Asianet Suvarna News Asianet Suvarna News

Santosh Suicide Case: ಈಶ್ವರಪ್ಪಗೆ 1 ದಿನ ಕಾಲಾವಕಾಶ ಸಿಕ್ಕಿದ್ಹೇಗೆ?

ಬಿಜೆಪಿ ಸರ್ಕಾರಕ್ಕೆ ಮುಜುಗರ ತಂದ ಎರಡು ಪ್ರಕರಣಗಳೆಂದರೆ ಒಂದು ಜಾರಕಿಹೋಳಿ ರಾಜೀನಾಮೆಗೆ ಕಾರಣವಾದ ಸಿ.ಡಿ ಪ್ರಕರಣ ಮತ್ತು ಈಗಿನ ಗುತ್ತಿಗೆ ಪ್ರಕರಣ. 

Contractor Santosh Death Row Snowballs Minister Eshwarappa Announces Resignation hls
Author
Bengaluru, First Published Apr 15, 2022, 10:19 AM IST

ಅಧಿಕಾರ ರಾಜಕಾರಣವೇ ಹಾಗೆ; ಇಲ್ಲಿ ಉಧೋ ಎನ್ನಲು ನೂರು ಜನ ಇದ್ದರೆ, ಸಂಕಷ್ಟಗಳು ಬಂದಾಗ ಯಾರೂ ಇರುವುದಿಲ್ಲ. ಸಂತೋಷ್‌ ಪಾಟೀಲ… ಆತ್ಮಹತ್ಯೆ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ ಈಶ್ವರಪ್ಪ ರಾಜೀನಾಮೆ ಕೊಡಬೇಕು ಎಂದು ತೀರ್ಮಾನ ಆಗಿ ಹೋಗಿತ್ತು. ಕೆ.ಜೆ.ಜಾಜ್‌ರ್‍ ರಾಜೀನಾಮೆಗೆ ಅಗ್ರಹಿಸಿದ್ದ ಬಿಜೆಪಿ, ಈಗ ಈಶ್ವರಪ್ಪ ಅವರನ್ನು ಸಮರ್ಥಿಸಿಕೊಂಡರೆ ತಪ್ಪು ಸಂದೇಶ ಹೋಗುತ್ತದೆ ಎಂದು ಬಿಜೆಪಿ ಲೆಕ್ಕ ಹಾಕಿ ಆಗಿತ್ತು. ಇದಕ್ಕೆ ಈಶ್ವರಪ್ಪ ಕೂಡ ಬುಧವಾರ ಬೆಳಿಗ್ಗೆ ಒಪ್ಪಿಕೊಂಡಿದ್ದರು.

ಆದರೆ ಈಶ್ವರಪ್ಪನವರಿಗೆ ದೂರವಾಣಿ ಕರೆ ಮಾಡಿದ ದಿಲ್ಲಿ ನಾಯಕರೊಬ್ಬರು, ‘ಇಲ್ಲ ಈಗ ರಾಜೀನಾಮೆ ಘೋಷಣೆ ಮಾಡಬೇಡಿ. ನಂಬರ್‌ 1 ಅಂದರೆ ಮೋದಿ ಮತ್ತು ನಂಬರ್‌ 2 ಅಮಿತ್‌ ಶಾ ಜೊತೆ ಮಾತನಾಡುತ್ತೇವೆ. ನಂತರ ನೋಡೋಣ’ ಎಂದಾಗ ಈಶ್ವರಪ್ಪ ಸುಮ್ಮನಾಗಿದ್ದರು. ಆದರೆ ಈಶ್ವರಪ್ಪ ರಾಜೀನಾಮೆ ಕೊಡದೇ ಇದ್ದರೆ ಕಾಂಗ್ರೆಸ್‌ ಪ್ರತಿಭಟನೆ ಜೋರಾಗುತ್ತದೆ ಎಂದು ಮತ್ತು ಹೊಸಪೇಟೆ ಕಾರ್ಯಕಾರಿಣಿಗೆ ಜೆ.ಪಿ.ನಡ್ಡಾ ಬಂದರೆ ಬರೀ ಇದೇ ವಿಷಯ ಚರ್ಚೆ ಆಗುತ್ತದೆ, ಪಕ್ಷಕ್ಕೆ ಕೆಟ್ಟಹೆಸರು ಎಂಬ ಅಭಿಪ್ರಾಯ ಬಂದ ನಂತರ ಇವತ್ತು ಮಧ್ಯಾಹ್ನ ‘ನೀವು ರಾಜೀನಾಮೆ ಘೋಷಣೆ ಮಾಡಿ’ ಎಂದು ಈಶ್ವರಪ್ಪ ಅವರಿಗೆ ಜೆ.ಪಿ.ನಡ್ಡಾ ಮತ್ತು ಬಿ.ಎಲ್ ಸಂತೋಷ್‌ ಫೋನ್‌ ಮಾಡಿ ಹೇಳಿದ್ದಾರೆ.

ದಿಲ್ಲಿ ಸೂಚನೆಯ ನಂತರ ಈಶ್ವರಪ್ಪ ಬಳಿ ಬೇರೆ ದಾರಿ ಇರಲಿಲ್ಲ. ಮೇಲ್ನೋಟಕ್ಕೆ ಈಶ್ವರಪ್ಪ ವಿರುದ್ಧ ದಾಖಲೆ ಗಳು ಇರದಿದ್ದರೂ ಕಾಂಗ್ರೆಸ್ಸಿಗೆ ಲಾಭ ಮಾಡಿಕೊಳ್ಳುವ ಅವಕಾಶ ಕೊಡಬಾರದು ಎಂದು ಈಶ್ವರಪ್ಪ ರಾಜೀನಾಮೆ ಪಡೆಯುವ ನಿರ್ಧಾರಕ್ಕೆ ದಿಲ್ಲಿ ನಾಯಕರು ಬಂದಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ, ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಸರ್ಕಾರ ಮತ್ತು ಪಕ್ಷದ ಯಾವ ನಾಯಕರೂ ಈಶ್ವರಪ್ಪ ಜೊತೆ ನಿಲ್ಲಲು ತಯಾರು ಇರಲಿಲ್ಲ. ಆದರೆ ಸಂಘದ ಅನುಕಂಪ ಇರುವುದರಿಂದ ಈಶ್ವರಪ್ಪ ಅವರಿಗೆ ಒಂದು ದಿನ ಜಾಸ್ತಿ ಸಮಯ ಸಿಕ್ಕಿತು ಎಂದು ಕಾಣುತ್ತದೆ.

ಕಟೀಲ್ ಭವಿಷ್ಯ ಏನು? ವಿಜಯೇಂದ್ರ ಮಂತ್ರಿ ಆಗ್ತಾರಾ? ದಿಲ್ಲಿಯಲ್ಲಿ ಈ ಬಾರಿ ಬೊಮ್ಮಾಯಿ ಗಟ್ಟಿದನಿ

ದಿಲ್ಲಿಯಲ್ಲಿ ಏನು ನಡೆದಿತ್ತು?

ಮಾಚ್‌ರ್‍ 8ರ ಆಸುಪಾಸು ದಿಲ್ಲಿಗೆ ಬಂದು ರಾಮಲೀಲಾ ಮೈದಾನದ ಪಕ್ಕದಲ್ಲಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಬೆಳಗಾವಿಯ ಹಿಂಡಲಗಾ ಭಾಗದ ಗುತ್ತಿಗೆದಾರ ಸಂತೋಷ್‌ ಪಾಟೀಲ್ ಕೃಷಿ ಭವನ, ಶಾಸ್ತ್ರಿಭವನ, ಸೌತ್‌ ಬ್ಲಾಕ್‌, ನಾತ್‌ರ್‍ ಬ್ಲಾಕ್‌ನಲ್ಲಿ ಓಡಾಡಿ ಮೊದಲು ಈಶ್ವರಪ್ಪ ವಿರುದ್ಧ ದೂರು ಕೊಟ್ಟಿದ್ದರು. ಆಮೇಲೆ ದಿಲ್ಲಿಯ ಕನ್ನಡ ಮಾಧ್ಯಮಗಳ ಬಳಿ ಬಂದು, ‘ನಾನು 3.5 ಕೋಟಿ ಬಡ್ಡಿ ಮೇಲೆ ತೆಗೆದುಕೊಂಡು ಬಂದು ಕೆಲಸ ಮಾಡಿದ್ದೇನೆ. ನಾನು ಹಿಂದೂ ಸಂಘಟನೆ ಒಂದರ ರಾಷ್ಟ್ರೀಯ ಕಾರ್ಯದರ್ಶಿ. ಹೀಗಾಗಿ ಇದನ್ನು ಮುಗಿಸಿ ಕೊಡಪ್ಪ ಎಂದು ಈಶ್ವರಪ್ಪ ಮೌಖಿಕವಾಗಿ ಹೇಳಿದರು.

ಆದರೆ ಈಗ ವರ್ಕ್ ಆರ್ಡರ್‌ ಕೊಡುತ್ತಿಲ್ಲ, ಈಶ್ವರಪ್ಪ ಆಪ್ತರು ದುಡ್ಡು ಕೇಳುತ್ತಿದ್ದಾರೆ. ನೋಡಿ, ನನ್ನ ಬಳಿ ಈಶ್ವರಪ್ಪನವರನ್ನು ಭೇಟಿಯಾದ ಫೋಟೋ ಇದೆ’ ಎಂದು ತೋರಿಸುತ್ತಿದ್ದ. ಆದರೆ ಸಂತೋಷ್‌ ಪಾಟೀಲನ ಬಳಿ ರೋಡ್‌ ಕಾಮಗಾರಿ ನಡೆಸುವ ಫೋಟೋ, ಈಶ್ವರಪ್ಪ ಜೊತೆಗಿನ ಫೋಟೊ ಬಿಟ್ಟರೆ ಯಾವುದೇ ಟೆಂಡರ್‌ ಹೊರಡಿಸಿದ ವರ್ಕ್ ಆರ್ಡರ್‌ ಕೊಟ್ಟದಾಖಲೆಗಳಿರಲಿಲ್ಲ. ಆದರೆ ಸಂತೋಷ್‌ ಪಾಟೀಲ್ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಕೆಲ ಮಾಧ್ಯಮಗಳು ಸುದ್ದಿ ಮಾಡಿದಾಗ, ದಿಲ್ಲಿಯಿಂದ ಕೇಂದ್ರದ ಗ್ರಾಮೀಣ ಅಭಿವೃದ್ಧಿ ಕಾರ್ಯದರ್ಶಿಗಳು ರಾಜ್ಯದ ಇಲಾಖಾ ಕಾರ್ಯದರ್ಶಿ ಅತೀಕ್‌ ಅಹ್ಮದ್‌ ಅವರಿಗೆ ಪತ್ರ ಬರೆದು ವಿವರಣೆ ಕೇಳಿದಾಗ, ‘ಅತೀಕ್‌ ಅಹ್ಮದ್‌ ಅಂಥ ಯಾವುದೇ ಗುತ್ತಿಗೆ ಕೊಟ್ಟಿಲ್ಲ. ಕೆಲಸ ಮಾಡಿ ಎಂದು ಲಿಖಿತವಾಗಿ ಹೇಳಿಲ್ಲ’ ಎಂದು ತಿರುಗಿ ದಿಲ್ಲಿಗೆ ವಿವರಣೆ ಕೊಟ್ಟಿದ್ದಾರೆ. ಈ ಪತ್ರವನ್ನೇ ಆಧಾರ ಆಗಿ ಇಟ್ಟುಕೊಂಡು ಈಶ್ವರಪ್ಪನವರು ಸಂತೋಷ್‌ ಪಾಟೀಲ… ಮತ್ತು ಕೆಲ ಪತ್ರಕರ್ತರ ವಿರುದ್ಧ ಮಾನನಷ್ಟಮೊಕದ್ದಮೆ ಹೂಡಿದ್ದಾರೆ. ಅಷ್ಟರಲ್ಲಿ ದುರದೃಷ್ಟವಶಾತ್‌ ಸಂತೋಷ್‌ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಸಿಗದ ಅನೇಕ ಪ್ರಶ್ನೆಗಳನ್ನು ಬಿಟ್ಟು ಹೋಗಿದ್ದಾರೆ.

ಗುತ್ತಿಗೆ ಗಂಗೋತ್ರಿ

ಗುತ್ತಿಗೆ ಮತ್ತು ವರ್ಗಾವಣೆ ರಾಜಕಾರಣದ ಸುತ್ತಮುತ್ತಲಿನ ಪೂರ್ತಿ ವ್ಯವಸ್ಥೆಗೆ ಆಮ್ಲಜನಕ ಪೂರೈಸುವ ಗಂಗೋತ್ರಿಗಳು. ಚುನಾವಣೆಯಲ್ಲಿ ಹಂಚಿಕೆ ಆಗುವ ಕೋಟಿ ಕೋಟಿ ದುಡ್ಡು ಈ ಗುತ್ತಿಗೆಗಳ ಕಮಿಷನ್‌ನಿಂದ ಬಂದ ಹಣವೇ ಎನ್ನುವುದರಲ್ಲಿ ಸಂದೇಹ ಬೇಡ. ಈ ವ್ಯವಸ್ಥೆಯಲ್ಲಿ ಎಲ್ಲಾ ಪಕ್ಷಗಳು, ಎಲ್ಲಾ ಹಂತಗಳಲ್ಲಿ ಪಾಲುದಾರರೂ ಹೌದು. ಕೆಲವರು ಪ್ರತಿಯೊಂದು ಕೆಲಸಕ್ಕೆ ಇಂತಿಷ್ಟುಕಮಿಷನ್‌ ತೆಗೆದುಕೊಂಡು ನಿಕಾಲಿ ಮಾಡಿದರೆ, ಪಳೆಯುಳಿಕೆಯಂತಿರುವ ಕೆಲ ಮಾನವಂತ ರಾಜಕಾರಣಿಗಳು ‘ಚುನಾವಣೆ ಖರ್ಚಿಗೆ ದುಡ್ಡು ಕೊಡಬೇಕಪ್ಪಾ’ ಎಂದು ಆಮೇಲೆ ತೆಗೆದುಕೊಳ್ಳುತ್ತಾರೆ. ಇವತ್ತಿನ ವ್ಯವಸ್ಥೆ ಹೇಗಿದೆ ಎಂದರೆ ಯಾವುದೇ ಗುತ್ತಿಗೆಯಲ್ಲಿ ಮಂತ್ರಿಯಿಂದ ಹಿಡಿದು ಪಂಚಾಯತ್‌ ಸದಸ್ಯನವರೆಗೆ ಕೊಟ್ಟು, ಅಧಿಕಾರಿಗಳನ್ನು ನೋಡಿಕೊಂಡು ಉಳಿದ ಹಣದಲ್ಲಿ ಗುತ್ತಿಗೆದಾರನು ಕೆಲಸ ಮಾಡಬೇಕು. ಆಮೇಲೆ ಎಲ್ಲಾ ಮುಗಿದ ಮೇಲೆ ಬಿಲ್ ಪಾವತಿಗೂ ದರ ನಿಗದಿಯಾಗಿರುತ್ತದೆ.

ಗಾಂಧಿಗಳೇ ಅಧಿಕಾರದಲ್ಲಿದ್ದರೆ ವೋಟು ಬೀಳೋದಿಲ್ಲ, ಗಾಂಧಿಗಳು ಅಧಿಕಾರ ಬಿಟ್ರೆ ಪಕ್ಷ ಉಳಿಯೋದಿಲ್ಲ..!

ಮಜಾ ಎಂದರೆ ಮುಂಗಡ ಹಣ ಕೊಡುವವರೆಗೆ ಯಾವುದೇ ಚುನಾಯಿತ ಪ್ರತಿನಿಧಿ ಕಾಮಗಾರಿಯ ಭೂಮಿಪೂಜೆಗೂ ಬರುವುದಿಲ್ಲ. ಇದರಲ್ಲಿ ಎಲ್ಲರಿಗೂ ಕೊಟ್ಟು ಗುತ್ತಿಗೆದಾರ ಲಾಭ ಮಾಡಿಕೊಳ್ಳಬೇಕು. ಹೀಗಾಗಿಯೇ ನಮ್ಮ ಸರ್ಕಾರಿ ನಿರ್ಮಿತ ರಸ್ತೆಗಳು, ಕಟ್ಟಡಗಳು, ಸೇತುವೆಗಳ ಗುಣಮಟ್ಟಕಳಪೆ ಆಗಿರುತ್ತದೆ. ಭ್ರಷ್ಟಾಚಾರಕ್ಕೆ ಜನ ಪ್ರತಿನಿಧಿಗಳು ಎಷ್ಟುಕಾರಣರೋ, ಅಧಿಕಾರಿಗಳು, ಗುತ್ತಿಗೆದಾರರೂ ಅಷ್ಟೇ ಕಾರಣರು. ಇದೆಲ್ಲ ಎಲ್ಲಾ ಪಕ್ಷಗಳ ಸರ್ಕಾರವಿದ್ದಾಗೂ ನಡೆದುಕೊಂಡು ಬಂದಿರುವ ಸತ್‌ಸಂಪ್ರದಾಯ ಮತ್ತು ಪರಿಪಾಠ.

ಗುತ್ತಿಗೆದಾರ, ಜನಪ್ರತಿನಿಧಿ ಮತ್ತು ಅಧಿಕಾರಿಗಳ ನಡುವೆ ಒಳ್ಳೆ ಸಂಬಂಧ ಇದ್ದಾಗ, ಜನರ ಒತ್ತಡ ಇದ್ದಾಗ ವರ್ಕ್ ಆರ್ಡರ್‌ ಇಲ್ಲದೆಯೂ ಕೆಲಸ ಮಾಡಿಸುವ ನೂರಾರು ಉದಾಹರಣೆಗಳಿವೆ. ಆದರೆ ಸಂತೋಷ್‌ ಪಾಟೀಲ್ ಪ್ರಕರಣದಲ್ಲಿ ನಿಜಕ್ಕೂ ವರ್ಕ್ ಆರ್ಡರ್‌ ಇಲ್ಲದೇ ಕೆಲಸ ಮಾಡಿ ಎಂದು ಇಲಾಖೆ ಹೇಳಿತ್ತಾ? ಕೆಲಸ ಮಾಡದೇ ಸಂತೋಷ್‌ ಪಾಟೀಲ್ ಅವರನ್ನು ಈಶ್ವರಪ್ಪ ವಿರುದ್ಧ ಆರೋಪ ಮಾಡಿ ಎಂದು ಪುಸಲಾಯಿಸಲಾಯಿತಾ? ಅಥವಾ ನಿಜಕ್ಕೂ 40 ಪ್ರತಿಶತದಷ್ಟುಲಂಚ ಕೇಳಿದ್ರಾ? ಅನುಮತಿ ಇಲ್ಲದೇ ಕೆಲಸ ಮಾಡುತ್ತಿದ್ದರೆ ಇಲಾಖೆ ಸುಮ್ಮನೆ ಹೇಗೆ ಕುಳಿತಿತ್ತು? ಈ ಎಲ್ಲ ಪ್ರಶ್ನೆಗಳಿಗೆ ನಿಷ್ಪಕ್ಷಪಾತ ತನಿಖೆಯಿಂದಲೇ ಉತ್ತರ ಸಿಗಬೇಕು ಅಷ್ಟೇ.

ಮೋದಿ ಹಿಂದೂ ಪಿಚ್‌ v/s ಕಾಂಗ್ರೆಸ್‌ ಕಮಿಷನ್‌ ಗೂಗ್ಲಿ

2018ರಲ್ಲಿ ಕರ್ನಾಟಕಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ, ‘ಸಿದ್ದರಾಮಯ್ಯ ಅವರದು ಹತ್ತು ಪ್ರತಿಶತ ಕಮಿಷನ್‌ ಸರ್ಕಾರ’ ಎಂದು ಹೇಳಿದಾಗ ಕಾಂಗ್ರೆಸ್‌ ಬಹಳ ಮುಜುಗರ ಅನುಭವಿಸಿತ್ತು. ಹಾಗೆಂದು ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಪರ್ಸೆಂಟೇಜ್‌ ಕಮಿಷನ್‌ ನಿಂತಿದೆ ಎಂದು ಅರ್ಥವಲ್ಲ. ಆದರೆ ಮೋದಿ ಮಾಡಿದ ಆರೋಪದಿಂದ ಒಂದು ವಾತಾವರಣ ಸೃಷ್ಟಿಯಾಗಿತ್ತು. ಈಗ ಸಂತೋಷ್‌ ಪಾಟೀಲ್ ಆತ್ಮಹತ್ಯೆ ಬಳಸಿಕೊಂಡು ಕಾಂಗ್ರೆಸ್‌ ಕೂಡ ಬಿಜೆಪಿ ಭ್ರಷ್ಟಸರ್ಕಾರ ಎಂದು ಬಿಂಬಿಸಲು ಹರಸಾಹಸ ಪಡುತ್ತಿದೆ. ಮೋದಿ ಹೇಳಿಕೊಳ್ಳುತ್ತಿದ್ದ ಪ್ರಾಮಾಣಿಕ ಬಿಜೆಪಿ ಕರ್ನಾಟಕದಲ್ಲಿ ಇಲ್ಲ ಎಂದು ಕಾಂಗ್ರೆಸ್‌ ವಾತಾವರಣ ಸೃಷ್ಟಿಸುವ ಪ್ರಯತ್ನದಲ್ಲಿದೆ. ನಾಳೆ 2023ಕ್ಕೆ ಮೋದಿ ಪ್ರಚಾರಕ್ಕೆ ಬಂದಾಗಲೂ ಪ್ರಾಮಾಣಿಕ ಸರ್ಕಾರ ಎಂದು ಹೇಳಿಕೊಳ್ಳಲು ಅವಕಾಶ ಕೊಡಬಾರದು ಎಂದು ಕಾಂಗ್ರೆಸ್‌ ಈಗಿನಿಂದಲೇ ಸಿಕ್ಕ ಪ್ರಕರಣ ಬಳಸಿಕೊಳ್ಳುತ್ತಿದೆ.

ಹಿಂದೂ ಪಿಚ್‌ನಲ್ಲಿ ಮೋದಿ ಮತ್ತು ಬಿಜೆಪಿಯನ್ನು ಎದುರಿಸುವುದು ಕಷ್ಟ ಎಂದು ಗೊತ್ತಿದ್ದೇ ಕಾಂಗ್ರೆಸ್‌ ಬಿಜೆಪಿಯನ್ನು ಭ್ರಷ್ಟಾಚಾರದ ವಿಷಯದಲ್ಲಿ ಘೇರಾವ್‌ ಮಾಡಲು ನೋಡುತ್ತಿದೆ. ಭ್ರಷ್ಟಾಚಾರದ ವಿಷಯದಲ್ಲಿ ಹಿಂದೆ ಮುಂದೆ ನೋಡಿದರೆ ಮೋದಿ ಇಮೇಜಿಗೆ ಸರಿ ಹೊಂದುವುದಿಲ್ಲ. ತನಿಖೆ ಮುಗಿಯುವವರೆಗೆ ರಾಜೀನಾಮೆ ಕೊಡುವುದೇ ಸೂಕ್ತ ಎಂದು ಈಶ್ವರಪ್ಪನವರ ರಾಜೀನಾಮೆ ತೆಗೆದುಕೊಳ್ಳಲಾಗಿದೆ.

1990 ರಲ್ಲಿ ಕಾಶ್ಮೀರದ ನೆಲದಿಂದ ಪಂಡಿತರನ್ನು ಹೆದರಿಸಿ ಓಡಿಸಿದ ಘಟನೆಗೆ ಕಾರಣವೇನು?

ಬೆಳಗಾವಿ ಕನೆಕ್ಷನ್‌

ಬಿಜೆಪಿ ಸರ್ಕಾರಕ್ಕೆ ಮುಜುಗರ ತಂದ ಎರಡು ಪ್ರಕರಣಗಳೆಂದರೆ ಒಂದು ಜಾರಕಿಹೋಳಿ ರಾಜೀನಾಮೆಗೆ ಕಾರಣವಾದ ಸಿ.ಡಿ ಪ್ರಕರಣ ಮತ್ತು ಈಗಿನ ಗುತ್ತಿಗೆ ಪ್ರಕರಣ. ದಿಲ್ಲಿ ಬಿಜೆಪಿ ನಾಯಕರ ತಲೆ ತಿನ್ನುತ್ತಿರುವ ವಿಷಯ ಎಂದರೆ ಸಿ.ಡಿಯಲ್ಲಿದ್ದ ಹುಡುಗಿ ಬೆಳಗಾವಿಯವಳು, ಮೇಲುನೋಟಕ್ಕೆ ಕಾಂಗ್ರೆಸ್‌ ನಾಯಕರು ಸಿ.ಡಿ ಪ್ರಕರಣದ ಹಿಂದೆ ಇದ್ದರು. ಈಗಿನ ಗುತ್ತಿಗೆ ಪ್ರಕರಣದ ಮೂಲ ಇರುವುದು ಕೂಡ ಬೆಳಗಾವಿಯಲ್ಲಿ. ಇದರಲ್ಲೂ ಕಾಂಗ್ರೆಸ್ಸಿನ ಜನಪ್ರತಿನಿಧಿ ಒಬ್ಬರು ಸಕ್ರಿಯರಾಗಿದ್ದಾರೆ. ದಿಲ್ಲಿ ಬಿಜೆಪಿ ನಾಯಕರಿಗೆ ಷಡ್ಯಂತ್ರದ ವಾಸನೆ ಬಡಿದಿದೆ. ಆದರೆ ಹಾಗೆಂದು ಈಶ್ವರಪ್ಪ ಅವರನ್ನು ಕೈಬಿಡದೇ ಇಟ್ಟುಕೊಂಡರೆ ಇಡೀ ದೇಶದಲ್ಲಿ ಮೋದಿ ಭ್ರಷ್ಟಾಚಾರದ ಸಮರ್ಥನೆಗೆ ನಿಂತರು ಎಂದು ಚರ್ಚೆ ಆಗುತ್ತದೆ ಎಂದು ರಾಜೀನಾಮೆ ಸೂಚನೆ ನೀಡಲಾಗಿದೆ ಅಂತೆ.

ಈಶ್ವರಪ್ಪ ರಾಜಕೀಯ ಭವಿಷ್ಯ?

2021ರ ಜುಲೈನಲ್ಲಿ ಯಡಿಯೂರಪ್ಪರನ್ನು ಇಳಿಸಿದಾಗಲೇ ಅವರ ಸಮಕಾಲೀನರಾದ ಈಶ್ವರಪ್ಪ, ಜಗದೀಶ್‌ ಶೆಟ್ಟರ್‌, ಸದಾನಂದ ಗೌಡರನ್ನು ಅಧಿಕಾರದಿಂದ ಇಳಿಸುವ ತೀರ್ಮಾನವನ್ನು ಆರ್‌ಎಸ್‌ಎಸ್‌ ಮತ್ತು ದಿಲ್ಲಿ ನಾಯಕತ್ವ ತೆಗೆದುಕೊಂಡಿತ್ತು. ಆದರೆ ಸತತ 40 ವರ್ಷ ಪಕ್ಷಕ್ಕಾಗಿ ವಿಚಾರಕ್ಕಾಗಿ ದುಡಿದಿರುವ ಹಿಂದುಳಿದ ವರ್ಗದ ನಾಯಕನನ್ನು ಕೈಬಿಡುವುದು ಬೇಡ ಎಂದು ಸ್ಥಳೀಯ ಸಂಘ ನಿರ್ಧಾರ ಮಾಡಿದ್ದರಿಂದ ಈಶ್ವರಪ್ಪ ಬೀಸೋ ದೊಣ್ಣೆಯಿಂದ ಪಾರಾಗಿದ್ದರು. ಆದರೆ ಮೈಕ್‌ ಎದುರು ಕೊಟ್ಟರೆ ಓತಪ್ರೋತವಾಗಿ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಳ್ಳುತ್ತಿದ್ದ ಈಶ್ವರಪ್ಪ ಎಂದರೆ ಬೊಮ್ಮಾಯಿ, ಯಡಿಯೂರಪ್ಪನವರು, ಆರ್‌.ಅಶೋಕ್‌, ನಳಿನ್‌ ಕಟೀಲು, ಪ್ರಹ್ಲಾದ್‌ ಜೋಶಿ, ಸಿ.ಟಿ.ರವಿ ಹೀಗೆ ಯಾರಿಗೂ ಬೇಡ ಆಗಿ ಏಕಾಂಗಿ ಆಗಿದ್ದರು. ನಿನ್ನೆಯ ರಾಜೀನಾಮೆ ನಂತರ ಈಶ್ವರಪ್ಪ 3 ತಿಂಗಳಲ್ಲಿ ವಾಪಸ್‌ ಮಂತ್ರಿ ಆಗುತ್ತೇನೆ ಎಂದು ಆಪ್ತರ ಎದುರು ಹೇಳುತ್ತಿದ್ದಾರಾದರೂ ಅದು ಕಷ್ಟ. ಬಹುತೇಕ ಈ ರಾಜೀನಾಮೆ ಈಶ್ವರಪ್ಪನವರ ಸುದೀರ್ಘ ರಾಜಕಾರಣಕ್ಕೆ ಅಂತ್ಯ ಹಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ.

ಸಂಪುಟ ಪುನಾರಚನೆ ಅನಿವಾರ್ಯ?

ಈಶ್ವರಪ್ಪ ರಾಜೀನಾಮೆಯಿಂದ ಬೊಮ್ಮಾಯಿ ಸಂಪುಟದಲ್ಲಿ 5 ಸ್ಥಾನಗಳು ಖಾಲಿ ಆಗಿದ್ದು ಶೀಘ್ರದಲ್ಲಿ ಅದನ್ನು ತುಂಬುವುದು ದಿಲ್ಲಿ ನಾಯಕರಿಗೆ ಅನಿವಾರ್ಯ ಆಗಬಹುದು. ಬೊಮ್ಮಾಯಿ ಸಂಪುಟದಲ್ಲಿ ಅರಗ ಜ್ಞಾನೇಂದ್ರ, ಸುನೀಲ್‌ ಕುಮಾರ್‌, ಆರ್‌.ಅಶೋಕ ಬಿಟ್ಟರೆ ಪ್ರಭಾವ ಇದ್ದವರು ಎಲ್ಲರೂ ಹೊರಗಿನಿಂದ ಬಂದವರು. ಒಂದು ತಲೆಮಾರಿನ ಕೇಡರ್‌ನಿಂದ ಬಂದ ಯಡಿಯೂರಪ್ಪ ಜಗದೀಶ್‌ ಶೆಟ್ಟರ್‌, ಸುರೇಶ್‌ ಕುಮಾರ್‌, ಈಶ್ವರಪ್ಪ ಹೀಗೆ ಯಾರೂ ಕೂಡ ಸರ್ಕಾರದ ಭಾಗವಾಗಿಲ್ಲ. ಹೀಗಾಗಿ ದಿಲ್ಲಿ ನಾಯಕರಿಗೆ ಸಮತೋಲನದ ದೃಷ್ಟಿಯಿಂದ ಕಾಗೇರಿ, ಹೆಗಡೆ, ಸಿ.ಟಿ.ರವಿ, ಯತ್ನಾಳ್‌ ಗೌಡರು, ಎನ್‌.ರವಿಕುಮಾರ ಹೀಗೆ ಕೇಡರ್‌ನಿಂದ ಬಂದ ಮೂಲ ಬಿಜೆಪಿ ನಾಯಕರನ್ನು ಒಳಗೆ ತರುವುದು ಅನಿವಾರ್ಯ ಆಗಬಹುದು. ಇಲ್ಲವಾದಲ್ಲಿ ಎಷ್ಟೇ ಹಿಂದುತ್ವದ ವಿಷಯ ಎಬ್ಬಿಸಿದರೂ ಲಾಭ ಆಗುವ ಸಾಧ್ಯತೆ ಕಡಿಮೆ.

ಕುದಿಯುತ್ತಿರುವ ಶೆಟ್ಟರ್‌

ಕಳೆದ ವಾರ ಅಮಿತ್‌ ಶಾ ಅವರನ್ನು ಭೇಟಿಯಾದ ಜಗದೀಶ್‌ ಶೆಟ್ಟರ್‌ ‘ನೀವು ಕೇಡರ್‌ನಿಂದ ಬಂದ ಪ್ರಹ್ಲಾದ್‌ ಜೋಶಿ, ಸಿ.ಟಿ.ರವಿ, ಈಶ್ವರಪ್ಪ ಯಾರನ್ನಾದರೂ ಮುಖ್ಯಮಂತ್ರಿ ಮಾಡಿ. ಆದರೆ ಹೊರಗಿನಿಂದ ಬಂದ ಬೊಮ್ಮಾಯಿ ಅವರನ್ನು ಇಟ್ಟುಕೊಂಡು 2023ಕ್ಕೆ ಚುನಾವಣೆಯಲ್ಲಿ ಯಾವುದೇ ಲಾಭ ಆಗುವುದಿಲ್ಲ’ ಎಂದು ಸ್ಪಷ್ಟಶಬ್ದಗಳಲ್ಲಿ ಹೇಳಿ ಬಂದರಂತೆ. ಆರ್‌ಎಸ್‌ಎಸ್‌ ನಾಯಕರ ಬಳಿ ಕೂಡ ಓಡಾಡಿ ಬಂದಿರುವ ಶೆಟ್ಟರ್‌, ‘ನೀವು ಬೆಂಬಲ ಕೊಡುವುದಾದರೆ ಬೊಮ್ಮಾಯಿ ವಿರುದ್ಧ ಬಹಿರಂಗವಾಗಿ ಮಾತನಾಡಲು ತಯಾರಿದ್ದೇನೆ’ ಎಂದು ಕೂಡ ಹೇಳಿ ಬಂದರಂತೆ. ಅಂದ ಹಾಗೆ 1994ರಲ್ಲಿ ಹುಬ್ಬಳ್ಳಿಯಲ್ಲಿ ಆಗ ಜನತಾ ದಳದಲ್ಲಿದ್ದ ಬಸವರಾಜ್‌ ಬೊಮ್ಮಾಯಿ, ಬಿಜೆಪಿಯ ಜಗದೀಶ ಶೆಟ್ಟರ್‌ ಕೈಯಲ್ಲಿ ಸೋಲು ಅನುಭವಿಸಿದ್ದರು. ಈಗ ಅದೇ ಬಿಜೆಪಿಯಿಂದ ಬೊಮ್ಮಾಯಿ ಮುಖ್ಯಮಂತ್ರಿ, ಶೆಟ್ಟರ್‌ ಏನೂ ಇಲ್ಲ. ಈ ಅವಮಾನ ಶೆಟ್ಟರ್‌ ಅವರಿಗೆ ಸುಮ್ಮನೆ ಕೂರಲು ಬಿಡುತ್ತಿಲ್ಲ.

ಜಗತ್ತಿನೆಲ್ಲ ನಾಯಕರು ಜನಪ್ರಿಯತೆ ಕಳೆದುಕೊಳ್ಳುತ್ತಿರುವಾಗ ಮೋದಿ ಜನಪ್ರಿಯತೆ ಏರುತ್ತಿರೋದ್ಹೇಗೆ.?

ನರಸಿಂಹ ರಾವ್‌ ಮತ್ತು ಬೊಮ್ಮಾಯಿ

ಚುನಾವಣೆ ನಡೆದು 7 ತಿಂಗಳಾದರೂ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳ ಮೇಯರ್‌, ಉಪ ಮೇಯರ್‌ ಆಯ್ಕೆ ಆಗುತ್ತಿಲ್ಲ. ಇಲ್ಲಿಯವರೆಗೂ ಸ್ಥಳೀಯ ಶಾಸಕರು, ಸಚಿವರು, ಸಂಸದರು ಮುಖ್ಯಮಂತ್ರಿಗೆ ದಿಲ್ಲಿಯಲ್ಲಿರುವ ರಾಜ್ಯ ಉಸ್ತುವಾರಿಗಳಿಗೆ ಎಷ್ಟೇ ಮನವಿ ಮಾಡಿಕೊಂಡರೂ ಪಾಲಿಕೆ ಸದಸ್ಯರಿಗೆ ಅಧಿಕಾರ ಸಿಗುತ್ತಿಲ್ಲ. 7 ತಿಂಗಳಾದರೂ ಕಡತಕ್ಕೆ ಸಹಿ ಹಾಕಲು ಸಿಎಂ ತಯಾರಿಲ್ಲ. ಬಿಜೆಪಿ ನಾಯಕರು ಹೇಳುವ ಪ್ರಕಾರ, ಬೊಮ್ಮಾಯಿ ಸಾಹೇಬರು ಒಂಥರಾ ಪಿ.ವಿ.ನರಸಿಂಹ ರಾಯರು ಇದ್ದ ಹಾಗೆ. ಎಷ್ಟೇ ಗಂಟೆ ಜಾಗಟೆ ಹೊಡೆದರೂ ಬೊಮ್ಮಾಯಿ ಕಚೇರಿಯಲ್ಲಿ ಸೂಕ್ತ ಸಮಯದಲ್ಲೇ ಕಡತ ವಿಲೇವಾರಿ ಆಗೋದಂತೆ!

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್‌, ದೆಹಲಿಯಿಂದ ಕಂಡ ರಾಜಕಾರಣ

Follow Us:
Download App:
  • android
  • ios