ಧನಂಜಯ್ ಎಸ್‌.ಹಕಾರಿ, ಕನ್ನಡಪ್ರಭ

ಬೆಂಗಳೂರು(ಡಿ.30): ಒಲಿಂಪಿಕ್ಸ್‌ಗೆ ಕರ್ನಾಟಕದ ಕ್ರೀಡಾಪಟುಗಳು ಆಯ್ಕೆಯಾಗಬೇಕು, ಪದಕ ಗೆಲ್ಲಬೇಕು ಎನ್ನುವುದು ರಾಜ್ಯದ ಕ್ರೀಡಾಭಿಮಾನಿಗಳ ಮಹದಾಸೆ. ಈ ನಿಟ್ಟಿನಲ್ಲಿ ರಾಜ್ಯ ಕ್ರೀಡಾ ಇಲಾಖೆ ಸಹ ಕೆಲ ಯೋಜನೆಗಳನ್ನು ರೂಪಿಸುತ್ತಿದೆ. 

2024ರ ಒಲಿಂಪಿಕ್ಸ್‌ ಮೇಲೆ ಕಣ್ಣಿಟ್ಟಿರುವ ಇಲಾಖೆ, ಪದಕ ಗೆಲ್ಲಲು ದಿಟ್ಟ ಹೆಜ್ಜೆ ಇರಿಸಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಯಲ್ಲಾಪುರ ಭಾಗದಲ್ಲಿನ ಗುಡ್ಡಗಾಡಿನಲ್ಲಿ ವಾಸಿಸುವ ಸಿದ್ದಿ ಜನಾಂಗದ ಮಕ್ಕಳನ್ನು ಮುಖ್ಯ ಭೂಮಿಕೆಗೆ ತರುವ ಕೆಲಸವನ್ನು ಕ್ರೀಡಾ ಇಲಾಖೆ ಮಾಡುತ್ತಿದೆ. ಸುಮಾರು 350 ಸಿದ್ದಿ ಮಕ್ಕಳ ಪ್ರತಿಭಾನ್ವೇಷಣೆ ನಡೆಸಿ, 50ಕ್ಕೂ ಹೆಚ್ಚು ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಈ ಮಕ್ಕಳಿಗೆ ವಿಶೇಷ ತರಬೇತಿ ನೀಡಿ, ಒಲಿಂಪಿಕ್ಸ್‌ಗೆ ಸಿದ್ಧಗೊಳಿಸುವುದು ಕ್ರೀಡಾ ಇಲಾಖೆಯ ಯೋಜನೆಯಾಗಿದೆ. 3 ದಿನಗಳ ಕಾಲ ನಡೆದ ಪ್ರತಿಭಾನ್ವೇಷಣೆಯಲ್ಲಿ ಕಾರವಾರದಲ್ಲಿ 40, ಯಲ್ಲಾಪುರದಲ್ಲಿ 70 ಹಾಗೂ ಹಳಿಯಾಳದಲ್ಲಿ ಸುಮಾರು 240 ಮಕ್ಕಳು ಭಾಗವಹಿಸಿದ್ದಾರೆ. ಒಟ್ಟಾರೆ ಸುಮಾರು 350ಕ್ಕೂ ಹೆಚ್ಚು ಸಿದ್ದಿ ಮಕ್ಕಳನ್ನು ವಿಜ್ಞಾನ ಕೇಂದ್ರದ ತಜ್ಞರು ಪರೀಕ್ಷೆ ನಡೆಸಿದ್ದಾರೆ. ಅವರ ದೈಹಿಕ ಸಾಮರ್ಥ್ಯ, ಎತ್ತರ, ಸದೃಢತೆ, ಓಡುವ ಚಾತುರ್ಯವನ್ನು ಗಮನಿಸಿದ್ದಾರೆ. ಸದ್ಯ ಅಥ್ಲೆಟಿಕ್ಸ್, ಕುಸ್ತಿ ಹಾಗೂ ಲಾಂಗ್ ಜಂಪ್ ಕ್ರೀಡೆಗಳಿಗೆ ಈ ಮಕ್ಕಳನ್ನು ಆಯ್ಕೆ ಮಾಡಲಾಗುತ್ತಿದೆ. ಆಯ್ಕೆಯಾಗಿರುವ ಯುವ ಕ್ರೀಡಾಪಟುಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಇಲ್ಲವೇ ಕ್ರೀಡಾ ಇಲಾಖೆಯ ಕೋಚ್‌ಗಳು ತರಬೇತಿ ನೀಡಲಿದ್ದಾರೆ. 

ಸದ್ಯಕ್ಕೆ ಹಳಿಯಾಳದಲ್ಲಿ ಕೋಚಿಂಗ್ ಆರಂಭಗೊಳ್ಳಲಿದೆ. ವಿಜ್ಞಾನ ಕೇಂದ್ರದ ಕೆಲ ತಜ್ಞರು ಕೋಚಿಂಗ್ ಕೇಂದ್ರದಲ್ಲಿ ಇರಿಸಲಾಗುತ್ತಿದೆ. ಕಾರವಾರ ಇಲ್ಲವೇ ಮೈಸೂರಲ್ಲೂ ತರಬೇತಿ ನಡೆಸಲು ಯೋಚನೆ ನಡೆದಿದೆ. ಬೆಂಗಳೂರಿನಲ್ಲಿರುವ ಕ್ರೀಡಾ ಕೇಂದ್ರದಲ್ಲೂ ತರಬೇತಿಗೆ ವ್ಯವಸ್ಥೆ ಮಾಡಲು ಇಲಾಖೆ ಯೋಜನೆ ರೂಪಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯವರಾಗಿರುವ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೂಡ ಕ್ರೀಡಾ ಇಲಾಖೆಯ ಯೋಜನೆಗೆ ಬೆಂಬಲ ಸೂಚಿಸಿದ್ದು, ಕಾಳಜಿ ವಹಿಸಿದ್ದಾರೆ. 

ದಾದಾ ಬಿಜೆಪಿ ಸೇರ್ತಾರಾ? ಸೌರವ್ ಗಂಗೂಲಿ ಹೇಳಿದ್ದೇನು?

ಸಿದ್ದಿಗಳು ಎಂದರೆ ಯಾರು?: ಸಿದ್ದಿಗಳು ಆಫ್ರಿಕಾ ಮೂಲದವರು. 400 ವರ್ಷಗಳಿಗೂ ಹಿಂದೆ ಭಾರತಕ್ಕೆ ಇವರನ್ನು ಕೂಲಿ ಕೆಲಸಕ್ಕಾಗಿ ಕರೆತರಲಾಯಿತು. ಕೆಲವರು ವ್ಯಾಪಾರ ನಡೆಸುವ ಉದ್ದೇಶದಿಂದಲೂ ಭಾರತಕ್ಕೆ ಆಗಮಿಸಿದ್ದರು. ಇವರು ಭಾರತದಲ್ಲಿ ಕರ್ನಾಟಕ, ಗುಜರಾತ್, ಗೋವಾ ರಾಜ್ಯಗಳಲ್ಲಿ ಇದ್ದಾರೆ. ಸಾಮಾನ್ಯವಾಗಿ ಕಾಡು, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಾರೆ.

ಮುಂದಿನ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಬೇಕು ಎನ್ನುವುದು ರಾಜ್ಯದ ಏಕೈಕ ಗುರಿಯಾಗಿದೆ. ಈ 4 ವರ್ಷದಲ್ಲಿ ಟಾರ್ಗೆಟ್ ಮುಟ್ಟಲಾಗದಿದ್ದರೂ ನಂತರದ 8 ವರ್ಷದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಕ್ರೀಡಾಪಟುಗಳಾಗುವ ಭರವಸೆ ಇದೆ. ಸಿದ್ದಿ ಜನಾಂಗದ ಎಂಎಲ್‌ಸಿ ಆಗಿರುವ ಶಾಂತಾರಾಮ ಸಿದ್ದಿ ಅವರು ಈ ಯೋಜನೆಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ - ಕೆ. ಶ್ರೀನಿವಾಸ್, ಕ್ರೀಡಾ ಇಲಾಖೆ ಆಯುಕ್ತ