅನುಭವ ಮತ್ತು ಉದ್ಯೋಗದಲ್ಲಿನ ಆಸಕ್ತಿ ಗಮನಿಸಿದರೆ ಶಿಕ್ಷಣ ಯಾವತ್ತು ಮಾನದಂಡವಲ್ಲ ಎಂಬುವುದನ್ನು ಸಾಭೀತು ಪಡಿಸಿದ್ದಾರೆ. 2004ರಲ್ಲಿ ಜಮಖಂಡಿ ಕ್ಷೇತ್ರದಿಂದ ಆಯ್ಕೆಯಾದ ಅವರು ಕ್ಷೇತ್ರ ಪುನರ್ ವಿಂಗಡಣೆಯ ನಂತರ ತೇರದಾಳದಿಂದ ಇದು ಮೂರನೇ ಗೆಲವು ಅವರದು. ಮೂಲತಃ ಕೃಷಿ ಕುಟುಂಬದಿಂದ ಬಂದಿರುವ ಸವದಿ ಜಮಖಂಡಿಯಲ್ಲಿ ಸ್ವಂತ ಉದ್ಯೋಗದ ಮೂಲಕ ಗಮನ ಸೆಳೆದಿದ್ದರು. ಇದೀಗ ಪೂರ್ಣ ಪ್ರಮಾಣದ ರಾಜಕಾರಣಿಯಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮೈಸೂರು ಜಿಲ್ಲೆಗೆ 4ನೇ ಬಾರಿಗೆ ಒಲಿದ ಸಿಎಂ ಹುದ್ದೆ: 2 ಬಾರಿ ಸಿಎಂ ಆಗುತ್ತಿರುವುದೂ ವರುಣದಿಂದ ಗೆದ್ದಾಗಲೇ!
ಮೇಟಿ ಎಂಟನೇ ತರಗತಿ:
ಬಾಗಲಕೋಟೆಯಿಂದ ಮತ್ತೊಮ್ಮೆ ಶಾಸಕರಾಗಿರುವ ಎಚ್.ವೈ.ಮೇಟಿ ಅವರು ಓದಿದ್ದು, ಕೇವಲ ಎಂಟನೇ ತರಗತಿಯಾದರೂ ಅವರಲ್ಲಿರುವ ರಾಜಕೀಯ ಪ್ರಜ್ಞೆ ಮತ್ತು ರಾಜಕಾರಣದ ಆಳ ಅಗಲ ಗಮನಿಸಿದರೆ ನಿಜಕ್ಕೂ ಅಚ್ಚರಿ ಮೂಡುತ್ತದೆ. 1989ರಲ್ಲಿಯೇ ಶಾಸಕರಾಗಿ ಸೇವೆಗೆ ಮುಂದಾಗಿರುವ ಅವರು ಒಮ್ಮೆ ಲೋಕಸಭೆ ಸದಸ್ಯರು ಸಹ ಆಗಿ ಸೇವೆ ಸಲ್ಲಿಸಿದ್ದಾರೆ. ಅರಣ್ಯ, ಅಬಕಾರಿ ಸೇರಿದಂತೆ ಹಲವು ಖಾತೆಗಳನ್ನು ನಿಭಾಯಿಸಿರುವ ಅವರ ರಾಜಕೀಯ ಚಾಣಾಕ್ಷತೆ ಪ್ರಶ್ನಾತೀತವಾಗಿದೆ ಎಂದರೆ ತಪ್ಪಾಗಲಾರದು.