ಪುತ್ತೂರು ಕ್ಷೇತ್ರ: 71 ವರ್ಷಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಧಿಕಾರ
ಆರಂಭದಲ್ಲಿ ಕಾಂಗ್ರೆಸ್ ಕೈಯಲ್ಲಿದ್ದ ಈ ಕ್ಷೇತ್ರ ಕ್ರಮೇಣ ಬಿಜೆಪಿ ತೆಕ್ಕೆಗೆ ಬಂತು. ಹಿಂದುತ್ವದ ಪ್ರಯೋಗ ಶಾಲೆಯಲ್ಲಿ ಪುತ್ತೂರು ಕೂಡ ಒಂದು. ಬಿಜೆಪಿಯ ಭದ್ರಕೋಟೆ ಎಂದು ಕರೆಸಿಕೊಂಡ ಇಲ್ಲಿಯೇ ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ್ದೂ ಇದೆ. ಇಂಥದ್ದೇ ಪಕ್ಷಕ್ಕೆ ನಮ್ಮ ಬೆಂಬಲ ಎಂದು ಇಲ್ಲಿನ ಮತದಾರರು ಬದ್ಧತೆ ತೋರ್ಪಡಿಸಿಲ್ಲ, ಅಭ್ಯರ್ಥಿ, ಚಾರಿತ್ರ್ಯ, ಪಕ್ಷ, ಸನ್ನಿವೇಶ ನೋಡಿಕೊಂಡು ವಿವಿಧ ಪಕ್ಷಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಹೀಗಾಗಿ ರಾಜಕೀಯ ರಂಗದಲ್ಲಿ ರಾಜ್ಯದ ಗಮನ ಸೆಳೆಯುವ, ಮತದಾರರ ಚಾಣಾಕ್ಷತನ ತೋರ್ಪಡಿಸುವ ಕ್ಷೇತ್ರ ಇದು.
ಆತ್ಮಭೂಷಣ್
ಮಂಗಳೂರು(ಏ.24): ಭೌಗೋಳಿಕವಾಗಿ ಗಡಿ ಪ್ರದೇಶಗಳನ್ನು ಒಳಗೊಂಡ ಕ್ಷೇತ್ರ ಪುತ್ತೂರು. ಕೇರಳಕ್ಕೆ ಹೊಂದಿಕೊಂಡಂತೆ ಇರುವ ಪುತ್ತೂರು ಕ್ಷೇತ್ರದಲ್ಲಿ ಕೃಷಿಕ, ಬೆಳೆಗಾರರೇ ಅಧಿಕ. ಹೆಚ್ಚಿನ ಮಂದಿ ಅಡಕೆ ಕೃಷಿ ಜತೆಗೆ ಅಲ್ಲಲ್ಲಿ ಬೇಸಾಯವೂ ಇದೆ. ಗುಡ್ಡ ಬೆಟ್ಟಗಳಿಂದ ಆವೃತ್ತ ಪ್ರದೇಶವಾದ ಪುತ್ತೂರು ಹತ್ತೂರಿಗೆ ಕೀರ್ತಿ ತಂದ ಊರು. ರಾಜಕೀಯವಾಗಿ ವಿವಿಧ ಪಕ್ಷಗಳ ಪ್ರಮುಖರನ್ನು ಬೆಳೆಸಿ ನಾಡಿಗೆ ಕಳುಹಿಸಿದ ಕ್ಷೇತ್ರ ಇದು.
ಆರಂಭದಲ್ಲಿ ಕಾಂಗ್ರೆಸ್ ಕೈಯಲ್ಲಿದ್ದ ಈ ಕ್ಷೇತ್ರ ಕ್ರಮೇಣ ಬಿಜೆಪಿ ತೆಕ್ಕೆಗೆ ಬಂತು. ಹಿಂದುತ್ವದ ಪ್ರಯೋಗ ಶಾಲೆಯಲ್ಲಿ ಪುತ್ತೂರು ಕೂಡ ಒಂದು. ಬಿಜೆಪಿಯ ಭದ್ರಕೋಟೆ ಎಂದು ಕರೆಸಿಕೊಂಡ ಇಲ್ಲಿಯೇ ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ್ದೂ ಇದೆ. ಇಂಥದ್ದೇ ಪಕ್ಷಕ್ಕೆ ನಮ್ಮ ಬೆಂಬಲ ಎಂದು ಇಲ್ಲಿನ ಮತದಾರರು ಬದ್ಧತೆ ತೋರ್ಪಡಿಸಿಲ್ಲ, ಅಭ್ಯರ್ಥಿ, ಚಾರಿತ್ರ್ಯ, ಪಕ್ಷ, ಸನ್ನಿವೇಶ ನೋಡಿಕೊಂಡು ವಿವಿಧ ಪಕ್ಷಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಹೀಗಾಗಿ ರಾಜಕೀಯ ರಂಗದಲ್ಲಿ ರಾಜ್ಯದ ಗಮನ ಸೆಳೆಯುವ, ಮತದಾರರ ಚಾಣಾಕ್ಷತನ ತೋರ್ಪಡಿಸುವ ಕ್ಷೇತ್ರ ಇದು. 1952ರ ನಂತರ 2018ರ ವರೆಗಿನ 71 ವರ್ಷಗಳಲ್ಲಿ ಕಾಂಗ್ರೆಸ್ 8 ಬಾರಿ, ಬಿಜೆಪಿ 5 ಬಾರಿ ಹಾಗೂ ಜನತಾ ಪಾರ್ಟಿ 1 ಬಾರಿ ಗೆದ್ದಿದೆ. ಉಳಿದ ರಾಜಕೀಯ ಪಕ್ಷಗಳಿಗೆ ಇಲ್ಲಿ ಗೆಲುವಿನ ಅವಕಾಶ ಸಿಕ್ಕಿಲ್ಲ.
ರಾಜಕೀಯ ಕೃಷಿಗೆ ಕಾಲಿಟ್ಟ ಕೃಷಿ ವಿಜ್ಞಾನಿ ವಿಶುಕುಮಾರ: ಹಲವು ಡಿಗ್ರಿಗಳ ಸರದಾರ ಪುತ್ತೂರು ಆಪ್ ಅಭ್ಯರ್ಥಿ
ಸತತ ಗೆದ್ದವರು:
ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟಿದ್ದಾಗ ಸುಳ್ಯವನ್ನು ಒಳಗೊಂಡಂತೆ ಪುತ್ತೂರು ದ್ವಿಸದಸ್ಯ ಕ್ಷೇತ್ರವಾಗಿತ್ತು. 1952ರಲ್ಲಿ ಕೂಜುಗೋಡು ವೆಂಕಟ್ರಮಣ ಗೌಡ, 1957ರಲ್ಲಿ ವೆಂಕಟ್ರಮಣ ಗೌಡ 2ನೇ ಬಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. 1962ರಲ್ಲಿ ಸುಳ್ಯ ಪ್ರತ್ಯೇಕ ಕ್ಷೇತ್ರವಾಗಿ ಬೇರ್ಪಟ್ಟಬಳಿಕ ಮೊದಲ ಪುತ್ತೂರು ಕ್ಷೇತ್ರದ ಶಾಸಕರಾಗುವ ಭಾಗ್ಯವೂ ವೆಂಕಟ್ರಮಣ ಗೌಡರಿಗೆ ಲಭಿಸಿತ್ತು. ಹೀಗೆ ಅವರು ಮೂರು ಬಾರಿ ಪುತ್ತೂರಿನ ಶಾಸಕರಾಗಿದ್ದರು. ಇವರನ್ನು ಹೊರತುಪಡಿಸಿರೆ ಆ ಬಳಿಕ ಯಾರೂ ಇಲ್ಲಿವರೆಗೆ ಸತತ ಮೂರು ಬಾರಿ ಪುತ್ತೂರಲ್ಲಿ ಶಾಸಕರಾಗುವ ಅದೃಷ್ಟಪಡೆದಿಲ್ಲ.
ಬಿಜೆಪಿಯ ಕೆ.ರಾಮ ಭಟ್(1978-1983) ಕಾಂಗ್ರೆಸ್‌ನ ವಿನಯಕುಮಾರ್ ಸೊರಕೆ(1985-1989), ಡಿ.ವಿ.ಸದಾನಂದ ಗೌಡ(1994-1999) ಮತ್ತು ಶಕುಂತಳಾ ಶೆಟ್ಟಿತಲಾ ಎರಡು ಬಾರಿ ಶಾಸಕರಾದವರು. ಶಕುಂತಳಾ ಶೆಟ್ಟಿಅವರು ಬಿಜೆಪಿ(2004) ಮತ್ತು ಕಾಂಗ್ರೆಸ್(2013)ನಿಂದ ಗೆಲವು ಪಡೆದಿದ್ದಾರೆ. ಈ ಪೈಕಿ ರಾಮ ಭಟ್ಟರು 1957ರಿಂದ 1985ರ ವರೆಗೆ ಒಟ್ಟು ಏಳು ಬಾರಿ ಸ್ಪರ್ಧಿಸಿದ್ದರು, ಎರಡು ಬಾರಿ ಲೋಕಸಭೆಗೂ ಸ್ಪರ್ಧಿಸಿದ್ದರು.
ಪುತ್ತೂರಿನ ಪ್ರಥಮ ಸಚಿವ:
ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆಗಿದ್ದಾಗ ಪುತ್ತೂರಿನ ಶಾಸಕರಾಗಿದ್ದ ವಿಠಲದಾಸ ಶೆಟ್ಟಿಅವರಿಗೆ ಸಚಿವ ಸ್ಥಾನ ಅವಕಾಶ ಲಭಿಸಿತ್ತು. ಪುತ್ತೂರಿನ ಮೊದಲ ಸಚಿವ ಎಂಬ ಹೆಗ್ಗಳಿಕೆ ಇವರದಾಗಿತ್ತು. ಆಗ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ವಿಠಲದಾಸ ಶೆಟ್ಟಿಅವರು 1967ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಇವರ ಬಳಿಕ ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಸಂಸದ ಶಂಕರ ಆಳ್ವ ಅವರು 1972ರಲ್ಲಿ ಪುತ್ತೂರಲ್ಲಿ ಸ್ಪರ್ಧಿಸಿ ಗೆದ್ದರು. ದೇವರಾಜ ಅರಸು ಸಂಪುಟದಲ್ಲಿ ಇವರು ಕೂಡ ಸಹಕಾರ ಸಚಿವರಾಗಿದ್ದರು. ನಂತರ ಇಲ್ಲಿವರೆಗೆ ಪುತ್ತೂರಿನಲ್ಲಿ ಶಾಸಕರಾದರೂ ಸಚಿವರಾಗುವ ಅವಕಾಶ ಸಿಗಲೇ ಇಲ್ಲ.
ಕೈ ಬಿಟ್ಟ ಕಾಂಗ್ರೆಸ್:
ನಿರಂತರ ಐದು ಅವಧಿಯಲ್ಲಿ ಕಾಂಗ್ರೆಸ್ ವಶದಲ್ಲಿದ್ದ ಪುತ್ತೂರು ಕ್ಷೇತ್ರ ಕೈಬಿಟ್ಟದ್ದು 1978ರಲ್ಲಿ. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಂಕಪ್ಪ ರೈ ಬಂಡಾಯ ಸ್ಪರ್ಧಿಸಿದ ಕಾರಣ ಜನತಾ ಪಾರ್ಟಿಯ ಕೆ.ರಾಮ ಭಟ್ ಜಯಿಸಿದರು. 1983ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ರಾಮ ಭಟ್ ಪುನರಾಯ್ಕೆಯಾದರು. ಆಗ ಸಂಕಪ್ಪ ರೈ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೂ ಗೆಲ್ಲಲಾಗಲಿಲ್ಲ.
ಯುವಕರ ಪ್ರವೇಶ:
ಪುತ್ತೂರು ಕ್ಷೇತ್ರಕ್ಕೆ ಯುವ ರಾಜಕಾರಣಿಗಳ ಪ್ರವೇಶವಾದ್ದು 1985ರಲ್ಲಿ. ಕಾಂಗ್ರೆಸ್‌ನ ವಿನಯ ಕುಮಾರ್ ಸೊರಕೆ ಅವರು ಮೊದಲ ಪ್ರಯತ್ನದಲ್ಲೇ ಗೆದ್ದುಬಂದರು. 1989ರಲ್ಲಿ ಎರಡನೇ ಬಾರಿ ಗೆದ್ದರು. ಆದರೆ ಮೂರನೇ ಅವಧಿಗೆ ಶಾಸಕರಾಗಲು ಸಾಧ್ಯವಾಗಲಿಲ್ಲ. 1994ರಲ್ಲಿ ಡಿ.ವಿ.ಸದಾನಂದ ಗೌಡ ಅವರು ಗೆದ್ದು ಕ್ಷೇತ್ರವನ್ನು ಮರಳಿ ಬಿಜೆಪಿ ತೆಕ್ಕೆಗೆ ತಂದರು. 1999ರಲ್ಲಿ ಎರಡನೇ ಬಾರಿ ಪುನರಾಯ್ಕೆಯಾದರು. ಇದೇ ವೇಳೆ ಉಡುಪಿಯಿಂದ ವಿನಯ ಕುಮಾರ್ ಸೊರಕೆ ಲೋಕಸಭೆಗೆ ಸ್ಪರ್ಧಿಸಿ ಸಂಸದರಾದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಡಿ.ವಿ.ಸದಾನಂದ ಗೌಡ ಮಂಗಳೂರು ಸಂಸದರಾದರು.
ಮಹಿಳಾ ಶಾಸಕರು: ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಮಹಿಳಾ ಶಾಸಕಿಯಾದ್ದು ಶಕುಂತಳಾ ಶೆಟ್ಟಿ. 2004ರಲ್ಲಿ ಶಕುಂತಳಾ ಶೆಟ್ಟಿಶಾಸಕಿಯಾದರೆ, 2008ರಲ್ಲಿ ಅವರಿಗೆ ಟಿಕೆಟ್ ನಿರಾಕರಣೆಯಾಗಿ ಬಂಡಾಯ ಸ್ಪರ್ಧಿಸಿದ್ದರು. ಆಗ ಬಿಜೆಪಿಯ ಮಲ್ಲಿಕಾ ಪ್ರಸಾದ್ ಗೆಲುವು ಪಡೆದಿದ್ದರು. ಮತ್ತೆ ಶಕುಂತಳಾ ಶೆಟ್ಟಿಶಾಸಕಿಯಾದ್ದು 2013ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾಗ. 2018ರಲ್ಲಿ ಈ ಕ್ಷೇತ್ರ ಮತ್ತೆ ಬಿಜೆಪಿ ಪಾಲಾಗಿದ್ದು, ಸಂಜೀವ ಮಠಂದೂರು ಶಾಸಕರಾದರು.
ಇನಾಯತ್ ಅಲಿಗೆ ಟಿಕೆಟ್: ಮೊಯ್ದಿನ್ ಬಾವಾ ಕಾಂಗ್ರೆಸ್‌ಗೆ ಗುಡ್‌ಬೈ
ಪುತ್ತೂರಿನಿಂದ ಹತ್ತೂರಿಗೆ ನೆಗೆದವರು!
ಪುತ್ತೂರಿನಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾದವರು ಬೇರೆ ಕಡೆಗೂ ಸೀಮೋಲ್ಲಂಘನ ಮಾಡಿ ಯಶಸ್ವಿಯಾಗಿದ್ದಾರೆ. ಪುತ್ತೂರಲ್ಲಿ ಶಾಸಕರಾಗಿದ್ದ ವಿನಯ ಕುಮಾರ್ ಸೊರಕೆ ಅವರು ಉಡುಪಿ ಸಂಸದರಾಗಿ, ಕಾಪು ಕ್ಷೇತ್ರದ ಶಾಸಕರಾಗಿ ಸಿದ್ದರಾಮಯ್ಯ ಸರ್ಕಾರದಲ್ಲಿ ನಗರಾಭಿವೃದ್ಧಿ ಖಾತೆ ಸಚಿವರಾಗಿದ್ದರು. ಅದೇ ರೀತಿ ಡಿ.ವಿ.ಸದಾನಂದ ಗೌಡ ಕೂಡ ಮಂಗಳೂರು, ಉಡುಪಿ-ಚಿಕ್ಕಮಗಳೂರು ಸಂಸದರಾಗಿ ಬಳಿಕ ಬೆಂಗಳೂರು ಉತ್ತರ ಸಂಸದರಾಗಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿ ಮುಖ್ಯಮಂತ್ರಿಯೂ ಆಗಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿ, ಕಾನೂನು ಸಚಿವರಾಗಿ, ಸಾಂಖ್ಯಿಕ ಇಲಾಖೆ ಸಚಿವ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.