ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೆರಡು ಚಿನ್ನ, ರಜತ..!

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಭಾರತ 24 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 13ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

Paris Paralympics 2024 India bags 2 more Gold and Silver medal kvn

ಪ್ಯಾರಿಸ್: ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದೆ. ಭಾರತ ಸದ್ಯ 24 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 13ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಇತ್ತೀಚೆಗೆ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನ ಆರ್ಚರಿಯಲ್ಲಿ ಭಾರತೀಯರು ನಿರಾಸೆ ಅನುಭವಿಸಿದ್ದರು. ಆದರೆ, ಪ್ಯಾರಾಲಿಂಪಿಕ್ಸ್‌ನ ಆರ್ಚರಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಹರ್ವಿಂದರ್ ಸಿಂಗ್ ಭಾರತೀಯರು ಸಂಭ್ರಮಿಸುವಂತೆ ಮಾಡಿದ್ದಾರೆ.

ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಎರಡೂ ಕ್ರೀಡಾಕೂಟಗಳ ಆರ್ಚರಿಯಲ್ಲಿ ಭಾರತಕ್ಕೆ ಇದು ಚೊಚ್ಚಲ ಚಿನ್ನದ ಪದಕವೆನಿಸಿದೆ. ಬುಧವಾರ ನಡೆದ ಪುರುಷರ ರೀಕರ್ವ್ ವೈಯಕ್ತಿಕ ಓಪನ್ ವಿಭಾಗದಲ್ಲಿ ಹರ್ವಿಂದರ್ ಸತತ 5 ಪಂದ್ಯಗಳನ್ನು ಗೆದ್ದು ಚಿನ್ನಕ್ಕೆ ಮುತ್ತಿಟ್ಟರು. ಈ  ಕ್ರೀಡಾಕೂಟದಲ್ಲಿ ಇದು ಭಾರತಕ್ಕೆ 4ನೇ ಚಿನ್ನ. ಫೈನಲ್‌ನಲ್ಲಿ 33 ವರ್ಷದ ಹರ್ವಿಂದರ್ ಫೈನಲ್ ನಲ್ಲಿ ಪೋಲೆಂಡ್‌ ಲುಕಾಸ್ ಸಿಜೆಕ್ ವಿರುದ್ಧ 6-0 ಅಂತರದಲ್ಲಿ ಗೆಲುವು ಸಾಧಿಸಿದರು. ಪದಕದ ಹಾದಿಯುದ್ದಕ್ಕೂ ಅಮೋಘ ಪ್ರದರ್ಶನ ತೋರಿದ ಹರ್ವಿಂದರ್, ನಿರಾಯಾಸವಾಗಿ ಚಿನ್ನ ಜಯಿಸಿದರು. 

ಟೋಕಿಯೋದಲ್ಲಿ ಕಂಚು: ಹರ್ವಿಂದರ್‌ಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಇದು 2ನೇ ಪದಕ. 2020ರ ಟೋಕಿಯೋ ಪ್ಯಾರಾಗೇಮ್ಸ್ ನಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. ಈ ಬಾರಿ ಸ್ವರ್ಣಕ್ಕೆ ಮುತ್ತಿಕ್ಕಿದ್ದಾರೆ.

ಫುಟ್ಬಾಲ್‌ನಂತೆ ಕ್ರಿಕೆಟ್‌ನಲ್ಲೂ ಇದೆ ರೆಡ್ ಕಾರ್ಡ್ ಬಳಕೆ..! ಯಾವ ಕಾರಣಕ್ಕೆ ಬಳಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಪಿಎಚ್‌ಡಿ ಮಾಡುತ್ತಿರುವ ಹರ್ವಿಂದರ್! ಹರ್ಯಾಣದ ಅಜಿತ್ ನಗರ್‌ನ ಹರ್ವಿಂದ‌ರ್ ಓದಿನಲ್ಲೂ ಮುಂದಿದ್ದಾರೆ. ಸದ್ಯ ಅವರು ಪಟಿಯಾಲಾದ ಪಂಜಾಬಿ ವಿವಿಯಲ್ಲಿ ಎಕನಾಮಿಕ್ಸ್‌ನಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಹರ್ವಿಂದರ್‌ಗೆ ಮುಳುವಾಗಿತ್ತು ಡೆಂಘೀಗೆ ಪಡೆದ ಚುಚ್ಚುಮದ್ದು!

ರೈತ ಕುಟುಂಬದಲ್ಲಿ ಜನಿಸಿದ ಹರ್ವಿಂದರ್‌ಗೆ ಒಂದೂವರೆ ವರ್ಷವಿದ್ದಾಗ ಡೆಂಘೀ ಜ್ವರ ಕಾಣಿಸಿ ಕೊಂಡಿತ್ತು. ಈ ವೇಳೆ ಸ್ಥಳೀಯ ವೈದ್ಯರೊಬ್ಬರು ನೀಡಿದ ಚುಚ್ಚು ಮದ್ದು ಓವರ್ ಡೋಸ್ ಆಗಿ, ಹರ್ವಿಂದರ್‌ ಎರಡೂ ಕಾಲುಗಳು ಬಲಹೀನವಾದವು. 

ಪ್ಯಾರಾಲಿಂಪಿಕ್ಸ್‌ನಲ್ಲಿ ಹೊಸ ಮೈಲಿಗಲ್ಲು: 21 ಪದಕಗಳೊಂದಿಗೆ ಇತಿಹಾಸ ಬರೆದ ಭಾರತ, ಮುಂದುವರೆದ ಪದಕ ಬೇಟೆ

ಕ್ಲಬ್‌ನಲ್ಲಿ ಭಾರತಕ್ಕೆ ಮೊದಲ ಬಾರಿ ಪದಕ!

ಪ್ಯಾರಾಲಿಂಪಿಕ್ಸ್‌ನಲ್ಲಿ ಕ್ಲಬ್ ಎಸೆತವನ್ನು ಮೊದಲ ಬಾರಿಗೆ ಪರಿಚಿಯಿಸಿದ್ದು 1960ರಲ್ಲಿ, ಆದರೆ, ಇದೇ ಮೊದಲ ಬಾರಿಗೆ ಭಾರತಕ್ಕೆ ಈ ಸ್ಪರ್ಧೆಯಲ್ಲಿ ಪದಕ ದೊರೆತಿದೆ. ಧರ್ಮ್‌ಬೀರ್ ಚಿನ್ನ, ಪ್ರಣವ್ ಸೂರ್ಮಾ ಬೆಳ್ಳಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಬುಧವಾರ ತಡರಾತ್ರಿ ನಡೆದ ಕ್ಲಬ್ ಥೋ ಫೈನಲ್‌ನಲ್ಲಿ 10 ಜನ ಸ್ಪರ್ಧಿಗಳಿದ್ದರು. ಧರ್ಮಬೀರ್ ಮೊದಲ 4 ಯತ್ನಗಳನ್ನು ಫೌಲ್ ಮಾಡಿದರೂ, 5ನೇ ಯತ್ನದಲ್ಲಿ 34.92 ಮೀ. ದೂರಕ್ಕೆ ಎಸೆದು ಏಷ್ಯಾ ದಾಖಲೆ ಬರೆದು ಮೊದಲ ಸ್ಥಾನ ಪಡೆದರು. ಇನ್ನು ಪ್ರಣವ್ 6 ಯತ್ನಗಳ ಪೈಕಿ ಮೊದಲ ಯತ್ನದಲ್ಲೇ 34.59 ಮೀ. ದೂರಕ್ಕೆ ಎಸೆದು 2ನೇ ಸ್ಥಾನ ಗಿಟ್ಟಿಸಿದರು. ಭಾರೀ ರೋಚಕತೆಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಭಾರತೀಯ ಪ್ರಬಲರಿಬ್ಬರಿಗೆ ಸರ್ಬಿಯಾದ ಡಿಮಿಟ್ರಿ ಜೆವಿಚ್‌ರಿಂದ ಪೈಪೋಟಿ ಎದುರಾಯಿತು. 34.18 ಮೀ. ದೂರಕ್ಕೆ ಕ್ಲಬ್ ಎಸೆದ ಸರ್ಬಿಯಾದ ಹಿರಿಯ ಅಥ್ಲೀಟ್, 3ನೇ ಸ್ಥಾನ ಗಳಿಸಿದರು. ಕಣದಲ್ಲಿದ್ದ ಭಾರತದ ಮತ್ತೊಬ್ಬ ಅಫೀಟ್ ಅಮಿತ್ ಕುಮಾರ್ 23.96 ಮೀ. ದೂರಕ್ಕೆ ಎಸೆದು 10ನೇ ಸ್ಥಾನಕ್ಕೆ ತೃಪ್ತಿಪಟ್ಟರು.

100 ಮೀ. ಓಟದಲ್ಲಿ ಸೆಮೀಸ್‌ಗೆ ಸಿಮ್ರನ್‌

ಪ್ಯಾರಿಸ್‌: ಪ್ಯಾರಾಲಿಂಪಿಕ್ಸ್‌ನ ಮಹಿಳೆಯರ 100 ಮೀ. ಓಟದ ಟಿ12 ವಿಭಾಗದಲ್ಲಿ ಭಾರತದ ಸಿಮ್ರನ್‌ ಶರ್ಮಾ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಈ ಋತುವಿನಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನ ತೋರಿದ ಸಿಮ್ರನ್‌ 12.17 ಸೆಕೆಂಡ್‌ಗಳಲ್ಲಿ ಓಟ ಪೂರ್ತಿಗೊಳಿಸಿದರು. 24 ವರ್ಷದ ಹಾಲಿ ವಿಶ್ವ ಚಾಂಪಿಯನ್‌ ಸಿಮ್ರನ್‌ಗೆ ಅಭಯ್‌ ಸಿಂಗ್‌ ಗೈಡ್‌ ಆಗಿದ್ದಾರೆ. ಹುಟ್ಟಿದಾಗಿನಿಂದಲೇ ದೃಷ್ಟಿ ದೋಷ ಎದುರಿಸುತ್ತಿರುವ ಸಿಮ್ರನ್‌, ಸೆಮೀಸ್‌ಗೇರಿರುವ ಅಥ್ಲೀಟ್‌ಗಳ ಪೈಕಿ 2ನೇ ಸ್ಥಾನದಲ್ಲಿದ್ದಾರೆ. ಗುರುವಾರ ಸೆಮೀಸ್‌ ನಡೆಯಲಿದೆ.

Latest Videos
Follow Us:
Download App:
  • android
  • ios