ಟರ್ಕಿ ದೇಶದ ಶೂಟರ್ 10 ಮೀಟರ್ ಪಿಸ್ತೂಲ್ ಮಿಶ್ರ ತಂಡದ ವಿಭಾಗದ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದಾರೆ. ಅದರಲ್ಲೊಂದು ವಿಶೇಷವಿದೆ. ಏನದು ಅನ್ನೋದನ್ನು ನೀವೇ ನೋಡಿ
ಪ್ಯಾರಿಸ್: ಟರ್ಕಿ ದೇಶದ 51 ವರ್ಷದ ಶೂಟರ್ ಯೂಸುಫ್ ಡಿಕೇಚ್, ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಜಗತ್ತಿನಾದ್ಯಂತ ಸುದ್ದಿಯಾಗಿದ್ದಾರೆ. ಅರೇ ಇದೇನಿದು, ಯಾರೂ ಮಾಡದ ಸಾಧನೆಯನ್ನು ಈ ಟರ್ಕಿ ಶೂಟರ್ ಮಾಡಿದ್ದಾನೆಯೇ ಎಂದು ನೀವು ಹುಬ್ಬೇರಿಸಬಹುದು. ಆದರೆ ಈ ಟರ್ಕಿ ಶೂಟರ್ ಪದಕ ಗೆದ್ದ ರೀತಿಯನ್ನು ನೀವು ಒಮ್ಮೆ ನೋಡಿದರೇ ನಿಜಕ್ಕೂ ದಂಗಾಗೋದು ಗ್ಯಾರಂಟಿ.
10 ಮೀಟರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ 51 ವರ್ಷದ ಯೂಸುಫ್ ಡಿಕೇಚ್ ತಂಡ ಬೆಳ್ಳಿ ಪದಕ ಬೇಟೆಯಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಟರ್ಕಿ ಶೂಟರ್ ಪದಕ ಗೆದ್ದಿದ್ದಕ್ಕೆ ಯಾರು ಅಚ್ಚರಿ ಪಡುತ್ತಿಲ್ಲ, ಆದರೆ ಪದಕ ಗೆದ್ದ ರೀತಿಗೆ ಎಲ್ಲರೂ ಹುಬ್ಬೇರಿಸುತ್ತಿದ್ದಾರೆ. ಹೌದಾ, ಸಾಮಾನ್ಯವಾಗಿ ಶೂಟರ್‌ಗಳು ಒಲಿಂಪಿಕ್ಸ್ ಸೇರಿದಂತೆ ಜಾಗತಿಕ ಮಟ್ಟದ ವೃತ್ತಿಪರ ಸ್ಪರ್ಧೆಗಳಲ್ಲಿ ಕಿವಿಗೆ ಇಯರ್‌ಬಡ್ ರೀತಿಯ ಪ್ರಾಡಕ್ಟ್ ಹಾಗೂ ಕಣ್ಣಿಗೆ ಲೆನ್ಸ್ ಹಾಕಿಕೊಂಡು ಪಾಲ್ಗೊಳ್ಳುವುದನ್ನು ನಾವು ನೀವೆಲ್ಲರೂ ನೋಡಿರುತ್ತೇವೆ.
ಮನೆ ಮಗಳನ್ನೇ ಮುಗಿಸಿತ್ತೇಕೆ ತವರುಮನೆ? ಆ ರಾತ್ರಿ ಅಲ್ಲಿ ನಡೆದಿದ್ದಾದರೂ ಏನು..?
ಆದರೆ ಯೂಸುಫ್ ಡಿಕೇಚ್, ಸಾಮಾನ್ಯ ಟಿ ಶರ್ಟ್‌ನಲ್ಲಿ ಬಂದು, ಸಾಮಾನ್ಯ ಗ್ಲಾಸ್ ತೊಟ್ಟು, ಕೇವಲ ಒಂದು ಕೈಯಲ್ಲಿ ಪಿಸ್ತೂಲ್ ಹಿಡಿದು ಮತ್ತೊಂದು ಕೈಯನ್ನು ಜೇಬಿನಲ್ಲಿಟ್ಟುಕೊಂಡು ಗುರಿಯಿಟ್ಟು ಶೂಟ್ ಮಾಡುವಲ್ಲಿ ಯಶಸ್ವಿಯಾದರು. ಪರಿಣಾಮ ಯೂಸುಫ್ ಡಿಕೇಚ್ ಹಾಗೂ ಸೆವ್ವಾಲ್ ಇಯಾದ್ ತರ್ಹ್ರಾನ್ ಅವರನ್ನೊಳಗೊಂಡ ಟರ್ಕಿ ತಂಡವು 10 ಮೀಟರ್ ಮಿಶ್ರ ತಂಡ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಯಿತು.
ಇದರ ಬೆನ್ನಲ್ಲೇ ಯೂಸುಫ್ ಡಿಕೇಚ್ ಅವರು ಶೂಟ್ ಮಾಡಿದ ರೀತಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೆಂಡ್ ಆಗುತ್ತಿದೆ. ವಿಡಿಯೋಗಳು ಕೂಡಾ ವೈರಲ್ ಆಗುತ್ತಿದೆ.
ಅಂದಹಾಗೆ ಇದು ಯೂಸುಫ್ ಡಿಕೇಚ್ ಅವರಿಗೆ 5ನೇ ಒಲಿಂಪಿಕ್ಸ್. 2008ರ ಬೀಜಿಂಗ್ ಒಲಿಂಪಿಕ್ಸ್‌ನಿಂದಲೂ ಪಾಲ್ಗೊಳ್ಳುತ್ತಲೇ ಬಂದಿರುವ ಯೂಸುಫ್ ಡಿಕೇಚ್ ಅವರಿಗೆ ಇದುವರೆಗೂ ಪದಕ ಬೇಟೆಯಾಡಲು ಸಾಧ್ಯವಾಗಿರಲಿಲ್ಲ. ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕೊನೆಗೂ ಪದಕ ಬರ ನೀಗಿಸಿಕೊಳ್ಳುವಲ್ಲಿ ಅನುಭವಿ ಶೂಟರ್ ಯಶಸ್ವಿಯಾಗಿದ್ದಾರೆ.
ಇನ್ನು ಇದೇ ವಿಭಾಗದಲ್ಲಿ ಭಾರತದ ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಅವರನ್ನೊಳಗೊಂಡ ಭಾರತ ಮಿಶ್ರ ತಂಡವು ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.
