ದೇಶದ ಹಿತ ಚಿಂತನೆಗೆ ವಾಜಪೇಯಿ ಮಾದರಿ: ಆರ್.ಅಶೋಕ್ ಲೇಖನ
ಸ್ವತಂತ್ರ ಭಾರತಕ್ಕೆ ಬೇಕಾಗಿದ್ದುದು ಕಾಂಗ್ರೆಸ್‌ನ ಹುಸಿ ಜಾತ್ಯತೀತ ವಾದವಲ್ಲ, ಅಪ್ಪಟ ರಾಷ್ಟ್ರೀಯವಾದ ಎಂಬುದನ್ನು ವಾಜಪೇಯಿ ಮನಗಂಡಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಅವರು ರಾಷ್ಟ್ರೀಯವಾದದ ಚಿಂತನೆಯನ್ನು ದೃಢವಾಗಿ ಬೆಳೆಸಿಕೊಂಡರು.
ಅಜಾತಶತ್ರು, ಅಪ್ರತಿಮ ರಾಷ್ಟ್ರಪ್ರೇಮಿ, ಪ್ರತಿಭಾವಂತ ಕವಿ, ಅತ್ಯುತ್ತಮ ಸಂಘಟಕ, ದಿಟ್ಟ ಆಡಳಿತಗಾರ, ಹೀಗೆ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರನ್ನು ವರ್ಣಿಸಲು ಹೊರಟರೆ ಶಬ್ದಗಳೇ ಸಾಲದು. ಇಡೀ ಬದುಕನ್ನು ದೇಶಕ್ಕೆ ಸಮರ್ಪಿಸಿ, ಸಾಧನೆಯ ಮೈಲಿಗಲ್ಲುಗಳನ್ನು ಸ್ಥಾಪಿಸಿ, ಯಾವುದೇ ಸದ್ದಿಲ್ಲದೆ ಮೌನವಾಗಿ ಮರೆಯಾದ ರತ್ನ ಎಂದರೆ ಅದು ವಾಜಪೇಯಿ. ಅವರು ಮರೆಯಾಗಿ ಆರು ವರ್ಷಗಳು ಕಳೆದು ಹೋದರೂ, ಅವರ ಕಾರ್ಯಗಳು, ಇಟ್ಟು ಹೆಜ್ಜೆಗಳು, ಹಾಕಿಕೊಟ್ಟ ಮಾರ್ಗ ಇನ್ನೂ ಅವರನ್ನು ನೆನಪಿಸುತ್ತಲೇ ಇವೆ.
ಅವರು ಪ್ರಧಾನಿಯಾಗಿ ಹಾಗೂ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನೀಡಿದ ಕೊಡುಗೆಯನ್ನು ಸ್ಮರಿಸಿ, ಜನ್ಮದಿನವನ್ನು ಉತ್ತಮ ಆಡಳಿತ ದಿನವಾಗಿ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ವಾಜಪೇಯಿ ಅವರೊಂದಿಗೆ ಹಲವಾರು ವರ್ಷಗಳ ಕಾಲ ಒಡನಾಡಿದ್ದರು. ಹೋರಾಟ, ಅಭಿಯಾನ ಹಾಗೂ ಪಕ್ಷದ ಸಂಘಟನಾ ಕಾರ್ಯಗಳಲ್ಲಿ ಪ್ರಧಾನಿ ಮೋದಿಯವರು ವಾಜಪೇಯಿ ಅವರಿಗೆ ಜೊತೆಯಾಗಿದ್ದರು. ವಾಜಪೇಯಿ ನೀಡಿದ್ದ ಉತ್ತಮ ಆಡಳಿತದ ನೆನಪಿಗಾಗಿ 2014ರಿಂದ ಉತ್ತಮ ಆಡಳಿತ ದಿನದ ಆಚರಣೆಯನ್ನು ಪ್ರಧಾನಿ ಮೋದಿ ಜಾರಿ ಮಾಡಿದರು.
ಸಿ.ಟಿ.ರವಿ ಅವಾಚ್ಯ ಶಬ್ದ ಕೇಸ್ ಸಿಐಡಿಗೆ: ತನಿಖಾ ತಂಡ ರಚನೆ
ರಾಷ್ಟ್ರೀಯವಾದದ ತಳಹದಿ: ಸ್ವತಂತ್ರ ಭಾರತಕ್ಕೆ ಬೇಕಾಗಿದ್ದುದು ಕಾಂಗ್ರೆಸ್‌ನ ಹುಸಿ ಜಾತ್ಯತೀತ ವಾದವಲ್ಲ, ಅಪ್ಪಟ ರಾಷ್ಟ್ರೀಯವಾದ ಎಂಬುದನ್ನು ವಾಜಪೇಯಿ ಮನಗಂಡಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಅವರು ರಾಷ್ಟ್ರೀಯವಾದದ ಚಿಂತನೆಯನ್ನು ದೃಢವಾಗಿ ಬೆಳೆಸಿಕೊಂಡರು. ಅವರ ರಾಜಕೀಯದ ತಳಹದಿ ರಾಷ್ಟ್ರೀಯವಾದದ ಮೌಲ್ಯಗಳ ಬೇರುಗಳಿಂದಲೇ ಬೆಳೆದಿತ್ತು. ಹಾಗೆಯೇ ಎಲ್ಲ ಜಾತಿ, ಧರ್ಮಗಳ ಜನರನ್ನು ಒಂದಾಗಿ ಕರೆದೊಯ್ಯುವ ಅವರ ವಿಶಾಲ ಚಿಂತನೆ ಅಂದಿನ ಕಾಲಕ್ಕೆ ಯುವಜನರನ್ನು ಹೆಚ್ಚು ಆಕರ್ಷಿಸಿತ್ತು. ಆರಂಭದಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದ ಅವರು, ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಜನಸಂಘದಿಂದ ಪ್ರಭಾವಿತರಾದರು. ನಂತರ ಜನಸಂಘ ಸೇರಿ ರಾಜಕೀಯ ಪ್ರವೇಶ ಮಾಡಿದರು.
ಅಲ್ಲಿಂದ ಜನಸಂಘವು ಬಿಜೆಪಿಯಾಗಿ ಬದಲಾಗಿ ಬಲಿಷ್ಠ ರಾಷ್ಟ್ರೀಯ ಪಕ್ಷ ಹೆಮ್ಮರವಾಗಿ ಬೆಳೆಯಲು ಅವರು ಜೀವನದುದ್ದಕ್ಕೂ ಶ್ರಮಿಸಿದ್ದರು. ಬ್ರಿಟಿಷರ ವಿರುದ್ಧದ ಭಾರತ ಬಿಟ್ಟು ತೊಲಗಿ ಚಳವಳಿಯಿಂದ ಆರಂಭವಾದ ಅವರ ಹೋರಾಟ, ದೇಶದ ಯಾವುದೇ ಸಂಕಷ್ಟದ ಸಂದರ್ಭದಲ್ಲೂ ಸ್ಥಗಿತಗೊಳ್ಳಲಿಲ್ಲ. ತುರ್ತು ಪರಿಸ್ಥಿತಿಯಲ್ಲಂತೂ, ಮನೆ, ಸ್ವಂತ ಬದುಕು, ವಿರಾಮವನ್ನು ಮರೆತು ಪ್ರತಿಭಟನೆಗಿಳಿದು ಜೈಲು ಸೇರಿದ್ದರು. 1957ರಲ್ಲಿ ವಾಜಪೇಯಿಯವರು ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದಾಗ ಅವರ ದೂರದೃಷ್ಟಿ, ವಾಕ್ ಚಾತುರ್ಯ ಯಾವ ಮಟ್ಟಿಗೆ ಪ್ರಭಾವ ಬೀರಿತ್ತೆಂದರೆ, ಜವಹರಲಾಲ್ ನೆಹರು ಕೂಡ ಅವರನ್ನು ಮೆಚ್ಚಿಕೊಂಡು, ಮುಂದೊಂದು ದಿನ ನೀನು ಪ್ರಧಾನಿಯಾಗುತ್ತೀಯ ಎಂದು ಹೇಳಿದ್ದರು!
ಪ್ರಕಾಶಿಸಿದ ಭಾರತ: ಎರಡು ಬಾರಿ ಅನಿರ್ದಿಷ್ಟವಾಧಿಯ ಬಳಿಕ 1999ರಲ್ಲಿ ವಾಜಪೇಯಿ ಪ್ರಧಾನಿಯಾಗಿ ಐದು ವರ್ಷ ಆಡಳಿತ ನಡೆಸಿ, ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಹೆಗ್ಗಳಿಕೆ ಗಳಿಸಿದರು. ಈ ಅವಧಿಯಲ್ಲಿ ಇಡೀ ಭಾರತ ಪ್ರಕಾಶಿಸುವಂತೆ ಮಾಡಿದ್ದು ಅವರ ನಾಯಕತ್ವಕ್ಕೆ ಸಾಕ್ಷಿ. ಇಂದು ರಾಜಧಾನಿ ಬೆಂಗಳೂರಿನಲ್ಲಿ ಗುಂಡಿಗಳನ್ನು ಮುಚ್ಚಲು ಸರ್ಕಾರ ಪರದಾಡುತ್ತಿದೆ. ಆದರೆ ಅಂದು ಇಡೀ ದೇಶಕ್ಕೆ ರಸ್ತೆ ಯೋಜನೆಯ ಮಹತ್ವವನ್ನು ವಾಜಪೇಯಿ ತೋರಿಸಿಕೊಟ್ಟರು. ಸುವರ್ಣ ಚತುಷ್ಪಥ ಯೋಜನೆ ಹಾಗೂ ಪಿಎಂ ಗ್ರಾಮೀಣ ರಸ್ತೆ ಯೋಜನೆಯಿಂದಾಗಿ ಜನರು ಸುಲಲಿತ ಸಂಚಾರದ ಲಾಭ ಪಡೆದರು. ಚೆನ್ನೈ, ಕೋಲ್ಕತ್ತ, ದೆಹಲಿ ಹಾಗೂ ಮುಂಬೈ ನಗರಗಳನ್ನು ಹೆದ್ದಾರಿಯ ಮೂಲಕ ಸಂಪರ್ಕಿಸಿದ ಪರಿಣಾಮ, ಇಂದು ಈ ನಗರಗಳು ಕೋಟ್ಯಂತರ ಜನರ ಬದುಕಿಗೆ ಆಶ್ರಯ ತಾಣವಾಗಿವೆ.
ಪ್ರಧಾನಿ ಮೋದಿಯವರ ಡಿಜಿಟಲ್ ಇಂಡಿಯಾ ಕ್ರಾಂತಿಗೆ ವಾಜಪೇಯಿಯವರ ಟೆಲಿಕಾಂ ಕ್ರಾಂತಿಯೇ ಸ್ಪೂರ್ತಿ. ಟೆಲಿಕಾಂ ವ್ಯವಸ್ಥೆಯ ಜಾಲವನ್ನು ಹಿಗ್ಗಿಸುವಲ್ಲಿ ಅವರು ಕೈಗೊಂಡ ನಿರ್ಣಯಗಳು ಡಿಜಿಟಲ್ ಕ್ಷೇತ್ರದ ಸುಧಾರಣೆಗೆ ನೆರವಾಯಿತು. 6-14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ನಡೆಸಿದ ಸರ್ವ ಶಿಕ್ಷಾ ಅಭಿಯಾನದಿಂದಾಗಿ ಶಾಲೆ ತೊರೆಯುವವರ ಪ್ರಮಾಣ ಶೇ.60ರಷ್ಟು ಕಡಿಮೆಯಾಯಿತು. ಅವರ ಆರ್ಥಿಕ ಸುಧಾರಣೆಯಿಂದಾಗಿ ಅಚ್ಚರಿ ಎಂಬಂತೆ ಜಿಡಿಪಿ ಮೇಲಕ್ಕೇರಿತ್ತು.
ವಾಜಪೇಯಿ ಎಂದರೆ ಕವಿ ಹೃದಯದ ಮೃದು ಸ್ವಭಾವದವರು. ಆದರೆ ದೇಶದ ಅಖಂಡತೆಯ ವಿಚಾರ ಬಂದಾಗ ಕಠಿಣ ಹೃದಯಿ. ‘ನಾವು ಯುದ್ಧಗಳಿಗಾಗಿ ಸಂಪತ್ತು ವ್ಯರ್ಥ ಮಾಡುವ ಬದಲು ರೋಗಗಳ ವಿರುದ್ಧ, ಬಡತನದ ವಿರುದ್ಧ, ನಿರುದ್ಯೋಗದ ವಿರುದ್ಧ ಹೋರಾಟ ಮಾಡಬೇಕು’ ಎಂದು ವಾಜಪೇಯಿ ಹೇಳುತ್ತಿದ್ದರು. ಆದರೆ ದೇಶದ ಅನಿವಾರ್ಯವಾದ ಸುರಕ್ಷತೆಯ ವಿಚಾರ ಬಂದಾಗ ಮುಲಾಜಿಲ್ಲದೆ, ಅಮೆರಿಕಕ್ಕೂ ಕ್ಯಾರೇ ಎನ್ನದೆ, ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ ಮಾಡಿಯೇಬಿಟ್ಟಿದ್ದರು. ಒಬ್ಬ ಆಡಳಿತಗಾರ ಸದಾ ದೇಶದ ಜನರ ಹಿತವನ್ನೇ ಆಲೋಚಿಸಬೇಕು. ಆದರೆ ದೇಶದ ಭದ್ರತೆಯ ಪ್ರಶ್ನೆ ಬಂದಾಗ ಕಲ್ಲಿನ ಮನಸ್ಸಿನವನಾಗಬೇಕು ಎಂಬುದು ಅವರ ನಿಲುವು.
ಉತ್ತಮ ಆಡಳಿತ: ಉತ್ತಮ ಆಡಳಿತದ ವ್ಯಾಖ್ಯಾನವನ್ನು ವಾಜಪೇಯಿಯವರ ಆಡಳಿತದಿಂದ ಕಲಿಯಬಹುದು. ವಾಜಪೇಯಿಯವರಿಗೆ ಪ್ರಧಾನಿ ಹುದ್ದೆಯ ಅನಿಶ್ಚಿತತೆ ಅನುಭವಕ್ಕೆ ಬಂದರೂ ಅವರೆಂದೂ ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಿಗೊಟ್ಟು ‘ಚುನಾವಣಾ ಗಿಮಿಕ್ʼ ಮಾಡಲಿಲ್ಲ. ಹಿಂದೆಲ್ಲ ದೇಶಕ್ಕೆ ಅಪಾಯ ಬಂದೊದಗಿದಾಗ ಅಂದಿನ ಪ್ರಧಾನಿಗಳು ದೇಶಕ್ಕಿಂತಲೂ ರಾಜಕೀಯದ ಲೆಕ್ಕಾಚಾರ ಮಾಡಿದ್ದರು. ಆದರೆ ಕಾರ್ಗಿಲ್ ಯುದ್ಧದ ಸನ್ನಿವೇಶ ಬಂದಾಗ ವಾಜಪೇಯಿಯವರು ದೇಶದ ಬಗ್ಗೆ ಮಾತ್ರ ಚಿಂತಿಸಿ ಸೇನೆಗೆ ಬಲ ತುಂಬಿದರು. ಅದಕ್ಕಾಗಿಯೇ ಈ ಯುದ್ಧದಲ್ಲಿ ಭಾರತ ಯಶಸ್ಸು ಕಂಡಿತು. ಅಂತಹ ಸಮಯದಲ್ಲೂ ವಾಜಪೇಯಿ ಎದೆಗುಂದದೆ ಆಂತರಿಕ ಭದ್ರತೆಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಿದ್ದರು.
ಸಿ.ಟಿ.ರವಿ ಕ್ಷಮೆ ಕೇಳಿದ್ದರೆ ಮರ್ಯಾದೆ ಉಳೀತಿತ್ತು: ಸಚಿವ ಚಲುವರಾಯಸ್ವಾಮಿ
ಪ್ರಧಾನಿ ನರೇಂದ್ರ ಮೋದಿಯವರ ಹತ್ತು ವರ್ಷಗಳ ಆಡಳಿತ ಹಾಗೂ ಈಗಿನ ವಿಕಸಿತ ಭಾರತದ ಆಡಳಿತ, ವಾಜಪೇಯಿಯವರ ಆಡಳಿತದ ಹಾದಿಯಲ್ಲೇ ಸಾಗಿದೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ಪೌರತ್ವ ಕಾಯ್ದೆ ತಿದ್ದುಪಡಿ, ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ವಾಜಪೇಯಿಗೆ ಕನಸುಗಳಿದ್ದು, ಅದನ್ನು ಪ್ರಧಾನಿ ನರೇಂದ್ರ ಮೋದಿ ಈಡೇರಿಸಿದ್ದಾರೆ. ಆಯುಷ್ಮಾನ್ ಭಾರತ್, ಆವಾಸ್, ಜಲಜೀವನ್ ಮಿಷನ್, ಕಿಸಾನ್ ಸಮ್ಮಾನ್ ಮೊದಲಾದ ಯೋಜನೆಗಳು ತಳಮಟ್ಟದ ಜನರನ್ನು ತಲುಪಿ ಬದುಕಿನ ಗುಣಮಟ್ಟವನ್ನು ಸುಧಾರಿಸುತ್ತಿವೆ. ಇಂತಹ ಸಾಧನೆಗಳೇ, ವಾಜಪೇಯಿಯವರ ನೆನಪಿನಲ್ಲಿ ಆಚರಿಸುವ ಉತ್ತಮ ಆಡಳಿತ ದಿನಕ್ಕೆ ಶಕ್ತಿ ತುಂಬುತ್ತವೆ.